Nithya Menen: ಯಾರಿದು ಸಂತೋಷ್...ಆತ ನನಗೆ ಕಿರುಕುಳ ನೀಡ್ತಿದ್ದಾನೆ ಅಂತ ನಿತ್ಯಾ ಮೆನನ್ ಹೇಳ್ತಿರೋದೋಕೆ..?
Aug 07, 2022 03:19 PM IST
ನಿತ್ಯಾ ಮೆನನ್
ಎಲ್ಲಾ ನಂಬರ್ಗಳನ್ನು ಬ್ಲಾಕ್ ಮಾಡಿದ್ದೆ. ಆತನ ವಿರುದ್ಧ ದೂರು ನೀಡುವಂತೆ ಎಲ್ಲರೂ ನನಗೆ ಹೇಳಿದ್ದರು. ಆತನ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ ನಾನು ಪೊಲೀಸರಿಗೆ ದೂರು ನೀಡಲಿಲ್ಲ, ಆತನನ್ನು ಕ್ಷಮಿಸಿದ್ದೆ. ಆದರೆ ಆತ ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದ್ದಾನೆ. ಈಗ ಆತನ ಮೇಲೆ ದೂರು ನೀಡದೆ ವಿಧಿ ಇಲ್ಲ ಎಂದಿದ್ದಾರೆ.
ಹೊರಗೆ ಥಳುಕು, ಒಳಗೆ ಹುಳುಕು ಎಂಬ ಮಾತಿನಂತೆ ಸಿನಿಮಾ ಸ್ಟಾರ್ಗಳು, ಚಿತ್ರರಂಗ ಎಲ್ಲವನ್ನೂ ನೋಡಿದವರಿಗೆ ಎಲ್ಲವೂ ಸುಂದರವಾಗಿ ಕಾಣುತ್ತದೆ. ಆದರೆ ಇಲ್ಲಿ ಕೂಡಾ ಅನೇಕ ಸಮಸ್ಯೆಗಳಿವೆ. ಹೇಳಿಕೊಳ್ಳಲು ಆಗದಂತ ಸಮಸ್ಯೆ ಅನುಭವಿಸಿದವರು ಬಹಳ ಜನರಿದ್ದಾರೆ. ಕೆಲವರು ತಮ್ಮ ನೋವನ್ನು ಹೇಳಿಕೊಂಡರೆ ಕೆಲವರು ಹೇಳಿಕೊಳ್ಳುವುದಿಲ್ಲ.
ಕೆಲಸವನ್ನು ಬಿಟ್ಟು ವಿವಾದವನ್ನು ಮೇ ಮೇಲೆ ಎಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ ಮೀ ಟೂ ಆಂದೋಲನದ ಸಮಯದಲ್ಲಿ, ಅನೇಕ ಮಹಿಳೆಯರು ಲೈಂಗಿಕ ಕಿರುಕುಳ ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಅದರಲ್ಲಿ ಜ್ಯೂನಿಯರ್ ಆರ್ಟಿಸ್ಟ್ಗಳು ಮಾತ್ರವಲ್ಲದೆ ಸ್ಟಾರ್ ನಾಯಕಿಯರೂ ಇದ್ದಾರೆ. ಇದೀಗ ಆ ಪಟ್ಟಿಗೆ ನಿತ್ಯಾ ಮೆನನ್ ಕೂಡಾ ಸೇರಿದ್ದಾರೆ. ದಕ್ಷಿಣದಲ್ಲಿ ವಿಶಿಷ್ಟ ಪಾತ್ರಗಳ ಮೂಲಕ ಹೆಸರು ಮಾಡಿರುವ ನಿತ್ಯಾ ಮೆನನ್ ಕೇರಳದವರಾದರೂ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದಾರೆ. ಆದರೆ ತಮ್ಮ ವೃತ್ತಿ ಜೀವನದಲ್ಲಿ ನಿತ್ಯಾ ಮೆನನ್ ಕೂಡಾ ಬಹಳ ಕಿರುಕುಳಕ್ಕೆ ಒಳಗಾಗಿದ್ದಾರಂತೆ.
