logo
ಕನ್ನಡ ಸುದ್ದಿ  /  ಮನರಂಜನೆ  /  ದಿ ಬ್ರೋಕನ್‌ ನ್ಯೂಸ್‌ ವೆಬ್ ಸರಣಿ: ಸುದ್ದಿಮನೆ ಜೀವಿಗಳನ್ನು ಕಾಡುವ, ಜನರ ಕಣ್ಣು ತೆರೆಸುವ ಕಥಾನಕ, ನಿಜ-ಸುಳ್ಳಿನ ತಾಕಲಾಟ, ಸುದ್ದಿಯ ಹಲವು ಮುಖ

ದಿ ಬ್ರೋಕನ್‌ ನ್ಯೂಸ್‌ ವೆಬ್ ಸರಣಿ: ಸುದ್ದಿಮನೆ ಜೀವಿಗಳನ್ನು ಕಾಡುವ, ಜನರ ಕಣ್ಣು ತೆರೆಸುವ ಕಥಾನಕ, ನಿಜ-ಸುಳ್ಳಿನ ತಾಕಲಾಟ, ಸುದ್ದಿಯ ಹಲವು ಮುಖ

D M Ghanashyam HT Kannada

May 08, 2024 02:48 PM IST

ಸುದ್ದಿಮನೆ ಜೀವಿಗಳನ್ನು ಕಾಡುವ, ಇತರರ ಕಣ್ಣು ತೆರೆಸುವ 'ದಿ ಬ್ರೋಕನ್‌ ನ್ಯೂಸ್‌-2ʼ ವೆಬ್‌ ಸರಣಿ

    • The broken news web series review: ಪತ್ರಕರ್ತರಲ್ಲಿ ಎಷ್ಟು ವಿಧ? ಪ್ರಾಮಾಣಿಕರು, ವಸ್ತುನಿಷ್ಠರು, ಭಾವುಕ ಪ್ರತಿಕ್ರಿಯೆ ಕೊಡುವವರು, ವೃತ್ತಿಧರ್ಮವೇ ಸರ್ವಸ್ವ ಎಂದುಕೊಂಡವರು, ಸಿದ್ಧಾಂತಕ್ಕೆ ಕಟ್ಟುಬಿದ್ದವರು, ಸ್ವಾರ್ಥಕ್ಕೆ ಶರಣಾಗಿ ಎಲ್ಲವನ್ನೂ ಕೈಬಿಟ್ಟವರು… ಇಷ್ಟೇ ಅಲ್ಲ, ಇನ್ನೋ ಎಷ್ಟೋ ಥರದ ಪತ್ರಕರ್ತರ ಕಥನಗಳು ಇಲ್ಲಿದೆ. (ಬರಹ: ರಾಜೀವ್ ಹೆಗಡೆ)
ಸುದ್ದಿಮನೆ ಜೀವಿಗಳನ್ನು ಕಾಡುವ, ಇತರರ ಕಣ್ಣು ತೆರೆಸುವ 'ದಿ ಬ್ರೋಕನ್‌ ನ್ಯೂಸ್‌-2ʼ ವೆಬ್‌ ಸರಣಿ
ಸುದ್ದಿಮನೆ ಜೀವಿಗಳನ್ನು ಕಾಡುವ, ಇತರರ ಕಣ್ಣು ತೆರೆಸುವ 'ದಿ ಬ್ರೋಕನ್‌ ನ್ಯೂಸ್‌-2ʼ ವೆಬ್‌ ಸರಣಿ

