ಆ ನಟ ನನ್ನ ಮೊದಲ ಕ್ರಷ್, ಆತನ ಮದುವೆ ದಿನ ನನ್ನ ಹೃದಯ ಛಿದ್ರವಾಗಿತ್ತು, ಕಣ್ಣೀರು ಸುರಿಸಿದ್ದೆ; ಮೀನಾ
Oct 28, 2023 02:28 PM IST
ಆ ನಟ ನನ್ನ ಮೊದಲ ಕ್ರಷ್, ಆತನ ಮದುವೆ ದಿನ ನನ್ನ ಹೃದಯ ಛಿದ್ರವಾಗಿತ್ತು, ಕಣ್ಣೀರು ಸುರಿಸಿದ್ದೆ; ಹಳೇ ಕ್ರಷ್ ನೆನೆದ ಮೀನಾ
- South Actress Meena: ಬಹುಭಾಷಾ ನಟಿ ಮೀನಾ, ಬಾಲ ನಟಿಯಾಗಿಯೇ ಚಿತ್ರರಂಗ ಪ್ರವೇಶಿಸಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲೂ ಮಿಂಚಿದ ಈ ನಟಿಗೆ ಉತ್ತರದ ಈ ನಟನೆಂದರೆ ಪಂಚಪ್ರಾಣ. ಯಾರು ಆ ನಟ?
Actress Meena Love Story: ಬಹುಭಾಷಾ ನಟಿ ಮೀನಾ ಒಂದು ಕಾಲದಲ್ಲಿ ಸೌತ್ ಬಹು ಬೇಡಿಕೆಯ ನಟಿ. ಆ ನಟಿಯ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ಕಾಯಲೇಬೇಕಿತ್ತು. ಕನ್ನಡದಲ್ಲೂ ಸೈ, ತಮಿಳು, ತೆಲುಗಿನಲ್ಲೂ ದೊಡ್ಡ ಸ್ಟಾರ್‌ಡಮ್. ಮಲಯಾಳಂನಲ್ಲೂ ಮಿಂಚು ಹರಿಸಿದ್ದರು. ಹೀಗೆ ಸೌತ್‌ನ ಬಹುತೇಕ ಎಲ್ಲ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದ ಇದೇ ನಟಿ, ಆ ಒಬ್ಬ ನಟನ ಮೇಲೆ ಜೀವವನ್ನೇ ಇಟ್ಟಿದ್ದರು. ಆ ನಟನೇ ಮೀನಾಗೆ ಪಂಚಪ್ರಾಣ!
ಸದ್ಯ 47 ವರ್ಷ ಪ್ರಾಯದ ಈ ನಟಿ ಬಾಲ ಕಲಾವಿದೆಯಾಗಿ ಸಿನಿಮಾರಂಗ ಪ್ರವೇಶಿಸಿದ್ದರು. ಅಂದಿನಿಂದ ಇಂದಿನವರೆಗೂ ಚಿತ್ರೋದ್ಯಮದಲ್ಲಿ ಬರೋಬ್ಬರಿ 40 ವರ್ಷಗಳನ್ನು ಪೂರೈಸಿದ್ದಾರೆ. ನಟಿಯಾಗಿ, ಗಾಯಕಿಯಾಗಿ, ಡಬ್ಬಿಂಗ್ ಕಲಾವಿದೆಯಾಗಿಯೂ ಮೀನಾ ಕೆಲಸ ಮಾಡಿದ್ದಾರೆ. ಹೆಚ್ಚು ಜನಪ್ರಿಯಗೊಂಡಿದ್ದು ಮಾತ್ರ ತಮ್ಮ ಚೆಂದದ ನಟನೆಯಿಂದ. ಆದರೆ, ಇದೇ ಮೀನಾಗೆ ಬಾಲಿವುಡ್‌ನ ಆ ನಟನೇ ಇಷ್ಟ. ಅದ್ಯಾವ ಮಟ್ಟಿಗೆ ಎಂದರೆ, ನನಗೆ ಅವನಂಥವನೇ ಗಂಡನಾಗಬೇಕು ಎಂದೂ ಅಮ್ಮನ ಬಳಿ ಹೇಳಿಕೊಂಡಿದ್ದರಂತೆ. ಯಾರು ಆ ನಟ?
ಮೀನಾ ತುಂಬ ಇಷ್ಟ ಪಟ್ಟ ನಟ ಎಂದರೆ ಬಾಲಿವುಡ್‌ನ ಹೃತಿಕ್ ರೋಷನ್. "ನನಗೆ ಹೃತಿಕ್ ರೋಷನ್ ರೀತಿಯ ಪತಿ ಬೇಕು. ಆದರೆ, ಆತನ ಮದುವೆ ಆದ ದಿನ ನನ್ನ ಹೃದಯ ನಿಜಕ್ಕೂ ಛಿದ್ರವಾಗಿತ್ತು. ಒಬ್ಬಳೇ ಕಣ್ಣೀರು ಸುರಿಸಿದ್ದೆ. ಆ ಸಮಯದಲ್ಲಿ ನನಗಿನ್ನೂ ಮದುವೆಯೂ ಆಗಿರಲಿಲ್ಲ" ಎಂದು ಈ ಹಿಂದೆ ಸುಹಾಸಿನಿ ಜತೆಗಿನ ತಮಿಳಿನ ಸಿನಿ ಉಳಗಂ ಸಂದರ್ಶನವೊಂದರಲ್ಲಿ ಮೀನಾ ಹೇಳಿಕೊಂಡಿದ್ದರು. ಮೀನಾ ಹೀಗೆ ಹೇಳಿಕೊಳ್ಳಲು ಪ್ರಮುಖ ಕಾರಣ; ಸುಹಾಸಿನಿ. ಸಂದರ್ಶನದಲ್ಲಿ ಹೃತಿಕ್ ಜತೆಗಿನ ಮೀನಾ ಫೋಟೋವನ್ನು ತೋರಿಸಿದ್ದಕ್ಕೆ. ಹಳೇ ಘಟನೆಯನ್ನು ನೆನಪುಮಾಡಿಕೊಂಡಿದ್ದರು.
ಶ್ವಾಸಕೋಶ ಸೋಂಕಿನಿಂದ ಮೀನಾ ಪತಿ ಸಾವು
ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ, ಕಳೆದ ವರ್ಷದ ಜೂ. 29ರಂದು ನಿಧನರಾಗಿದ್ದರು. ಅಂದಹಾಗೆ, ವಿದ್ಯಾಸಾಗರ್ ಬೆಂಗಳೂರು ಮೂಲದವರು. ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. 2009ರಲ್ಲಿ ಈ ಜೋಡಿಯ ಮದುವೆಯಾಗಿತ್ತು. ಈ ದಂಪತಿಗೆ ನೈನಿಕಾ ಹೆಸರಿನ ಮಗಳೂ ಇದ್ದಾಳೆ. ಪತಿಯ ನಿಧನದ ಬಳಿಕ ಮೀನಾ ಅವರ ಎರಡನೇ ಮದುವೆ ವಿಚಾರವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಲವು ನಟರ ಹೆಸರಗಳೂ ಇವರ ಜತೆಗೆ ತಳುಕು ಹಾಕಿಕೊಂಡಿದ್ದವು. ಅದೆಲ್ಲದಕ್ಕೂ ಕಡ್ಡಿ ಮುರಿದಂತೆ ಉತ್ತರ ನೀಡಿ, ನಾನು ಎರಡನೇ ಮದುವೆ ಆಗುತ್ತಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದರು.