ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah: ಸಿದ್ದರಾಮಯ್ಯಗೆ ಪ್ರತಿ ಬಾರಿ ಅಧಿಕಾರ ಸಿಕ್ಕಿದ್ದು ಹೇಗೆ? ಸಿಎಂ, ಡಿಸಿಎಂ, ಪ್ರತಿಪಕ್ಷ ನಾಯಕ ಎಲ್ಲವೂ ಡಬಲ್ ಧಮಾಕ

Siddaramaiah: ಸಿದ್ದರಾಮಯ್ಯಗೆ ಪ್ರತಿ ಬಾರಿ ಅಧಿಕಾರ ಸಿಕ್ಕಿದ್ದು ಹೇಗೆ? ಸಿಎಂ, ಡಿಸಿಎಂ, ಪ್ರತಿಪಕ್ಷ ನಾಯಕ ಎಲ್ಲವೂ ಡಬಲ್ ಧಮಾಕ

HT Kannada Desk HT Kannada

May 18, 2023 02:03 PM IST

ಮತ್ತೆ ಸಿಎಂ ಆದ ಸಿದ್ದರಾಮಯ್ಯ

    • Siddaramaiah: ಯಾವುದೇ ಹುದ್ದೆ ಪಡೆಯುವಾಗ ಅದು ಸಿದ್ದರಾಮಯ್ಯ ಅವರಿಗೆ ಸುಲಭವಾಗಿ ಏನೂ ಬಂದಿಲ್ಲ. ಎರಡು ಬಾರಿ ಉಪಮುಖ್ಯಮಂತ್ರಿ, 2 ಬಾರಿ ಪ್ರತಿಪಕ್ಷ ನಾಯಕ ಹಾಗೂ 2ನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವಾಗಲೂ ಇದು ಎದುರಾಗಿದೆ. ಅದನ್ನು ಚಾಣಾಕ್ಷತನದಿಂದಲೇ ಸಮರ್ಥವಾಗಿ ಎದುರಿಸಿ ಅಧಿಕಾರದ ಗದ್ದುಗೆ ಏರಿದವರು ಸಿದ್ದರಾಮಯ್ಯ.
ಮತ್ತೆ ಸಿಎಂ ಆದ ಸಿದ್ದರಾಮಯ್ಯ
ಮತ್ತೆ ಸಿಎಂ ಆದ ಸಿದ್ದರಾಮಯ್ಯ

ಕರ್ನಾಟಕ ಮಾತ್ರವಲ್ಲದೇ ದೇಶದ ರಾಜಕಾರಣದಲ್ಲಿ ತಮ್ಮದೇ ಛಾಪು ಹೊಂದಿರುವ ಸಿದ್ದರಾಮಯ್ಯ ಹಿಡಿದ ಹಠ ಸಾಧಿಸುವ ಛಲವಾದಿ. ಈ ಕಾರಣದಿಂದ ನಾಲ್ಕು ದಶಕದ ಕರ್ನಾಟಕ ರಾಜಕೀಯ ಅಖಾಡದಲ್ಲಿ ಗಟ್ಟಿಗ ಎಂದು ಗುರುತಿಸಿಕೊಂಡವರೇ. ಯಾವುದೇ ಹುದ್ದೆ ಪಡೆಯುವಾಗ ಅದು ಅವರಿಗೆ ಸುಲಭವಾಗಿ ಏನೂ ಬಂದಿಲ್ಲ. ಎರಡು ಬಾರಿ ಉಪಮುಖ್ಯಮಂತ್ರಿ, 2 ಬಾರಿ ಪ್ರತಿಪಕ್ಷ ನಾಯಕ ಹಾಗೂ 2ನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವಾಗಲೂ ಇದು ಎದುರಾಗಿದೆ. ಅದನ್ನು ಚಾಣಾಕ್ಷತನದಿಂದಲೇ ಸಮರ್ಥವಾಗಿ ಎದುರಿಸಿ ಅಧಿಕಾರದ ಗದ್ದುಗೆ ಏರಿದವರು ಸಿದ್ದರಾಮಯ್ಯ.

ಟ್ರೆಂಡಿಂಗ್​ ಸುದ್ದಿ

Bangalore News: ಪೂರ್ವ ಮುಂಗಾರು ಚುರುಕು; ಬೆಂಗಳೂರಿನಲ್ಲಿ ನೀರಿನ ಸ್ಥಿತಿ ಈಗ ಹೇಗಿದೆ?

Mysore News: ಮೈಸೂರಿನ ಫೋಟೋ, ವಿಡಿಯೋ ತೆಗೆದಿದ್ದೀರಾ, ಸ್ಪರ್ಧೆಗೆ ಕಳುಹಿಸಿ 25 ಸಾವಿರ ರೂ. ಬಹುಮಾನ ಗೆಲ್ಲಿ

Vijayapura News: ಎಂಬಿಪಾಟೀಲ್‌ ಕನಸಿನ ಯೋಜನೆ, ವಿಜಯಪುರದ ಗಡಿಯಂಚಿನ ಗ್ರಾಮದ ಕೆರೆ ತುಂಬಲು ಅನ್ನದಾತನ ಹಕ್ಕೊತ್ತಾಯ

Forest News: ನಾಗರಹೊಳೆಯಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್‌ ಹಾವಳಿ, ಕಣ್ಣಾರೆ ಕಂಡ ಅರಣ್ಯ ಸಚಿವರು

1983ರಲ್ಲಿ ಮೊದಲ ಬಾರಿ ಪಕ್ಷೇತರ ಶಾಸಕರಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದ ಸಿದ್ದರಾಮಯ್ಯ ಮತ್ತೆ 2 ವರ್ಷದಲ್ಲೇ ಚುನಾವಣೆ ಎದುರಿಸುವ ಸನ್ನಿವೇಶ. ಆಗ ಜನತಾಪಕ್ಷದಿಂದ ಗೆದ್ದ ಸಿದ್ದರಾಮಯ್ಯ ಅವರಿಗೆ ಪಶುಸಂಗೋಪನೆ, ನಂತರ ಸಾರಿಗೆ ಸಚಿವರಾಗಿಯೂ ಕೆಲಸ ಮಾಡಿದವರು. ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಮೊದಲ ಬಾರಿ ಸಚಿವ ಸ್ಥಾನ ಪಡೆಯುವಾಗಲೂ ಅವರಿಗೆ ವಿರೋಧವೂ ಇತ್ತು, ಅದನ್ನು ಆಗಲೇ ಎದುರಿಸಿದ್ದವರು. 1989ರಲ್ಲಿ ಜನತಾಪಕ್ಷ ಒಡೆದು ಜನತಾದಳವಾಗಿ ಸೋತರು.

1994ರಲ್ಲಿ ಜನತಾದಳದಿಂದ ಗೆದ್ದಾಗ ದೊರೆತಿದ್ದು ಹಣಕಾಸು ಖಾತೆ. ಎರಡೇ ವರ್ಷದಲ್ಲಿ ದೇವೇಗೌಡರು ಪ್ರಧಾನಿ ಹುದ್ದೆಗೇರಿದಾಗ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಈಗಿನಂತೆಯೇ ಜೆ.ಎಚ್.ಪಟೇಲರು ಹಾಗೂ ಸಿದ್ದರಾಮಯ್ಯ ನಡುವೆ ಸ್ಪರ್ಧೆ ಏರ್ಪಟ್ಟಿತು. ಕೊನೆಗೆ ಹಿರಿತನದ ಆಧಾರದ ಮೇಲೆ ಪಟೇಲರಿಗೆ ಬೆಂಬಲ ದೊರೆತರೇ, ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಒಲಿದಿತ್ತು. ಆಗಲೇ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಿದ್ದರಾಮಯ್ಯ ಅವರು ಹಿರಿಯರಿಂದ ವಿರೋಧ ಎದುರಿಸುವ ಸನ್ನಿವೇಶವೂ ಇತ್ತು. ಮುಂದೆ ಜನತಾದಳ ಇಬ್ಬಾಗವಾಗಿ ಜಾ.ದಳದಲ್ಲಿ ಉಳಿದು ರಾಜ್ಯಾಧ್ಯಕ್ಷರಾದ ಸಿದ್ದರಾಮಯ್ಯರಿಗೆ ತವರಿನಲ್ಲೇ ಸೋಲಾಗಿತ್ತು. ೨೦೦೪ರ ಹೊತ್ತಿಗೆ ಜಾ.ದಳ ಉತ್ತಮ ಸ್ಥಾನಗಳನ್ನು ಪಡೆದು ಸಮ್ಮಿಶ್ರ ಸರ್ಕಾರ ರಚನೆಯಾಗುವ ಸನ್ನಿವೇಶ ಎದುರಾಯಿತು. ಜಾ.ದಳಕ್ಕೆ ಸಿಎಂ ಹುದ್ದೆ ದೊರೆಯುವ ಸನ್ನಿವೇಶವಿದ್ದರೂ ಕಾಂಗ್ರೆಸ್‌ನ ಧರ್ಮಸಿಂಗ್ ಅವರಿಗೆ ಅದೃಷ್ಟ ಖುಲಾಯಿಸಿತು. ಒಲ್ಲದ ಮನಸಿನಿಂದಲೇ ಉಪಮುಖ್ಯಮಂತ್ರಿ ಹುದ್ದೆ ಒಪ್ಪಿದ್ದ ಸಿದ್ದರಾಮಯ್ಯ ನಂತರ ಜಾ.ದಳಕ್ಕೆ ವಿದಾಯ ಹೇಳಿ ಎಪಿಬಿಜೆಡಿ ಆರಂಭಿಸಿ ನಂತರ ಕಾಂಗ್ರೆಸ್ ಸೇರಿದರು.

ಕಾಂಗ್ರೆಸ್ ಹಾದಿಯಲ್ಲೂ ನಿರಂತರ ಅಧಿಕಾರ

ಇದಾದ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ ಉಪಚುನಾವಣೆಯಲ್ಲಿ ಗೆದ್ದರು. 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿದರು. ಆಗ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕನ್ನಾಗಿ ನೇಮಿಸಲಾಯಿತು. ಆಗ ಬೇಸರಗೊಂಡ ಸಿದ್ದರಾಮಯ್ಯ ಎಪಿಬಿಜೆಡಿ ಮರುಸ್ಥಾಪನೆಗೆ ಯೋಚಿಸುತ್ತಿದ್ದರು. ಬಂಡಾಯದ ಬಿಸಿ ಅರಿತ ಪಕ್ಷ 2009ರಲ್ಲಿ ಸಿದ್ದರಾಮಯ್ಯರಿಗೆ ಶಾಸಕಾಂಗ ಪಕ್ಷ ಹಾಗೂ ಪ್ರತಿಪಕ್ಷ ನಾಯಕನ್ನಾಗಿ ನೇಮಿಸಿತು. ಖರ್ಗೆ ಅವರು ರಾಷ್ಟ ರಾಜಕಾರಣದತ್ತ ಮುಖ ಮಾಡಿದರು. 2013ಕ್ಕೂ ಮುನ್ನ ಸಿದ್ದರಾಮಯ್ಯ ಕೈಗೊಂಡ ಬಳ್ಳಾರಿ ಪಾದಯಾತ್ರೆ ಪಕ್ಷಕ್ಕೆ ಬಲತುಂಬಿ ಅಧಿಕಾರಕ್ಕೂ ತಂದಿತು. 2013ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಸೋತಿದ್ದರು. ಆಗ ಸಿದ್ದರಾಮಯ್ಯಗೆ ಒಲಿದಿದ್ದು ಮುಖ್ಯಮಂತ್ರಿ ಗಾದಿ. ಐದು ವರ್ಷ ಸಂಪೂರ್ಣ ಆಡಳಿತ ನೀಡಿದ ಸಿದ್ದರಾಮಯ್ಯ ಆಗ ಲಿಂಗಾಯಿತ ಸಮುದಾಯ ವಿಭಜನೆಗೆ ಕೈಹಾಕಿದರು ಎನ್ನುವ ಅಸಮಾಧಾನ ಎದುರಿಸಬೇಕಾಯಿತು. ಕಾಂಗ್ರೆಸ್ ಕೂಡ ಸೋಲನ್ನಪ್ಪಿತು.

2018ರಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಬಂದರೂ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದಿತು. ಆಗ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಖುದ್ದು ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್ ಹೈಕಮಾಂಡ್ ಬೆಂಬಲ ಘೋಷಿಸಿತು. 14 ತಿಂಗಳಲ್ಲೇ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು. ಸಿದ್ದರಾಮಯ್ಯ 2ನೇ ಬಾರಿಗೆ ಪ್ರತಿಪಕ್ಷ ನಾಯಕರಾದರು. ಆಗಲೂ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರ ಪರೋಕ್ಷ ಬೆಂಬಲವಿದೆ ಎನ್ನುವ ಆರೋಪಗಳು ಕೇಳಿ ಬಂದು ಈಗಲೂ ಮುಂದುವರೆದಿವೆ.

ವಯಸ್ಸು 75 ಆಗಿದ್ದರೂ ಚುರುಕಿನಿಂದಲೇ ಡಿಕೆ ಶಿವಕುಮಾರ್ ಮತ್ತಿತರರ ಜತೆಗೆ ರಾಜ್ಯ ಸುತ್ತಿದ ಸಿದ್ದರಾಮಯ್ಯ ಮತ್ತೆ ಸಿಎಂ ಗಾದಿಗೆ ಏರಿದ್ದಾರೆ. ಸಣ್ಣ ಹಳ್ಳಿಯ ಸಾಮಾನ್ಯ ಕುಟುಂಬದಿಂದ ಬಂದು ಮೂರು ಹುದ್ದೆಗಳನ್ನು ಎರಡೆರಡು ಬಾರಿ ಪಡೆದುಕೊಂಡಿರುವುದು ಸಿದ್ದರಾಮಯ್ಯ ಅವರ ರಾಜಕೀಯ ಸಾಮರ್ಥ್ಯವನ್ನು ತೋರುತ್ತದೆ. ಈ ಬಾರಿ ಅವರಿಗೆ ಅಧಿಕಾರ ಎಷ್ಟು ಸಮಯ?. ಕಾಲವೇ ಉತ್ತರಿಸಬೇಕು.

