ಬಾಲಿವುಡ್ ಚಿತ್ರರಂಗ ಭಾರತವನ್ನು ಕೆಟ್ಟದಾಗಿ ತೋರಿಸ್ತಿದೆ ಎಂದ ರಿಷಬ್ ಶೆಟ್ಟಿ; ಕಾಂತಾರ ನಟನ ವಿರುದ್ಧ ಮುಗಿಬಿದ್ದ ನೆಟ್ಟಿಗರು
Aug 21, 2024 01:07 PM IST
ನಟ, ನಿರ್ದೇಶಕ ರಿಷಬ್ ಶೆಟ್ಟಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಾಲಿವುಡ್ ಚಿತ್ರರಂಗ ಭಾರತವನ್ನು ಕೆಟ್ಟದಾಗಿ ತೋರಿಸ್ತಿದೆ ಎಂದು ಮೆಟ್ರೋ ಸಾಗಾ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳುತ್ತಿದ್ದಂತೆ, ದೊಡ್ಡ ಮಟ್ಟದ ಚರ್ಚೆಗೆ ವೇದಿಕೆಯಾಗಿದೆ.
- ನಟ, ನಿರ್ದೇಶಕ ರಿಷಬ್ ಶೆಟ್ಟಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಾಲಿವುಡ್ ಚಿತ್ರರಂಗ ಭಾರತವನ್ನು ಕೆಟ್ಟದಾಗಿ ತೋರಿಸ್ತಿದೆ ಎಂದು ಮೆಟ್ರೋ ಸಾಗಾ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳುತ್ತಿದ್ದಂತೆ, ದೊಡ್ಡ ಮಟ್ಟದ ಚರ್ಚೆಗೆ ವೇದಿಕೆಯಾಗಿದೆ.
Rishab Shetty on Bollywood: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿಗೆ ಕಾಂತಾರ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಘೋಷಣೆ ಆಗಿದೆ. ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ಸಿಗ್ತಿದ್ದಂತೆ, ಕನ್ನಡ ಸೇರಿ ಸೌತ್ ಸಿನಿಮಾರಂಗದ ಸ್ಟಾರ್ ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ರವಾನಿಸಿದ್ದಾರೆ. ಪ್ರಶಸ್ತಿ ಘೋಷಣೆ ಬಳಿಕ ಸಾಕಷ್ಟು ಸಂದರ್ಶನಗಳಲ್ಲಿಯೂ ಭಾಗವಹಿಸಿದ ರಿಷಬ್ ಶೆಟ್ಟಿ, ಕಾಂತಾರ ಚಿತ್ರವನ್ನು ಕನ್ನಡಿಗರು ಮೆರೆಸಿದ ಬಳಿಕವೇ ಪರಭಾಷಿಕರು ಕಾಂತಾರ ಕಡೆ ಹೊರಳಿದರು. ಹಾಗಾಗಿ ನಮ್ಮ ಕರುನಾಡ ಪ್ರೇಕ್ಷಕನಿಗೆ ಮೊದಲು ಧನ್ಯವಾದ ಅರ್ಪಿಸಬೇಕು ಎಂದಿದ್ದರು ರಿಷಬ್.
ಇದೀಗ ಸಂದರ್ಶನದಲ್ಲಿ ಮಾತನಾಡುವಾಗ ಮಾತಿನ ಭರದಲ್ಲಿಯೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಾಲಿವುಡ್ ಚಿತ್ರರಂಗ ಭಾರತವನ್ನು ಕೆಟ್ಟದಾಗಿ ತೋರಿಸ್ತಿದೆ ಎಂದು ಮೆಟ್ರೋ ಸಾಗಾ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳುತ್ತಿದ್ದಂತೆ, ದೊಡ್ಡ ಮಟ್ಟದ ಚರ್ಚೆಗೆ ವೇದಿಕೆಯಾಗಿದೆ. ಬಾಲಿವುಡ್ ಬಗ್ಗೆ ಆಡಿದ ಮಾತಿನ ಕಿರು ವಿಡಿಯೋ ತುಣುಕನ್ನು ಸೌತ್ ಸಿನಿಮಾದ ಟ್ರೇಡ್ ವಿಶ್ಲೇಷಕ ಕ್ರಿಸ್ಟೋಫರ್ ಕಣಗರಾಜ್ ಶೇರ್ ಮಾಡಿದ್ದಾರೆ. ಅವರ ಪೋಸ್ಟ್‌ಗೆ ಬಗೆಬಗೆ ಕಾಮೆಂಟ್‌ಗಳು ಹರಿದು ಬರುತ್ತಿದ್ದು, ಬಾಲಿವುಡ್‌ನ ದ್ವೇಷಿ, ಅಸೂಯೆಯ ಆತ್ಮ ಎಂದೂ ಕೆಲವರು ರಿಷಬ್ ಶೆಟ್ಟಿ ಮೇಲೆ ಗರಂ ಆಗಿದ್ದಾರೆ.
ರಿಷಬ್‌ಗೆ ಎದುರಾದ ಪ್ರಶ್ನೆ ಏನು?
ಸಾಮಾಜಿಕ ಕಳಕಳಿಯ ಬಗ್ಗೆ ನೀವು ಸಾಕಷ್ಟು ಸಿನಿಮಾ ಮಾಡಿದ್ದೀರಿ. ಪೇಪರ್‌ಗಳಲ್ಲಿ ಓದಿರ್ತೀವಿ, ಟಿವಿಯಲ್ಲೂ ನೋಡಿರ್ತೀವಿ. ಆದರೆ, ನಾವದನ್ನು ಗಂಭೀರವಾಗಿ ಪರಿಗಣಿಸಿರಲ್ಲ. ಆದರೆ, ನೀವು ನಿಮ್ಮ ರಿಕ್ಕಿ ಸಿನಿಮಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಗಡಿನಾಡ ಶಾಲೆಗಳ ಬಗ್ಗೆಯೂ ಮಾತನಾಡಿದ್ರಿ. ಕಾಂತಾರದಲ್ಲಿ ತುಂಬ ಸೆನ್ಸಿಟಿವ್ ಆಗಿ ಹ್ಯಾಂಡಲ್ ಮಾಡಿದ್ದೀರಿ. ಅದನ್ನು ಹೇಗೆ ನಿಭಾಯಿಸಿದ್ರಿ? ಎಂದು ನಿರೂಪಕಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಿಷಬ್ ಶೆಟ್ಟಿ ಉತ್ತರಿಸಿದ್ದು ಹೀಗೆ.
ರಿಷಬ್ ನೀಡಿದ ಉತ್ತರ ಹೀಗಿದೆ..
"ಇದು ತುಂಬ ಮಹತ್ವದ್ದು. ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ನನ್ನ ಮೀಡಿಯಂ ಅಂದರೆ, ಸಿನಿಮಾ ಮೂಲಕ ಹೇಳಿದರೆ ತುಂಬ ಪರಿಣಾಮಕಾರಿಯಾಗಿರುತ್ತದೆ. ಸಿನಿಮಾ ಅನ್ನೋದು ತುಂಬ ಸ್ಟ್ರಾಂಗೆಸ್ಟ್ ಮೀಡಿಯಾ. ಯಾಕೆ ಮಾಡಬಾರದು ಎಂಬ ಯೋಚನೆ ಬರುತ್ತೆ. ಮಾಡಬೇಕು ಎಂದಾಗ ಅದಕ್ಕೆ ಅದರದೇ ಆದ ರೀತಿ ನೀತಿ ಇರುತ್ತವೆ. ನಾನು ಈ ಮೊದಲು ಇಂಡಿಯನ್ ಸಿನಿಮಾಗಳಲ್ಲಿ ಅದರಲ್ಲೂ ಬಾಲಿವುಡ್ ಸಿನಿಮಾಗಳಲ್ಲಿ ಇಂಡಿಯಾ ಬಗ್ಗೆ ತುಂಬ ಕೆಟ್ಟದಾಗಿ ಕೇವಲವಾಗಿ ತೋರಿಸಿ ಅದನ್ನು ಹೊರಗಡೆ ದೇಶಗಳಿಗೆ ಹೋಗಿ ಫೆಸ್ಟಿವಲ್‌ಗಳಲ್ಲಿ ಅವಾರ್ಡ್ ಗೆದ್ದುಕೊಂಡು ಬಂದಿದ್ದನ್ನು ನಾನು ಗಮನಿಸಿದ್ದೇನೆ" ಎಂದಿದ್ದಾರೆ.
"ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ, ನಾನ್ಯಾಕೆ ಅದನ್ನು ಪಾಸಿಟಿವ್ ನೋಟ್‌ನಲ್ಲಿ ತೆಗೆದುಕೊಂಡು ಹೋಗಬಾರದು. ಪಾಸಿಟಿವ್ ವಿಚಾರಗಳನ್ನು ಪಾಸಿಟಿವ್ ಆಗಿಯೇ ತೋರಿಸಬಹುದಲ್ಲ. ಇದಕ್ಕಿಂತ ಇನ್ನೇನು ಮಾಡಲು ಸಾಧ್ಯವಿದೆ. ಆ ಕೋನದಲ್ಲಿ ನಾನು ಯೋಚನೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಯಾರಿಗೂ ಹರ್ಟ್ ಆಗಬಾರದು, ನೆಗೆಟಿವ್ ಇಂಪ್ಯಾಕ್ಟ್ ಆಗಬಾರದು, ಅದರ ಬಗ್ಗೆ ತುಂಬ ಜಾಗೃತನಾಗಿರುತ್ತೇನೆ. ಸಿನಿಮಾ ಬಿಡುಗಡೆ ಆದ ಬಳಿಕವೂ ಒಂದು ದೃಶ್ಯದ ಬಗ್ಗೆ ಯಾರೇ ಮಾತನಾಡಿದರೂ, ನಾನು ಅದನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಏಕೆಂದರೆ ಪ್ರತಿ ಸಿನಿಮಾದಲ್ಲಿಯೂ ನಮಗೆ ಸರಿಪಡಿಸಿಕೊಳ್ಳಲು ಅವಕಾಶ ಇರುತ್ತೆ" ಎಂದಿದ್ದಾರೆ ರಿಷಬ್.
ರಿಷಬ್ ಮಾತಿಗೆ ನೆಟ್ಟಿಗರು ಗರಂ
ಬಾಲಿವುಡ್ ದ್ವೇಷಿ ಎಂದು ರಿಷಬ್ ಶೆಟ್ಟಿಯನ್ನು ಜರಿದಿದ್ದಾರೆ. ಯಶಸ್ಸು ಎಂಬುದು ತಾತ್ಕಾಲಿಕ. ಹುಡುಗಿಯ ಸಮ್ಮತಿ ಇಲ್ಲದಿದ್ದರೂ ಆಕೆಯ ಸೊಂಟ ಹಿಸುಕುವುದು ಮತ್ತು ಬಾಲಿವುಡ್‌ಅನ್ನು ತೆಗೆಳುವುದು ಶಾಶ್ವತ ಎಂದೂ ಕೆಲವರು ರಿಷಬ್ ಮಾತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಿಷಬ್ ಮಾತಿಗೆ ಕೆಲವರು ಬೂಟಾಟಿಕೆ ಎಂದೂ ಟೀಕೆ ಮಾಡಿದ್ದಾರೆ.