logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದಿನಿಂದ ಆರಂಭವಾದ ಕೃಷಿ ಮೇಳಕ್ಕೆ ಜನಸಾಗರ; ಗಮನ ಸೆಳೆದ ಡಿಜಿಟಲ್ ಕೃಷಿಯ ಪ್ರ್ಯಾತ್ಯಕ್ಷಿಕೆಗಳು

ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದಿನಿಂದ ಆರಂಭವಾದ ಕೃಷಿ ಮೇಳಕ್ಕೆ ಜನಸಾಗರ; ಗಮನ ಸೆಳೆದ ಡಿಜಿಟಲ್ ಕೃಷಿಯ ಪ್ರ್ಯಾತ್ಯಕ್ಷಿಕೆಗಳು

Prasanna Kumar P N HT Kannada

Nov 14, 2024 03:47 PM IST

google News

ಇಂದಿನಿಂದ ಬೆಂಗಳೂರಿನ ಜಿಕೆವಿಕೆಯಲ್ಲಿ ಆರಂಭವಾದ ಕೃಷಿ ಮೇಳಕ್ಕೆ ಜನಸಾಗರ; ಗಮನ ಸೆಳೆದ ಡಿಜಿಟಲ್ ಕೃಷಿಯ ಪ್ರ್ಯಾತ್ಯಕ್ಷಿಕೆಗಳು

    • Bengaluru Krishi Mela 2024: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಕೃಷಿ ಮೇಳ ಆರಂಭಗೊಂಡಿದೆ. ಡಿಜಿಟಲ್ ಕೃಷಿಯ ಪ್ರ್ಯಾತ್ಯಕ್ಷಿಕೆಗಳು ಗಮನ ಸೆಳೆದವು. ನವೆಂಬರ್ 17ರ ತನಕ ಕೃಷಿ ಜಾತ್ರೆ ಇರಲಿದೆ.
ಇಂದಿನಿಂದ ಬೆಂಗಳೂರಿನ ಜಿಕೆವಿಕೆಯಲ್ಲಿ ಆರಂಭವಾದ ಕೃಷಿ ಮೇಳಕ್ಕೆ ಜನಸಾಗರ; ಗಮನ ಸೆಳೆದ ಡಿಜಿಟಲ್ ಕೃಷಿಯ ಪ್ರ್ಯಾತ್ಯಕ್ಷಿಕೆಗಳು
ಇಂದಿನಿಂದ ಬೆಂಗಳೂರಿನ ಜಿಕೆವಿಕೆಯಲ್ಲಿ ಆರಂಭವಾದ ಕೃಷಿ ಮೇಳಕ್ಕೆ ಜನಸಾಗರ; ಗಮನ ಸೆಳೆದ ಡಿಜಿಟಲ್ ಕೃಷಿಯ ಪ್ರ್ಯಾತ್ಯಕ್ಷಿಕೆಗಳು

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿ ಮೇಳ-2024 ಆಯೋಜಿಸಲಾಗಿದೆ. ಹವಾಮಾನ ಚತುರ ಡಿಜಿಟಲ್ ಕೃಷಿ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಉದ್ಘಾಟನೆ ಮಾಡಲಾಗಿದೆ. ಇಂದಿನಿಂದ (ನವೆಂಬರ್ 14) ನವೆಂಬರ್ 17 ರ ತನಕ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ನಾಲ್ಕು ನೂತನ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ತಳಿಗಳ ಪ್ರಾತ್ಯಕ್ಷಿಕೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆಯಲಾಗಿದೆ. ಅಲ್ಲದೆ, ತಂತ್ರಜ್ಞಾನ ಆವಿಷ್ಕಾರ, ಹೊಸ ಸಲಕರಣೆಗಳನ್ನು ಅನಾವರಣ ಮಾಡಲಾಗಿದೆ.

ಬಿಡುಗಡೆಯಾದ ಹೊಸ ತಳಿಗಳು

ಮುಸುಕಿನ ಜೋಳ ಸಂಕರಣ ಎಂಎಎಚ್ 15-84

ಅಲಸಂದೆ ಕೆಬಿಸಿ-12

ಸೂರ್ಯಕಾಂತಿ ಕೆಬಿಎಸ್​ಎಚ್-90

ಬಾಜ್ರ ನೇಪಿಯರ್ ಪಿಬಿಎನ್-242

ಹವಾಮಾನಕ್ಕೆ ಹೊಂದಿಕೊಂಡು ಕೃಷಿಗೆ ಅನುಕೂಲವಾಗುವ ತಾಂತ್ರಿಕತೆ ಪರಿಚಯಿಸಲಾಗಿದೆ. ಇದಕ್ಕಾಗಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಿರುವ ಸೆನ್ಸಾರ್‌ ಆಧಾರಿತ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗಿದೆ. ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಸಿರಿಧಾನ್ಯ ಆಹಾರಕ್ಕೆ ಸಂಬಂಧಿಸಿ ವಿಶೇಷ ಮಳಿಗೆಗಳು ಇವೆ. ಮೇಳಕ್ಕೆ ಆಗಮಿಸುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಉಪಹಾರ ಮಳಿಗೆಗಳು ಇವೆ.'

