Who is Aarti Mittal: ವೇಶ್ಯಾವಾಟಿಕೆ ಆರೋಪದ ಮೇಲೆ ಅರೆಸ್ಟ್ ಆಗಿರುವ ಆರತಿ ಮಿತ್ತಲ್ ಯಾರು, ಇಲ್ಲಿದೆ ಒಂದಿಷ್ಟು ಮಾಹಿತಿ!
Apr 18, 2023 05:13 PM IST
ಹಿಂದಿ ಕಿರುತೆರೆ ನಟಿ, ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿತ್ತಲ್
- ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ 1 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಹಿತೇನ್ ತೇಜಸ್ವಿನಿ, ರೋಹಿತ್ ರಾಯ್, ಮಾನವ್ ಗೊಹಿಲ್, ಅಮನ್ ವರ್ಮಾ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಇರುವ ಫೋಟೋಗಳನ್ನು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಮಾಡೆಲ್‌ಗಳು ಹಾಗೂ ಆಕ್ಟಿಂಗ್‌ನಲ್ಲಿ ಆಸಕ್ತಿ ಇರುವ ಯುವತಿಯರಿಗೆ ಹಣದ ಆಮಿಷ ಒಡ್ಡಿ ವೇಶ್ಯಾವಾಟಿಕೆ ದಂಧೆಗೆ ಒತ್ತಾಯಿಸುತ್ತಿದ್ದ ಆರೋಪದ ಮೇರೆಗೆ ಬಾಲಿವುಡ್ ಮಹಿಳಾ ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿತ್ತಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಯವತಿಯರನ್ನು ರಕ್ಷಿಸಿದ್ದಾರೆ. ಆರತಿ ಮಿತ್ತಲ್ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಯಾರು ಈ ಆರತಿ ಮಿತ್ತಲ್?
ಆರತಿ ಮಿತ್ತಲ್ ಬಂಧನವಾಗುತ್ತಿದ್ದಂತೆ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ಹಲವರಿಗೆ ಈ ಆರತಿ ಮಿತ್ತಲ್ ಯಾರು ಎಂಬುದು ಗೊತ್ತಿಲ್ಲ. ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋ, ವಿಡಿಯೋಗಳನ್ನು ಗಮಿನಿಸಿದರೆ ಆಕೆ ಕಾಸ್ಟಿಂಗ್ ಡೈರೆಕ್ಟರ್ ಆಗಿ ಮಾತ್ರವಲ್ಲದೆ ನಟಿಯಾಗಿ ಕೂಡಾ ಗುರುತಿಸಿಕೊಂಡಿದ್ದರು ಎನ್ನುವುದು ತಿಳಿದುಬರುತ್ತಿದೆ. ಬಾಲಿವುಡ್ ಅನೇಕ ಖ್ಯಾತ ನಟ-ನಟಿಯರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಆಕೆ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಹಿಂದಿ ವೆಬ್ ಸೀರೀಸ್ ಹಾಗೂ ಧಾರಾವಾಹಿಗಳಲ್ಲಿ ಆರತಿ ನಟಿಸಿದ್ದಾರೆ ಎನ್ನಲಾಗಿದೆ. ಅದರಲ್ಲಿ ಅವರು ಈಗ ಪ್ರಸಾರವಾಗುತ್ತಿರುವ ರಾಜಶ್ರೀ ಠಾಕೂರ್ ಹಾಗೂ ಸಿಜಾನ್ನೆ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಅಪ್ನಾಪನ್'-ಬದಲ್ತೇ ರಿಶ್ತೋ ಕಾ ಬಂಧನ್ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಎನ್ನಲಾಗಿದೆ. ಜೊತೆಗೆ ಸತೀಶ್ ಕೌಶಿಕ್ ಅವರ ಕರ್ಮ ಯುದ್ಧ್, ಯೇ ಹೇ ಚಾಹತೇ, ಧರ್ಮಪತ್ನಿ, ಏಕ್ ಜುನೂನ್, ನಾ ಉಮ್ರ ಕಿ ಸೀಮಾ ಹೋ ಸೇರಿದಂತೆ ಕೆಲವೊಂದು ಧಾರಾವಾಹಿಯಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ 1 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಹಿತೇನ್ ತೇಜಸ್ವಿನಿ, ರೋಹಿತ್ ರಾಯ್, ಮಾನವ್ ಗೊಹಿಲ್, ಅಮನ್ ವರ್ಮಾ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಇರುವ ಫೋಟೋಗಳನ್ನು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆರತಿ ಕೆಲವೊಂದು ರೀಲ್ಸ್ ಕೂಡಾ ಮಾಡಿದ್ದಾರೆ. ಇತ್ತೀಚೆಗೆ ನಿಧನರಾದ ಬಾಲಿವುಡ್ ಹಿರಿಯ ನಟ ಸತೀಶ್ ಕೌಶಿಕ್ ಅವರೊಂದಿಗೆ ಕೂಡಾ ಆರತಿ ಫೋಟೋ ತೆಗೆಸಿಕೊಂಡಿದ್ದಾರೆ.
