Spandana Vijay: ಸ್ಪಂದನಾ 11ನೇ ದಿನದ ಕಾರ್ಯ ನೆರವೇರಿಸಿದ ವಿಜಯ ರಾಘವೇಂದ್ರ, ಕುಟುಂಬದವರು; ರಾತ್ರಿ ಆತ್ಮ ಒಳಗೆ ಕರೆಸುವ ಕಾರ್ಯಕ್ಕೆ ಸಿದ್ಧತೆ
Aug 16, 2023 01:12 PM IST
ಸ್ಪಂದನಾ ವಿಜಯ್ 11ನೇ ದಿನದ ಉತ್ತರ ಕ್ರಿಯೆ ಕಾರ್ಯ
ಸತ್ತ ನಂತರ ಆತ್ಮಗಳು ಹೊರಗೆ ಓಡಾಡುತ್ತಿರುತ್ತವೆ. ಈ ಸಮಯದಲ್ಲಿ ಕೋಳಿ, ಪುಂಡಿಯಿಂದ ತಯಾರಿಸಿದ ಭಕ್ಷ್ಯಗಳನ್ನು ಎಡೆಗೆ ಇಟ್ಟು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ಮೂಲಕ ಸ್ಪಂದನಾ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಲಾಗುತ್ತದೆ. ಆತ್ಮವನ್ನು ಮನೆ ಒಳಗೆ ಕರೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಲಿದ್ದಾರೆ.
ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6 ಭಾನುವಾರ ಅಲ್ಲಿನ ಹೋಟೆಲ್‌ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಶಾಪಿಂಗ್ ಮುಗಿಸಿ ಬಂದಿದ್ದ ಸ್ಪಂದನಾ ನಿದ್ರೆ ಹೋದವರು ಮತ್ತೆ ಮೇಲೇಳಲೇ ಇಲ್ಲ ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದರು. ಇಂದಿಗೆ (ಆಗಸ್ಟ್ 16) ಸ್ಪಂದನಾ ಅಗಲಿ 11 ದಿನಗಳಾಗಿದ್ದು ಬೆಂಗಳೂರಿನ ನಿವಾಸದಲ್ಲಿ ಉತ್ತರ ಕ್ರಿಯೆ ವಿಧಿ ವಿಧಾನ ನೆರವೇರಿಸಲಾಗಿದೆ.
ಸ್ಪಂದನಾ ಇಷ್ಟದ ತಿಂಡಿಗಳನ್ನು ಇಟ್ಟು ಪೂಜೆ
ಆಗಸ್ಟ್ 6 ರಂದು ಬ್ಯಾಂಕಾಕ್‌ನಲ್ಲಿ ನಿಧನರಾದ ಸ್ಪಂದನಾ ಮೃತ ದೇಹವನ್ನು ಬೆಂಗಳೂರಿಗೆ ತಂದು ಆಗಸ್ಟ್ 9 ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆಗಸ್ಟ್ 11 ರಂದು ಹಾಲು, ತುಪ್ಪ ಕಾರ್ಯ ನೆರವೇರಿಸಿ ಮಂಡ್ಯದ ಪಶ್ಚಿಮ ವಾಹಿನಿಯಲ್ಲಿ ಸ್ಪಂದನಾ ಅಸ್ಥಿಯನ್ನು ಬಿಡಲಾಗಿತ್ತು. ಅದೇ ದಿನ ಸ್ಪಂದನಾ ಹೆಸರಿನಲ್ಲಿ ನಕ್ಷತ್ರ ಹೋಮ ಮಾಡಿಸಲಾಗಿತ್ತು. ಸ್ಪಂದನಾ ಪುತ್ರ ಶೌರ್ಯ ಕೇಶಮುಂಡನ ಮಾಡಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ವಿಜಯ ರಾಘವೇಂದ್ರ, ಶ್ರೀಮುರಳಿ ಹಾಗೂ ಇನ್ನಿತರರು ಕೂಡಾ ಈ ಹೋಮದಲ್ಲಿ ಪಾಲ್ಗೊಂಡಿದ್ದರು. ಇಂದು, ಆಗಸ್ಟ್ 16 ಕ್ಕೆ ಸ್ಪಂದನಾ ವಿಧಿವಶರಾಗಿ 11 ದಿನಗಳಾಗುವುದರಿಂದ ಇಂದು ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ತಂದೆ ನಿವಾಸದಲ್ಲಿ ಪೂಜೆ ನೆರವೇರಿಸಲಾಗಿದೆ.
ಇಂದು ಬೆಳಗ್ಗೆ ತರಕಾರಿಗಳಿಂದ ಮಾಡಿದ ಭಕ್ಷ್ಯಗಳನ್ನು ತಯಾರಿಸಿ ಪ್ರಾರ್ಥನೆ ಮಾಡಿ ಕಾಗೆಗೆ ಇಡಲಾಗಿದೆ. ಜೊತೆಗೆ ಸ್ಪಂದನಾ ಅಂತ್ಯಕ್ರಿಯೆ ನೆರವೇರಿಸಲಾದ ಸ್ಥಳದಲ್ಲಿ ಅವರಿಗೆ ಇಷ್ಟವಾದ ವಿವಿಧ ಭಕ್ಷ್ಯಗಳನ್ನು ಇಟ್ಟು ಪೂಜೆ ನೆರವೇರಿಸಲಾಗಿದೆ. ಯಂಗ್ ಸ್ಟಾರ್ ಕಬ್ಬಡ್ಡಿ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಕೂಡಾ ಭೋಜನ ವ್ಯವಸ್ಥೆ ಮಾಡಲಾಗಿದೆ. 80ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವೆಜ್ ಪಲಾವ್, ರಾಯತಾ, ಲಾಡು, ಉದ್ದಿನ ವಡೆ, ಕೋಸಂಬರಿ, ಪಾಯಸ ಸೇರಿದಂತೆ ಸುಮಾರು 21 ರೀತಿಯ ಅಡುಗೆಗಳನ್ನು ತಯಾರಿಸಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸಲು ಪೊಲೀಸರನ್ನು ಕೂಡಾ ನಿಯೋಜಿಸಲಾಗಿದೆ. ಸ್ಪಂದನಾ ನುಡಿ ನಮನ ಕಾರ್ಯವನ್ನೂ ಏರ್ಪಡಿಸಲಾಗಿದೆ.
ರಾತ್ರಿ ಸಂಜೆ ಮಡಪ್ಪಾಜೆ ಕಾರ್ಯ
ಬೆಳಗ್ಗೆ ಪೂಜೆ, ಅನ್ನ ಸಂತರ್ಪಣೆ ನಂತರ ಇಂದು ರಾತ್ರಿ ಸ್ಪಂದನಾ ತವರು ಮನೆಯಲ್ಲಿ ಮಡಪ್ಪಾಜೆ ಕಾರ್ಯ ನೆರವೇರಿಸಲಾಗುವುದು. ಮಡಪ್ಪಾಜೆ ಎಂದರೆ ಆತ್ಮ ಒಳಗೆ ಕರೆಸಿಕೊಳ್ಳುವ ವಿಧಾನ ಎಂದರ್ಥ. ಸತ್ತ ನಂತರ ಆತ್ಮಗಳು ಹೊರಗೆ ಓಡಾಡುತ್ತಿರುತ್ತವೆ. ಈ ಸಮಯದಲ್ಲಿ ಕೋಳಿ, ಪುಂಡಿಯಿಂದ ತಯಾರಿಸಿದ ಭಕ್ಷ್ಯಗಳನ್ನು ಎಡೆಗೆ ಇಟ್ಟು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ಮೂಲಕ ಸ್ಪಂದನಾ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಲಾಗುತ್ತದೆ. ಆತ್ಮವನ್ನು ಮನೆ ಒಳಗೆ ಕರೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಲಿದ್ದಾರೆ.
ಇದರೊಂದಿಗೆ ಮುಗ್ಗ ಗುತ್ತಿನ ಕುಟುಂಬಕ್ಕೆ ಸೇರಿದ ಸ್ಪಂದನಾ ಆತ್ಮವನ್ನು ಕುಟುಂಬದ ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮವನ್ನು ಇನ್ನು ಮೂರು ತಿಂಗಳೊಳಗಾಗಿ ನಡೆಸಲಾಗುವುದು. ಈ ಕಾರ್ಯವನ್ನು ಆಟಿ ಅಮವಾಸ್ಯೆಯಂದು ಮಾಡಲಾಗುತ್ತದೆ. ಆದರೆ ಸ್ಪಂದನಾ ಅವರದ್ದು ಅಕಾಲಿಕ ನಿಧನ ಆಗಿರುವುದರಿಂದ ಈ ಕಾರ್ಯವನ್ನು ಮೂರು ತಿಂಗಳ ಒಳಗಾಗಿ ಮಾಡಲಾಗುವುದು ಎಂದು ಅವರ ಕುಟುಂಬದವರಾದ ಶೇಖರ್ ಬಂಗೇರಾ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.