ಕೃಷಿ ಮೇಳಕ್ಕೆ ಬರುವವರಿಗೆ ಪ್ರವೇಶ ಉಚಿತ ಇದೆ. ಜಿಕೆವಿಕೆ ಗೇಟ್‌ನಿಂದ ಮೇಳ ನಡೆಯುವ ಸ್ಥಳಕ್ಕೆ ಕರೆದೊಯ್ಯಲು ವಿಶ್ವವಿದ್ಯಾಲಯದ ಬಸ್​ಗಳ ಅವಕಾಶ ಕಲ್ಪಿಸಲಾಗಿದೆ. ಕಾರು, ಬೈಕ್ ಹಾಗೂ ಇತರೆ ವಾಹನಗಳಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆಯೂ ಇದೆ.

ತಂತ್ರಜ್ಞಾನಗಳ ಪ್ರದರ್ಶನ

* ಕೃಷಿ ಡ್ರೋನ್

* ರೊಬೊಟ್‌ ಕೃಷಿ ಯಂತ್ರ

* ಮಲ್ಟಿಸ್ಪೆಕ್ಟ್ರಲ್‌ ಡ್ರೋನ್

* ಸ್ವಯಂಚಾಲಿತ ಬೂಮ್‌ ಸ್ಪ್ರೇಯರ್

* ಹಣ್ಣಿನ ವರ್ಗೀಕರಣಗೊಳಿಸುವ ಯಂತ್ರ

* ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ

* ಆಳ ನಿಯಂತ್ರಕ ರೋಟವೇಟರ್‌

ಗಮನಸೆಳೆದ ನೋಡುಗರ ಪ್ರಾತ್ಯಕ್ಷಿಕೆಗಳು

2024ರ ವರ್ಷದಲ್ಲಿ ಕೃಷಿಯಲ್ಲಿ ಸಾಧನೆಗೈದ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಹೊಸ ನೂತನ ತಂತ್ರ ಜ್ಞಾನ, ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ಪರಿಹಾರ, ಸಮಗ್ರ ಕೃಷಿ, ಕೃಷಿ ಪದ್ಧತಿ, ರೇಷ್ಮೆ ಕೃಷಿ, ತೋಟಗಾರಿಕೆ, ಸಿರಿಧಾನ್ಯ, ಸಾವಯವ ಕೃಷಿ, ಜಲಾನಯನ ನಿರ್ವಹಣೆ, ಮಣ್ಣು ರಹಿತ ಕೃಷಿ ಪದ್ಧತಿಯಂತಹ ಅನೇಕ ಪ್ರಾತ್ಯಕ್ಷಿಕೆಗಳು ನೋಡುಗರ ಗಮನಸೆಳೆದವು.

ಮೊದಲ ದಿನವೇ ಮಳೆಯ ಸಿಂಚನ

ಕೃಷಿ ಮೇಳದ ಮೊದಲ ದಿನವೇ ಮಳೆಯ ಸಿಂಚನವಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಮೇಳದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನದ ಹೊತ್ತಲ್ಲಿ ಮಳೆಯ ಆಗಮನವಾಯಿತು. ಕೃಷಿ ಕಾರ್ಯಗಳಿಗೆ ಅಗತ್ಯ ಸಲಕರಣೆ, ಬಿತ್ತನೆ ಬೀಜ ಖರೀದಿಸುತ್ತಿದ್ದ ಜನರು, ಮಳೆಯಿಂದ ಚೆಲ್ಲಾಪಿಲ್ಲಿಯಾಗಿ ಓಡಿದರು. ಮಳೆಯಿಂದ ರಕ್ಷಿಸಿಕೊಳ್ಳಲು ಮಳಿಗೆಗಳಿಗೆ ನುಗ್ಗಿದರು. ಅಲ್ಲದೆ, ಕೃಷಿ ಮೇಳಕ್ಕೆ ಆಗಷ್ಟೇ ಆಗಮಿಸಿದವರು ನೆನೆಯುವಂತಾಯಿತು. ಮಳೆಯ ನಡುವೆಯೂ ಜನ ಸಾಗರ ಹರಿದು ಬಂದಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