logo
ಕನ್ನಡ ಸುದ್ದಿ  /  ಕರ್ನಾಟಕ  /  Independence Day: ಮಾಣೆಕ್‌ ಷಾ ಪರೇಡ್‌ನಲ್ಲಿ ಈ ಬಾರಿ ಸ್ಪೆಷಲ್‌ ಏನು? ಏನಿದೆ ಆಕರ್ಷಣೆ?

Independence day: ಮಾಣೆಕ್‌ ಷಾ ಪರೇಡ್‌ನಲ್ಲಿ ಈ ಬಾರಿ ಸ್ಪೆಷಲ್‌ ಏನು? ಏನಿದೆ ಆಕರ್ಷಣೆ?

Praveen Chandra B HT Kannada

Aug 14, 2022 08:53 AM IST

ಮಾಣೆಕ್‌ ಷಾ ಪರೇಡ್‌ನಲ್ಲಿ ಈ ಬಾರಿ ಸ್ಪೆಷಲ್‌ ಏನು? ಏನೇನಿದೆ ಆಕರ್ಷಣೆ?

    • ಈ ಬಾರಿ ಸ್ವಾತಂತ್ರ್ಯದ ಅಮೃತಮಹೋತ್ಸವ ಇರುವುದರಿಂದ ಮಾಣೆಕ್‌ ಷಾ ಪರೇಡ್‌ನಲ್ಲಿ ಅದ್ಧೂರಿ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಈ ಬಾರಿ ಸೈನಿಕರು ಪ್ಯಾರಾ ಗ್ಲೈಡಿಂಗ್‌ ಪ್ರದರ್ಶಿಸಲಿದ್ದು, ಪ್ಯಾರಾಚ್ಯೂಟ್‌ ಸಹಾಯದಿಂದ ಆಕಾಶದಿಂದ ಭುವಿಗಿಳಿಯುವ ದೃಶ್ಯ ಅತ್ಯಾಕರ್ಷಕವಾಗಿರಲಿದೆ.
ಮಾಣೆಕ್‌ ಷಾ ಪರೇಡ್‌ನಲ್ಲಿ ಈ ಬಾರಿ ಸ್ಪೆಷಲ್‌ ಏನು? ಏನೇನಿದೆ ಆಕರ್ಷಣೆ?
ಮಾಣೆಕ್‌ ಷಾ ಪರೇಡ್‌ನಲ್ಲಿ ಈ ಬಾರಿ ಸ್ಪೆಷಲ್‌ ಏನು? ಏನೇನಿದೆ ಆಕರ್ಷಣೆ?

ಬೆಂಗಳೂರು: ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಇತ್ಯಾದಿ ವಿಶೇಷ ದಿನಗಳಂದು ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ನಲ್ಲಿ ವಿಶೇಷ ಕಾರ್ಯಕ್ರಮಗಳು ಇರುತ್ತವೆ. ಈ ಬಾರಿ ಸ್ವಾತಂತ್ರ್ಯದ ಅಮೃತಮಹೋತ್ಸವ ಇರುವುದರಿಂದ ಮಾಣೆಕ್‌ ಷಾ ಪರೇಡ್‌ನಲ್ಲಿ ಅದ್ಧೂರಿ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಈ ಬಾರಿ ಸೈನಿಕರು ಪ್ಯಾರಾ ಗ್ಲೈಡಿಂಗ್‌ ಪ್ರದರ್ಶಿಸಲಿದ್ದು, ಪ್ಯಾರಾಚ್ಯೂಟ್‌ ಸಹಾಯದಿಂದ ಆಕಾಶದಿಂದ ಭುವಿಗಿಳಿಯುವ ದೃಶ್ಯ ಅತ್ಯಾಕರ್ಷಕವಾಗಿರಲಿದೆ.

ಟ್ರೆಂಡಿಂಗ್​ ಸುದ್ದಿ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

Hassan Scandal: 4 ದಿನ ಎಸ್‌ಐಟಿ ವಶಕ್ಕೆ ಮಾಜಿ ಸಚಿವ ರೇವಣ್ಣ, ತೀವ್ರ ವಿಚಾರಣೆ ಸಾಧ್ಯತೆ

Bangalore Metro:ಮೆಟ್ರೋದಲ್ಲೇ ಬೆಂಗಳೂರು ಸುತ್ತುವ ಅವಕಾಶ, 5 ವರ್ಷದಲ್ಲಿ ನಮ್ಮ ಮೆಟ್ರೋ ಜಾಲಕ್ಕೆ 16 ಇಂಟರ್‌ಚೇಂಜ್‌ ನಿಲ್ದಾಣಗಳ ಸೇರ್ಪಡೆ

Hassan Scandal: ಪ್ರಜ್ವಲ್‌ ರೇವಣ್ಣ ಪ್ರಕರಣ, ಎಸ್‌ಐಟಿಯಿಂದ ಸಹಾಯವಾಣಿ, ಈ ಸಂಖ್ಯೆಗೆ ಮಾಹಿತಿ ನೀಡಿ

ಮಾಣೆಕ್‌ ಷಾ ಪರೇಡ್‌ನಲ್ಲಿ ಈ ಬಾರಿ 2500 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. "ಆಗಸ್ಟ್‌ ಹದಿನೈದರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪ್‌ನಲ್ಲಿ ಪರೇಡ್‌ ವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಬಳಿಕ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆʼʼ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದ್ದಾರೆ.

