Sudeep Darshan: ದರ್ಶನ್ ಫೋಟೋ ಮೇಲೆ ಲವ್ ಯೂ ಎಂದು ಆಟೋಗ್ರಾಫ್ ಬರೆದ ಸುದೀಪ್; ಇದು ಕನಸೋ ನನಸೋ ಗೊತ್ತಾಗ್ತಿಲ್ಲ ಎಂದ ಅಭಿಮಾನಿಗಳು
May 09, 2023 09:48 AM IST
ದರ್ಶನ್ ಫೋಟೋ ಮೇಲೆ ಸುದೀಪ್ ಹಸ್ತಾಕ್ಷರ
- ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಇರುವ ಫೋಟೋವೊಂದನ್ನು ತಂದು ಅಭಿಮಾನಿಯೊಬ್ಬರು ಸುದೀಪ್ ಬಳಿ ಆಟೋಗ್ರಾಫ್ ನೀಡುವಂತೆ ಕೇಳಿದ್ದಾರೆ. ಕಿಚ್ಚ ಅಭಿಮಾನಿಗೆ ಬೇಸರ ಮಾಡದೆ ಅವರಿಂದ ಫೋಟೋ ಪಡೆದು ದರ್ಶನ್ ಫೋಟೋ ಮೇಲೆ ಆಟೋಗ್ರಾಫ್ ಬರೆದು ವಾಪಸ್ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬಹಿರಂಗ ಪ್ರಚಾರಕ್ಕೂ ತೆರೆ ಬಿದ್ದಿದೆ. ಅಭ್ಯರ್ಥಿಗಳು ಬಿಸಿಲು, ಮಳೆ ಎನ್ನದೆ ಪ್ರತಿ ಊರುಗಳಿಗೆ ತೆರಳಿ ಮತ ಯಾಚನೆ ಮಾಡಿದ್ದಾರೆ. ಈ ಬಾರಿ ಅಭ್ಯರ್ಥಿಗಳಿಗಿಂತ ತಾರಾ ಪ್ರಚಾರಕರ ಮೆರುಗು ಜೋರಾಗಿತ್ತು. ದರ್ಶನ್ ಹಾಗೂ ಸುದೀಪ್ ಭಾರೀ ಗಮನ ಸೆಳೆದಿದ್ದಾರೆ. ಅದರಲ್ಲೂ ತಮ್ಮಿಬ್ಬರ ಫೋಟೋ ಮೇಲೆ ಸುದೀಪ್ ಆಟೋಗ್ರಾಫ್ ಬರೆದಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಸುದೀಪ್ ತಾವು ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಸಿನಿಮಾ ಚಿತ್ರೀಕರಣಕ್ಕೆ ಕೆಲವು ದಿನಗಳ ಕಾಲ ಬ್ರೇಕ್ ಕೊಟ್ಟು ಕಿಚ್ಚ, ಶಿಗ್ಗಾಂವಿ ಸೇರಿದಂತೆ ರಾಜ್ಯದ ನಾನಾ ಕಡೆ ತೆರಳಿ ಬಿಜೆಪಿ ಪರ ಪ್ರಚಾರ ಮಾಡಿದರು. ಇತ್ತ ದರ್ಶನ್ ಕೂಡಾ ಮಂಡ್ಯ ಜಿಲ್ಲೆ ಹಾಗೂ ಇನ್ನಿತರ ಸ್ಥಳಗಳಿಗೆ ತೆರಳಿ ತಮ್ಮ ಆಪ್ತರ ಪರ ಮತ ಯಾಚನೆ ಮಾಡಿದರು. ದಚ್ಚು-ಕಿಚ್ಚು ಇಬ್ಬರೂ ಒಂದೇ ಪಕ್ಷದ ಪರ ಪ್ರಚಾರ ಮಾಡುತ್ತಿದ್ದನ್ನು ನೋಡಿ ಇಬ್ಬರೂ ಒಂದೇ ವೇದಿಕೆಯಲ್ಲಿ ಜೊತೆಯಾದರೆ ಚೆಂದ ಎಂದು ಅಭಿಮಾನಿಗಳು ಆಸೆ ವ್ಯಕ್ತಪಡಿಸಿದ್ದೂ ಉಂಟು. ಇನ್ನೂ ಅಭಿಮಾನಿಗಳ ಆಸೆ ನೆರವೇರಿಲ್ಲ. ಆದರೆ ಅಭಿಮಾನಿಯೊಬ್ಬರು ನೀಡಿದ ದರ್ಶನ್ ಫೋಟೋ ಮೇಲೆ ಸುದೀಪ್ ಲವ್ ಸಿಂಬಲ್ ಹಾಕಿಕೊಟ್ಟ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಇಬ್ಬರ ಅಭಿಮಾನಿಗಳು ಇದು ನಿಜಕ್ಕೂ ನನಸೋ, ಕನಸೋ ಗೊತ್ತಾಗ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸುದೀಪ್ ಅವರ ಬಳಿ ಅಭಿಮಾನಿಯೊಬ್ಬರು ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಇರುವ ಫೋಟೋವೊಂದನ್ನು ತಂದು ಆಟೋಗ್ರಾಫ್ ನೀಡುವಂತೆ ಕೇಳಿದ್ದಾರೆ. ಸುದೀಪ್ ಕೂಡಾ ಅಭಿಮಾನಿಗೆ ಬೇಸರ ಮಾಡದೆ ಅವರಿಂದ ಫೋಟೋ ಪಡೆದು ಆಟೋಗ್ರಾಫ್ ಬರೆದು ವಾಪಸ್ ನೀಡಿದ್ದಾರೆ. ನಂತರ ಆ ಫೋಟೋ ನೋಡಿದ ಅಭಿಮಾನಿಗೆ ಆಶ್ಚರ್ಯ ಕಾದಿತ್ತು. ದರ್ಶನ್ ಫೋಟೋ ಮೇಲೆ ಸುದೀಪ್ ಲವ್ ಸಿಂಬಲ್ ಬರೆದು ಐ ಲವ್ ಯು ಎಂಬರ್ಥದಲ್ಲಿ ಲವ್ ಸಿಂಬಲ್ ಬರೆದಿದ್ದಾರೆ. ಇದರರ್ಥ ಸುದೀಪ್, ದರ್ಶನ್ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಯುತ್ತಿದೆ.
ಇತ್ತೀಚೆಗೆ ಕ್ರಾಂತಿ ಸಿನಿಮಾ ಆಡಿಯೋ ಬಿಡುಗಡೆ ಸಮಯದಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಕೆಲವು ಕಿಡಿಗೇಡಿಗಳು ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ ವಿಚಾರಕ್ಕೆ ಸುದೀಪ್ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದರು. ಸುದೀರ್ಘ ಸಂದೇಶವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಕಿಚ್ಚನ ಟ್ವೀಟ್‌ಗೆ ದರ್ಶನ್ ಪ್ರತಿಕ್ರಿಯಿಸಿ ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದಿದ್ದರು. ಇನ್ನು ಇವರಿಬ್ಬರೂ ಒಂದಾದಂತೆ ಎಂದು ಅಭಿಮಾನಿಗಳು ಕೂಡಾ ಬಹಳ ಖುಷಿಯಾಗಿದ್ದರು. ಆದರೆ ಅದು ಅಲ್ಲಿಗೆ ಮಾತ್ರ ನಿಂತಿತ್ತು. ಸುದೀಪ್, ದರ್ಶನ್ ವಿಚಾರದಲ್ಲಿ ಆಸಕ್ತಿ ತೋರುತ್ತಿದ್ದರೂ ದರ್ಶನ್ ಮಾತ್ರ ಗಮನ ನೀಡುತ್ತಿಲ್ಲ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಕಾರಣ ಏನೇ ಇರಲಿ ಇಬ್ಬರೂ ಮನಸ್ತಾಪ ಮರೆತು ಮತ್ತೆ ಒಂದಾಗಬೇಕು ಎಂದು ಇಬ್ಬರೂ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಸೇರಿ ಒಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಅಭಿಮಾನಿಗಳ ಈ ಆಸೆಯನ್ನು ಇಬ್ಬರೂ ಯಾವಾಗ ನೆರವೇರಿಸಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು.