Malashree: ರಾಮಾಚಾರಿ ಚಿತ್ರದ ಯಾರಿವಳು ಹಾಡಿನ ಶೂಟಿಂಗ್ ವೇಳೆ ರವಿಚಂದ್ರನ್ ಮೇಲೆ ಮಾಲಾಶ್ರೀ ಸಿಟ್ಟಾಗಿದ್ದೇಕೆ? ಇದು ಇಂಟ್ರೆಸ್ಟಿಂಗ್ ಕಥೆ
Aug 04, 2023 06:00 AM IST
'ರಾಮಾಚಾರಿ' ಸಿನಿಮಾ ದೃಶ್ಯ
'ಶಾಂತಿ ಕ್ರಾಂತಿ' ಸಿನಿಮಾ ಲಾಸ್ ನಂತರ ರವಿಚಂದ್ರನ್ ಬಳಿ ಇದ್ದದ್ದು 40 ಸಾವಿರ ರೂಪಾಯಿ ಮಾತ್ರ. ಆದರೆ 'ಚಿನ್ನತಂಬಿ' ಸಿನಿಮಾ ರೈಟ್ಸ್ 1 ಲಕ್ಷ ರೂಪಾಯಿ. ಕೊನೆಗೂ ರವಿಚಂದ್ರನ್ ತಮ್ಮ ಸ್ನೇಹಿತರ ಬಳಿ ಹಣ ಸಹಾಯ ಪಡೆದು ಸಿನಿಮಾ ರೈಟ್ಸ್ ಪಡೆದು ತಂದರು.
'ರಾಮಾಚಾರಿ' ಸಿನಿಮಾ ಎಂದರೆ ನಮಗೆ ನೆನಪಾಗುವುದು ಆ ಚಿತ್ರದ ಸುಂದರ ಹಾಡುಗಳು. ತಮಿಳಿನ 'ಚಿನ್ನತಂಬಿ' ಸಿನಿಮಾ ರೀಮೇಕ್ ಆದ ಈ ಸಿನಿಮಾ ಯಶಸ್ಸು ಕಂಡ ಮೊದಲ ಕಾರಣ ಚಿತ್ರದ ಹಾಡುಗಳು. ಜೊತೆಗೆ ಮಾಲಾಶ್ರೀ, ರವಿಚಂದ್ರನ್ ಸೇರಿದಂತೆ ಕಲಾವಿದರ ನಟನೆ ಈ ಸಿನಿಮಾಗೆ ಒಂದೊಳ್ಳೆ ಹೆಸರು ತಂದುಕೊಟ್ಟಿತು.
ಶಾಂತಿ ಕ್ರಾಂತಿ ಚಿತ್ರದಿಂದ 3 ಕೋಟಿ ಕಳೆದುಕೊಂಡಿದ್ದ ರವಿಚಂದ್ರನ್
ರಾಮಾಚಾರಿ ಸಿನಿಮಾ ಯಶಸ್ಸಿನ ಹಿಂದೆ ರವಿಚಂದ್ರನ್ ಅವರ ಬೇಸರದ ಕಥೆಯೊಂದಿದೆ. ರವಿಚಂದ್ರನ್ ಬಹಳ ಇಷ್ಟಪಟ್ಟು ಮಾಡಿದ 'ಶಾಂತಿ ಕ್ರಾಂತಿ' ಸಿನಿಮಾ ಅವರಿಗೆ 3 ಕೋಟಿ ರೂಪಾಯಿ ಲಾಸ್ ಮಾಡಿತ್ತು. ಇಷ್ಟಾದರೂ ರವಿಚಂದ್ರನ್ ಧೈರ್ಯಗೆಡಲಿಲ್ಲ. ಯಾವುದಾದರೂ ಒಂದು ಹಿಟ್ ಸಿನಿಮಾವನ್ನು ಮಾಡಲೇಬೇಕೆಂದು ನಿರ್ಧರಿಸಿ, ಆಗ ತಮಿಳಿನಲ್ಲಿ ಸೂಪರ್ ಹಿಟ್ ಆದ ಪ್ರಭು ಹಾಗೂ ಖುಷ್ಪೂ ಅಭಿನಯದ 'ಚಿನ್ನತಂಬಿ' ರೈಟ್ಸ್ ಪಡೆಯಲು ನಿರ್ಧರಿಸಿದರು. ಆದರೆ ಆಗ ರವಿಚಂದ್ರನ್ ಬಳಿ ಇದ್ದದ್ದು 40 ಸಾವಿರ ರೂಪಾಯಿ ಮಾತ್ರ.