ವೆಬ್‌ ಸರಣಿ: ದಿ ಬ್ರೋಕನ್ ನ್ಯೂಸ್ ಸೀಸನ್ 2, ಪ್ಲಾಟ್‌ಫಾರ್ಮ್: ಝೀ5, ನಿರ್ದೇಶನ: ವಿನಯ್ ವೈಕುಲ್, ತಾರಾಗಣ: ಸೋನಾಲಿ ಬೇಂದ್ರೆ, ಜೈದೀಪ್ ಅಹ್ಲವಾತ್, ಶ್ರೇಯಾ ಪಿಲ್‌ಗಾಂವ್ಕರ್, ಸಂಚಿಕೆಗಳು: 8, ಪ್ರತಿ ಸಂಚಿಕೆಯ ಸರಾಸರಿ ಅವಧಿ: 35 ರಿಂದ 45 ನಿಮಿಷ, ಕಥಾ ಹಂದರ: ಎರಡು ಸುದ್ದಿವಾಹಿನಿಗಳ ಪತ್ರಕರ್ತರು ಪರಸ್ಪರ ಸ್ಪರ್ಧೆಗೆ ಬಿದ್ದು ಸುದ್ದಿಯ ಸ್ವರೂಪವನ್ನೇ ಹೇಗೆ ಬದಲಿಸುತ್ತಾರೆ ಎನ್ನುವುದರ ಸುತ್ತ ಕಥನ ಸಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ದಿ ಬ್ರೋಕನ್ ನ್ಯೂಸ್ ಸೀಸನ್ 2: ಮಾಧ್ಯಮಗಳ ಬಗ್ಗೆ ಜಾಗತಿಕವಾಗಿ ಸಾಕಷ್ಟು ಸಿನಿಮಾ ಹಾಗೂ ಸರಣಿಗಳು ಬಂದಿವೆ. ಆದರೆ ನಿರ್ಭೀತ ಹಾಗೂ ಸಿದ್ಧಾಂತ ರಹಿತವಾಗಿ ಭಾರತೀಯ ಸುದ್ದಿಮನೆಗಳ ಬಗ್ಗೆ ನಾನು ಯಾವುದೇ ಚಿತ್ರ, ಸಿರೀಸ್‌ಗಳನ್ನು ನೋಡಿದ ನೆನಪಾಗುತ್ತಿಲ್ಲ. ಕೆಲವು ಸಿನಿಮಾಗಳಲ್ಲಿ ಅವರು ಇಷ್ಟಪಡುವ ಅಥವಾ ಟೀಕಿಸುವ ಪತ್ರಕರ್ತರನ್ನು ಬಿಂಬಿಸುವ ಪ್ರಯತ್ನ ನಡೆದಿತ್ತಷ್ಟೆ. ಆದರೆ ಮೊದಲ ಬಾರಿಗೆ ʼದಿ ಬ್ರೋಕನ್‌ ನ್ಯೂಸ್‌ʼ ಸರಣಿಯು ಭಾರತದ ಮಟ್ಟಿಗೆ ಒಳ್ಳೆಯ ಪ್ರಯತ್ನವನ್ನು ಮಾಡಿತ್ತು. ಮೊದಲ ಸರಣಿಯ (2022) ಎಪಿಸೋಡ್‌ಗಳು ಅಷ್ಟೊಂದು ಕಾಡಿರಲಿಲ್ಲ. ಕೆಲವು ಕಡೆ ಸುದ್ದಿಮನೆಯ ವಾಸ್ತವವನ್ನು ಅರಿಯದೇ ಸರಣಿ ಮಾಡಿದರೋ ಎಂದೆನಿಸುತ್ತಿತ್ತು.

ಆದರೆ ʼದಿ ಬ್ರೋಕನ್‌ ನ್ಯೂಸ್‌ʼನ ಎರಡನೇ ಸರಣಿಯ ಎಪಿಸೋಡ್‌ಗಳು ಆಪ್ತವೆನಿಸಿದವು. ಸುದ್ದಿಮನೆಯ ಸಾಕಷ್ಟು ತಲ್ಲಣ, ರಾಜಕೀಯ, ಒಳಗುಟ್ಟು, ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ಉದ್ಯಮದೊಂದಿಗಿನ ಸರಸ-ವಿರಸಗಳನ್ನು ತುಂಬಾ ಚೆಂದವಾಗಿ ತೋರಿಸಿದ್ದಾರೆ. ಹಾಗೆಯೇ ಸುದ್ದಿಮನೆಯೊಳಗಿನ ಅಪಾತ್ರರು, ಭ್ರಷ್ಟರನ್ನು ತೋರಿಸುವ ಜತೆಗೆ, ಪ್ರಾಮಾಣಿಕರು ಹಾಗೂ ಕೆಲಸಗಾರರನ್ನೂ ಅಷ್ಟೇ ಸುಂದರವಾಗಿ ತೆರೆ ಮೇಲೆ ತಂದಿದ್ದಾರೆ.

ಕಳೆದ ಸಿರೀಸ್‌ನ ಕೊನೆಯ ಎಪಿಸೋಡ್‌ನಲ್ಲಿ ಸ್ಟಾರ್‌ ಯುವ ಪತ್ರಕರ್ತೆ ರಾಧಾ ಭಾರ್ಗವ ಅವರ ಬಂಧನವಾಗಿತ್ತು. ಅಲ್ಲಿಂದಲೇ ಶುರುವಾಗುವ ಎಪಿಸೋಡ್‌ಗಳು ರಾಧಾ ಭಾರ್ಗವ, ದೀಪಂಕರ್‌ ಸಾನ್ಯಾಲ್‌, ಅಮೀನಾ ಖುರೇಶಿಯ ವಿವಿಧ ಅವತಾರಗಳನ್ನು ಅನಾವರಣ ಮಾಡಿಕೊಂಡು ಹೋಗುತ್ತವೆ.

ನಮ್ಮ ಸುದ್ದಿಮನೆಯ ನೆನಪು

ಸರಣಿಯಲ್ಲಿ ಬರುವ ಅಮೀನಾ, ರಾಧಾ, ದೀಪಂಕರ್‌, ಅನುಜ್‌, ಕಮಲ್‌ ಪಾತ್ರಧಾರಿಗಳು ಸುದ್ದಿಮನೆಯಲ್ಲಿ ನಾನು ನೋಡಿದ ಪತ್ರಕರ್ತರನ್ನು ನೆನಪಿಸುವಂತಿತ್ತು. ಇವರಲ್ಲಿ ಯಾರು ಆ ಪತ್ರಕರ್ತರು ಎಂದು ಉಲ್ಲೇಖಿಸುವುದು ಔಚಿತ್ಯ ಎನಿಸುವುದಿಲ್ಲ. ಆದರೆ ಪ್ರತಿಯೊಂದು ಸುದ್ದಿಮನೆಯಲ್ಲೂ ಅಮೀನಾ ರೀತಿಯ ಪ್ರಾಮಾಣಿಕ, ವಸ್ತುನಿಷ್ಠ ಹಾಗೂ ಸಮಭಾವ ಸೃಷ್ಟಿಸುವ ಪತ್ರಕರ್ತರಿದ್ದರೆ, ರಾಧಾ ರೀತಿಯ ಪ್ರಾಮಾಣಿಕತೆಯ ಜತೆಗೆ ಸೈದ್ಧಾಂತಿಕ ನಿಲುವು ಹೊಂದಿರುವವರು ಇರುತ್ತಾರೆ. ಹಾಗೆಯೇ ಅನುಜ್‌ ಹಾಗೂ ಕಮಲ್‌ ರೀತಿಯ ನೇರ ಹಾಗೂ ದಿಟ್ಟತನ ಹೊಂದಿದ್ದರೂ ಶಾಂತವಾಗಿರುವರೂ ಸಿಗುತ್ತಾರೆ. ಹಾಗೆಯೇ ಅತಿ ಹೆಚ್ಚಾಗಿ ಮಿಂಚಿ ಆಡಳಿತ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವ ದೀಪಂಕರ್‌ ರೀತಿಯ ಭ್ರಷ್ಟರೂ ಸಿಗುತ್ತಾರೆ. ಆದರೆ ಕೊನೆಯಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮರ್ಥನೆಗಳಿರುತ್ತವೆ.

