ಬಜೆಟ್‌ನಲ್ಲಿ ಡೇರ್‌ಡೆವಿಲ್ ಮುಸ್ತಾಫಾ ಚಿತ್ರದ ಹಾಡಿನ ಮೋಡಿ; ಡಾಲಿ ಧನಂಜಯ್ ಬರೆದ ಸಾಹಿತ್ಯ ಓದಿದ ಸಿಎಂ
Feb 16, 2024 02:36 PM IST
ಬಜೆಟ್‌ನಲ್ಲಿ ಡೇರ್‌ಡೆವಿಲ್ ಮುಸ್ತಾಫಾ ಚಿತ್ರದ ಹಾಡಿನ ಮೋಡಿ; ಡಾಲಿ ಧನಂಜಯ್ ಬರೆದ ಸಾಹಿತ್ಯ ಓದಿದ ಸಿಎಂ
- ಕಳೆದ ವರ್ಷ ಬಿಡುಗಡೆಯಾದ ಶಶಾಂಕ್ ಸೋಗಲ್ ನಿರ್ದೇಶನದ ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ಹಾಡಿನ ಸಾಲುಗಳನ್ನು ಬಜೆಟ್ ಪುಸ್ತಕದಲ್ಲಿ ಬಳಸಿಕೊಳ್ಳಲಾಗಿದೆ. ಆ ಚಿತ್ರದಲ್ಲಿ "ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲಾ ಕೂಡಿ ಆಡುವಂತ ಗಾಳಿ ಬೀಸಲಿ" ಎಂಬ ಸಾಲುಗಳನ್ನು ಓದಿದ್ದಾರೆ ಸಿಎಂ.
Karnataka Budget 2024: ಸಿಎಂ ಸಿದ್ದರಾಮಯ್ಯ 2024-2025ರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸುವುದರ ಜತೆಗೆ 15ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಸುದೀರ್ಘ 3 ಗಂಟೆ 14 ನಿಮಿಷಗಳ ಕಾಲ ಬಜೆಟ್ ಪ್ರತಿಯನ್ನು ಓದಿ ಮುಗಿಸಿದ್ದಾರೆ. ಈ ಸಲದ ಬಜೆಟ್‌ನಲ್ಲಿ ಸಿನಿಮಾ ಹಾಡುಗಳ ಸಾಲುಗಳನ್ನೂ ಗುನುಗಿದ್ದಾರೆ. ಅದರಲ್ಲೂ ಡಾ. ರಾಜ್‌ಕುಮಾರ್ ನಟನೆಯ ಎವರ್‌ಗ್ರೀನ್ ಬಂಗಾರದ ಮನುಷ್ಯ ಚಿತ್ರದ ಹಾಡನ್ನೂ ತಮ್ಮ ಬಜೆಟ್ ಮಂಡನೆ ವೇಳೆ ನೆನಪಿಸಿಕೊಂಡಿದ್ದಾರೆ. ಜತೆಗೆ ಡಾಲಿ ಧನಂಜಯ್ ಬರೆದ ಸಾಹಿತ್ಯವನ್ನೂ ಹೇಳಿದ್ದಾರೆ.
ಬಂಗಾರದ ಮನುಷ್ಯನ ಸ್ಪೂರ್ತಿಯ ಹಾಡು
ಹೌದು ಈ ಬಾರಿಯ ಪ್ರಸಕ್ತ ಬಜೆಟ್‌ನಲ್ಲಿ ಕೆಲ ಸಿನಿಮಾಗಳ ಸಾಲುಗಳನ್ನು ಸಿಎಂ ನೆನಪಿಸಿಕೊಂಡಿದ್ದಾರೆ. ಬಜೆಟ್ ಭಾಷಣದ ಆರಂಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾದ "ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕು ಎಂದೆಂದೂ.." ಹಾಡಿನ ಸಾಲುಗಳನ್ನ ಹೇಳುತ್ತಾ ಬಜೆಟ್ ಮಂಡನೆಯನ್ನು ಶುರು ಮಾಡಿದರು.
ಡಾಲಿ ಬರೆದ ಸಾಹಿತ್ಯ ಓದಿದ ಸಿಎಂ
ಕಳೆದ ವರ್ಷ ಬಿಡುಗಡೆಯಾದ ಶಶಾಂಕ್ ಸೋಗಲ್ ನಿರ್ದೇಶನದ ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ಹಾಡಿನ ಸಾಲುಗಳನ್ನು ಕೂಡ ಬಜೆಟ್ ಪುಸ್ತಕದಲ್ಲಿ ಬಳಸಿಕೊಳ್ಳಲಾಗಿದೆ. ಆ ಚಿತ್ರದಲ್ಲಿ "ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲಾ ಕೂಡಿ ಆಡುವಂತ ಗಾಳಿ ಬೀಸಲಿ" ಎಂದಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅನುದಾನ ಮಂಡಿಸುವ ಮುನ್ನ ಸಿಎಂ ಸಿದ್ದರಾಮಯ್ಯ, ಡೇರ್ ಡೆವಿಲ್ ಮುಸ್ತಫಾ ಚಿತ್ರದ ಎರಡು ಸಾಲುಗಳನ್ನು ಸದನದಲ್ಲಿ ಹೇಳಿದ್ದಾರೆ.
ನಟ ಡಾಲಿ ಧನಂಜಯ್ ಡೇರ್ ಡೆವಿಲ್ ಮುಸ್ತಫಾ ಚಿತ್ರವನ್ನು ಪ್ರಸೆಂಟ್ ಮಾಡುವುದರ ಮೂಲಕ ಚಿತ್ರತಂಡದ ಬೆನ್ನಿಗೆ ನಿಂತಿದ್ದರು. ಚಿತ್ರದಲ್ಲಿನ ಈ ಹಾಡಿಗೂ ಧ್ವನಿಯಾಗಿದ್ದರು. ಇದೀಗ ಆ ಹಾಡು ಪುನಃ ಬಜೆಟ್ ಮಂಡನೆ ವೇಳೆ ಗುನುಗಿದ್ದಕ್ಕೆ ಚಿತ್ರತಂಡದ ಜತೆಗೆ ಡಾಲಿಯ ಫ್ಯಾನ್ಸ್ ಸಹ ಖುಷ್ ಆಗಿದ್ದಾರೆ.
ಇತ್ತೀಚಿಗಷ್ಟೇ ಡಾಲಿ ಧನಂಜಯ್ ಲಿಡ್ಕರ್ ಸಂಸ್ಥೆಗೆ ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಆಗಿದ್ದರು. ಈ ಬಾರಿಯ ಮುಖ್ಯಮಂತ್ರಿಗಳು ಸೂಟ್‌ಕೇಸ್ ಬಿಟ್ಟು ಲಿಡ್ಕರ್ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ಹಿಡಿದು ವಿಧಾನಸೌಧ ಪ್ರವೇಶ ಮಾಡಿದ್ದರು.