ಜಗ್ಗೇಶ್ ಸರ್ ನಿಮ್ಗೆ ಬುದ್ಧಿ ಹೇಳೋವಷ್ಟು ದೊಡ್ಡೋನಲ್ಲ ನಾನು, ನೀವು ಗುರುಪ್ರಸಾದ್ ಬಗ್ಗೆ ಹಾಗೆ ಮಾತ್ನಾಡಿದ್ದು ತಪ್ಪು; ಹುಚ್ಚ ವೆಂಕಟ್
Nov 05, 2024 04:40 PM IST
ಗುರುಪ್ರಸಾದ್ ಬಗ್ಗೆ ಹಗುರವಾಗಿ ಮಾತನಾಡಿದ ಜಗ್ಗೇಶ್‌ಗೆ ಹುಚ್ಚ ವೆಂಕಟ್ ಕ್ಲಾಸ್
- ನಿರ್ದೇಶಕ ಗುರುಪ್ರಸಾದ್ ಸಾವಿನ ಬಳಿಕ ನಟ ಜಗ್ಗೇಶ್ ಆಡಿದ ಮಾತುಗಳಿಗೆ ಸೋಷಿಯಲ್ ಮೀಡಿಯಾ ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಈ ನಡುವೆ ಇದೇ ಜಗ್ಗೇಶ್ ಮಾತಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಹುಚ್ಚ ವೆಂಕಟ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ.
Huchcha Venkat about Jaggesh: ನಿರ್ದೇಶಕ, ನಟ ಗುರುಪ್ರಸಾದ್ ಬಗ್ಗೆ ಮಾಧ್ಯಮಗಳ ಬಗ್ಗೆ ಮನಸೋ ಇಚ್ಛೇ ಮಾತನಾಡಿ ಇದೀಗ ಪೇಚಿಗೆ ಸಿಲುಕಿದ್ದಾರೆ ಸ್ಯಾಂಡಲ್‌ವುಡ್‌ನ ಹಿರಿಯ ನಟ, ನವರಸನಾಯಕ ಜಗ್ಗೇಶ್. ಮೊನ್ನೆ ನವೆಂಬರ್ 3ರಂದು ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಅವರ ಶವ ಪತ್ತೆಯಾಗಿತ್ತು. ಆರ್ಥಿಕ ಸಮಸ್ಯೆಯಿಂದ ಅವರು ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದೂ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿತ್ತು. ಈ ಸಾವಿನ ನಡುವೆಯೇ ಮಾಧ್ಯಮಗಳ ಮುಂದೆ ಗುರುಪ್ರಸಾದ್ ಅವರ ವೈಯಕ್ತಿಕ ವಿಚಾರಗಳನ್ನು ತೆರೆದಿಟ್ಟಿದ್ದರು. ಈಗ ಅವರ ಆ ಮಾತುಗಳಿಗೆ ಹುಚ್ಚ ವೆಂಕಟ್ ವಿರೋಧ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಗುರುಪ್ರಸಾದ್ ಓರ್ವ ಚಟಗಾರ, ಕುಡುಕ, ಹಣ ಪೋಲುಮಾಡುವವನು ಎಂದು ಅವರ ಸಾವಿನ ಬಳಿಕ ವೈಯಕ್ತಿಕ ನಿಂದನೆ ಮಾಡಿದ್ದರು. ನಟ ಜಗ್ಗೇಶ್ ಈ ರೀತಿ ಮಾತನಾಡಿದ್ದು ಎಷ್ಟು ಸರಿ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಟೀಕೆ ಮಾಡುತ್ತಿದ್ದರು. ಗುರುಪ್ರಸಾದ್ ಅವರಿಗೆ ಚರ್ಮರೋಗ ಇತ್ತು. ಮೈ ಕೈ ಕೆರೆದರೆ ಕೀವು ಬರುತ್ತಿತ್ತು. ಅವನ ಜತೆ ಕೂತು ಊಟ ಮಾಡುವುದಕ್ಕೂ ಭಯ. ನಮ್ಮ ತಟ್ಟೆಗೇ ಕೈ ಹಾಕೋನು ಎಂದೂ ಹೇಳಿದ್ದರು ಜಗ್ಗೇಶ್. ಮೊದಲೆಲ್ಲ ಶೂಟಿಂಗ್ ಸೆಟ್‌ಗೆ ಪುಸ್ತಕ ತರುತ್ತಿದ್ದ ಜಗ್ಗೇಶ್, ಇತ್ತೀಚೆಗೆ ಬಾಟಲ್‌ಗಳನ್ನು ತರ್ತಿದ್ದ ಎಂದಿದ್ದರು. ಈಗ ಇದೇ ಜಗ್ಗೇಶ್ ಬಗ್ಗೆ ಹುಚ್ಚ ವೆಂಕಟ್ ವಿಡಿಯೋ ಮೂಲಕ, "ಜಗ್ಗೇಶ್ ಸರ್ ನೀವು ಮಾತನಾಡಿದ್ದು ತಪ್ಪು" ಎಂದಿದ್ದಾರೆ.
ಹುಚ್ಚ ವೆಂಕಟ್ ಹೇಳಿದ್ಧೇನು?
