logo
ಕನ್ನಡ ಸುದ್ದಿ  /  ಮನರಂಜನೆ  /  Leelavathi: ಓದಿದ್ದು 2ನೇ ಕ್ಲಾಸ್‌, ಕಡುಬಡತನ, 15ನೇ ವಯಸ್ಸಿನಲ್ಲಿ ನಟನೆ ಆರಂಭ; ಲೀಲಾ ಕಿರಣ್‌ ಲೀಲಾವತಿ ಆದ ಕಥೆ

Leelavathi: ಓದಿದ್ದು 2ನೇ ಕ್ಲಾಸ್‌, ಕಡುಬಡತನ, 15ನೇ ವಯಸ್ಸಿನಲ್ಲಿ ನಟನೆ ಆರಂಭ; ಲೀಲಾ ಕಿರಣ್‌ ಲೀಲಾವತಿ ಆದ ಕಥೆ

Praveen Chandra B HT Kannada

Dec 09, 2023 06:00 AM IST

google News

ಹಿರಿಯ ನಟಿ ದಿವಂಗತ ಲೀಲಾವತಿ ಬದುಕಿನ ಕಥೆ

    • Kannada actress Leelavathi obituary: ಕನ್ನಡದ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ಬಾಲ್ಯದಿಂದಲೇ ಕಷ್ಟದ ಜೀವನ ಕಂಡ ಕೇವಲ ಎರಡನೇ ತರಗತಿಗೆ ಓದು ನಿಲ್ಲಿಸಿದ ಇವರ ಬದುಕಿನ ಕಥೆ ನಿಜಕ್ಕೂ ಸಾಹಸಗಥೆ. ಬಡತನ, ಸವಾಲು, ಅವಮಾನಗಳನ್ನು ಮೆಟ್ಟಿನಿಂತು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಇವರ ಬದುಕೇ ಒಂದು ವಿಶ್ವವಿದ್ಯಾಲಯ.
ಹಿರಿಯ ನಟಿ ದಿವಂಗತ ಲೀಲಾವತಿ ಬದುಕಿನ ಕಥೆ
ಹಿರಿಯ ನಟಿ ದಿವಂಗತ ಲೀಲಾವತಿ ಬದುಕಿನ ಕಥೆ

ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಬಹುಬೇಡಿಕೆಯ ನಟಿಯಾಗಿದ್ದ, ಹಿರಿಯ ನಟಿ ಲೀಲಾವತಿ (85) ಇಂದು ಸಂಜೆ ವಿಧಿವಶರಾಗಿದ್ದಾರೆ. ಇವರು ನಟ ವಿನೋದ್‌ ರಾಜ್‌ ತಾಯಿ. ಕಳೆದ ಹಲವು ದಿನಗಳಿಂದ ವಯೋಸಹಜ ಅಸ್ವಸ್ಥತೆಯಿಂದ ಹಾಸಿಗೆ ಹಿಡಿದಿದ್ದ ಹಿರಿಯ ನಟಿ ಒಟ್ಟು ಆರುನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಸುಮಾರು 400 ಚಿತ್ರಗಳಲ್ಲಿ ನಟಿಸಿದ್ದಾರೆ. 200ಕ್ಕೂ ಹೆಚ್ಚು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಹಿರಿಮೆ ಇವರದ್ದು.

ಬಹುಭಾಷಾ ನಟಿಯಾಗಿ ಬಹುಬೇಡಿಕೆ ಪಡೆದುಕೊಂಡಿದ್ದ ಲೀಲಾವತಿಯವರ ಆರಂಭಿಕ ಬದುಕು ಹೂವಿನ ಹಾದಿಯಾಗಿರಲಿಲ್ಲ. ಜೀವನದಲ್ಲಿ ಸಕಲ ಕಷ್ಟಗಳನ್ನು ಅನುಭವಿಸಿದ್ದರು. ಬಾಲ್ಯದಲ್ಲಿ ಬಡತನ ಇವರ ಆಸ್ತಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಇವರು ಕೇವಲ ಎರಡನೇ ತರಗತಿ ಓದಿದ್ದರು. ಆ ಕಾಲದಲ್ಲಿ ಅಷ್ಟು ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಇವರ ಜನ್ಮದಿನಾಂಕ ಸರಿಯಾಗಿ ಗೊತ್ತಿಲ್ಲ. 1936/37ರಲ್ಲಿ ಜನಿಸಿದ್ದರು. ಐವತ್ತು ದಶಕಕ್ಕೂ ಹೆಚ್ಚು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದರು.

ಬಾಲ್ಯದಲ್ಲಿ ಹೆತ್ತವರ ಅಗಲಿಕೆ

ನಟಿ ದಿ. ಲೀಲಾವತಿಯವರ ಮೂಲ ಹೆಸರು ಲೀಲಾ ಕಿರಣ್‌. ಮಗುವಾಗಿದ್ದಾಗ ಅಪ್ಪ ಅಮ್ಮನ ಲಾಲನೆ ಪಾಲನೆಯಲ್ಲಿ ಆ ಕಾಲದ ಪರಿಸ್ಥಿತಿಗೆ ತಕ್ಕಂತೆ ತಕ್ಕಮಟ್ಟಿಗೆ ಅನುಕೂಲ ಇತ್ತು. ಆದರೆ, ಇವರಿಗೆ ಆರು ವರ್ಷ ವಯಸ್ಸಾದಗ ಹೆತ್ತವರನ್ನು ಕಳೆದುಕೊಂಡರು. ಬಳಿಕ ಇವರ ಬದುಕಿನಲ್ಲಿ ನಿಜವಾದ ಕಷ್ಟ ಆರಂಭವಾಯಿತೆಂದು ಅವರ ಬಾಲ್ಯದ ಕಥೆಗಳು ಹೇಳುತ್ತವೆ.

ಓದಿದ್ದು ಎರಡನೇ ತರಗತಿ

1940ರ ಆಸುಪಾಸಿನಲ್ಲಿ ಶಾಲಾ ಶಿಕ್ಷಣ ಈಗಿನಷ್ಟು ಸುಲಭವಾಗಿರಲಿಲ್ಲ. ಆ ಕಾಲದಲ್ಲಿ ಇವರು ಎರಡನೇ ಕ್ಲಾಸ್‌ ಓದಿದ್ದರು. ಇನ್ನಷ್ಟು ಓದುವ ಹಂಬಲವಿತ್ತು. ಆದರೆ, ಎಣ್ಣೆ ಬಾಣಲೆಗೆ ಕಾಲು ಹಾಕಿ ಕಾಲು ಸುಟ್ಟಿತ್ತು. ಹಲವು ತಿಂಗಳು ಶಾಲೆಗೆ ಹೋಗಲಾಗಲಿಲ್ಲ. ಅಲ್ಲಿಗೆ ಇವರ ಶಿಕ್ಷಣ ಮೊಟಕುಗೊಂಡಿತ್ತು. ಇವರು ಎರಡನೇ ಕ್ಲಾಸ್‌ ತನಕ ಓದಿದ್ದು ಸೇಂಟ್‌ ಜೋಸೆಫ್‌ ಎಲಿಮೆಂಟರಿ ಸ್ಕೂಲ್‌ನಲ್ಲಿ. ಪುಟ್ಟ ಬಾಲಕಿಯಾಗಿದ್ದಾಗಲೇ ಇನ್ನೊಬ್ಬರ ಮನೆಗೆಲಸ ಮಾಡುವ ಕಷ್ಟ ಇವರಿಗಿತ್ತು. ಓನರ್‌ ಮನೆಯಲ್ಲಿ ಕೆಲಸ ಮಾಡುತ್ತ, ಯುಜಮಾನಿಯ ತಲೆಯ ಹೇನು ಹೆಕ್ಕುವ ಕೆಲಸವನ್ನೂ ಮಾಡ್ತಾ ಇದ್ರಂತೆ.

ಸಿನಿಮಾ ಅಭಿನಯದತ್ತ ಆಸಕ್ತಿ

ಮಹಾಲಿಂಗ ಭಾವವತರು ನಡೆಸುತ್ತಿದ್ದ ಶ್ರೀ ಸತ್ಯ ಸಾಮ್ರಾಜ್ಯ ನಾಟಕದ ಕಂಪನಿಯಲ್ಲಿ ಇವರು ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಇತರೆ ಕೆಲಸಗಳನ್ನೂ ಮಾಡುತ್ತಿದರು. ಇವರಿಗೆ ಹದಿನೈದು ವರ್ಷ ವಯಸ್ಸಾಗಿದ್ದಾಗ ಇವರ ಮನೆಯ ಮುಂದೆಯೇ ಟೆಂಟ್‌ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದವಂತೆ. ಪ್ರತಿ ಶೋಗೂ ಮಿಸ್‌ ಮಾಡದೆ ಹೋಗ್ತಾ ಇದ್ರಂತೆ ಲೀಲಾ ಕಿರಣ್‌. ಇವರಿಗೆ ಆ ಸಿನಿಮಾದಲ್ಲಿ ಇರುವುದು ನಿಜವಾದ ಕಲಾವಿದರು ಎಂಬ ಅರಿವೇ ಇಲ್ಲವಂತೆ. ಅದು ನಿಜವಾದ ಮನುಷ್ಯರು ನಟಿಸುವುದು ಎಂದು ಬಳಿಕ ಯಾರೋ ಇವರಿಗೆ ಮನವರಿಕೆ ಮಾಡಿದ್ರಂತೆ. "ಇದು ಸಿನಿಮಾ, ಇದರಲ್ಲಿ ಜನರು ನಟಿಸುತ್ತಾರೆ. ನಟಿಸುವವರಿಗೆ ಹಣ ನೀಡಲಾಗುತ್ತದೆ" ಎಂದು ಯಾರೋ ಹೇಳಿದಾಗ ಇವರಿಗೂ ನಟಿಸುವ ಬಯಕೆ ಆಗಿತ್ತು.

16ನೇ ವಯಸ್ಸಿಗೆ ಮೈಸೂರಿಗೆ ಪ್ರಯಾಣ

ಕುಟುಂಬದ ಅವಶ್ಯಕತೆಗೆ ಹಣದ ಅವಶ್ಯಕತೆಯಿತ್ತು. ತನ್ನ ಹದಿನಾರನೇ ವಯಸ್ಸಿನಲ್ಲಿ ಮೈಸೂರಿಗೆ ತೆರಳಿದರು. ಸುಬ್ಬಯ್ಯನವರ ನಾಟಕ ಕಂಪನಿಗೆ ಸೇರಿದ್ದರು. ಸಿನಿಮಾ ಉದ್ಯಮಕ್ಕೆ ಸೇರುವ ಬಯಕೆಯಿಂದ ಮೈಸೂರಿಗೆ ಹೋಗಿದ್ದರು. ಮೊದಲ ಚಂಚಲಾ ಕುಮಾರಿ ಎಂಬ ನಾಟಕದಲ್ಲಿ ನಟಿಸುವ ಅವಕಾಶ ದೊರಕಿತು. ಬಳಿಕ ಶಂಕರ್‌ ಸಿಂಗ್‌ ಅವರ ನಾಗ ಕನ್ನಿಕಾ ಸಿನಿಮಾದಲ್ಲಿ ನಟಿಸಿದರು. ಹಣ ಗಳಿಸಿ ಕುಟುಂಬವನ್ನು ಪೊರೆಯುವ ಉದ್ದೇಶದಿಂದ ಆಗ ಅಭಿನಯಿಸುತ್ತಿದ್ದರು. ಸಿನಿಮಾ ಕ್ಷೇತ್ರದಲ್ಲಿ ಇವರ ಹೆಸರು ಲೀಲಾ ಕಿರಣ್‌ ಬದಲು ಲೀಲಾವತಿ ಎಂದಾಯಿತು.

ಇದಾದ ಬಳಿಕ ಇವರಿಗೆ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತ್ತು. ಮಾಂಗಲ್ಯ ಯೋಗ, ಧರ್ಮ ವಿಜಯ, ರಣದೀರ ಕಂಠೀರವ ಮುಂತಾದ ಸಿನಿಮಾಗಳಲ್ಲೂ ಅವಕಾಶ ದೊರಕಿತು. ರಾಣಿ ಹೊನ್ನಮ್ಮ ಸಿನಿಮಾ ಇವರಿಗೆ ಸಾಕಷ್ಟು ಪ್ರಶಿದ್ಧಿ ತಂದುಕೊಟ್ಟಿತಂತೆ. ಇದಾದ ಬಳಿಕ ಇವರು ನಟಿಸಿದ ಚಿತ್ರಗಳು, ಮಾಡಿದ ಸಾಧನೆಗಳ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಸಾಕಷ್ಟು ಲೇಖನಗಳನ್ನು ಪ್ರಕಟಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