Ayodhya news: ಅಯೋಧ್ಯೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೂಮಿ ಪೂಜೆ
Jan 19, 2024 11:31 AM IST
Ayodhya news: ಅಯೋಧ್ಯೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೂಮಿ ಪೂಜೆ
- Ganapati Satchidananda Ashram: ಮೈಸೂರಿನ ಶ್ರೀ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪೀಠಾಧೀಶರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು 81ನೇ ಜನ್ಮದಿನದ ಅಂಗವಾಗಿ ಅಯೋಧ್ಯೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಮೈಸೂರು: ನಗರದ ಶ್ರೀ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪೀಠಾಧೀಶರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು 81ನೇ ಜನ್ಮದಿನದ ಅಂಗವಾಗಿ ಅಯೋಧ್ಯೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಗೆ ಶ್ರೀಗಳು ಭೂಮಿಪೂಜೆ ನೆರವೇರಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಹೌದು..ಗಣಪತಿ ಸಚ್ಚಿದಾನಂದ ಆಶ್ರಮದ ಸ್ವಾಮೀಜಿಗಳು ಈ ಬಾರಿ ಅಯೋಧ್ಯೆಯಲ್ಲಿ ಅತ್ಯಂತ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬೆಳಗಿನಿಂದಲೇ ಅಯೋಧ್ಯೆಯಲ್ಲಿ ವಿಶೇಷ ಪೂಜಾಕಾರ್ಯಗಳು, ಹೋಮಗಳು ನೆರವೇರಿತು. ಬೆಳಗ್ಗೆ 8.30ಕ್ಕೆ ಸರಿಯಾಗಿ ಸ್ವಾಮೀಜಿ ಶಾಖಾ ಮಠದ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಗಣಪತಿ ಸಚ್ಛಿದಾನಂದ ಸ್ವಾಮೀಜಿಯವರು, ಅಯೋಧ್ಯೆ ವಿಷ್ಣುವಿನ ಅವತಾರವಾದ ಶ್ರೀರಾಮ ಹುಟ್ಟಿದ ಪುಣ್ಯಕ್ಷೇತ್ರವಾಗಿದೆ. ಶ್ರೀರಾಮ ಧರ್ಮದಿಂದ ರಾಜ್ಯವನ್ನು ಆಳಿ ರಾಮರಾಜ್ಯ ಮಾಡಿದ್ದಂತಹ ಪುಣ್ಯಭೂಮಿಯಲ್ಲಿ ನಮ್ಮ ಆಶ್ರಮ ಮಾಡುತ್ತಿರುವುದು ಅತ್ಯಂತ ಖುಷಿಯ ಸಂಗತಿ. ಬಹಳಷ್ಟು ಭಕ್ತರು ಭೂಮಿ ಪೂಜೆ ಕಾರ್ಯದಲ್ಲಿ ಹಾಗೂ ನನ್ನ ಹುಟ್ಟುಹಬ್ಬದಲ್ಲಿ ಅಭಿನಂದಿಸಲು ಬರುವುದಾಗಿ ಒತ್ತಡ ಹೇರಿದ್ದರು. ಆದರೆ ನಾನೇ ಈ ಬಾರಿ ಬೇಡ ಎಂದು ಹೇಳಿದ್ದೇನೆ. ಏಕೆಂದರೆ ಬಿಸಿಲು ಬಹಳಷ್ಟು ಕಾಡುತ್ತಿದೆ. ಭಕ್ತರಿಗೆ ತೊಂದರೆ ಆಗಬಾರದು. ಈ ಉದ್ದೇಶದಿಂದ ಹಾಗೆ ಹೇಳಿದ್ದೇನೆ. ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಲಾಗಿದೆ. ಆದರೆ ನಮ್ಮ ಆಶ್ರಮದ ಶಾಖೆ ಇಲ್ಲಿ ಪ್ರಾರಂಭವಾಗುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
ಇಡೀ ವಿಶ್ವಕ್ಕೆ ಆರೋಗ್ಯ ಭಾಗ್ಯವನ್ನು ದೇವರು ಕರುಣಿಸಿ ಎಲ್ಲ ಪ್ರಜೆಗಳು ಸುಖ ಸಂತೋಷದಿಂದ ಇರಬೇಕೆಂದು ಪ್ರಾರ್ಥಿಸಿದ್ದೇನೆ. ಲೋಕ ಕಲ್ಯಾಣಾರ್ಥವಾಗಿ ಇಂದು ಪೂಜೆಯನ್ನು ನೆರವೇರಿಸಲಾಗಿದೆ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು. ಈ ಸಂದರ್ಭದಲ್ಲಿ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿ, ಅಯೋಧ್ಯೆಯ ಸಂಸದ ಲಲ್ಲೂ ಸಿಂಗ್, ಅಯೋಧ್ಯೆಯ ಮಹಾರಾಜ ಬಿಮಲೇಂದ್ರ ಮೋಹನ್ ಪ್ರತಾಪ ಮಿಶ್ರ, ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಕೋಶಾಧಿಕಾರಿ ಸ್ವಾಮಿ ಗೋವಿಂದ ದೇವ್ ಗಿರಿ ಸೇರಿದಂತೆ ಹಲವಾರು ಮತ್ತು ಭಕ್ತರು ಪಾಲ್ಗೊಂಡಿದ್ದರು.
ಸಾಮಾನ್ಯವಾಗಿ ಪ್ರತಿ ವರ್ಷ ಸ್ವಾಮೀಜಿ ಅವರ ಜನ್ಮದಿನವನ್ನು ಮೈಸೂರಿನ ಅವಧೂತ ದತ್ತಪೀಠದಲ್ಲಿ ಮಾಡಲಾಗುತಿತ್ತು. ಹುಟ್ಟುಹಬ್ಬದ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಆಶ್ರಮದ ಆವರಣದಲ್ಲಿರುವ ದೇವಾಲಯಗಳಲ್ಲಿ ದೇವರುಗಳಿಗೆ ವಿಶೇಷ ಪೂಜೆಗಳು ನಡೆಯುತ್ತಿದ್ದವು. ಈ ಬಾರಿ ಸ್ವಾಮೀಜಿಯವರ ಅನುಪಸ್ಥಿತಿಯಲ್ಲಿ ಅವಧೂತ ದತ್ತಪೀಠದಲ್ಲಿ ಶ್ರೀಗಳ ಜನ್ಮದಿನದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನೆರೆವೇರಿವೆ.