logo
ಕನ್ನಡ ಸುದ್ದಿ  /  ಮನರಂಜನೆ  /  The Kerala Story: ದಿ ಕೇರಳ ಸ್ಟೋರಿ ಚಿತ್ರತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಹೆಲ್ತ್‌ ಅಪ್‌ಡೇಟ್‌ ನೀಡಿದ ನಟಿ ಅದಾ ಶರ್ಮಾ

The Kerala Story: ದಿ ಕೇರಳ ಸ್ಟೋರಿ ಚಿತ್ರತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಹೆಲ್ತ್‌ ಅಪ್‌ಡೇಟ್‌ ನೀಡಿದ ನಟಿ ಅದಾ ಶರ್ಮಾ

Rakshitha Sowmya HT Kannada

May 15, 2023 10:11 AM IST

google News

ನಿರ್ದೇಶಕ ಸುದಿಪ್ತೋ ಸೇನ್‌, ನಟಿ ಅದಾ ಶರ್ಮಾ

    • ನಮ್ಮ ತಂಡಕ್ಕೆ ಅಪಘಾತವಾಗಿದ್ದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನನಗೆ ಅನೇಕ ಜನರು ಕರೆ, ಸಂದೇಶ ಮಾಡುವ ಮೂಲಕ ಆರೋಗ್ಯ ವಿಚಾರಿಸುತ್ತಿದ್ದಾರೆ. ಚಿತ್ರತಂಡದ ಎಲ್ಲರೂ ಚೆನ್ನಾಗಿದ್ದೇವೆ ಎಂದು ನಟಿ ಅದಾ ಶರ್ಮಾ ಟ್ವೀಟ್‌ ಮಾಡಿದ್ದಾರೆ. 
ನಿರ್ದೇಶಕ ಸುದಿಪ್ತೋ ಸೇನ್‌, ನಟಿ ಅದಾ ಶರ್ಮಾ
ನಿರ್ದೇಶಕ ಸುದಿಪ್ತೋ ಸೇನ್‌, ನಟಿ ಅದಾ ಶರ್ಮಾ

ಮೇ 5 ರಂದು ತೆರೆ ಕಂಡ 'ದಿ ಕೇರಳ ಸ್ಟೋರಿ' ಸಿನಿಮಾ, ಪರ ವಿರೋಧ ಚರ್ಚೆಗಳ ನಡುವೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಈ ನಡುವೆ ಪ್ರಮೋಷನ್‌ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಚಿತ್ರದ ನಟಿ ಅದಾ ಶರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹಾಗೂ ಚಿತ್ರತಂಡದ ಬಗ್ಗೆ ಹೆಲ್ತ್‌ ಅಪ್‌ಡೇಟ್‌ ನೀಡಿದ್ದಾರೆ. ಮೇ 14 ರಂದು ಭಾನುವಾರ ತೆಲಂಗಾಣದ ಕರೀಂ ನಗರದಲ್ಲಿ ನಡೆಯಬೇಕಿದ್ದ ಹಿಂದೂ ಏಕ್ತಾ ಯಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಈ ಕಾರ್ಯಕ್ರಮಕ್ಕೆ ಪ್ರಯಾಣಿಸುವಾಗ ಈ ಅಪಘಾತ ಸಂಭವಿಸಿದೆ. ಅದಾ ಶರ್ಮಾ, ನಿರ್ದೇಶಕ ಸುದಿಪ್ತೋ ಸೇನ್‌ ಸೇರಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೂಡಲೇ ಎಲ್ಲರೂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಈ ವಿಚಾರವನ್ನು ಅದಾ ಶರ್ಮಾ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಗಂಭೀರ ವಿಚಾರ ಇಲ್ಲ. ಎಲ್ಲವೂ ಸರಿ ಇದೆ ಎಂದು ಅದಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ''ಸ್ನೇಹಿತರೇ ನಾನು ಆರೋಗ್ಯವಾಗಿದ್ದೇನೆ. ನಮ್ಮ ತಂಡಕ್ಕೆ ಅಪಘಾತವಾಗಿದ್ದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನನಗೆ ಅನೇಕ ಜನರು ಕರೆ, ಸಂದೇಶ ಮಾಡುವ ಮೂಲಕ ಆರೋಗ್ಯ ವಿಚಾರಿಸುತ್ತಿದ್ದಾರೆ. ಚಿತ್ರತಂಡದ ಎಲ್ಲರೂ ಚೆನ್ನಾಗಿದ್ದೇವೆ. ನಿಮ್ಮೆಲ್ಲರ ಕಾಳಜಿ ಹಾಗೂ ಪ್ರೀತಿಗೆ ಧನ್ಯವಾದಗಳು'' ಎಂದು 'ದಿ ಕೇರಳ ಸ್ಟೋರಿ' ಚಿತ್ರದ ನಟಿ ಅದಾ ಶರ್ಮಾ ಟ್ವೀಟ್‌ ಮಾಡಿದ್ದಾರೆ.

