logo
ಕನ್ನಡ ಸುದ್ದಿ  /  ಕರ್ನಾಟಕ  /  Sandur Assembly Elections: ಗಣಿ ಧೂಳು, ಹಸಿರ ತಾಣ ಸಂಡೂರಿನಲ್ಲಿ ಚುನಾವಣೆ ಗದ್ದಲ, ಇಂದು ಮತದಾನ, ಹೇಗಿದೆ ಮಹಾರಾಜರ ಊರಿನ ತಯಾರಿ

Sandur Assembly Elections: ಗಣಿ ಧೂಳು, ಹಸಿರ ತಾಣ ಸಂಡೂರಿನಲ್ಲಿ ಚುನಾವಣೆ ಗದ್ದಲ, ಇಂದು ಮತದಾನ, ಹೇಗಿದೆ ಮಹಾರಾಜರ ಊರಿನ ತಯಾರಿ

Umesha Bhatta P H HT Kannada

Nov 13, 2024 06:55 AM IST

google News

ಹಸಿರು ಗಣಿ ಧೂಳಿನ ನಡುವೆ ಸಂಡೂರಿನಲ್ಲಿ ಉಪಚುನಾವಣೆ ಮತದಾನ ಬುಧವಾರ ನಡೆಯಲಿದೆ.

    • ಸಂಡೂರು ವಿಧಾನಸಭಾ ಕ್ಷೇತ್ರ ಮಹಾರಾಜರ ಮಹತ್ವದ ಊರು. ಹಸಿರು ತಾಣಗಳ ಊರಿನಲ್ಲಿ ಈಗ ಉಪಚುನಾವಣೆ ಸಮರ. ಬುಧವಾರ ಮತದಾನಕ್ಕಾಗಿ ಸಂಡೂರು ತಾಲ್ಲೂಕಿನಲ್ಲಿ ಸಿದ್ದತೆಗಳು ಪೂರ್ಣಗೊಂಡಿವೆ. 
ಹಸಿರು ಗಣಿ ಧೂಳಿನ ನಡುವೆ ಸಂಡೂರಿನಲ್ಲಿ ಉಪಚುನಾವಣೆ ಮತದಾನ ಬುಧವಾರ ನಡೆಯಲಿದೆ.
ಹಸಿರು ಗಣಿ ಧೂಳಿನ ನಡುವೆ ಸಂಡೂರಿನಲ್ಲಿ ಉಪಚುನಾವಣೆ ಮತದಾನ ಬುಧವಾರ ನಡೆಯಲಿದೆ.

ಬಳ್ಳಾರಿ: ಒಂದು ಕಾಲಕ್ಕೆ ಘೋರ್ಪಡೆ ಮಹಾರಾಜರ ಪ್ರಮುಖ ನೆಲೆಯಾಗಿದ್ದ ಸಂಡೂರು ಹಸಿರಿನ ಬೆಟ್ಟ ಗುಡ್ಡಗಳು, ಪ್ರಮುಖ ಪ್ರವಾಸಿ ತಾಣಗಳಿಂದಲೂ ಪ್ರಸಿದ್ದಿ. ಇತ್ತೀಚಿನ ವರ್ಷಗಳಲ್ಲಿ ಗಣಿ ಗದ್ದಲದಿಂದ ನಲುಗಿದ್ದರೂ ಸಂಡೂರಿನ ಮಹತ್ವ ತಗ್ಗಿಲ್ಲ. ಹಳೆಯ ವೈಭವದೊಂದಿಗೆ ಸಂಡೂರು ಹಿರಿಮೆ ಉಳಿಸಿಕೊಂಡಿದೆ. ಇದರ ನಡುವೆಯೇ ಸಂಡೂರಿನಲ್ಲಿ ಈಗ ಉಪಚುನಾವಣೆ ಗದ್ದಲ. ಪ್ರಮುಖ ನಾಯಕರ ರಾಜಕೀಯ ಜಿದ್ದಾಜಿದ್ದಿ, ಭಾಷಣದಿಂದಾಗಿ ಇಲ್ಲಿ ರಾಜಕೀಯ ಧೂಳು ಕೊಂಚ ಜೋರಾಗಿಯೇ ಕಾಣಿಸುತ್ತಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 2024ರ ಬುಧವಾರ ಮತದಾನ ನಡೆಯಲಿದ್ದು, ಇದಕ್ಕಾಗಿ ಬಳ್ಳಾರಿ ಜಿಲ್ಲಾಡಳಿತ ಹಾಗೂ ಸಂಡೂರು ತಾಲ್ಲೂಕು ಆಡಳಿತ ಸಿದ್ದತೆಗಳನ್ನು ಮಾಡಿಕೊಂಡಿವೆ.

