Dorai bhagavan health: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಆಸ್ಪತ್ರೆಗೆ ದಾಖಲು
Dec 05, 2022 08:23 PM IST
ಹಿರಿಯ ನಿರ್ದೇಶಕ ಭಗವಾನ್ ಆಸ್ಪತ್ರೆಗೆ ದಾಖಲು
- ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ದೊರೈ ಭಗವಾನ್ ಖ್ಯಾತಿಯ ಭಗವಾನ್ (Bhagavan) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ದೊರೈ ಭಗವಾನ್ ಖ್ಯಾತಿಯ ಭಗವಾನ್ (Bhagavan) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಇವರು ಶೀತದಿಂದಾಗಿ ಆಸ್ಪತ್ರೆ ಸೇರಿದ್ದರು. ಡಾ.ಮಂಜುನಾಥ್ ಅವರು ಭಗವಾನ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಭಗವಾನ್ ಆರೋಗ್ಯ ಗಂಭೀರವಾಗಿದೆ ಎನ್ನಲಾಗುತ್ತಿದೆ.
ಜಯದೇವ ಹೃದ್ರೋಗ ಆಸ್ಪತ್ರೆಯ ಐಸಿಯುನಲ್ಲಿ ಭಗವಾನ್ (89) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಇವರ ಪೂರ್ತಿ ಹೆಸರು. 1933 ರಲ್ಲಿ ಮೈಸೂರಿನಲ್ಲಿ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ ಇವರು ಯುವಕರಾಗಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
ಚಿತ್ರರಂಗದಲ್ಲಿ ಇವರು ಭಗವಾನ್ ಎಂದೇ ಪ್ರಸಿದ್ಧರು. ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿ, ನಿರ್ಮಾಪಕರಾಗಿ ಮತ್ತು ನಟರಾಗಿಯೂ ಇವರು ಗುರುತಿಸಿಕೊಂಡಿದ್ದಾರೆ.
ದೊರೈ ಭಗವಾನ್ ಅವರು 1956 ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರೀ ಅವರಿಗೆ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. 1966 ರಲ್ಲಿ ತೆರೆಕಂಡ ‘ಸಂಧ್ಯಾರಾಗ’ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾದರು. ತದನಂತರ, ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರರಾಗಿ ಚಿತ್ರನಿರ್ದೇಶಿಸಲು ಪ್ರಾರಂಭಿಸಿದ್ದರು.
ದೊರೈ ರಾಜ್ ಎಂಬ ಇನ್ನೊಬ್ಬ ನಿರ್ದೇಶಕರ ಜತೆ ಸೇರಿ ಒಟ್ಟು 55 ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದರು. ಇವರ ಇಷ್ಟು ಚಿತ್ರಗಳಲ್ಲಿ ಸುಮಾರು 30 ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ನಟಿಸಿದ್ದಾರೆ. ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸಬೆಳಕು’, ‘ಯಾರಿವನು’ ಸೇರಿದಂತೆ ಹಲವು ಸಿನಿಮಾಗಳನ್ನು ಭಗವಾನ್ ನಿರ್ದೇಶಿಸಿದ್ದಾರೆ.
ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ದೊರೈರಾಜರ ಮರಣದ ನಂತರ ಇವರು ನಿರ್ದೇಶನದಿಂದ ನಿವೃತ್ತಿ ಹೊಂದಿದ್ದಾರೆ. ಭಗವಾನ್ ಅವರು ವಿನಯ್ ರಾಘವಂದ್ರ ರಾಜ್‌ಕುಮಾರ್ ನಾಯಕತ್ವದ ‘ಅನಂತು ವರ್ಸಸ್ ನುಸ್ರತ್’ ಚಿತ್ರದಲ್ಲೂ ನಟಿಸಿದ್ದರು.