ಬಿಜೆಪಿ ಶಾಸಕ ಮುನಿರತ್ನ ಹನಿಟ್ರ್ಯಾಪ್ ಗೆ ಸಹಕಾರ; ಬೆಂಗಳೂರಿನ ಪೊಲೀಸ್ ಇನ್‌ಸ್ಪೆಕ್ಟರ್ ಐಯಣ್ಣ ರೆಡ್ಡಿ ಬಂಧನ
Nov 14, 2024 11:24 PM IST
ಬೆಂಗಳೂರಿನ ಬಿಜೆಪಿ ಶಾಸಕ ಮುನಿರತ್ನ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಐಯ್ಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದೆ.
- ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ದ ದಾಖಲಾಗಿರುವ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಐಯ್ಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದೆ.
- ವರದಿ: ಎಚ್.ಮಾರುತಿ.ಬೆಂಗಳೂರು
ಬೆಂಗಳೂರು: ಬಿಜೆಪಿ ಮುಖಂಡ ಶಾಸಕ ಮುನಿರತ್ನ ಅವರು ನಡೆಸಿದ್ದಾರೆ ಎನ್ನಲಾದ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಂಚು ರೂಪಿಸಿದ್ದ ಆರೋಪದ ಅಡಿಯಲ್ಲಿ ಹೆಬ್ಬಗೋಡಿ ಪೊಲೀಸ್ ಇನ್ ಸ್ಪೆಕ್ಟರ್ ಐಯಣ್ಣ ರೆಡ್ಡಿ ಅವರನ್ನು ಸಿಐಡಿ ವಿಶೇಷ ತನಿಖಾ ದಳ (ಎಸ್ ಐಟಿ) ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಐಯಣ್ಣ ರೆಡ್ಡಿ ಅವರನ್ನು ಎಸ್ ಐಟಿ ವಶಕ್ಕೆ ಪಡೆದಿದೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಐಯಣ್ಣ ಅವರನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಷರತ್ತುಬದ್ದ ಜಾಮೀನಿನ ಮೇಲೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಏನಿದು ಪ್ರಕರಣ
ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ, ಬಿಬಿಎಂಪಿ ಗುತ್ತಿಗೆದಾರರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣ ಮತ್ತು ಜಾತಿ ನಿಂದನೆ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್ ಐಟಿಗೆ ವಹಿಸಿತ್ತು.
ಐಯಣ್ಣ ರೆಡ್ಡಿ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ರಾಜಗೋಪಾಲ ನಗರ, ಯಶವಂತಪುರ ಮತ್ತು ಪೀಣ್ಯ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರು ಬಹುತೇಕ ಮುನಿರತ್ನ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲೇ ಕರ್ತವ್ಯ ನಿರ್ವಹಿಸಿದ್ದಾರೆ ಎನ್ನುವುದು ವಿಶೇಷ.
ಮುನಿರತ್ನ ನಡೆಸುತ್ತಿದ್ದ ಹನಿಟ್ರ್ಯಾಪ್ ಗೆ ಐಯಣ್ಣ ರೆಡ್ಡಿ ಸಹಕಾರ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಅಲ್ಲದೆ ಕೆಲವು ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ನೀಡಲು ಸಂಚು ರೂಪಿಸಿದ್ದ ಸಂಗತಿ ತಿಳಿದಿದ್ದರೂ ಇನ್ ಸ್ಪೆಕ್ಟರ್ ಐಯಣ್ಣ ಗುಟ್ಟು ಕಾಪಾಡಿದ್ದರು ಎಂಬ ಆರೋಪದಡಿಯಲ್ಲಿ ಐಯಣ್ಣ ಅವರನ್ನು ಬಂಧಿಸಲಾಗಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಈ ಪ್ರಕರಣದ ಸಂತ್ರಸ್ತೆ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಅವರನ್ನು ಕೆಲವು ದಿನಗಳ ಹಿಂದೆ ವಿಚಾರಣೆಗೊಳಪಡಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಇನ್ ಸ್ಪೆಕ್ಟರ್ ಒಳಸಂಚು ರೂಪಿಸಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನಾಧರಿಸಿ ಐಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ ವಿರುದ್ಧದ ಎಫ್ ಐಆರ್ ಗೆ ತಡೆ ನೀಡಿದ ಹೈಕೋರ್ಟ್
ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ತೋರಿಸಿದ್ದಕ್ಕೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರನಗಿರಿ ರೈತ ಚನ್ನಪ್ಪ ಬಾಳಿಕಾಯಿ ರುದ್ರಪ್ಪ ಆತ್ಮಹತ್ಯೆ
ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ದ ದಾಖಲಿಸಿದ್ದ ಎಫ್ ಐ ಆರ್ ಗೆ ಹೈಕೋರ್ಟ್ ತಡೆ ನೀಡಿದೆ.
ಈ ಸಂಬಂಧ ಹಾವೇರಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ,ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಪರ ವಕೀಲರು ಇದು ದುರುದ್ಧೇಶದಿಂದ ಕೂಡಿರುವ ಎಫ್ ಐಆರ್. ಮತ್ತು ಕಾನೂನುಬಾಹಿರ ಎಂದು ವಾದಿಸಿದ್ದರು. ಪೊಲೀಸರು ಸ್ಪಷ್ಟನೆ ನೀಡಿದ ಬಳಿಕ ಟ್ವೀಟ್ ಅನ್ನು ರದ್ದುಪಡಿಸಲಾಗಿದೆ. ಮೇಲ್ನೋಟಕ್ಕೆ ಇದು ಅಪರಾಧ ಆಗುವುದಿಲ್ಲ. ಅರ್ಜಿದಾರರು ಜವಬ್ದಾರಿಯುತ ಸಂಸದರಾಗಿದ್ದು, ಯಾವುದೇ ಸಮುದಾಯಗಳ ನಡುವೆ ಕೋಮುದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಆದ್ದರಿಂದ ಎಫ್ ಐಆರ್ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು. ಇವರ ವಾದಕ್ಕೆ ರಾಜ್ಯ ಪ್ರಾಸಿಕ್ಯೂಟರ್ ಬೆಳ್ಳಿಯಪ್ಪ ಆಕ್ಷೇಪ ವ್ಯಕ್ತಪಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಎಫ್ ಐಆರ್ ಗೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿತು.
(ವರದಿ: ಎಚ್.ಮಾರುತಿ ಬೆಂಗಳೂರು)