logo
ಕನ್ನಡ ಸುದ್ದಿ  /  ಮನರಂಜನೆ  /  ಬಿಡುಗಡೆಗೂ ಮುನ್ನ 'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು

ಬಿಡುಗಡೆಗೂ ಮುನ್ನ 'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು

Jayaraj HT Kannada

Dec 04, 2024 08:01 PM IST

google News

'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು

    • ಬಿಡುಗಡೆಗೂ ಮುನ್ನವೇ 'ಪುಷ್ಪ 2: ದಿ ರೂಲ್' ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ. ಬೆಂಗಳೂರಿನ 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು ಮಾಡಲಾಗಿದೆ. ಈ ಕುರಿತು ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು
'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು

ಅಲ್ಲು ಅರ್ಜುನ್‍ ಅಭಿನಯದ 'ಪುಷ್ಪ 2' ಚಿತ್ರ ನಾಳೆ (ಡಿಸೆಂಬರ್ 5) ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚಿನ ಬೆಳಗಿನ ಜಾವದ ಪ್ರದರ್ಶನಗಳನ್ನು ರದ್ದು ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪುಷ್ಪ 2 ಚಿತ್ರವು ಬೆಂಗಳೂರಿನ ಮೆಜೆಸ್ಟಿಕ್‍ ಪ್ರದೇಶದ ಸಂತೋಷ್‍, ತ್ರಿವೇಣಿ ಮತ್ತು ಅನುಪಮಾ ಸೇರಿದಂತೆ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿ.01ರಂದು ರಾಜ್ಯದಲ್ಲಿ ಅಡ್ವಾನ್ಸ್ ಬುಕ್ಕಿಂಗ್‍ ಪ್ರಾರಂಭವಾಗಿದ್ದು, ಬೆಳಗ್ಗೆ ಮೂರು ಗಂಟೆಯಿಂದಲೇ ಬೆಂಗಳೂರಿನ ಹಲವು ಕಡೆ ಚಿತ್ರ ಪ್ರದರ್ಶನ ಪ್ರಾರಂಭವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ಪರಭಾಷೆಯ ಚಿತ್ರಗಳಿಗೆ ಕಾನೂನುಬಾಹಿರವಾಗಿ ಬೆಳಗಿನ ಜಾವ ಮೂರು, ನಾಲ್ಕು ಗಂಟೆಗೆಲ್ಲಾ ಪ್ರದರ್ಶನ ಮಾಡಲಾಗುತ್ತಿತ್ತು. ‘ಪುಷ್ಪ 2’ ಚಿತ್ರಕ್ಕೂ ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ಆಯೋಜಿಸುವುದರ ಜೊತೆಗೆ ಅತಿ ಹೆಚ್ಚಿನ ಟಿಕೆಟ್‍ ಬೆಲೆ ನಿಗದಿಪಡಿಸಲಾಗಿತ್ತು. ಸುಂಕದಕಟ್ಟೆ ಮೋಹನ್‍, ಕದಿರೇನಹಳ್ಳಿಯ ಮಹದೇಶ್ವರ, ಕಾಡುಗೋಡಿಯ ಶ್ರೀನಿವಾಸ, ತಾವರೆಕೆರೆಯ ಬಾಲಾಜಿ, ಕೋನಪ್ಪನ ಅಗ್ರಹಾರದ ವೆಂಕಟೇಶ್ವರ, ಕತ್ತರಿಗುಪ್ಪೆಯ ಕಾಮಾಕ್ಯ, ಯಶವಂತಪುರದ ಗೋವರ್ಧನ್‍, ಚಂದ್ರೋದಯ, ರಾಜಾಜಿನಗರದ ನವರಂಗ್‍, ಅಗರದ ತಿರುಮಲ, ಮಾಗಡಿ ರಸ್ತೆಯ ಪ್ರಸನ್ನ, ಸಂಜಯ್‍ ನಗರದ ವೈಭವ್‍, PNR ಫೆಲಿಸಿಟಿ ಮಾಲ್‍ನ ಸಿನಿಫೈಲ್‍ ಮುಂತಾದ ಏಕಪರದೆಯ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಗ್ಗೆ 3 ಅಥವಾ 4 ಗಂಟೆಗೆ ಪ್ರದರ್ಶನ ಶುರುವಾಗುವುದಾಗಿ ಘೋಷಣೆಯಾಗಿತ್ತು. ಬುಕ್‍ ಮೈ ಶೋನಲ್ಲಿ ಚಿತ್ರದ ಟಿಕೆಟ್‍ಗಳ ಬುಕ್ಕಿಂಗ್‍ ಸಹ ಪ್ರಾರಂಭವಾಗುವುದರ ಜೊತೆಗೆ, ಚಿತ್ರಕ್ಕೆ ಅತಿ ಹೆಚ್ಚು ಬೆಲೆಯ ಟಿಕೆಟ್‍ ದರವನ್ನು ನಿಗದಿಪಡಿಸಲಾಗಿತ್ತು.

