ಕೊನೆಗೂ ಮೌನ ಮುರಿದ ರಜಿನಿಕಾಂತ್; ಯುಪಿ ಸಿಎಂ ಯೋಗಿ ಕಾಲಿಗೆ ಬಿದ್ದ ಬಗ್ಗೆ ತಲೈವಾ ಸ್ಪಷ್ಟನೆ ಹೀಗಿದೆ VIDEO
Aug 22, 2023 08:22 AM IST
ಸಿಎಂ ಯೋಗಿ ಕಾಲಿಗೆ ಬಿದ್ದ ಬಗ್ಗೆ ತಲೈವಾ ಸ್ಪಷ್ಟನೆ
- Rajinikanth: ಟ್ರೋಲ್ಗೆ ಒಳಗಾಗಿದ್ದ, ಟೀಕೆಗಳಿಗೆ ಗುರಿಯಾಗಿದ್ದ ಕಾಲಿವುಡ್ ಸೂಪರ್ ಸ್ಟಾರ್ ರಜಿನಿಕಾಂತ್ ಇದೀಗ ಮೌನ ಮುರಿದಿದ್ದಾರೆ. ಸಿಎಂ ಯೋಗಿ ಪಾದಗಳನ್ನು ಮುಟ್ಟಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ಟ್ರೋಲ್ಗೆ ಒಳಗಾಗಿದ್ದ, ಟೀಕೆಗಳಿಗೆ ಗುರಿಯಾಗಿದ್ದ ಕಾಲಿವುಡ್ ಸೂಪರ್ ಸ್ಟಾರ್ ರಜಿನಿಕಾಂತ್ ಇದೀಗ ಈ ವಿಚಾರವಾಗಿ ಮೌನ ಮುರಿದಿದ್ದಾರೆ. ಸಿಎಂ ಯೋಗಿ ಪಾದಗಳನ್ನು ಮುಟ್ಟಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಚೆನ್ನೈನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತಲೈವಾ, "ಯೋಗಿಗಳು ಅಥವಾ ಸನ್ಯಾಸಿಗಳು ನನಗಿಂತ ಚಿಕ್ಕವರಾಗಿದ್ದರೂ ಅವರ ಪಾದಗಳನ್ನು ಮುಟ್ಟಿ ಅವರ ಆಶೀರ್ವಾದ ಪಡೆಯುವುದು ನನ್ನ ಅಭ್ಯಾಸ. ನಾನು ಅದನ್ನು ಮಾಡಿದ್ದೇನೆ." ಎಂದು ರಜಿನಿಕಾಂತ್ ಹೇಳಿದ್ದಾರೆ.
ಜೈಲರ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ರಜಿನಿಕಾಂತ್ ಇತ್ತೀಚೆಗೆ ಉತ್ತರ ಪ್ರದೇಶದ ಲಖನೌಗೆ ತೆರಳಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಸಿಎಂ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಸಿಎಂ ಯೋಗಿ ಆದಿತ್ಯನಾಥ ಅವರ ಕಾಲಿಗೂ ಬಿದ್ದು, ಆಶೀರ್ವಾದ ಪಡೆದುಕೊಂಡಿದ್ದಾರೆ. ಹೀಗೆ ಕಾಲಿಗೆ ಬಿದ್ದದ್ದೇ ಇದೀಗ ನೆಟ್ಟಿಗರ ವಲಯದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಲಖನೌಗೆ ಬಂದು, ಸಿಎಂ ಯೋಗಿ ಆದಿತ್ಯನಾಥ್ ಅವರ ಜತೆಗೆ ಜೈಲರ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಭೇಟಿಯ ವೇಳೆ ರಜಿನಿಕಾಂತ್ ಕಾರಿಂದ ಕೆಳಗಿಳಿಯುತ್ತಿದ್ದಂತೆ, ನೇರವಾಗಿ ಯೋಗಿಯ ಕಾಲಿಗೆ ಎರಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಕೆಲ ನೆಟಿಜನ್‌ಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ತಮಗಿಂತ ಚಿಕ್ಕ ವಯಸ್ಸಿನ ವ್ಯಕ್ತಿಯ ಕಾಲಿಗೆ ಬಿದ್ದಿದ್ದಕ್ಕೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿದೆ.
"72 ವರ್ಷದ ರಜಿನಿಕಾಂತ್ 51 ವರ್ಷದ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿರುವುದು ಆಘಾತಕಾರಿ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. "ಯೋಗಿ ಆದಿತ್ಯನಾಥ್ ಅವರ ಪಾದಕ್ಕೆ ನಮಸ್ಕರಿಸುವ ಮೂಲಕ ರಜಿನಿ ಅವರು ತಮ್ಮ ಇಮೇಜ್ ಹಾಳು ಮಾಡಿಕೊಂಡಿದ್ದಾರೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದರು.
ಅಲ್ಲದೇ ರಜಿನಿಕಾಂತ್ ಅವರ ಹಳೆಯ ಮಾತುಗಳನ್ನು ಸಹ ನೆಟ್ಟಿಗರು ನೆನಪಿಸಿದ್ದರು. "ದೇವರು, ತಂದೆ- ತಾಯಿ.. ಇವುಗಳನ್ನು ಮಾತ್ರ ಪೂಜಿಸು" ಎಂದು 2017ರ ಕಾರ್ಯಕ್ರಮವೊಂದರಲ್ಲಿ ರಜಿನಿಕಾಂತ್ ಹೇಳಿದ್ದರು. ಆ ಕಾರ್ಯಕ್ರಮದಲ್ಲಿ ಅಲ್ಲಿನ ಅಭಿಮಾನಿಗಳು ರಜಿನಿ ಕಾಲಿಗೆ ಬೀಳುತ್ತಿದ್ದಿದ್ದನ್ನು ಕಂಡು, "ಹಣ, ಕೀರ್ತಿ, ಅಧಿಕಾರದ ಕಾರಣಕ್ಕೆ ಯಾರ ಕಾಲಿಗೂ ಬೀಳಬೇಡಿ" ಎಂದಿದ್ದರು.