Nandamuri Tarakaratna: ನಂದಮೂರಿ ತಾರಕರತ್ನ ಮಹಾಕರ್ಮ ಕಾರ್ಯಕ್ಕೆ ದಿನಾಂಕ ನಿಗದಿಗೊಳಿಸಿದ ಕುಟುಂಬ
Feb 26, 2023 07:49 AM IST
ತಾರಕರತ್ನ ಮಹಾಕರ್ಮ ಕಾರ್ಯಕ್ಕೆ ದಿನಾಂಕ ನಿಗದಿ
- ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತಾರಕರತ್ನ ಅವರಿಗೆ ವಿದೇಶಿ ವೈದ್ಯರ ಮಾರ್ಗದರ್ಶನದಲ್ಲಿ ಟ್ರೀಟ್‌ಮೆಂಟ್ ನೀಡಲಾಯಿತು. ಆದರೆ ಸತತ 23 ದಿನಗಳ ಕಾಲ ಚಿಕಿತ್ಸೆ ನಡೆದರೂ, ಫಲಕಾರಿ ಆಗದೆ ಫೆಬ್ರವರಿ 18 ರಂದು ತಾರಕರತ್ನ ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರೆಳೆದರು.
ಫೆಬ್ರವರಿ 18 ರಂದು ನಿಧನರಾದ ನಟ ನಂದಮೂರಿ ತಾರಕರತ್ನ ಅವರ ಮಹಾಕರ್ಮ ಕಾರ್ಯವನ್ನು ಮಾರ್ಚ್ 2 ರಂದು ನೆರವೇರಿಸಲು ಕುಟುಂಬ ವರ್ಗ ನಿರ್ಧರಿಸಿದೆ. ಆ ದಿನ ಮಧ್ಯಾಹ್ನ 12ರಿಂದ ಹೈದರಾಬಾದ್ ಫಿಲ್ಮ್ ನಗರ ಸಾಂಸ್ಕತಿಕ ಕೇಂದ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಸಂಬಂಧಿಕರಿಗೆ ಹಂಚಲು ತಾರಕರತ್ನ ಕುಟುಂಬ ಕಾರ್ಡ್ ಕೂಡಾ ಮುದ್ರಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಆಗಿದೆ.
ಪಾದಯಾತ್ರೆ ಸಮಯದಲ್ಲಿ ತಾರಕರತ್ನ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದಾಗಿನಿಂದ ಹಿಡಿದು ಅವರ ಅಂತ್ಯಕ್ರಿಯೆವರೆಗೆ ನಂದಮೂರಿ ಬಾಲಕೃಷ್ಣ ಮುಂದೆ ನಿಂತು ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾದ ವಿಜಯಸಾಯಿ ರೆಡ್ಡಿ ಕೂಡಾ ತಾರಕರತ್ನ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. ಮಾರ್ಚ್ 2 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.
ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ತಾರಕರತ್ನ
ನಂದಮೂರಿ ಕುಟುಂಬಕ್ಕೆ ಸೇರಿದ ತಾರಕರತ್ನ, ಸಿನಿಮಾಗಳಲ್ಲಿ ಹೆಚ್ಚು ಯಶಸ್ಸು ಕಾಣಲಿಲ್ಲ. ಆದ್ದರಿಂದ ಅವರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಇದರ ಭಾಗವಾಗಿ ಅವರು ತಮ್ಮ ತಾತ ನಂದಮೂರಿ ತಾರಕ ರಾಮರಾವ್ ಸ್ಥಾಪಿಸಿದ ತೆಲುಗು ದೇಶಂ ಪಕ್ಷಕ್ಕೆ ಸೇರಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದ ಅವರು ಈಗಿನಿಂದಲೇ ಪಕ್ಷದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ತಮ್ಮ ಸೋದರ ಮಾವ, ಟಿಡಿಪಿ ರಾಷ್ಟ್ರೀಯ ವಕ್ತಾರ ನಾರಾ ಲೋಕೇಶ್ ಆಯೋಜಿಸಿದ್ದ ಯುಗಲಂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆ ಆರಂಭವಾದ ದಿನ ಕುಪ್ಪಂ ಬಳಿ ಕಾರ್ಯಕರ್ತರೊಂದಿಗೆ ತೆರಳುತ್ತಿದ್ದಾಗ ತಾರಕರತ್ನ ಅವರಿಗೆ ತೀವ್ರ ಹೃದಯಾಘಾತವಾಗಿತ್ತು.
