ಮನೆಯವರಿಗೆ ಹೇಳದೇ ಹಿರಿಯ ನಟ ಶರತ್ ಬಾಬು ಜತೆ ಎರಡನೇ ಮದುವೆಯಾಗಿದ್ರಾ ಕನ್ನಡದ ನಟಿ ಸ್ನೇಹಾ? ಹೀಗಿದೆ ನಟಿಯ ಸ್ಪಷ್ಟನೆ
Sep 24, 2023 01:29 PM IST
ಮನೆಯವರಿಗೆ ಹೇಳದೇ ಹಿರಿಯ ನಟ ಶರತ್ ಬಾಬು ಜತೆ ಎರಡನೇ ಮದುವೆಯಾಗಿದ್ರಾ ಕನ್ನಡದ ನಟಿ ಸ್ನೇಹಾ? ಹೀಗಿದೆ ನಟಿಯ ಸ್ಪಷ್ಟನೆ
- ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಸ್ನೇಹಾ ನಂಬಿಯಾರ್ ಬಗ್ಗೆ ತಮಿಳು ಚಿತ್ರೋದ್ಯಮದಲ್ಲಿ ಹಲವು ಪುಕಾರುಗಳು ಹಬ್ಬಿದ್ದವು. ಸಾಕಷ್ಟು ಮುಜುಗರಕ್ಕೀಡಾಗಿದ್ದರು. ಇದೀಗ ಆ ವದಂತಿಗಳನ್ನು ಮತ್ತೆ ನೆನಪು ಮಾಡಿಕೊಂಡಿದ್ದಾರೆ.
Sneha Nambiar: ಸ್ಯಾಂಡಲ್‌ವುಡ್ ಜತೆಗೆ ಸೌತ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ನಟರೆಂದರೆ ಶರತ್ ಬಾಬು. ಸುದೀರ್ಘ 50 ವರ್ಷಗಳ ಕಾಲ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಈ ನಟ. ಇತ್ತೀಚೆಗಷ್ಟೇ ಅಂದರೆ ಇದೇ ವರ್ಷದ ಮೇ ತಿಂಗಳಲ್ಲಿ ಅನಾರೋಗ್ಯದಿಂದ ಶರತ್ ಬಾಬು ನಿಧನರಾಗಿದ್ದರು. ಇದೀಗ ಇದೇ ಶರತ್ ಬಾಬು ಅವರ ಬಗ್ಗೆ ನಟಿ ಸ್ನೇಹಾ ನಂಬಿಯಾರ್ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.
ಸ್ನೇಹಾ ನಂಬಿಯಾರ್ ಮೂಲ ಮಲಯಾಳಿಯಾದರೂ, ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕನ್ನಡ ಸಿನಿಮಾ, ಕಿರುತೆರೆಯಲ್ಲಿಯೂ ನಟಿಸಿದ್ದಾರೆ. ಮೌನ ರಾಗ ಧಾರಾವಾಹಿಯಲ್ಲಿಯೂ ನಟಿಸಿ ಮನೆಮಾತಾಗಿದ್ದಾರೆ ಸ್ನೇಹಾ. ಮಲಯಾಳಂ ಕುಟುಂಬದಿಂದ ಬಂದಿದ್ದರಿಂದ ಮಲಯಾಳಿ ಭಾಷೆಯೂ ಇವರಿಗೆ ನೀರು ಕುಡಿದಷ್ಟೇ ಸುಲಭ. ಅದೇ ರೀತಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದರಿಂದ ಕನ್ನಡವೂ ಸುಲಭ. ಇದರ ಜತೆಗೆ ತಮಿಳು ಜ್ಞಾನವೂ ಇವರಿಗಿದೆ.
ಸೌತ್ ಭಾಷೆಗಳ ಮೇಲೆ ಹಿಡಿತ ಇದ್ದಿದ್ದರಿಂದಲೇ ತಮಿಳು, ಮಲಯಾಳಂ, ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಸ್ನೇಹಾ ನಂಬಿಯಾರ್ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ತಮಿಳು ಸಿನಿಮಾಕ್ಕೆ ಹೋದಾಗ, ಸ್ನೇಹಾ ನಂಬಲೂ ಆಗದ ಒಂದಷ್ಟು ಸುದ್ದಿಗಳು ಅವರ ವಿರುದ್ಧ ಹರಿದಾಡಿದ್ದವು. ಆ ಪೈಕಿ ದೊಡ್ಡ ಕಾಂಟ್ರವರ್ಸಿಗೆ ಮುನ್ನುಡಿ ಬರೆದಿತ್ತು ಹಿರಿಯ ನಟ ಶರತ್ ಬಾಬು ಜತೆಗಿನ ನಂಟು! ಶರತ್ ಬಾಬು ಜತೆಗೆ ಸ್ನೇಹಾ ಎರಡನೇ ಮದುವೆ ಆಗಿದೇ ಎಂಬಂಥ ಸುದ್ದಿಗಳು ವೈರಲ್ ಆಗಿದ್ದವು.