ಉದ್ಯಮ-ರಾಜಕೀಯ-ಮಾಧ್ಯಮ

ಉದ್ಯಮ ಹಾಗೂ ರಾಜಕೀಯಗಳು ಸೇರಿಕೊಂಡು ಪತ್ರಿಕೋದ್ಯಮ ಆಗಿರುವುದು ಹೊಸತೇನಲ್ಲ. ಇವೆರಡನ್ನು ಬಿಟ್ಟು ಮಾಧ್ಯಮಗಳು ಇರಲು ಸಾಧ್ಯವೇ ಇಲ್ಲ. ಇವೆರಡನ್ನೂ ಸಂಬಾಳಿಸಿಕೊಂಡು ಹೋಗಲು ಸುದ್ದಿಮನೆಗಳು ಎಷ್ಟೊಂದು ಕಷ್ಟಪಡುತ್ತವೆ, ನಾಟಕ ಆಡುತ್ತವೆ ಹಾಗೂ ಜನರನ್ನು ದಿಕ್ಕು ತಪ್ಪಿಸುತ್ತವೆ ಎನ್ನುವುದನ್ನೇ ಅಚ್ಚುಕಟ್ಟಾಗಿ ಈ ಸರಣಿಯಲ್ಲಿ ತೋರಿಸಲಾಗಿದೆ.

ಕನ್ನಡಕ ತೆಗೆದು ನೋಡಿ

ಈ ಸರಣಿಯನ್ನು ನೋಡುವಾಗ ಪ್ರಸ್ತುತ ರಾಜಕೀಯದ ಸಾಕಷ್ಟು ಹಗರಣ, ವಿಷಯಗಳು ಪರೋಕ್ಷವಾಗಿ ಉಲ್ಲೇಖ ಆಗುತ್ತವೆ. ಹಾಗೆಯೇ ಒಂದಿಷ್ಟು ಸೀನ್‌ಗಳು ಈ ಮಾಧ್ಯಮಕ್ಕೆ ಸಂಬಂಧಿಸಿರಬಹುದು ಎಂದು ಒಂದು ಕ್ಷಣಕ್ಕೆ ಅನಿಸಬಹುದು. ಆದರೆ ಇವೆಲ್ಲ ಕನ್ನಡಕಗಳನ್ನು ತೆಗೆದುಕೊಂಡು ಈ ಸರಣಿಯಲ್ಲಿ ಹೇಳಿರುವ ಪ್ರತಿಯೊಂದು ಅಂಶವು ಭ್ರಷ್ಟರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ನೋಡಿದರೆ ಮತ್ತಷ್ಟು ಆನಂದಿಸಬಹುದು. ಏಕೆಂದರೆ ಮಾನಸಿಕ ಹಾಗೂ ಆರ್ಥಿಕ ಭ್ರಷ್ಟಾಚಾರವು ಯಾವುದೇ ಒಂದು ಪಕ್ಷ, ಸಿದ್ಧಾಂತಕ್ಕೆ ಸೀಮಿತವಾಗಿಲ್ಲ. ಹಾಗೆಯೇ ಪ್ರಾಮಾಣಿಕತೆ ಕೂಡ ಯಾರೊಬ್ಬರ ಸ್ವತ್ತಲ್ಲ.

ಕಾಡುವ ಅಮೀನಾ ಖುರೇಷಿ

ʼಅಮೀನಾ ಖುರೇಷಿʼ ಎನ್ನುವ ಸಂಪಾದಕಿಯ ಪಾತ್ರದಲ್ಲಿ ಅಭಿನಯಿಸಿರುವ ಸೋನಾಲಿ ಬೇಂದ್ರೆ ತುಂಬಾ ಆಪ್ತವಾಗುತ್ತಾರೆ. ನಾನು ದೂರದರ್ಶನದಲ್ಲಿ ಸಿನಿಮಾ ನೋಡುವ ಕಾಲದಿಂದಲೂ ಈಕೆಯನ್ನು ನೋಡಿದರೆ ಅದೇನೋ ಖುಷಿಯಾಗುತ್ತದೆ. ʼಸೌಂದರ್ಯ ಸಾಬೂನ್‌ ನಿರ್ಮಾʼ ಎಂದಾಕ್ಷಣ ಎಲ್ಲಿದ್ದರೂ ಒಮ್ಮೆ ಓಡಿ ಬಂದು ಸೋನಾಲಿ ಬೇಂದ್ರೆಯನ್ನು ಕಣ್ಣು ತುಂಬಿಸಿಕೊಳ್ಳಬೇಕು ಎನಿಸುತ್ತಿತ್ತು. ಆದರೆ ಈ ಪಾತ್ರದಲ್ಲಿ ಸೌಂದರ್ಯಕ್ಕಿಂತ ಪ್ರೌಢಿಮೆ ಮೂಲಕ ಗಮನ ಸೆಳೆಯುತ್ತಾರೆ. ಒಬ್ಬ ಸಂಪಾದಕಿ ಹೇಗಿರಬೇಕು ಎನ್ನುವುದನ್ನು ಗಟ್ಟಿಯಾಗಿ ಹೇಳುತ್ತಾರೆ. ಅದರ ಜತೆಗೆ ಕೈದಿಗಳ ರೀತಿ ಕ್ಯಾಬೀನ್‌ನಲ್ಲಿ ಬಂಧಿಯಾಗಿಕೊಂಡಿರುವ ಸಂಪಾದಕರು ಹಾಗೂ ಸಂಪಾದನೆಗೆ ಸಂಪಾದಕರಾಗಿರುವರಿಗೂ ಒಂದು ಪಾಠವಾಗಿ ಕಾಣುತ್ತಾರೆ. ಸಾಕಷ್ಟು ಸಂಪಾದಕರು ತಮ್ಮ ಆ ಹುದ್ದೆಯ ಚೇಂಬರ್‌ಗೆ ಪ್ರವೇಶಿಸಿದ ಬಳಿಕ, ತಾವು ನಡೆದು ಬಂದ ಹಾದಿ ಮರೆತು ಟೇಬಲ್‌ ಪತ್ರಕರ್ತರಾಗಿ ಉಳಿಯುತ್ತಾರೆ. ಅವರೆಲ್ಲರೂ ಈ ಸರಣಿಯನ್ನು ತಪ್ಪದೇ ನೋಡಬೇಕು. ಇವೆಲ್ಲ ಕಾರಣಗಳಿಂದ ಅಮೀನಾ ಹೇಳುವ ಒಂದಿಷ್ಟು ಡೈಲಾಗ್‌ಗಳು ಸರಣಿ ಮುಗಿದ ಮೇಲೆಯೂ ಪದೇಪದೆ ಕಾಡುತ್ತದೆ.

