Bangalore Building Collapse: ಬೆಂಗಳೂರಲ್ಲಿ ಕಟ್ಟಡ ಕುಸಿತ; ಸಾವಿನ ಸಂಖ್ಯೆ 5ಕ್ಕೆ ಏರಿಕೆ, ಮೃತರು ಎಲ್ಲಿಯವರು
Oct 23, 2024 11:00 AM IST
ಬೆಂಗಳೂರಿನಲ್ಲಿ ಕುಸಿದು ಬಿದ್ದಿರುವ ನಿರ್ಮಾಣ ಹಂತದಲ್ಲಿದ್ದ ಕಟ್ಟಡ.
- Bangalore Building Collapse: ಬೆಂಗಳೂರಿನ ವಡ್ಡರಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದವರ ಗುರುತು ಪತ್ತೆ ಹಚ್ಚಲಾಗಿದೆ.ಐವರ ದೇಹಗಳು ಪತ್ತೆಯಾಗಿದ್ದು,ಇನ್ನೂ ಕೆಲವರು ಸಿಲುಕಿರುವ ಶಂಕೆಯಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಅವಶೇಷಗಳ ನಡುವೆ ಸಿಲುಕಿದ್ದವರಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬುಧವಾರ ಬೆಳಿಗ್ಗೆಯಿಂದಲೂ ಕಾರ್ಯಾಚರಣೆ ತೀವ್ರಗೊಂಡಿದ್ದು. ಐವರ ದೇಹಗಳನ್ನು ಅಗ್ನಿ ಶಾಮಕದಳ ಹಾಗೂ ಇತರೆ ವಿಪತ್ತು ನಿರ್ವಹಣಾ ಘಟಕಗಳ ತಂಡಗಳು ಪತ್ತೆ ಮಾಡಿವೆ. ಇನ್ನೂ ಹಲವರು ಕಟ್ಟಡದ ಅವಶೇಷಗಳ ಅಡಿ ಸಿಲುಕಿರುವ ಆತಂಕವಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಈವರೆಗೂ ಹದಿಮೂರು ಜನರನ್ನು ರಕ್ಷಿಸಲಾಗಿದೆ. ಇಂದೂ ಮತ್ತೆ ಮಳೆ ಬಂದರೆ ಹೇಗೆ ಎನ್ನುವ ಆತಂಕದಲ್ಲಿಯೇ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.
ಬೆಂಗಳೂರಿನ ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದ ವಡ್ಡರಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿತ್ತು. ಆರು ಮಹಡಿಯ ಬೃಹತ್ ಕಟ್ಟಡದ ಕೆಲಸ ಮಳೆಯ ನಡುವೆಯೂ ಮುಂದುವರಿದಿತ್ತು. ಈ ವೇಳೆ ಕಟ್ಟಡ ಏಕಾಏಕಿ ಕುಸಿದಿದ್ದರಿಂದ ಹಲವರು ಅವಶೇಷಗಳ ಅಡಿ ಸಿಲುಕಿದ್ದರು. ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು. ಮೃತರನ್ನು ಅರ್ಮಾನ್, ತ್ರಿಪಾಲಿ, ಮೊಹಮ್ಮದ್ ದಾಹಿಲ್, ಶಂಕರ್ , ಸತ್ಯರಾಜ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಹೆಚ್ಚಿನ ಪಾಲು ಉತ್ತರ ಭಾರತದವರು. ತಮಿಳುನಾಡಿನವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಭಾರತದವರೇ ಅಧಿಕ
ಆಂಧ್ರ ಮೂಲದವರು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದು ಕಟ್ಟಡದ ಶೇ. 70 ರಷ್ಟು ಕೆಲಸ ನಡೆದಿತ್ತು. ಉತ್ತರ ಭಾರತದ ಬಿಹಾರ, ತಮಿಳುನಾಡು, ಆಂಧ್ರ ಪ್ರದೇಶದವರೂ ಸೇರಿದಂತೆ ನಾನಾ ರಾಜ್ಯದವರು ಅಲ್ಲಿ ಕೆಲಸದಲ್ಲಿ ತೊಡಗಿದ್ದರು. ಭಾರೀ ಮಳೆಯಿಂದ ಕಟ್ಟಡ ಏಕಾಏಕಿ ಕುಸಿದಿದೆ. ಕೆಲಸದಲ್ಲಿ ತೊಡಗಿದ್ದ 20 ಮಂದಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದರು. ಸತತ ಕಾರ್ಯಾಚರಣೆ ನಡೆಸಿ ಕೆಲವರನ್ನು ರಕ್ಷಿಸಲಾಗಿತ್ತು. ಇನ್ನೂ ಕೆಲವರು ಪತ್ತೆಯಾಗಿರಲಿಲ್ಲ. ಕೊನೆಗೂ ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಕಾರ್ಯಾಚರಣೆ ಉಸ್ತುವಾರಿ ಹೊತ್ತಿರುವ ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಮೃತರ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು. ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತಿದೆ.
