logo
ಕನ್ನಡ ಸುದ್ದಿ  /  ಮನರಂಜನೆ  /  ಧನುಷ್‌, ನಾಗಾರ್ಜುನ ಜತೆ ಸೇರಿಕೊಂಡ ರಶ್ಮಿಕಾ ಮಂದಣ್ಣ, ಆರಂಭವಾಗುತ್ತ ತ್ರಿಕೋನ ಪ್ರೇಮಕಥೆ

ಧನುಷ್‌, ನಾಗಾರ್ಜುನ ಜತೆ ಸೇರಿಕೊಂಡ ರಶ್ಮಿಕಾ ಮಂದಣ್ಣ, ಆರಂಭವಾಗುತ್ತ ತ್ರಿಕೋನ ಪ್ರೇಮಕಥೆ

Praveen Chandra B HT Kannada

Jan 18, 2024 04:54 PM IST

google News

ನಾಗಾರ್ಜುನಾ, ರಶ್ಮಿಕಾ ಮಂದಣ್ಣ ಮತ್ತು ಧನುಷ್‌ ಮುಂದಿನ ಸಿನೆಮಾ ವಿವರ

    • ಜನಪ್ರಿಯ ನಿರ್ದೇಶಕ ಶೇಖರ್‌ ಕಮ್ಮುಲಾ ಅವರ ಬಹುತಾರಾಗಣದ ಮುಂದಿನ ಚಿತ್ರಕ್ಕೆ ಮಹೂರ್ತ ಕಾರ್ಯಕ್ರಮ ಇಂದು (ಜ 18) ನಡೆಯಿತು. ಈ ಸಿನಿಮಾದಲ್ಲಿ ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ. ಇಬ್ಬರು ಜನಪ್ರಿಯ ನಟರು ಇರುವ ಕಾರಣ ಇದು ತ್ರಿಕೋನ ಪ್ರೇಮಕಥೆಯಾ ಎಂಬ ಸಂದೇಹ ಸಿನಿಪ್ರಿಯರಲ್ಲಿ ಉಂಟಾಗಿದೆ.
ನಾಗಾರ್ಜುನಾ, ರಶ್ಮಿಕಾ ಮಂದಣ್ಣ ಮತ್ತು ಧನುಷ್‌ ಮುಂದಿನ ಸಿನೆಮಾ ವಿವರ
ನಾಗಾರ್ಜುನಾ, ರಶ್ಮಿಕಾ ಮಂದಣ್ಣ ಮತ್ತು ಧನುಷ್‌ ಮುಂದಿನ ಸಿನೆಮಾ ವಿವರ (Instagram)

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲಾ ನಿರ್ದೇಶನದ ಮುಂದಿನ ಚಿತ್ರಕ್ಕೆ ಹೈದರಾಬಾದ್‌ನಲ್ಲಿ ಗುರುವಾರ ಚಾಲನೆ ನೀಡಲಾಯಿತು ಇನ್ನೂ ಹೆಸರಿಡದ ಬಹುತಾರಾಗಣದ ಈ ಚಿತ್ರದಲ್ಲಿ ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ. ಸದ್ಯ ಈ ಸಿನಿಮಾಕ್ಕೆ ಡಿಎನ್‌ಎಸ್‌ ಎಂಬ ತಾತ್ಕಾಲಿಕ ಹೆಸರು ನೀಡಲಾಗಿದೆ.

ಇದು ಪ್ಯಾನ್‌ ಇಂಡಿಯಾ ಸಿನಿಮಾವ?

ಈ ಚಿತ್ರದ ಮಹೂರ್ತ ಕಾರ್ಯಕ್ರಮದಲ್ಲಿ ಸಿನಿಮಾ ತಂಡವು ಈ ಪ್ರಾಜೆಕ್ಟ್‌ ಕುರಿತು ಹೆಚ್ಚಿನ ಮಾಹಿತಿ ತಿಳಿಸಿಲ್ಲ. ಈಗಾಗಲೇ ಧನುಷ್‌ ಮೊದಲ ದಿನ ಕೆಲವು ದೃಶ್ಯಗಳ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಶ್ರೀ ವೆಂಕಟೇಶ್ವರ ಸಿನೆಮಾಸ್ ಅಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಸ್ಕೂರ್ ರಾಮ್ ಮೋಹನ್ ರಾವ್ ನಿರ್ಮಿಸಿರುವ ಈ ಚಿತ್ರವನ್ನು ಸೋನಾಲಿ ನಾರಂಗ್ ಮುನ್ನಡೆಸಲಿದ್ದಾರೆ.

ಸಿನಿಮಾ ಮಹೂರ್ತ ಕಾರ್ಯಕ್ರಮದಲ್ಲಿ ಧನುಷ್, ಶೇಖರ್, ನಿರ್ಮಾಪಕರು ಸೇರಿದಂತೆ ಸಾಕಷ್ಟು ಜನರು ಭಾಗವಹಿಸಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಕ್ಯಾಮೆರಾಮ್ಯಾನ್‌ ಆಗಿ ನಿಕೇತ್ ಬೊಮ್ಮಿ ಆಯ್ಕೆಯಾಗಿದ್ದಾರೆ. ಉಳಿದಂತೆ ಈ ಚಿತ್ರದ ಇತರೆ ನಟರು, ನಟಿಯರ ಕುರಿತು ಸಿನಿಮಾ ತಂಡ ಹೆಚ್ಚಿನ ಮಾಹಿತಿ ನೀಡಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ತ್ರಿಕೋನ ಪ್ರೇಮಕಥೆ ಇರುವುದೇ?

ಇಲ್ಲಿ ನಾಗಾರ್ಜುನ ಮತ್ತು ಧನುಷ್‌ ಹೆಸರು ಈಗಾಗಲೇ ಘೋಷಿಸಿರುವುದರಿಂದ ಇದು ತ್ರಿಕೋನ ಪ್ರೇಮಕಥೆಯೇ ಎಂಬ ಸಂದೇಹ ಅಭಿಮಾನಿಗಳಲ್ಲಿ ಕಾಡಿದೆ. ಆದರೆ, ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವುದರಿಂದ ತಮಿಳಿಗೆ ಧನುಷ್‌, ತೆಲುಗಿಗೆ ನಾಗಾರ್ಜುನರನ್ನು ಆಯ್ಕೆ ಮಾಡಲಾಗಿದೆ. ಹಾಗಾದರೆ, ಕನ್ನಡಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ವಿವರ ಲಭ್ಯವಿಲ್ಲ.

ನಿರ್ದೇಶಕ ಶೇಖರ್ ಅವರ ಹಿಂದಿನ ಚಿತ್ರಗಳಾದ ಫಿದಾ ಮತ್ತು ಲವ್ ಸ್ಟೋರಿ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿವೆ. ಹೀಗಾಗಿ ಶೇಖರ್‌ ಅವರ ಮುಂದಿನ ಪ್ರಾಜೆಕ್ಟ್‌ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಧನುಷ್‌ ನಟನೆಯ ಕ್ಯಾಪ್ಟನ್‌ ಮಿಲ್ಲರ್‌ ಜನವರಿ 12ರಂದು ಬಿಡುಗಡೆಯಾಗಿದೆ. ಜನವರಿ 25ರಂದು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಧನುಷ್‌ ಅವರು ತನ್ನ 50ನೇ ಸಿನಿಮಾಕ್ಕೆ ತಾನೇ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. #D50 ಚಿತ್ರದಲ್ಲಿ ನಿತ್ಯಾ ಮೆನನ್, ಎಸ್ ಜೆ ಸೂರ್ಯ, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ವರಲಕ್ಷ್ಮಿ ಶರತ್ ಕುಮಾರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ನಾಗಾರ್ಜುನ ಅವರ ನಾ ಸಾಮಿ ರಂಗ ಜನವರಿ 14ರಂದು ಬಿಡುಗಡೆಯಾಗಿದೆ. ಈ ಸಿನಿಮಾದ ಕುರಿತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ನಾಗಾರ್ಜುನ ಅವರು ಬೇರಾವುದೇ ಪ್ರಾಜೆಕ್ಟ್‌ ಘೋಷಿಸಿಲ್ಲ. ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ರಶ್ಮಿಕಾ, ಶೀಘ್ರದಲ್ಲೇ ತೆಲುಗಿನಲ್ಲಿ ರೇನ್ಬೋ, ದಿ ಗರ್ಲ್ಫ್ರೆಂಡ್ ಮತ್ತು ಹಿಂದಿಯಲ್ಲಿ ಚಾವಾ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