ಗೊಂದಲ ಸೃಷ್ಟಿಸುವ ರಾಧಾ, ದೀಪಂಕರ್

ಭ್ರಷ್ಟಾಚಾರವೆಂದರೆ ಕೇವಲ ಆರ್ಥಿಕ ರೂಪದ್ದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಹಣವನ್ನು ತೆಗೆದುಕೊಳ್ಳದೇ ದ್ವೇಷ ಹಾಗೂ ಸೈದ್ಧಾಂತಿಕ ವಿಚಾರಕ್ಕೆ ಜೋತು ಬಿದ್ದು ಮಾಧ್ಯಮವನ್ನು ನಡೆಸುವುದು ಕೂಡ ಹೇಗೆ ಭ್ರಷ್ಟಾಚಾರವಾಗುತ್ತದೆ ಎನ್ನುವುದನ್ನು ಇಲ್ಲಿ ನೋಡಬಹುದು. ಇನ್ನೊಂದೆಡೆ ಹೇಳುವ ವಿಚಾರಗಳು ಸತ್ಯವಾಗಿದ್ದರೂ, ಅದರ ಹಿಂದೆ ಹಣವಿದ್ದರೆ ಏನೆಲ್ಲ ಆಗಬಹುದು ಎನ್ನುವ ಸತ್ಯದರ್ಶನವೂ ಆಗುತ್ತದೆ.

ಮತ್ತೆ ಆಸೆ ಹುಟ್ಟಿಸಿದ ಸಿರೀಸ್

ಈ ಸರಣಿ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮಲಗಲು ಪ್ರಯತ್ನಿಸಿದೆ. ಸಾಮಾನ್ಯವಾಗಿ ಹಾಸಿಗೆ ಮೇಲೆ ತಲೆಯಿಟ್ಟ ಹತ್ತು ಸೆಕೆಂಡ್‌ಗಳಲ್ಲಿ ನಿದ್ದೆಗೆ ಜಾರುವ ನಾನು, ಅಂದು ಅರ್ಧ ಗಂಟೆಯಾದರೂ ನಿದ್ರಿಸಲು ಸಾಧ್ಯವೇ ಆಗಲಿಲ್ಲ. ಕಳೆದ ಐದು ವರ್ಷಗಳಿಂದ ನಾನು ಮಿಸ್‌ ಮಾಡಿಕೊಂಡ ಸುದ್ದಿಮನೆ, ಅದಕ್ಕೂ ಮೊದಲು ಖುಷಿಯಿಂದ ಕೆಲಸ ಮಾಡಿದ್ದ ಮಾಧ್ಯಮ ಜಗತ್ತುಗಳು ಕಣ್ಮುಂದೆ ಬರಲಾರಂಭಿಸಿದವು. ಭವಿಷ್ಯದಲ್ಲಿ ಮತ್ತೆ ಆ ಸುದ್ದಿಮನೆಗಳ ಭಾಗವಾಗಬೇಕು, ಒಂದಿಷ್ಟು ಸಾಹಸ ಮಾಡಬೇಕು ಎನ್ನುವ ಹೊಸ ಕನಸು ಕೂಡ ಕಾಡಲಾರಂಭಿಸಿದವು. ನಾನು ಮಾಧ್ಯಮ ಜೀವಿಯಾದ ಕಾರಣದಿಂದ ನನಗೆ ಇಲ್ಲಿನ ಒಂದಿಷ್ಟು ಪಾತ್ರಗಳು ಇನ್ನಷ್ಟು ಆಪ್ತವಾದವು ಹಾಗೂ ಕಾಡಿದವು. ನೀವು ಮಾಧ್ಯಮದಲ್ಲಿದ್ದರೆ, ಮಾಧ್ಯಮಕ್ಕೆ ಬರಬೇಕು ಎನ್ನುವ ಕನಸಿದ್ದರೆ ಅಥವಾ ಮಾಧ್ಯಮದ ಮೇಲೆ ಪ್ರೀತಿ ಅಥವಾ ಯಾವುದೇ ಭಾವನೆ ಇದ್ದರೂ ಒಮ್ಮೆ ನೋಡಿ. ಒಂದಿಷ್ಟು ಸತ್ಯಗಳು ಗೊತ್ತಾಗುತ್ತದೆ. ಈ ಜಗತ್ತಿನಲ್ಲಿ ಯಾರೂ ಒಳ್ಳೆಯವರಲ್ಲ, ಯಾರೂ ಕೆಟ್ಟವರಲ್ಲ.

-ಬರಹ: ರಾಜೀವ್ ಹೆಗಡೆ

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