ಟೆಲಿವಿಷನ್ ಕ್ಲಬ್ ಹಣ ದುರ್ಬಳಕೆ ಆರೋಪ; ಕಿರುತೆರೆ ನಟ ರವಿಕಿರಣ್ ವಿರುದ್ದ ಪೋಲಿಸ್ ಠಾಣೆ ಮೆಟ್ಟಿಲೇರಿದ ಸದಸ್ಯರು
Feb 13, 2024 12:44 PM IST
ಟೆಲಿವಿಷನ್ ಕ್ಲಬ್ ಹಣ ದುರ್ಬಳಕೆ ಆರೋಪ; ಕಿರುತೆರೆ ನಟ ರವಿಕಿರಣ್ ವಿರುದ್ದ ಪೋಲಿಸ್ ಠಾಣೆ ಮೆಟ್ಟಿಲೇರಿದ ಸದಸ್ಯರು
- ಕಿರುತೆರೆಯ ರವಿಚಂದ್ರನ್ ಎಂದೇ ಖ್ಯಾತಿಯನ್ನ ಗಳಿಸಿದ ರವಿಕಿರಣ್ ಅವರು ‘ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್’ನಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಕಿರುತೆರೆಯ ರವಿಚಂದ್ರನ್ ಎಂದೇ ಖ್ಯಾತಿಯನ್ನ ಗಳಿಸಿದ ರವಿಕಿರಣ್ ಅವರು ‘ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್’ನಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಲು ಕ್ಲಬ್ ಸದಸ್ಯರು ಮುಂದಾಗಿದ್ದಾರೆ. ಕಳೆದ ವರ್ಷ ಕಿರುತೆರೆ ನಟ ರವಿಕಿರಣ್ ಅವರಿಗೆ ಸ್ವಾಮೀಜಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಮೋಸವಾಗಿತ್ತು. ಇದೀಗ ಕ್ಲಬ್ ಅವ್ಯವಹಾರ ವಿಷಯದಲ್ಲಿ ಇವರ ವಿರುದ್ಧ ಆರೋಪ ಕೇಳಿಬಂದಿದೆ.
ಕಳೆದ 20 ವರ್ಷದಿಂದ ಇರುವ ಈ ಕ್ಲಬ್‌ಗೆ ರವಿಕಿರಣ್ ಅವರು ಮೊದಲಿಂದ ಕಾರ್ಯದರ್ಶಿ. ಆದರೆ ಸರ್ಕಾರ ಕೊಟ್ಟ ಅನುದಾನದಲ್ಲಿ ನಿರ್ಮಾಣವಾದ ಈ ಕ್ಲಬ್ ಗೆ ಸಂಬಂಧಿಸಿದಂತೆ ಜಿಎಸ್‌ಟಿ, ಬಿಬಿಎಂಪಿ ಟ್ಯಾಕ್ಸ್ ಸೇರಿ ಯಾವುದೇ ತೆರಿಗೆ ಪಾವತಿ ಮಾಡಿಲ್ಲ. ಬದಲಿಗೆ ಹಣವನ್ನು ಪಾವತಿಸದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಲಾಗಿದೆ ಎಂಬ ಆರೋಪವನ್ನು ಈಗ ಅನೇಕರು ಮಾಡುತ್ತಿದ್ದಾರೆ.