ಸಂಡೂರು ಕ್ಷೇತ್ರ ಮಹಿಮೆ

ಬಳ್ಳಾರಿ ಜಿಲ್ಲೆಯಲ್ಲಿಯೇ ವಿಶಿಷ್ಟ ಹಿನ್ನೆಲೆಯ ಊರು ಸಂಡೂರು. ಇದು ಘೋರ್ಪಡೆ ಮಹಾರಾಜರ ಕ್ಷೇತ್ರ. ಸಂಡೂರು ಸಂಸ್ಥಾನ ಆಗಲೇ ಪ್ರಸಿದ್ದಿಯಾಗಿತ್ತು. ಈ ಕ್ಷೇತ್ರವನ್ನು ಆ ಕುಟುಂಬದವರು ಹೆಚ್ಚು ಪ್ರತಿನಿಧಿಸಿದ್ದಾರೆ. ಅದರಲ್ಲೂ ಸಂಡೂರು ಮಹಾರಾಜರ ಪುತ್ರರಾಗಿದ್ದ ಎಂ.ವೈ, ಘೋರ್ಪಡೆ ಆರು ಬಾರಿ ಇಲ್ಲಿಂದ ಶಾಸಕರಾಗಿ, ಎರಡು ಬಾರಿ ಸಚಿವರಾಗಿಯೂ ಕೆಲಸ ಮಾಡಿದವರು.

ಸಮಾಜವಾದಿ ಹಿನ್ನೆಲೆಯ ಯು. ಸಭಾಪತಿ ಕೂಡ ಗೆದ್ದಿದ್ದಾರೆ. ಒಮ್ಮೆ ಹೀರಾಜಿಲಾಡ್‌, ಮತ್ತೊಮ್ಮೆ ಸಂತೋಷ್‌ ಲಾಡ್‌ ಗೆಲುವು ಕಂಡಿದ್ಧಾರೆ. ಒಂದೂವರೆ ದಶಕದ ಹಿಂದೆ ಸಂಡೂರು ಪರಿಶಿಷ್ಟ ಪಂಗಡ ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ಆಗಿನಿಂದಲೂ ಇಲ್ಲಿ ಗೆದ್ದವರು ತುಕಾರಾಂ. ನಾಲ್ಕು ಬಾರಿ ಗೆದ್ದ ಅವರು ಸಚಿವರೂ ಆಗಿದ್ದರು. ಈಗ ಸಂಸದರಾಗಿ ತುಕಾರಾಂ ಆಯ್ಕೆಯಾಗಿದ್ದರಿಂದ ತೆರವಾದ ಕ್ಷೇತ್ರದಲ್ಲಿ ಮರು ಚುನಾವಣೆ ಎದುರಾಗಿದೆ.

ಅಭ್ಯರ್ಥಿಗಳು ಯಾರು

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ಆರು ಮಂದಿ ಕಣದಲ್ಲಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನಿಂದ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ, ಬಿಜೆಪಿಯಿಂದ ಬಂಗಾರು ಹನುಮಂತು ಕಣದಲ್ಲಿದ್ದಾರೆ.

ಭರ್ಜರಿ ಪ್ರಚಾರ

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಭರ್ಜರಿ ಪ್ರಚಾರವೇ ನಡೆಯಿತು. ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ , ಸಚಿವ ಸಂತೋಷ್‌ ಲಾಡ್‌ ಸಹಿತ ಹಲವರು ಪ್ರಚಾರ ಕೈಗೊಂಡರು.

ಬಿಜೆಪಿಯೂ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಇಲ್ಲಿ ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಪಕ್ಷದ ಸಾರಥ್ಯ ವಹಿಸಿದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಸಹಿತ ಹಲವರು ಪ್ರಚಾರ ನಡೆಸಿದರು.

ಮತದಾನಕ್ಕೆ ಹೇಗಿದೆ ತಯಾರಿ

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಪುರುಷರಿಗಿಂತ ಅಧಿಕ. ಒಟ್ಟು 2,36,100 ಮತದಾರರಿದ್ದು, ಇದರಲ್ಲಿ 1,18,282 ಮಹಿಳೆಯರಿದ್ದರೆ, 1,17,789 ಪುರುಷ ಮತದಾರರು ಇದ್ದಾರೆ. ಇತರೆ ಮತದಾರರ ಸಂಖ್ಯೆ 29.

ಸಂಡೂರು ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆ ಸ್ಥಾಪಿಸಲಾಗಿದೆ. 253ರಲ್ಲಿ 55 ಮತಗಟ್ಟೆಗಳು ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಇಲ್ಲಿ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಒಟ್ಟು 608 ಮತಗಟ್ಟೆ ಅಧಿಕಾರಿಗಳು ಒಳಗೊಂಡಂತೆ 1,215 ಸಿಬ್ಬಂದಿಯನ್ನು ಮತದಾನ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಮತದಾನ ಕರ್ತವ್ಯಕ್ಕಾಗಿ 304 ಪಿಆರ್​ಒ, 304 ಎಪಿಆರ್​ಒಗಳು ಇದ್ದಾರೆ. ಸಂಡೂರು ಕ್ಷೇತ್ರಾದ್ಯಂತ ಸೂಕ್ಷ್ಮ ಮತಗಟ್ಟೆಯೂ ಸೇರಿ ಒಟ್ಟು ಭದ್ರತೆಗಾಗಿ 344 ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಇದು ಆಂಧ್ರ ಹಾಗೂ ತೆಲಂಗಾಣದ ಗಡಿ ಭಾಗ ಹೊಂದಿರುವುದರಿಂದ ಕ್ಷೇತ್ರದಲ್ಲಿ 2 ಅಂತಾರಾಜ್ಯ ಸೇರಿ 8 ಚೆಕ್​ಪೋಸ್ಟ್ ರಚಿಸಲಾಗಿದೆ ಎನ್ನುವುದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರ ವಿವರಣೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