ಈ ಕುರಿತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಇಂದು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಸಿತ್ತು. ಮುಂಜಾನೆ ಆರು ಗಂಟೆಯ ಒಳಗೆ ಯಾವುದೇ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂಬ ರಾಜ್ಯ ಸರ್ಕಾರ ಅದೇಶವಿದ್ದರೂ, ಕರ್ನಾಟಕದ ಕೆಲ ಚಿತ್ರಮಂದಿರಗಳಲ್ಲಿ ಅವಧಿಗೂ ಮುನ್ನ ಚಿತ್ರ ಪ್ರದರ್ಶನಗೊಳ್ಳುತ್ತಿರುವುದು ಕಾನೂನು ಬಾಹಿರ. ಹೀಗಾಗಿ ಯಾವ ಚಿತ್ರಮಂದಿರಗಳು ಸರ್ಕಾದ ಆದೇಶವನ್ನು ಉಲ್ಲಂಘಿಸುತ್ತಿದೆಯೋ ಅಂತಹ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು.

ಬೆಳಗ್ಗೆ 6.30ರ ನಂತರ ಪ್ರದರ್ಶನ ಆರಂಭ

ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ಅವಧಿಪೂರ್ವ ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಇದರಿಂದಾಗಿ ಬೆಳಗಿನ ಜಾವ ನಿಗದಿಯಾಗಿದ್ದ 100ಕ್ಕೂ ಹೆಚ್ಚು ಪ್ರದರ್ಶನಗಳು ರದ್ಧಾಗಿದ್ದು, 6.30ರ ನಂತರ ಪ್ರದರ್ಶನ ಪ್ರಾರಂಭವಾಗಲಿದೆ.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕರ್ನಾಟಕದಲ್ಲಿ 'ಪುಷ್ಪ-2' ಸಿನಿಮಾದ ಮಧ್ಯರಾತ್ರಿ ಹಾಗೂ ಬೆಳಗಿನ ಪ್ರದರ್ಶನ ರದ್ದಾಗಿರುವುದರಿಂದ ಈಗಾಗಲೇ ಟಿಕೆಟ್‍ ಪಡೆದಿರುವವರಿಗೆ ದುಡ್ಡನ್ನು ಹಿಂದಿರುಗಿಸಲಾಗುತ್ತದೆ. ಅಥವಾ ಅದೇ ಚಿತ್ರಮಂದಿರದ ಮುಂದಿನ ಪ್ರದರ್ಶನಗಳಲ್ಲಿ ಚಿತ್ರ ನೋಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಚಿತ್ರದುರ್ಗದಲ್ಲೂ ಹಿನ್ನಡೆ

ಬೆಂಗಳೂರು ಮಾತ್ರವಲ್ಲದೆ, ಚಿತ್ರದುರ್ಗದಲ್ಲಿಯೂ ಪುಷ್ಪ2 ಬಿಡುಗಡೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡುವಂತೆ ಡಿಸಿಗೆ ಮನವಿ ಸಲ್ಲಿಸಲಾಗಿದೆ. ಧೀರ ಭಗತ್ ರಾಯ್ ಸಹ ನಿರ್ಮಾಪಕ ಹಾಗೂ ಕನ್ನಡ ಪರ ಹೋರಾಟಗಾರರ ಮನವಿಗೆ ಸ್ಪಂದಿಸಿದ ‌ಜಿಲ್ಲಾಧಿಕಾರಿ, ವಿತರಕರಿಗೆ ನೋಟೀಸ್ ನೀಡಿದ್ದಾರೆ. ಕನ್ನಡ ಸಿನಿಮಾಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಚಿತ್ರದುರ್ಗದ ಜಿಲ್ಲಾಧಿಕಾರಿಗಳಿಗೆ ಸಹ ನಿರ್ಮಾಪಕ ಕರಿಯಪ್ಪ ಎಸ್ ಬಿನ್ ಶಿವಪ್ಪ ಮನವಿ ಪತ್ರ ಸಲ್ಲಿಸಿದ್ದರು.

ದುರ್ಗದ ಪ್ರಸನ್ನ, ಛೋಟಾ ಮಹಾರಾಜ್, ಮತ್ತು ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಪುಷ್ಪ-2 ಪ್ರದರ್ಶನ ಮಾತ್ರ ನಿಗದಿಯಾಗಿತ್ತು. ಡಿಸೆಂಬರ್‌ 6ರಂದು ಕನ್ನಡದ ಧೀರ ಭಗತ್ ರಾಯ್ ಸಿನಿಮಾ ರಿಲೀಸ್ ಆಗುತ್ತಿದ್ದು, ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಇದು ಕನ್ನಡ ಅಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ನಿರಾಶೆ ಮೂಡಿಸಿತ್ತು. ಕನ್ನಡದ ಧೀರ ಭಗತ್ ರಾಯ್ ಸಿನಿಮಾಗೆ ಹೆಚ್ಚಿನ‌ ಸಂಖ್ಯೆಯಲ್ಲಿ ಥಿಯೇಟರ್‌ ನೀಡಬೇಕು, ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