ಅಷ್ಟಕ್ಕೂ ನಟ ಶರತ್ ಬಾಬು ಅವರ ಎರಡನೇ ಪತ್ನಿ ಹೆಸರೂ ಸ್ನೇಹಾ. ಸ್ನೇಹಾ ಅನ್ನೋ ಹೆಸರಿದ್ದ ಕಾರಣಕ್ಕೇ ಶರತ್ ಬಾಬು ಅವರ ಪತ್ನಿ ಎಂದೇ ಸ್ನೇಹಾ ಅವರ ಪೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಯೂಟ್ಯೂಬ್‌ಗಳಲ್ಲೂ ಚಿತ್ರವಿಚಿತ್ರ ಥಂಬ್‌ನೈಲ್‌ಗಳನ್ನು ಬಳಸಿ ಸಂಬಂಧದ ಬಗ್ಗೆ ವಿಡಿಯೋ ಪ್ರಸಾರ ಮಾಡಿದ್ದವು. ಕೆಲವು ಸುದ್ದಿ ವಾಹಿನಿಗಳೂ ಸ್ನೇಹಾ ಅವರ ಫೋಟೋ ಹಾಕಿ ಶರತ್ ಬಾಬು ಅವರ ಎರಡನೇ ಪತ್ನಿ ಇವರೇ ಎಂದು ಸುದ್ದಿ ಪ್ರಸಾರ ಮಾಡಿದ್ದವು.
ಆ ಘಟನೆಯನ್ನು ಇದೀಗ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ ಸ್ನೇಹಾ. ತಮಿಳಿನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹರಿದಾಡಿದ ಗಾಸಿಪ್ ಬಗ್ಗೆ ಹೇಳಿಕೊಂಡಿದ್ದಾರೆ. "ನನ್ನ ಹೆಸರು ಸ್ನೇಹಾ ಇದ್ದಿದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಶರತ್ ಬಾಬು ಅವರ ಎರಡನೇ ಪತ್ನಿ ಇವರೇ ಎಂಬಂತೆ ನನ್ನ ಪೋಟೋ ಬಳಿಸಿದ್ದಾರೆ. ಅಷ್ಟಕ್ಕೂ ಶರತ್ ಬಾಬು ಅವರ ಪತ್ನಿ ಸ್ನೇಹಾ ಅವರೇ ಬೇರೆ. ಇನ್ನು ಕೆಲವರು ಯೂಟ್ಯೂಬ್‌ಗಳಲ್ಲಿ ಮನೆಯವರಿಗೆ ಹೇಳದೇ ಹಿರಿಯ ನಟ ಶರತ್ ಬಾಬು ಅವರನ್ನು ಮದುವೆಯಾಗಿದ್ದಾರೆ ಎಂದೂ ಸುದ್ದಿ ಹಬ್ಬಿಸಿದ್ದರು. ಈ ವಿಚಾರಗಳು ನನಗೂ ಕೊಂಚ ಮುಜುಗರ ತರಿಸಿದವು" ಎಂದಿದ್ದಾರೆ.
"ಮತ್ತೊಂದು ಕಡೆಗೆ ತಮಿಳಿಗೆ ಬಂದಾಗ ನನ್ನ ಹೆಸರು ಬರೀ ಸ್ನೇಹಾ ಎಂದಷ್ಟೇ ಹೇಳಿದ್ದೆ. ಸ್ನೇಹಾ ಹೆಸರಿನ ಹಲವು ನಟಿಯರು ಇದ್ದ ಕಾರಣ ಹೆಸರಿನ ಪಕ್ಕದಲ್ಲಿ ತಂದೆಯ ಹೆಸರನ್ನೂ ಸೇರಿಸಿ ಎಂದು ಕೆಲವರು ಹೇಳಿದ್ದರು. ಅದಕ್ಕಾಗಿ ನಾನು ಸ್ನೇಹಾ ನಂಬಿಯಾರ್ ಎಂದಿದ್ದೆ. ಅದೂ ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತಮಿಳಿನ ಹಿರಿಯ ನಟ ಎಂ.ಎನ್ ನಂಬಿಯಾರ್ ಅವರ ಮಗಳು ಎಂದೂ ಪುಕಾರು ಹಬ್ಬಿಸಿದ್ದರು. ಹಾಗಾಗಿ ನಾನು ಶರತ್ ಬಾಬು ಅವರ ಎರಡನೇ ಹೆಂಡತಿಯೂ ಅಲ್ಲ, ನಂಬಿಯಾರ್ ಅವರ ಮಗಳೂ ಅಲ್ಲ ಎಂದು ಹರಿದಾಡಿದ ಸುದ್ದಿಗೆ ಇದೀಗ ಮತ್ತೆ ಸ್ಪಷ್ಟನೆ ಕೊಟ್ಟಿದ್ದಾರೆ ನಟಿ ಸ್ನೇಹಾ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