2ನೇ ಮದುವೆ ಬಗ್ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ಹೇಳಿಕೆ ವೈರಲ್; ಅದೊಂದೇ ಕಾರಣಕ್ಕೆ ನಿಶ್ಚಿತಾರ್ಥ ಮುರಿದುಕೊಂಡೆ ಎಂದ ರೇಣು ದೇಸಾಯಿ
Oct 18, 2023 03:48 PM IST
2ನೇ ಮದುವೆ ಬಗ್ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೇಳಿಕೆ ವೈರಲ್
Pawan Kalyan Ex wife Renu Desai: ನಾನು 2ನೇ ಮದುವೆ ಆಗುವುದು ಇಷ್ಟ. ಅಮ್ಮ ನಿನಗೆ ಯಾರಾದರೂ ವ್ಯಕ್ತಿ ಇಷ್ಟವಾದರೆ, ಅವರೊಂದಿಗೆ ನೀನು ಖುಷಿಯಿಂದ ಇರುತ್ತೀಯ ಎಂದು ನಿನಗೆ ನಂಬಿಕೆ ಇದ್ದರೆ ಖಂಡಿತ ಮದುವೆ ಆಗು ಎಂದು ಮಗ ಅಕಿರಾ ನಂದನ್ ಆಗಾಗ್ಗೆ ಹೇಳುತ್ತಾನೆ ಎಂದು ಪವನ್ ಕಲ್ಯಾಣ್ ಪತ್ನಿ ರೇಣು ದೇಸಾಯಿ 2ನೇ ಮದುವೆ ಬಗ್ಗೆ ಮಾತನಾಡಿದ್ದಾರೆ.
Pawan Kalyan Ex wife Renu Desai: ಮೊದಲ ಮದುವೆಯಿಂದ ಹೊರಬಂದ ಎಷ್ಟೋ ಜನರು 2ನೇ ಮದುವೆ ಆಗಿದ್ದಾರೆ. ಇನ್ನೂ ಕೆಲವರು ಮತ್ತೆ ಮದುವೆ ಆಗಲು ಹೆದರಿ ಕೊನೆವರೆಗೂ ಒಂಟಿಯಾಗಿ ಉಳಿಯುತ್ತಾರೆ. ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳ ಜೀವನ ಕೂಡಾ ಇದಕ್ಕೆ ಹೊರತಾಗಿಲ್ಲ. ನಟಿ ರೇಣು ದೇಸಾಯಿ, ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಅವರಿಂದ ಡಿವೋರ್ಸ್ ಪಡೆದಾಗಿನಿಂದ ಒಬ್ಬಂಟಿಯಾಗಿದ್ಧಾರೆ. ಮಧ್ಯದಲ್ಲಿ ಆಕೆಯ ಮದುವೆ ವಿಚಾರ ಸುದ್ದಿಯಾಗಿತ್ತಾದರೂ ಅದು ಮುಂದುವರೆಯಲಿಲ್ಲ. ಇದೀಗ ಮತ್ತೆ ಆ ವಿಚಾರ ಮುನ್ನೆಲೆಗೆ ಬಂದಿದೆ.
ಬದ್ರಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಪವನ್ ಕಲ್ಯಾಣ್ ರೇಣು ದೇಸಾಯಿ
ಮರಾಠಿ ಕುಟುಂಬಕ್ಕೆ ಸೇರಿದ ರೇಣು ದೇಸಾಯಿ ಪವನ್ ಕಲ್ಯಾಣ್ ಜೊತೆ ಬದ್ರಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಮಯದಲ್ಲೇ ಅವರ ನಡುವೆ ಪ್ರೀತಿ ಚಿಗುರಿತ್ತು. ಮೂಲಗಳ ಪ್ರಕಾರ ಮದುವೆ ಮುನ್ನವೇ ಈ ಜೋಡಿಗೆ ಮಗ ಜನಿಸಿದ್ದ. ಅದಾದ 5 ವರ್ಷಗಳ ನಂತರ ಇಬ್ಬರೂ ಮದುವೆ ಆದರು. ಬದ್ರಿ ನಂತರ ಜೇಮ್ಸ್ ಪಾಂಡು, ಜಾನಿ ಸಿನಿಮಾದಲ್ಲಿ ನಟಿಸಿದ ರೇಣು ದೇಸಾಯಿ 2009ರಲ್ಲಿ ಪವನ್ ಕಲ್ಯಾಣ್ ಮದುವೆ ಆದರು. ಬಳಿಕ ನಟನೆಯಿಂದ ದೂರಾದರು. 2010 ರಲ್ಲಿ ಹೆಣ್ಣು ಮಗು ಕೂಡಾ ಆಯ್ತು. ಮಗಳು ಜನಿಸಿದ ಎರಡು ವರ್ಷಗಳ ಪವನ್ ಕಲ್ಯಾಣ್, 2ನೇ ಪತ್ನಿ ರೇಣು ದೇಸಾಯಿಯಿಂದ ಕೂಡಾ ದೂರಾದರು. 2013 ರಲ್ಲಿ ಅನ್ನಾ ಲೆಜ್ನೆವಾ ಕೈ ಹಿಡಿದರು.
ಪವನ್ ಕಲ್ಯಾಣ್‌ರಿಂದ ದೂರಾ ಆದಾಗಿನಿಂದ ರೇಣು ದೇಸಾಯಿ ಸಿಂಗಲ್ ಮದರ್ ಆಗಿ ಮಕ್ಕಳನ್ನು ಬೆಳೆಸಿದರು. ನಟನೆಯಿಂದ ದೂರ ಇದ್ದರೂ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುವ ಮೂಲಕ ಚಿತ್ರರಂಗದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ರೇಣು ದೇಸಾಯಿ 2ನೇ ಮದುವೆ ಆಗುವುದಾಗಿ ನಿಶ್ಚಿಯಿಸಿ ಎಂಗೇಜ್‌ಮೆಂಟ್ ಕೂಡಾ ಮಾಡಿಕೊಂಡರು. ಆದರೆ ಕಾರಣಾಂತರಗಳಿಂದ ರೇಣು ಮತ್ತೆ ಮದುವೆ ಮಾಡಿಕೊಳ್ಳಲಿಲ್ಲ. ರೇಣು ದೇಸಾಯಿ ಎಂಗೇಜ್‌ಮೆಂಟ್ ಫೋಟೋಸ್ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ, ತಾವು ಪವನ್ ಕಲ್ಯಾಣ್ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲವರು ಆಕೆ ಮದುವೆ ಆಗುವುದನ್ನು ನಿರಾಕರಿಸಿದ್ದರು. ಆದರೆ ನಾನು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆ ಎಂಗೇಜ್‌ಮೆಂಟ್ ಮುರಿದುಕೊಂಡೆ ಎಂದು ರೇಣು ದೇಸಾಯಿ ಇತ್ತೀಚೆಗೆ ಇಂಟರ್‌ವ್ಯೂ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಮಕ್ಕಳಿಗಾಗಿ ಮದುವೆ ನಿಲ್ಲಿಸಿದೆ
''ನನ್ನ ವೈಯಕ್ತಿಕ ವಿಚಾರದ ಬಗ್ಗೆ ಎಲ್ಲರಿಗೂ ವಿವರಣೆ ನೀಡುವ ಅಗತ್ಯವಿಲ್ಲ. ಹಿರಿಯರ ಒಪ್ಪಿಗೆ ಪಡೆದು ನನಗೆ ಇಷ್ಟ ಆಗುವ ವ್ಯಕ್ತಿಯನ್ನು ಮದುವೆಯಾಗಬೇಕು ಎಂದುಕೊಂಡೆ. ಎಂಗೇಜ್‌ಮೆಂಟ್ ಕೂಡಾ ಮಾಡಿಕೊಂಡೆ. ಆದರೆ ಕೆಲವೊಂದು ವಿಚಾರಗಳಿಂದ ನಾನು ಮುಂದುವರೆಯಲಾಗಲಿಲ್ಲ. ಆಗ ನನ್ನ ಮಗಳಿಗೆ ಕೇವಲ 7 ವರ್ಷ ವಯಸ್ಸು. ಆಕೆಗೆ ಇನ್ನೂ ಚಿಕ್ಕ ವಯಸ್ಸು. ಮಗುವಿಗೆ ತಂದೆ ಇಲ್ಲ, ಅಮ್ಮ ಬೇರೆ ವ್ಯಕ್ತಿ ಜೊತೆ ಇದ್ದಾರೆ ಎಂದು ಹೊರಗಿನವರು ಮಾತನಾಡಿದರೆ, ಅದು ಮಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನಾನು ಈಗಲೇ ಮದುವೆ ಆಗಬಾರದು ಎಂಬ ನಿರ್ಧಾರಕ್ಕೆ ಬಂದೆ. ನನಗೆ ಮದುವೆ ಬಗ್ಗೆ ಒಳ್ಳೆ ಅಭಿಪ್ರಾಯವಿದೆ.''
''ನನ್ನ ಮಗಳು ಆದ್ಯಾ ಈಗ ಕಾಲೇಜಿಗೆ ಹೋಗುತ್ತಾಳೆ. ಮಗ ಅಕಿರಾ ನಂದನ್ ಸಿನಿಮಾದಲ್ಲಿ ಬ್ಯುಸಿ ಇದ್ಧಾನೆ. ಅವರಿಬ್ಬರೂ ಹೊರ ಹೋದಾಗ ನಾನು ನನ್ನ ಬಗೆ ಯೋಚಿಸುತ್ತೇನೆ. ಮಕ್ಕಳಿಗೂ ನಾನು 2ನೇ ಮದುವೆ ಆಗುವುದು ಇಷ್ಟ. ಅಮ್ಮ ನಿನಗೆ ಯಾರಾದರೂ ವ್ಯಕ್ತಿ ಇಷ್ಟವಾದರೆ, ಅವರೊಂದಿಗೆ ನೀನು ಖುಷಿಯಿಂದ ಇರುತ್ತೀಯ ಎಂದು ನಿನಗೆ ನಂಬಿಕೆ ಇದ್ದರೆ ಖಂಡಿತ ಮದುವೆ ಆಗು ಎಂದು ಮಗ ಅಕಿರಾ ನಂದನ್ ಆಗಾಗ್ಗೆ ಹೇಳುತ್ತಾನೆ. ಮಕ್ಕಳು ಈಗ ದೊಡ್ಡವರಾಗಿದ್ದಾರೆ. ಈಗ ನಾನು ಮತ್ತೊಂದು ಮದುವೆ ಬಗ್ಗೆ ಯೋಚಿಸಬಹುದು'' ಎಂದು ರೇಣು ದೇಸಾಯಿ ಹೇಳಿಕೊಂಡಿದ್ದಾರೆ. ಅಕ್ಟೋಬರ್ 20 ರಂದು ತೆರೆ ಕಾಣುತ್ತಿರುವ 'ಟೈಗರ್ ನಾಗೇಶ್ವರ್ ರಾವ್' ಚಿತ್ರದಲ್ಲಿ ರೇಣು ದೇಸಾಯಿ ನಟಿಸಿದ್ದಾರೆ. ಈ ಮೂಲಕ ರೇಣು ದೇಸಾಯಿ ನಟನೆಗೆ ವಾಪಸಾಗಿದ್ದಾರೆ.