logo
ಕನ್ನಡ ಸುದ್ದಿ  /  ಮನರಂಜನೆ  /  ಸಲಾರ್‌ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿಯಿಂದ ಎ ಸರ್ಟಿಫಿಕೇಟ್‌; ನಾನು ಅಸಭ್ಯ ಫಿಲ್ಮ್‌ ಮಾಡಿಲ್ಲ ಎಂದ ಪ್ರಶಾಂತ್‌ ನೀಲ್‌

ಸಲಾರ್‌ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿಯಿಂದ ಎ ಸರ್ಟಿಫಿಕೇಟ್‌; ನಾನು ಅಸಭ್ಯ ಫಿಲ್ಮ್‌ ಮಾಡಿಲ್ಲ ಎಂದ ಪ್ರಶಾಂತ್‌ ನೀಲ್‌

Praveen Chandra B HT Kannada

Dec 22, 2023 04:17 PM IST

google News

ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಚಿತ್ರದಲ್ಲಿ ಪೃಥ್ವಿರಾಜ್‌ ಮತ್ತು ಪ್ರಭಾಸ್‌

  • Salaar Movie: ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಸಲಾರ್‌ ಸಿನಿಮಾಕ್ಕೆ ಎ ಸರ್ಟಿಫಿಕೇಟ್‌ ದೊರಕಿರುವ ಕುರಿತು ಎಸ್‌ಎಸ್‌ ರಾಜಮೌಳಿ ಜತೆಗೆ ಸಲಾರ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಚರ್ಚಿಸಿದ್ದಾರೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಚಿತ್ರದಲ್ಲಿ ಪೃಥ್ವಿರಾಜ್‌ ಮತ್ತು ಪ್ರಭಾಸ್‌
ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಚಿತ್ರದಲ್ಲಿ ಪೃಥ್ವಿರಾಜ್‌ ಮತ್ತು ಪ್ರಭಾಸ್‌

ಸಲಾರ್‌: ಪಾರ್ಟ್‌ 1- ಸೀಸ್‌ಫೈರ್‌ ಸಿನಿಮಾವು ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದೆ. ಇದು ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಸುಕುಮಾರನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ. ಈ ಸಿನಿಮಾದ ಕುರಿತು ಬಾಹುಬಲಿ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಜತೆಗೆ ನಿರ್ದೇಶಕ ಪ್ರಶಾಂತ್‌ ನೀಲ್‌ ಇತ್ತೀಚೆಗೆ ಚರ್ಚಿಸಿದ್ದಾರೆ. ಈ ಸಿನಿಮಾದ ಕಥೆ ಮತ್ತು ಪಾತ್ರಗಳನ್ನು ಹೇಗೆ ಸೃಷ್ಟಿಸಲಾಯಿತು ಇತ್ಯಾದಿ ವಿಚಾರಗಳ ಜತೆ ಇವರು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಸಲಾರ್‌ ಸಿನಿಮಾಕ್ಕೆ ಎ (ಅಡಲ್ಟ್‌) ಸರ್ಟಿಫಿಕೇಟ್‌ ದೊರಕಿರುವ ಕುರಿತೂ ಕೂಡ ಚರ್ಚೆಯಾಗಿದೆ.

ಬಾಲ್ಯ ಸ್ನೇಹಿತರಿಬ್ಬರ ಕಥೆ

ಸಲಾರ್‌ ಎನ್ನುವುದು ಖಾನ್ಸರ್‌ ಎಂಬ ಕಾಲ್ಪನಿಕ ಭೂಮಿಯಲ್ಲಿ ಕ್ರೌರ್ಯ ನಡೆಯುವ ಕಥಾನಕ. ಆದರೆ, ಕ್ರೂರತನವನ್ನು ತೋರಿಸುವ ಉದ್ದೇಶ ಸಿನಿಮಾದಲ್ಲಿ ಇರಲಿಲ್ಲ. ಎರಡು ಬಾಲ್ಯ ಸ್ನೇಹಿತರ ಕಥೆಯನ್ನು ಹೇಳಲಾಗಿದೆ. "ಇದು ದೇವ ಮತ್ತು ವರದಾ ಎಂಬ ಇಬ್ಬರು ಸ್ನೇಹಿತರ ಕಥೆ. ಇದು ಈ ಸಿನಿಮಾದ ತಿರುಳಾಗಿದೆ" ಎಂದು ಪ್ರಶಾಂತ್‌ ನೀಲ್‌ ಹೇಳಿದ್ದಾರೆ. "ನಾನು ಹಲವು ವರ್ಷಗಳಿಂದ ತೆಲುಗು ಸಿನಿಮಾಗಳನ್ನು ನೋಡುತ್ತಿದ್ದೇನೆ. ಈ ಹಿಂದೆ ಬಂದಿರುವ ತೆಲುಗು ಸಿನಿಮಾಗಳಿಗೆ ಹೋಲಿಸಿದರೆ ಸಲಾರ್‌ನಲ್ಲಿ ಕ್ರೌರ್ಯ ತೆಳುವಾಗಿದೆ. ಸಿನಿಮಾವನ್ನು ಎಂದಿಗೂ ಹಿಂಸಾತ್ಮಕವಾಗಿ ಮಾಡಬಾರದು ಎಂದು ಭಾವಿಸಿದ್ದೆ. ಆದರೆ, ಸೆನ್ಸಾರ್‌ ಮಂಡಳಿಯ ಮಾರ್ಗಸೂಚಿಗಳು ಬದಲಾಗಿವೆ. ಸೆನ್ಸಾರ್‌ ಮಂಡಳಿಯು ಈ ಸಿನಿಮಾದಲ್ಲಿ ಕೆಲವೊಂದು ಕಟ್‌ ಮಾಡಲು ಸೂಚಿಸಿದರು. ನಾನು ಸುಮ್ಮನಿದ್ದೆ. ಚಿತ್ರದಲ್ಲಿ ಆ ಹಿಂಸೆಗಳ ಅಗತ್ಯವಿತ್ತು. ನನಗೆ ನಿರಾಶೆಯಾಯಿತು, ಪ್ರಭಾಸ್‌ ಅವರು ಪರವಾಗಿಲ್ಲ ಎಂದರು" ಎಂದು ಪ್ರಶಾಂತ್‌ ನೀಲ್‌ ಹೇಳಿದ್ದಾರೆ.

ಕೆಜಿಎಫ್‌ನಂತಹ ಕಲರ್‌ ಥೀಮ್‌

ಚಿತ್ರದ ಪ್ರಚಾರಕ್ಕೆ ಸಂಬಂಧಪಟ್ಟಂತೆ ಟೀಸರ್‌, ಟ್ರೈಲರ್‌ ಬಿಡುಗಡೆಯಾದ ಬಳಿಕ ಪ್ರಶಾಂತ್‌ ನೀಲ್‌ ಅವರು ಕೆಜಿಎಫ್‌ನ ಕಲರ್‌ ಥೀಮ್‌ ಅನ್ನೇ ಸಲಾರ್‌ಗೆ ಆಯ್ಕೆ ಮಾಡಿದ್ದಾರೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ. ಅದಕ್ಕೆ ಅವರು ಉತ್ತರಿಸಿದ್ದಾರೆ. "ಸಲಾರ್‌ಗೂ ಕೆಜಿಎಫ್‌ಗೂ ಯಾವುದೇ ಸಂಬಂಧವಿಲ್ಲ. ಈ ಎರಡು ಚಿತ್ರಗಳನ್ನು ಒಂದೇ ರೀತಿ ಕಾಣಿಸುವಂತೆ ಮಾಡಿರುವುದು ಪ್ರಜ್ಞಾಪೂರ್ವಕ ಆಯ್ಕೆಯಲ್ಲ" ಎಂದು ಅವರು ವಿವರಿಸಿದ್ದಾರೆ. "ಈ ಚಿತ್ರದ ಪಾತ್ರಗಳು ವಾಸಿಸುವ ಜಗತ್ತು ಎಷ್ಟು ಕತ್ತಲೆ ಮತ್ತು ಸಮಗ್ರ ಎನ್ನುವುದನ್ನು ತೋರಿಸಲು ನಾನು ಬಯಸುವೆ. ನನಗೆ ಒಂದು ಬಣ್ಣದ (ಒಸಿಡಿ) ಗೀಳು ಇದೆ ಎಂದು ಬಳಿಕ ತಿಳಿಯಿತು. ಕಪ್ಪು ಬಣ್ಣದಲ್ಲೂ ಪ್ರಶಾಂತ್‌ ಹೇಗೆ ಸ್ಪೆಷಲ್‌ ದೃಷ್ಯಗಳನ್ನು ತೆಗೆಯುತ್ತಾರೆ ಎಂದು ಪ್ರಭಾಸ್‌, ಪೃಥ್ವಿರಾಜ್‌ ತಮಾಷೆ ಮಾಡುತ್ತಾರೆ" ಎಂದು ಅವರು ಹೇಳಿದ್ದಾರೆ.

ನಾನು ಯಾವುದೇ ವಲ್ಗರ್‌ (ಅಸಭ್ಯ) ಸಿನಿಮಾ ಮಾಡಿಲ್ಲ. ಈಗ ಸೆನ್ಸಾರ್‌ ಮಂಡಳಿಯ ಮಾರ್ಗಸೂಚಿ ಬದಲಾಗಿದೆ. ವಯೋಲೆನ್ಸ್‌ (ಹಿಂಸೆ) ಹೆಚ್ಚಿರುವ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ದೊರಕುತ್ತದೆ ಎಂದು ಅವರು ಹೇಳಿದ್ದಾರೆ.

ಸಲಾರ್‌ ಸಿನಿಮಾದ ಕುರಿತು

ಪ್ರಶಾಂತ್‌ ನೀಲ್‌ ನಿರ್ದೇಶನದ, ಪ್ರಭಾಸ್‌, ಪೃಥ್ವಿರಾಜ್‌ ಸುಕುಮಾರನ್‌ ಅಭಿನಯದ ಸಲಾರ್‌ ಸಿನಿಮಾವು ಖಾನ್ಸರ್‌ ಎಂಬ ಊರಿನಲ್ಲಿ ಅಧಿಕಾರಕ್ಕಾಗಿ ನಡೆಯುವ ಹೋರಾಟ. ಇಲ್ಲಿ ವರದಾನಿಗೆ ತೊಂದರೆಯಾದಗ ತನ್ನ ಬಾಲ್ಯ ಸ್ನೇಹಿತ ದೇವನ ಸಹಾಯ ಪಡೆಯುತ್ತಾನೆ. ಶೃತಿ ಹಾಸನ್‌ ಮತ್ತು ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಲಾರ್‌ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತವಿದೆ. ಸಲಾರ್‌: ಪಾರ್ಟ್‌ 1- ಸೀಸ್‌ಫೈರ್‌ ಇದೇ ಶುಕ್ರವಾರ (ಡಿಸೆಂಬರ್‌ 22)ರಂದು ಬಿಡುಗಡೆಯಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