ನಿತ್ಯಾ ಮೆನನ್, ತಾವೂ ಕೂಡಾ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಹೇಳಿದಾಗ ಎಲ್ಲರೂ ಶಾಕ್ ಆಗಿದ್ದಾರೆ. ತಮ್ಮ ಮುಂಬರುವ ಸಿನಿಮಾವೊಂದರ ಪ್ರಮೋಷನ್ ಸಮಯದಲ್ಲಿ ಈ ವಿಚಾರವಾಗಿ ಮಾತಾಡಿದ ನಿತ್ಯಾ ಮೆನನ್, 'ಕೇರಳದ ಖ್ಯಾತ ಯೂಟ್ಯೂಬ್ವೊಂದರ ವಿಮರ್ಶಕ ಸಂತೋಷ್ ವರ್ಕಿ ಎಂಬಾತ ಕಳೆದ 6 ವರ್ಷಗಳಿಂದ ನನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆತನನ್ನು ಎಷ್ಟೇ ಅವಾಯ್ಡ್ ಮಾಡಿದರೂ 30 ಕ್ಕೂ ಹೆಚ್ಚು ನಂಬರ್ಗಳಲ್ಲಿ ಬಳಸಿ ಆತ ನನಗೆ ಕರೆ ಮಾಡುತ್ತಿದ್ದ. ನನ್ನ ತಂದೆ ತಾಯಿಗಳಿಗೂ ಈ ವಿಚಾರವಾಗಿ ತಿಳಿಸಿದೆ. ಎಲ್ಲಾ ನಂಬರ್ಗಳನ್ನು ಬ್ಲಾಕ್ ಮಾಡಿದ್ದೆ. ಆತನ ವಿರುದ್ಧ ದೂರು ನೀಡುವಂತೆ ಎಲ್ಲರೂ ನನಗೆ ಹೇಳಿದ್ದರು. ಆತನ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ ನಾನು ಪೊಲೀಸರಿಗೆ ದೂರು ನೀಡಲಿಲ್ಲ, ಆತನನ್ನು ಕ್ಷಮಿಸಿದ್ದೆ. ಆದರೆ ಆತ ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದ್ದಾನೆ. ಈಗ ಆತನ ಮೇಲೆ ದೂರು ನೀಡದೆ ವಿಧಿ ಇಲ್ಲ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಂತೋಷ್, ನಿತ್ಯಾ ಮೆನನ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಖರೀದಿಸಬಹುದು ಎಂದು ನೀವೇ ಯೋಚನೆ ಮಾಡಿ, ಆಕೆಗೆ ಈಗಾಗಲೇ ನಿಶ್ಚಿತಾರ್ಥವಾಗಿದೆ ಎಂದು ಆಕೆಯ ತಾಯಿ ಹೇಳುತ್ತಾರೆ, ಆದರೆ ಆಕೆ ತಂದೆ, ಇನ್ನೂ ಯಾರೊಂದಿಗೂ ನಿತ್ಯಾ ಎಂಗೇಜ್ಮೆಂಟ್ ಆಗಿಲ್ಲ ಎನ್ನುತ್ತಾರೆ. ನಾನು ಆಕೆಯನ್ನು ಪ್ರೀತಿಸಿದ್ದು ನಿಜ, ಆದರೆ ನನ್ನ ತಂದೆ ಸತ್ತ ನಂತರ ನನ್ನ ಕೆಲಸಗಳಲ್ಲಿ ನಾನು ನಿರತನಾಗಿದ್ದೇನೆ. ಆಕೆ ಹೇಳಿದಂತೆ ಕರೆ ಮಾಡಿ ನಾನು ಕಿರುಕುಳ ನೀಡಿಲ್ಲ. ನನಗೆ ಗೌರವ ಕೊಡದ ನಿತ್ಯಾ ಮೆನನ್ ಅವರನ್ನು ಇನ್ನು ಪ್ರೀತಿಸುವುದೂ ಇಲ್ಲ, ಆಕೆಯನ್ನು ಮದುವೆಯಾಗೆಂದು ಕೇಳುವುದೂ ಇಲ್ಲ ಎಂದು ಸಂತೋಷ್ ಹೇಳಿದ್ದಾರೆ.
ಸಂತೋಷ್ ವಿಡಿಯೋ ನೋಡಿದ ಹಲವರು ಈತನನ್ನು ನೋಡಿದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ಯಾರಿಗಾದರೂ ತಿಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನಿತ್ಯಾ ಸಿನಿಮಾಗಳ ಬಗ್ಗೆ ಹೇಳುವುದಾದರೆ ಸದ್ಯಕ್ಕೆ ಧನುಷ್ ಅಭಿನಯದ 'ತಿರುಚಿತ್ರಂಬಲಂ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರ ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ. ಇತ್ತೀಚಿನ ದಿನಗಳಲ್ಲಿ ನಿತ್ಯಾ ಮೆನನ್ ನಾಯಕಿ ಮಾತ್ರವಲ್ಲದೆ ನಿರ್ಮಾಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.