ʻಹಲವು ಕಲಾವಿದರು ಒಳಗೊಂಡ ಈ ಕ್ಲಬ್‌ಗೆ ಸರ್ಕಾರವೇ 3 ಕೋಟಿಗೂ ಅಧಿಕ ಹಣವನ್ನು ನೀಡಿದೆ. ಆದರೂ ಸರ್ಕಾರದ ಕಣ್ಣಿಗೆ ಮಣ್ಣೇರಚುವ ಪ್ರಯತ್ನವನ್ನ ರವಿಕಿರಣ್ ಮಾಡುತ್ತಿದ್ದಾರೆ. ಕ್ಲಬ್‌ಗೆ ಬಾರದಂತೆ ಆದೇಶ ಇದ್ದರೂ ರವಿಕಿರಣ್ 6 ಲಕ್ಷ ರೂಪಾಯಿ ಹಣವನ್ನ ಪಡೆದಿದ್ದಾರೆ. ಜಿಎಸ್‌ಟಿ, ಬಿಬಿಎಂಪಿ ಟ್ಯಾಕ್ಸ್ ಸೇರಿ ಯಾವುದೇ ತೆರಿಗೆ ಪಾವತಿ ಮಾಡಿಲ್ಲ. ಹಣವನ್ನು ಪಾವತಿಸದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಲಾಗಿದೆ’ ಎಂದು ಸದಸ್ಯರು ಆರೋಪಿಸಿದ್ದಾರೆ.
ರವಿಕಿರಣ್ ವಿರುದ್ಧ ಕ್ಲಬ್ನಲ್ಲಿ ಅವ್ಯವಹಾರದ ಆರೋಪ ಎದುರಾಗಿದ್ದು, ಕ್ಲಬ್ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಪೋಲಿಸರು ಮನವರಿಕೆ ಮಾಡಿದ್ದಾರೆ.
ಕಳೆದ ವರ್ಷ ವಂಚನೆಗೆ ಒಳಗಾಗಿದ್ದ ರವಿಕಿರಣ್
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬೇರೆ ಕಾರಣದಿಂದ ರವಿಕಿರಣ್ ಸುದ್ದಿಯಲ್ಲಿದ್ದರು. ಇವರಿಗೆ ಸ್ವಾಮೀಜಿಯೊಬ್ಬರು ಲಕ್ಷಾಂತರ ರೂ. ವಂಚನೆ ಮಾಡಿದ್ದರು. ಕುಮಾರಸ್ವಾಮಿ ಲೇಔಟ್‍ನಲ್ಲಿ ವಾಸವಾಗಿರುವ ರವಿಕಿರಣ್‍ಗೆ ಈ ಹಿಂದೆ ನವೀನ್, ಭಾಗ್ಯಶ್ರೀ ಪರಿಚಯವಾಗಿದ್ದರು. ಅನಾಥಶ್ರಮಕ್ಕೆ ಸಹಾಯ ಮಾಡಿ ಎಂದು ಇವರಿಂದ ಸಹಾಯ ಕೇಳಿದ್ದರು. ಈ ರೀತಿ ರವಿಕಿರಣ್‌ರನ್ನು ಪರಿಚಯ ಮಾಡಿಕೊಂಡಿದ್ದ ಇವರು ಬಳಿಕ ದುಬೈ ಕಾರ್ಯಕ್ರಮವೊಂದಕ್ಕೆ ಚೀಫ್ ಗೆಸ್ಟ್ ಆಗಿ ನಿಮ್ಮನ್ನು ಕಳುಹಿಸಲಾಗುವುದು ಎಂದು ಹೇಳಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಹಲವು ಲಕ್ಷ ರೂಪಾಯಿಯನ್ನು ಸ್ವಾಮೀಜಿ ಪಡೆದಿದ್ದರು. ಹಂತಹಂತವಾಗಿ ಈ ಸ್ವಾಮೀಜಿ ಸುಮಾರು ನಾಲ್ಕು ಲಕ್ಷ ರೂಪಾಯಿಗಿಂತಲೂ ಹೆಚ್ಚು ವಂಚನೆ ಮಾಡಿದ್ದರು. ಕೊನೆಗೆ ತಾನು ಮೋಸ ಹೋದ ವಿಷಯ ತಿಳಿದ ರವಿಕಿರಣ್ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ನವೀನ್ ಭಾಗ್ಯಶ್ರೀ, ಪತ್ನಿ ಚೈತ್ರಾ, ಮಧ್ಯವರ್ತಿ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಿಸಿದ್ದರು. ಇವರೆಲ್ಲರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.