ನಿರ್ದೇಶಕ ಸುದಿಪ್ತೋ ಸೇನ್‌ ಕೂಡಾ ಟ್ವೀಟ್‌ ಮಾಡಿ, ''ಇಂದು (ಮೇ 14) ನಾವು ಕರೀಂನಗರಕ್ಕೆ ಹೋಗಬೇಕಿತ್ತು. ಅಲ್ಲಿ ನಾವು ಚಿತ್ರದ ಪ್ರಚಾರಕ್ಕೆ ಹೊರಟಿದ್ದೆವು. ಆದರೆ ಅಪಘಾತ ಸಂಭವಿಸಿದ ಕಾರಣ ನಾವು ಅಲ್ಲಿಗೆ ಹೋಗಲಾಗಲಿಲ್ಲ. ಇದಕ್ಕಾಗಿ ಕರೀಂನಗರದ ಜನತೆಗೆ ಕ್ಷಮೆ ಕೇಳುತ್ತೇನೆ. ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ನಾವು ಈ ಸಿನಿಮಾ ಮಾಡಿದ್ದೇವೆ. ನಮ್ಮನ್ನು ಬೆಂಬಲಿಸಿ'' ಎಂದು ಟ್ವೀಟ್‌ ಮಾಡಿದ್ದಾರೆ.

ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ರಿಲೀಸ್‌ ಆಗಿರುವ 'ದಿ ಕೇರಳ ಸ್ಟೋರಿ' ಸಿನಿಮಾ 100 ಕೋಟಿ ರೂಪಾಯಿ ಕ್ಲಬ್‌ ಸೇರಿದ್ದು ಸಿನಿಪ್ರಿಯರಿಗೆ ಖುಷಿ ನೀಡಿದೆ. ಸಿನಿಮಾ ಟ್ರೇಲರ್‌ ರಿಲೀಸ್‌ ಆಗುತ್ತಿದ್ದಂತೆ ಭಾರೀ ವಿವಾದ ಸೃಷ್ಟಿಸಿತ್ತು. ಕೇರಳ ಸೇರಿದಂತೆ ಇನ್ನಿತರ ಕಡೆ ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳು ಸಿನಿಮಾವನ್ನು ಬ್ಯಾನ್‌ ಮಾಡುವಂತೆ ಒತ್ತಾಯ ಹೇರಿದ್ದವು. ಆದರೆ ಸುಪ್ರೀಂಕೋರ್ಟ್‌ ಮಾತ್ರ ಮಧ್ಯೆ ಪ್ರವೇಶಿಸಿ ಸಿನಿಮಾ ಏಕೆ ಬ್ಯಾನ್‌ ಮಾಡಬೇಕು ಎಂದು ಪ್ರಶ್ನಿಸಿತ್ತು. ಈ ಸಂಬಂಧ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿಗೆ ನೋಟಿಸ್‌ ಕೂಡಾ ನೀಡಿತ್ತು. 'ದಿ ಕೇರಳ ಸ್ಟೋರಿ' ಚಿತ್ರವನ್ನು ಸನ್‌ಶೈನ್‌ ಪಿಕ್ಚರ್ಸ್‌ ಪ್ರೈವೇಟ್‌ ಲಿಮಿಟೆಡ್‌, ವಿಪುಲ್‌ ಅಮೃತ್‌ಲಾಲ್‌ ಶಾ ಪ್ರೊಡಕ್ಷನ್ಸ್‌ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದ್ದು ಸುದಿಪ್ತೋ ಸೇನ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾಲಿನಿ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಜೊತೆಗೆ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ, ಕನ್ನಡಿಗ ವಿಜಯ್‌ ಕೃಷ್ಣ, ಪ್ರಣಯ್‌ ಪಚೊರಿ, ಪ್ರಣವ್‌ ಮಿಶ್ರಾ ಹಾಗೂ ಇನ್ನಿತರರು ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