ಯಾದಗಿರಿಯ ಜಯಮ್ಮ, ಮಲ್ಲಪ್ಪ, ನಾಗರಾಜು, ಬಿಹಾರದ ರಮೇಶ್‌ಕುಮಾರ್, ಪಾಸ್ವಾನ್ ಎಂಬುವವರಿಗೆ ಗಾಯಗಳಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಇಬ್ಬರು ಕಾಣೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆದಿದೆ.
ಡಿಕೆಶಿ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರಿನಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಕಟ್ಟಲಾಗಿರುವ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ. ಈ ಘಟನೆ ನಮಗೊಂದು ಪಾಠ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸಬಾರದು ಈ ನಿಟ್ಟಿನಲ್ಲಿ ಕಟ್ಟಡಗಳಿಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ, ನಿರ್ಮಾಣ ಹಂತದ ಕಟ್ಟಡಗಳ ಮೇಲೆ ನಿಗಾ ಇಡಲು ತಂಡವನ್ನು ನಿಯೋಜಿಸಲಾಗುವುದು ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಮ್ಮನಹಳ್ಳಿಯ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಘಟನಾ ಸ್ಥಳಕ್ಕೆ ನಿನ್ನೆ ರಾತ್ರಿ ಭೇಟಿ ನೀಡಿ ಪರಿಶೀಲಿಸಿದೆ. 60/40 ಜಾಗದಲ್ಲಿ ಈ ರೀತಿ ಅಕ್ರಮವಾಗಿ ಕಟ್ಟಡ ಕಟ್ಟಿರುವುದೇ ಮಹಾಪರಾಧ. ಮೇಲ್ನೋಟದಲ್ಲೇ ಕಟ್ಟಡದ ಮಾಲೀಕರು ಪ್ಲಾನ್ ಅಪ್ರೂವಲ್ ಇಲ್ಲದೇ ಕಟ್ಟಡ ಕಟ್ಟುತ್ತಿರುವುದು ತಿಳಿದುಬಂದಿದ್ದು, ತಪ್ಪತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಐವರು ಮೃತಪಟ್ಟಿರುವುದು ದೃಢವಾಗಿದ್ದು, 21 ಮಂದಿ ಅವಶೇಷಗಳಡಿ ಸಿಲುಕಿದ್ದರು. 14 ಮಂದಿಯನ್ನು ರಕ್ಷಿಸಲಾಗಿದ್ದು, ಈ ಪೈಕಿ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಕ್ಕವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೊದಲು ರಕ್ಷಣಾ ಕಾರ್ಯವನ್ನು ಪೂರ್ಣಗೊಳಿಸಿ ನಂತರ ಸೂಕ್ತ ಪರಿಹಾರ ನೀಡುತ್ತೇವೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನ ರಕ್ಷಣಾ ತಂಡ, ಅಗ್ನಿಶಾಮಕ ದಳ, ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.