ಪಾದಯಾತ್ರೆ ವೇಳೆ ಕುಸಿದು ಬಿದ್ದ ತಾರಕರತ್ನ ಅವರನ್ನು ಕುಪ್ಪಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ತಾರಕರತ್ನ ಸ್ಥಿತಿ ಗಂಭೀರವಾಗಿದ್ದರಿಂದ ನಂತರ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಯ್ತು. ವಿದೇಶಿ ವೈದ್ಯರ ಮಾರ್ಗದರ್ಶನದಲ್ಲಿ ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಸತತ 23 ದಿನಗಳ ಕಾಲ ಚಿಕಿತ್ಸೆ ನಡೆದರೂ, ಫಲಕಾರಿ ಆಗದೆ ಫೆಬ್ರವರಿ 18 ರಂದು ತಾರಕರತ್ನ ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರೆಳೆದರು. ಅಲ್ಲಿಂದ ತಾರಕರತ್ನ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ತಂದು ಫೆಬ್ರವರಿ 21 ರಂದು ಅಂತ್ಯಕ್ರಿಯೆ ಮಾಡಲಾಗಿತ್ತು.
ಟಾಲಿವುಡ್‌ನಲ್ಲಿ ದಾಖಲೆ ಬರೆದಿದ್ದ ತಾರಕರತ್ನ
ಸಹಜವಾಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುವವರು ಒಂದು ಸಿನಿಮಾ ಅಥವಾ ಎರಡು ಸಿನಿಮಾಗಳ ಮೂಲಕ ಆಗಮಿಸುತ್ತಾರೆ. ಆದರೆ, ತಾರಕರತ್ನ ಬರೋಬ್ಬರಿ 9 ಸಿನಿಮಾಗಳ ಮೂಲಕ ತಮ್ಮ ಕೆರಿಯರ್ ಆರಂಭಿಸಿದ್ದರು. ಈ ಮೂಲಕ ಟಾಲಿವುಡ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿ ಹೊಸ ದಾಖಲೆಗೆ ಮುನ್ನುಡಿ ಬರೆದಿದ್ದರು. 2002ರಲ್ಲಿ ಕೇವಲ 20 ವರ್ಷ ವಯಸ್ಸಿನಲ್ಲಿದ್ದಾಗ ತಾರಕರತ್ನ ಅವರ ಬರೋಬ್ಬರಿ 9 ಸಿನಿಮಾಗಳು ಒಂದೇ ದಿನ ಶುರುವಾದವು. ಈ ಹಿಂದೆ ಯಾರೂ ಮಾಡದ ದಾಖಲೆ ತಾರಕರತ್ನ ಪಾಲಾಯಿತು.
2002ರಲ್ಲಿ 'ಒಕಟೋ ನಂಬರ್ ಕುರ್ರಾಡು' ಚಿತ್ರದ ಮೂಲಕ ತಾರಕರತ್ನ ಆಕ್ಟಿಂಗ್ ಕರಿಯರ್ ಆರಂಭವಾಯ್ತು. ಆ ಸಿನಿಮಾದೊಂದಿಗೆ ಅದೇ ದಿನ ಇನ್ನೂ 8 ಸಿನಿಮಾಗಳು ಶುರುವಾದವು. ಅಚ್ಚರಿಯ ವಿಚಾರ ಏನೆಂದರೆ 2002ರಲ್ಲಿ ಹೈದರಾಬಾದ್‌ನ ರಾಮಕೃಷ್ಣ ಸ್ಟುಡಿಯೋದಲ್ಲಿ ಒಂದೇ ದಿನ 9 ಸಿನಿಮಾಗಳ ಶೂಟಿಂಗ್‌ನಲ್ಲಿ ಕೂಡಾ ತಾರಕರತ್ನ ಭಾಗವಹಿಸಿದ್ದರು. ಆ 9 ಸಿನಿಮಾಗಳ ಪೈಕಿ 'ಒಕಟೋ ನಂಬರ್ ಕುರ್ರಾಡು' ಸಿನಿಮಾ ಮಾತ್ರ ತೆರೆಕಂಡಿತು. ಇನ್ನುಳಿದ ಸಿನಿಮಾಗಳು ಬಿಡುಗಡೆ ಆಗಲೇ ಇಲ್ಲ. ಇದು ಇಂದಿಗೂ ಅವರ ಅಭಿಮಾನಿಗಳನ್ನು ಕಾಡುತ್ತಿರುವ ಬೇಸರದ ವಿಚಾರವಾಗಿದೆ.