'ಗುರು ಪ್ರಸಾದ್ ಅವರ ಬಗ್ಗೆ ಜಗ್ಗೇಶ್ ಮಾತನಾಡಿದ್ದು ಬಹಳ ಬೇಸರ ಆಯ್ತು. ಈಗ ಗುರು ಪ್ರಸಾದ್ ಅವರು ಇಲ್ಲ, ಅವರ ಮನೆಯವರು ಇನ್ನೂ ನೋವಿನಲ್ಲಿ ಇರುತ್ತಾರೆ. ಆ ನೋವಿನಲ್ಲಿ ಇರುವವರಿಗೆ ಇನ್ನೂ ನೋವು ಬೇಕಾ?. ತಪ್ಪು ಸರ್.. ಒಬ್ಬು ಮನುಷ್ಯ ಬದುಕಿರುವಾಗ ಮಾತನಾಡಿದ್ದರೆ ತಪ್ಪು ಆಗುತ್ತೆ. ಇನ್ನು ತೀರಿಕೊಂಡಿರುವವರ ಬಗ್ಗೆ ಏನ್ ಏನೋ ಮಾತನಾಡಿ, ಅವರ ಫ್ಯಾಮಿಲಿ ಮೆಂಬರ್‌ಗಳಿಗೆ ಏನಾಗಬಹುದು? ಮೊದಲೇ ಅವರ ಕುಟುಂಬ ನೋವಿನಲ್ಲಿ ಇದ್ದಾರೆ. ನಿಮ್ಮ ಮಾತುಗಳನ್ನು ಕೇಳಿ, ಇನ್ನೂ ನೋವಾಗುತ್ತದೆ. ಒಬ್ಬ ಮನುಷ್ಯ ಸತ್ತ ಮೇಲೆ ಅವರ ಬಗ್ಗೆ ಮಾತನಾಡಬಾರದು. ಜಗ್ಗೇಶ್ ಸರ್ ಇನ್ನು ಮುಂದೆ ಅವರ ಬಗ್ಗೆ ಯಾರ ಬಳಿನೂ ಮಾತನಾಡಬೇಡಿ. ಬೈ ಪ್ರಂ ಫೈಟಿಂಗ್ ಅಂಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್" ಎಂದಿದ್ದಾರೆ.
ತುಂಬ ನೋವಾಯ್ತು ಸರ್ ನಿಮ್ಮ ಮಾತಿಂದ..
"ದಯವಿಟ್ಟು ಹೇಳ್ತಿನಿ. ಯಾವುದೇ ಮನುಷ್ಯ ಸತ್ತ ಮೇಲೆ ಮಾತನಾಡಬಾರದು. ಬದುರೋವಾಗಲೇ ಮಾತನಾಡುವುದು ತಪ್ಪು. ತುಂಬ ಚಿಕ್ಕವನು ನಾನು ನಿಮಗೆ ಬುದ್ದಿ ಹೇಳೋವಷ್ಟು ದೊಡ್ಡೋನಲ್ಲ. ಆದರೆ, ನೋವಾಯ್ತು ಸರ್. ನೋವಾಯ್ತು. ಒಬ್ಬ ಮನುಷ್ಯ ಸತ್ತಮೇಲೆ ಅವರ ಬಗ್ಗೆ ಹೀಗೆಲ್ಲ ಮಾತನಾಡಬಾರದು ಸರ್. ಅವರ ಕುಟುಂಬಕ್ಕೂ ಹೇಳ್ತಿನಿ ತಲೆ ಕೆಡಿಸಿಕೊಳ್ಳಬೇಡಿ. ಏನೋ ಒಂದಷ್ಟು ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ಇರುತ್ತೆ. ಗುರುಪ್ರಸಾದ್ ಹಾಗಲ್ಲ" ಎಂದು ಜಗ್ಗೇಶ್ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಹುಚ್ಚ ವೆಂಕಟ್.
ಲಾಯರ್ ಜಗದೀಶ್ ಕಡೆಯಿಂದಲೂ ತರಾಟೆ
“ಜಗ್ಗೇಶ್, ಸತ್ತ ವ್ಯಕ್ತಿಯ ಬಗ್ಗೆ ಎಂಥ ವಿಶ್ಲೇಷಣೆ ನೀಡಿದ್ದಿ , ಸಾವಿನಲ್ಲೂ ವಿಕೃತಿ ಕಾಣಬಹುದು ಅನ್ನೋದನ್ನು ನಿನ್ನಿಂದ ಕಲಿಯಬೇಕು, ಯಾವ ಆಂಗಲ್‌ನಿಂದ ನಿನ್ನ ಮನುಷ್ಯ ಎಂದು ಹೇಳಬೇಕೋ ಗೊತ್ತಾಗುತ್ತಿಲ್ಲ. ನಿನ್ನನ್ನು ನೀನು ರಾಘವೇಂದ್ರ ಸ್ವಾಮಿಗಳ ಭಕ್ತ ಎಂದು ಹೇಳಿಕೊಳ್ಳುತ್ತೀಯ, ಒಬ್ಬ ರಾಘವೇಂದ್ರನ ಭಕ್ತನಾಗಿ, ನಿನಗೆ ಲೈಫ್ ಕೊಟ್ಟ ನಿರ್ದೇಶಕನ ಬಗ್ಗೆ ಈ ರೀತಿ ಮಾತನಾಡಲು ಹೇಗೆ ಮನಸ್ಸು ಬಂತು? ಮಠ ಸಿನಿಮಾದಲ್ಲಿ ಅವರು ನಿನಗೆ ಅವಕಾಶ ಕೊಡದೆ ಇದ್ದಿದ್ದರೆ ಜಗ್ಗೇಶ್ ಯಾರು ಎಂಬುದನ್ನೇ ಜನರು ಮರೆತುಬಿಡುತ್ತಿದ್ದರು” ಎಂದಿದ್ದರು ಲಾಯರ್ ಜಗದೀಶ್.