ಚಿನ್ನತಂಬಿ ಸಿನಿಮಾ ರೈಟ್ಸ್ 1 ಲಕ್ಷ ರೂಪಾಯಿ. ಕೊನೆಗೂ ರವಿಚಂದ್ರನ್ ತಮ್ಮ ಸ್ನೇಹಿತರ ಬಳಿ ಹಣ ಸಹಾಯ ಪಡೆದು ಚಿನ್ನತಂಬಿ ರೈಟ್ಸ್ ಪಡೆದರು. ಹಾಗೇ ಈ ಚಿತ್ರಕ್ಕೆ ಮಾಲಾಶ್ರೀಯೇ ನಾಯಕಿಯನ್ನಾಗಿ ಕರೆ ತರಬೇಕು ಎಂದು ನಿರ್ಧರಿಸಿದರು. ಆ ಸಮಯದಲ್ಲಿ ಮಾಲಾಶ್ರೀ ಸ್ಟಾರ್ ನಾಯಕಿ. ಬೆಳಗ್ಗಿನಿಂದ ಸಂಜೆವರೆಗೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದರು. ಆದರೂ ರವಿಚಂದ್ರನ್ ಅವರಿಗಾಗಿ 'ರಾಮಾಚಾರಿ' ಚಿತ್ರಕ್ಕೆ 18 ದಿನಗಳು ಡೇಟ್ಸ್ ಕೊಟ್ಟರು. ಹಾಗೇ ಹಂಸಲೇಖ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡರು.
ಅತಿ ಹೆಚ್ಚು ಬಾರಿ ರೀ ಟೇಕ್
ಯಾರಿವಳು... ಯಾರಿವಳು ಹಾಡಿನ ಚಿತ್ರೀಕರಣದಲ್ಲಿ ಮಾಲಾಶ್ರೀ ರವಿಚಂದ್ರನ್ ಮೇಲೆ ಬಹಳ ಗರಂ ಆಗಿದ್ದರಂತೆ. ಆ ಹಾಡಿನ ಪ್ರತಿ ಶಾಟ್ ಚೆನ್ನಾಗಿ ಬಂದರೂ ರವಿಚಂದ್ರನ್ ಮಾತ್ರ ಒನ್ ಮೋರ್ ಒನ್ ಮೋರ್ ಎಂದು ಹೆಚ್ಚು ಶಾಟ್ಸ್ ಬೇಕು ಎಂದು ಕೇಳುತ್ತಿದ್ದು ಮಾಲಾಶ್ರೀ ಅವರಿಗೆ ಕಿರಿಕಿರಿಯಾಗುತ್ತಿತ್ತಂತೆ. ನಾನು ಇಷ್ಟು ದೊಡ್ಡ ಸ್ಟಾರ್ ನಟಿ ಆದರೂ ಇವರೇಕೆ ಈ ರೀತಿ ಅನಾವಶ್ಯಕವಾಗಿ ಶಾಟ್ಸ್ ತೆಗೆಯುತ್ತಿದ್ದಾರೆ ಎಂದು ಮಾಲಾಶ್ರೀ ಮನಸ್ಸಿನೊಳಗೇ ರವಿಚಂದ್ರನ್ ಬಗ್ಗೆ ಕೋಪಗೊಳ್ಳುತ್ತಿದ್ದರಂತೆ.