"ಈ ಬಾರಿ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌, ಬಿಎಸ್‌ಎಫ್‌ ಸೇರಿದಂತೆ ವಿವಿಧ ಇಲಾಖೆಯ ೩೬ ತುಕಡಿಗಳಲ್ಲಿ 1200 ಮಂದಿ ಪಥಸಂಚಲನ ನಡೆಸುತ್ತಿದ್ದಾರೆ. 2500 ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಮಾರು ಹತ್ತು ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ.

"ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಸುಮಾರು 2700 ಪೊಲೀಸ್‌ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆʼʼ ಎಂದು ಬೆಂಗಳೂರು ನಗರದ ಪೊಲೀಸ್‌ ಆಯುಕ್ತ ಸಿ.ಎಚ್‌. ಪ್ರತಾಪ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಮುಕ್ತಾಯದ ವೇಳೆ ಸೈನಿಕರು ಪ್ಯಾರಾ ಗ್ಲೈಡಿಂಗ್‌ ಪ್ರದರ್ಶಿಸಲಿದ್ದಾರೆ. ಇದು ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ. ಸುಮಾರು ಹತ್ತು ಜನರು ಯೋಧರ ಗುಂಪು ನೂರಾರು ಅಡಿ ಎತ್ತರದಿಂದ ಪ್ಯಾರಾಚೂಟ್‌ ಸಹಯಾದಿಂದ ರಾಷ್ಟ್ರಧ್ವಜಗಳನ್ನು ಹಾರಿಸುತ್ತಾ ಮಾಣೆಕ್‌ ಷಾ ಪರೇಡ್‌ನಲ್ಲಿ ಇಳಿಯಲಿದೆ.

ಬಿಬಿಎಂಪಿ ವತಿಯಿಂದ ಹರ್ ಗರ್ ತಿರಂಗಾ ಅಭಿಯಾನ

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದ ಅಗಸ್ಟ್ 15 ರವರೆಗೆ ಹಮ್ಮಿಕೊಂಡಿರುವ "ಹರ್ ಘರ್ ತಿರಂಗಾ"(ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ) ಅಭಿಯಾನವನ್ನು ಬಿಬಿಎಂಪಿಯು ತನ್ನ ವಿವಿಧ ವಲಯಗಳಲ್ಲಿ ಆಚರಿಸಿದೆ.

ಯಲಹಂಕ ವಲಯದಲ್ಲಿ ಪೌರಕಾರ್ಮಿಕರಿಗೆ ಧ್ವಜ ವಿತರಣೆ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಿನ್ನೆ ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಮಾನ್ಯ ಸ್ಥಳೀಯ ಶಾಸಕರಾದ ಎಸ್.ಆರ್.ವಿಶ್ವನಾಥ್ ರವರು ಪೌರಕಾರ್ಮಿಕರಿಗೆ ರಾಷ್ಟ್ರಧ್ವಜಗಳನ್ನು ವಿತರಿಸಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ಪಾಲಿಕೆ ಜಂಟಿ ಆಯುಕ್ತರಾದ ಪೂರ್ಣಿಮಾ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು. ತದನಂತರ ಹೆಬ್ಬಾಳ ಜಂಕ್ಷನ್ ನಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

ಪಶ್ಚಿಮ‌ ವಲಯ ವಲಯ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜನೆ: ಪಶ್ಚಿಮ‌ ವಲಯ ಚಾಮರಾಜಪೇಟೆಯ ಮಕ್ಕಳ ಕೂಟ, ಗಾಂಧಿನಗರ, ಮಲ್ಲೇಶ್ವ ಜಂಕ್ಷನ್, ಆನಂದರಾವ್ ವೃತ್ತ, ಸ್ವಾತಂತ್ರ್ಯ ಉದ್ಯಾನವನ, ಗೋವಿಂದರಾಜನಗರ ಸೇರಿದಂತೆ ಇನ್ನಿತರೆ ಕಡೆ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು.

ಬೊಮ್ಮನಹಳ್ಳಿ ವಲಯದಲ್ಲಿ ಕಾರ್ಯಕ್ರಮ ಆಯೋಜನೆ: ಬೊಮ್ಮನಹಳ್ಳಿ‌ ವಲಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಆರ್.ಬಿ.ಐ ಲೇಔಟ್ ಮೈದಾನದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿ, ಸದರಿ‌ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ‌ ಮಾಡಲಾಯಿತು. ಅಲ್ಲದೆ ಪೌರಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಧ್ವಜಗಳನ್ನು‌ ವಿತರಿಸಲಾಯಿತು.

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ದಕ್ಷಿಣ ವಲಯದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ(ಬಿಪಿನ್ ರಾವತ್ ಉದ್ಯಾನವನ)ದಲ್ಲಿ ಇಂದು ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಹಾಗೂ ಹರ್ ಘರ್ ತಿರಂಗ ಅಭಿಯಾನಕ್ಕೆ ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ ರಾಯಪುರ ರವರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಮಹೇಶ್ ಜೋಶಿ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಪಲಕ ಅಭಿಯಂತರರು ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಪಾಲಿಕೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.

ಪೂರ್ವ ವಲಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ: ಪೂರ್ವ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಜಾಗೃತಿ ಜಾಥಾ ನಡೆಸಲಾಯಿತು. ಸದರಿ ಜಾಗೃತಿ ಜಾಥಾದಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಘನತ್ಯಾಜ್ಯ ವಿಭಾಗದ ತಂಡ, ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪುಲಕೇಶಿನಗರ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

ಟೌನ್ ಹಾಲ್, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಹಾಗೂ ಗರುಡಾ ಮಾಲ್ ನಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆ: 1947ರಲ್ಲಿ ದೇಶದ ಸ್ವಾತಂತ್ರ್ಯದೊಂದಿಗ ಭಾರತ ಮತ್ತು ಪಾಕಿಸ್ತಾನ ವಿಭಜನೆಯಿಂದ ನೊಂದ ಲಕ್ಷಾಂತರ ಜನರ ಸಂಕಟ, ನೋವು ಮತ್ತು ನೋವನ್ನು ಬೆಳಕಿಗೆ ತರುವ ಸಲುವಾಗಿ ದಿನಾಂಕ: 14-08-2022 ರಂದು "ವಿಭಜನೆಯ ದುರಂತದ ಸ್ಮರಣೆಯ ದಿನ"ವನ್ನಾಗಿ ಆಚರಿಸುತ್ತಿದ್ದು, ಅದರ ಅಂಗವಾಗಿ ಇಂದು ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್), ಮೆಜೆಸ್ಟಿಕ್ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಸ್ವಾತಂತ್ರ್ಯ ಉದ್ಯಾನವನ, ಗರುಡಾ ಮಾಲ್ ಛಾಯಾಚಿತ್ರ ಪ್ರದರ್ಶನ(Exhibition) ಏರ್ಪಡಿಸಲಾಗಿತ್ತು.

ಇಂದು ಬೆಳಗ್ಗೆ ಯಲಹಂಕ ವಲಯ, ದಾಸರಹಳ್ಳಿ ವಲಯ ಹಾಗೂ ಮಧ್ಯಾಹ್ನದ ನಂತರ ಆರ್.ಆರ್.ನರ, ಬೊಮ್ಮನಹಳ್ಳಿ, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.

ಬಸ್ ನಲ್ಲೂ ಧ್ವಜ ಮಾರಾಟ: ನಿನ್ನೆ ಮುಂಜಾನೆಯಿಂದ ನಗರ ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್, ಪಾಲಿಕೆ‌‌ ಕೇಂದ್ರ ಕಛೇರಿ ವೃತ್ತ, ಕೆ.ಆರ್.ಮಾರುಕಟ್ಟೆ ವೃತ್ತ, ವಿಕ್ಟೋರಿಯಾ ಆಸ್ಪತ್ರೆ ಬಸ್ ನಿಲ್ದಾಣ, ಕಲಾಸಿಪಾಳ್ಯ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ ಮುಂಭಾಗ, ಬಸವೇಶ್ವರ ವೃತ್ತ, ಕೃಷ್ಣ ಕೃಪಾ ವೃತ್ತ, ಮೆಟ್ರೊ ನಿಲ್ದಾಣ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಪಾಲಿಕೆ ಬಸ್ ಮೂಲಕ ಧ್ವಜ ಮಾರಾಟ ಮಾಡಲಾಗಿದೆ. ಪಾಲಿಕೆಯ ಎಲ್ಲಾ ವಲಯಗಳಲ್ಲೂ ಹರ್ ಘರ್ ತಿರಂಗಾ ಅಭಿಯಾನವನ್ನು ಆಚರಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

    ಹಂಚಿಕೊಳ್ಳಲು ಲೇಖನಗಳು