ಫೀನಿಕ್ಸ್ನಂತೆ ಮೇಲೆದ್ದರು

2009ರಲ್ಲಿ ಜಾತ್ಯತೀತ ಜನತಾದಳ ತೊರೆದು ಅಹಿಂದ ಸಂಘಟನೆ ಬಲಪಡಿಸಿ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯಕ್ಕೆ ಸವಾಲಾದ ವರ್ಷ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನತಾಪರಿವಾರದಿಂದಲೇ ಗೆಲ್ಲುತ್ತಾ ಬರುತ್ತಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆಗ ಜಾ.ದಳ ಬಿಜೆಪಿ ಸಮ್ಮಿಶ್ರ ಸರ್ಕಾರ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿಯಾಗಿ ಪ್ರಚಾರ ಕೈಗೊಂಡರು. ಸಿದ್ದರಾಮಯ್ಯ ಅವರ ಗೆಲುವು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಯಿತು. ಆದು ಚುನಾವಣೆ ದಿನ ಮಾತ್ರವಲ್ಲ. ಫಲಿತಾಂಶದ ದಿನ ಇದು ಸಾಬೀತಾಯಿತು. ತಮ್ಮನ್ನು ನಂಬಿದ್ದ ಜನರೇ ಕೈ ಹಿಡಿದಿದ್ದರಿಂದ ಬರೀ 257 ಮತಗಳ ಅಂತರದಿಂದ ಸಿದ್ದರಾಮಯ್ಯ ಗೆದ್ದರು. ಫೀನಿಕ್ಸ್ನಂತೆ ಮೇಲೆದ್ದು ಬಂದು ಎರಡು ಬಾರಿ ಪ್ರತಿಪಕ್ಷ ನಾಯಕ, ಎರಡು ಬಾರಿ ಸಿಎಂ ಆಗುವ ಅವಕಾಶವನ್ನು ಪಡೆದರು.

ಅಹಿಂದ ಬಲ

ಸಿದ್ದರಾಮಯ್ಯ ಅವರ ರಾಜಕೀಯ ಜೀವನದುದ್ದಕ್ಕೂ ಜತೆಯಾಗಿರುವುದು ಅಹಿಂದ ಸಮುದಾಯವೇ. ಮೇಲ್ವರ್ಗದ ವಿರೋಧಿ ಎಂಬಂತೆ ಸಿದ್ದರಾಮಯ್ಯ ಅವರನ್ನು ಬಿಂಬಿಸಲು ಅವರ ನೀತಿ-ನಿಲುವುಗಳು ಕಾರಣವಾದರೂ ಆ ವರ್ಗಗಳು ಅಲ್ಪ ಪ್ರಮಾಣದಲ್ಲಿ ಕೈಹಿಡಿಯುತ್ತಾ ಬಂದಿವೆ. ಆದರೂ ನಾಲ್ಕು ದಶಕದ ಉದ್ದಕ್ಕೂ ಅವರು ಪ್ರಮುಖ ಅಹಿಂದ ನಾಯಕರಾಗಿಯೇ ಗುರುತಿಸಿಕೊಂಡು ಬಂದಿದ್ದಾರೆ. ಜನತಾಪರಿವಾರದ ಸರ್ಕಾರಗಳಲ್ಲಿ ಸಿದ್ದರಾಮಯ್ಯ ಸಚಿವರಾಗುವ ಜತೆಗೆ ಒಂದು ರ‍್ಯಾಯ ಶಕ್ತಿಯಾಗಿದ್ದುಕೊಂಡು ಬಂದಿದ್ದಾರೆ. ಕುರುಬ ಸಮುದಾಯದ ನಾಯಕರಾದರೂ ಮುಸ್ಲೀಂ, ದಲಿತ ಸಹಿತ ಬೇರೆ ಬೇರೆ ದನಿ ಇಲ್ಲ ಸಣ್ಣಪುಟ್ಟ ಸಮುದಾಯಗಳೂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿವೆ. ಹೆಚ್ಚು ಶಾಸಕರೂ ಇದೇ ವರ್ಗದಿಂದ ಗೆದ್ದು ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯಾಗಿದ್ದಾರೆ.

ಹಣಕಾಸು ಸಚಿವ ದಾಖಲೆ

ರಾಜ್ಯದಲ್ಲಿ ಒಟ್ಟು 13 ಬಾರಿ ಬಜೆಟ್ ಮಂಡಿಸಿ ರಾಮಕೃಷ್ಣ ಹೆಗಡೆ ಅವರ ದಾಖಲೆ ಸರಿಗಟ್ಟಿರುವ ಸಿದ್ದರಾಮಯ್ಯ ಈ ಬಾರಿ ಮತ್ತೆ ಬಜೆಟ್ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