ಚಿತ್ರದ ಕ್ಲೈಮಾಕ್ಸ್‌ನಲ್ಲಿ ಬರುವ ಕಾದಿರುವೆ ನಿನಗಾಗಿ.. ಹಾಡಿನಲ್ಲಿ ಮಾಲಾಶ್ರೀ ನಿಜವಾಗಲೂ ಬಹಳ ಸುಸ್ತಾಗಿದ್ದರಂತೆ. ದಿನವಿಡೀ 3-4 ಸಿನಿಮಾಗಳ ಶೂಟಿಂಗ್ ಮುಗಿಸಿ ರೆಸ್ಟ್ ಮಾಡಬೇಕು ಎನ್ನುವಷ್ಟರಲ್ಲಿ ಆ ಹಾಡಿನ ಶೂಟಿಂಗ್ ಮಾಡಲು ರವಿಚಂದ್ರನ್ ನಿರ್ಧರಿಸಿದ್ದಾರೆ. ಹಾಡು ನೈಜವಾಗಿ ಬರಬೇಕೆಂಬ ಕಾರಣಕ್ಕೆ ರವಿಚಂದ್ರನ್ ಮಾಲಾಶ್ರೀ ಅವರಿಗೆ ರೆಸ್ಟ್ ಮಾಡಲು ಬಿಡದೆ ಆ ಹಾಡಿನ ಚಿತ್ರೀಕರಣ ಮಾಡಿದ್ದರಂತೆ.
ಸಿನಿಮಾ ರಿಲೀಸ್ ಆದಾಗ ಆಗಿದ್ಧೇ ಬೇರೆ
ಆದರೆ ಒಮ್ಮೆ ಸಿನಿಮಾ ಬಿಡುಗಡೆ ಆಗಿ ಚಿತ್ರದ ಹಾಡುಗಳು ಹಿಟ್ ಆದಾಗ ರವಿಚಂದ್ರನ್ ಏಕೆ ಆ ರೀತಿ ಶಾಟ್ ತೆಗೆಯುತ್ತಿದ್ದರು ಎಂದು ಮಾಲಾಶ್ರೀಗೆ ಅರ್ಥವಾಯ್ತಂತೆ. ಹೆಣ್ಣು ಮಗಳು ಮೈ ನೆರೆದಾಗ ಮಾಡುವ ಕಾರ್ಯಕ್ರಮದ ಆ ಹಾಡಿನಲ್ಲಿ ಮಾಲಾಶ್ರೀ ಅವರನ್ನು ಸುಂದರವಾಗಿ ತೋರಿಸಬೇಕೆನ್ನುವುದು ರವಿಚಂದ್ರನ್ ಉದ್ದೇಶವಾಗಿತ್ತು. ಹಾಡಿನಲ್ಲಿ ತಮ್ಮನ್ನು ನೋಡಿದ ಮಾಲಾಶ್ರೀಗೆ ನಾನು ಇಷ್ಟು ಸುಂದರವಾಗಿದ್ದೀನಾ ಎನ್ನಿಸಿತ್ತಂತೆ. ಹಾಗೇ ರವಿಚಂದ್ರನ್ ಬಗ್ಗೆ ಗೌರವ ಇಮ್ಮಡಿ ಆಯ್ತಂತೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಸ್ವತ: ಮಾಲಾಶ್ರೀ, ರವಿಚಂದ್ರನ್ ಎದುರಿಗೆ ಈ ವಿಚಾರ ಹೇಳಿಕೊಂಡಿದ್ದರು.
'ರಾಮಾಚಾರಿ' ಚಿತ್ರದ ಹಾಡಿನ ಕಂಪೋಸಿಂಗ್‌ಗಾಗಿ ಹಂಸಲೇಖ ಅವರಿಗೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಪ್ರಶಸ್ತಿ ದೊರೆತರೆ ನಮ್ಮೂರ ಯುವರಾಣಿ ಹಾಡಿಗಾಗಿ ಕೆಜೆ ಯೇಸುದಾಸ್ ಅವರಿಗೆ ಹಿನ್ನೆಲೆ ಗಾಯನಕ್ಕಾಗಿ ಕರ್ನಾಟಕ 1991-92ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿತ್ತು. 'ಶಾಂತಿಕ್ರಾಂತಿ' ಚಿತ್ರದಿಂದ ರವಿಚಂದ್ರನ್‌ಗೆ ಆದ ನಷ್ಟವನ್ನು ಸಿನಿಮಾ ವಾಪಸ್ ತಂದುಕೊಟ್ಟಿತು. ಒಟ್ಟಿನಲ್ಲಿ ರಾಮಾಚಾರಿ, ರವಿಚಂದ್ರನ್ ಅವರ ವೃತ್ತಿ ಜೀವನದ ಅತ್ಯುತ್ತುಮ ಸಿನಿಮಾಗಳಲ್ಲಿ ಒಂದು ಎನ್ನಬಹುದು.