ದೆಹಲಿ ಮೂಲದ ನಟಿ
ಆರತಿ ದೆಹಲಿಗೆ ಸೇರಿದ ಆರತಿ ಜನಿಸಿದ್ದು, 18 ಅಕ್ಟೋಬರ್ 1995ರಲ್ಲಿ. ದೆಹಲಿಯ ಮಿರಾ ಮಾಡೆಲ್ ಸ್ಕೂಲ್‌ನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿದ ಆರತಿ, ಹಿಮಾಚಲ್ ಪ್ರದೇಶದ ಮಾನವ್ ಭಾರತಿ ವಿವಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಸಿನಿಮಾದಲ್ಲಿ ಟಾಪ್ ನಟಿಯಾಗಿ ಹೆಸರು ಮಾಡಬೇಕು ಎಂದು ಕನಸು ಕಂಡಿದ್ದ ಆರತಿಗೆ ನವಾಜುದ್ದೀನ್ ಸಿದಿಕಿ ಹಾಗೂ ದೀಪಿಕಾ ಪಡುಕೋಣೆ ಮೆಚ್ಚಿನ ನಟ-ನಟಿ ಅಂತೆ. ಕಾಲೇಜಿನಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಆಕೆ ಅನೇಕ ಫ್ಯಾಷನ್ ಶೋಗಳಲ್ಲಿ ರಾಂಪ್ ವಾಕ್ ಮಾಡಿದ್ದಾರೆ.
ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರತಿ
ಧಾರಾವಾಹಿ, ಸಿನಿಮಾಗಳಲ್ಲಿ ಅವಕಾಶ ನೀಡುವುದಾಗಿ ಹಾಗೂ ಹಣದ ಆಸೆ ತೋರಿಸಿ ಬಹಳಷ್ಟು ಯುವತಿಯರನ್ನು ಆರತಿ ಮಿತ್ತಲ್ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಆರತಿ ಮಿತ್ತಲ್ ವ್ಯವಹಾರ ತಿಳಿದ ಮುಂಬೈ ಪೊಲೀಸರು ಒಂದು ತಂಡ ಕಟ್ಟಿಕೊಂಡು ಗ್ರಾಹಕರ ಸೋಗಿನಲ್ಲಿ ಆರತಿ ಬಳಿ ಬಂದಿದ್ದಾರೆ. ಇಬ್ಬರು ಯುವತಿಯರನ್ನು ಹೋಟೆಲ್ ರೂಮ್‌ಗೆ ಕಳಿಸುವಂತೆ ಮನವಿ ಮಾಡಿದ್ದಾರೆ. ಅವರ ಬಳಿ ಆರತಿ 60 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಕೊನೆಗೆ ಇಬ್ಬರು ಯುವತಿಯರೊಂದಿಗೆ ಆಕೆ ಹೋಟೆಲ್ ಬಳಿ ಬಂದಿದ್ದಾಳೆ. ಈ ವೇಳೆ ಪೊಲೀಸರು ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅರೆಸ್ಟ್ ಮಾಡಿದ್ದಾರೆ. ಆ ವೇಳೆ ಇಬ್ಬರು ಯುವತಿಯರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳಿಸಿದ್ದಾರೆ. ಪೊಲೀಸರು ಘಟನೆಯ ಸಂಪೂರ್ಣ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.
ಈ ಹಿಂದೆ ಕೂಡಾ ಕೆಲವು ಸಿನಿಮಾ ನಟ-ನಟಿಯರು ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಸಾವಿರಾರು ಜನರಿಗೆ ಮಾದರಿಯಾಗಿರಬೇಕಾದ ಸಿನಿಮಾ ಮಂದಿಯೇ ಹಣಕ್ಕಾಗಿ ಇಂತಹ ಕೆಲಸ ಮಾಡಿದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.