logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಆನ್‌ ಲೈನ್‌ ವಂಚನೆ ಜಾಲದಲ್ಲಿ ಕಳೆದುಕೊಂಡಿದ್ದ 1.40 ಕೋಟಿ ರೂ. ಪಡೆದ ಬೆಂಗಳೂರು ಟೆಕ್ಕಿ ದಂಪತಿ; ನಿಮ್ಮ ಹಣ ಪಡೆಯೋದು ಹೇಗೆ

Bangalore Crime: ಆನ್‌ ಲೈನ್‌ ವಂಚನೆ ಜಾಲದಲ್ಲಿ ಕಳೆದುಕೊಂಡಿದ್ದ 1.40 ಕೋಟಿ ರೂ. ಪಡೆದ ಬೆಂಗಳೂರು ಟೆಕ್ಕಿ ದಂಪತಿ; ನಿಮ್ಮ ಹಣ ಪಡೆಯೋದು ಹೇಗೆ

Umesha Bhatta P H HT Kannada

Aug 10, 2024 02:13 PM IST

google News

ಬೆಂಗಳೂರಿನಲ್ಲಿ ಸೈಬರ್‌ ವಂಚನೆಗೆ ಒಳಗಾದ ದಂಪತಿ ಹಣ ವಾಪಾಸ್‌ ಪಡೆದುಕೊಂಡಿದ್ದಾರೆ.

    • Cyber Crime ಬೆಂಗಳೂರಿನ ಟೆಕ್ಕಿ ದಂಪತಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ಭಾರೀ ಮೊತ್ತ ಕಳೆದುಕೊಂಡಿದ್ದರು. ಈಗ ಅದನ್ನು ವಾಪಾಸ್‌ ಪಡೆದಿದ್ದಾರೆ. ವಂಚನೆಗೆ ಒಳಗಾದ ಹಣ ಪಡೆಯೋದು ಹೇಗೆ. ಇಲ್ಲಿದೆ ಮಾಹಿತಿ.
    • ವರದಿ: ಎಚ್‌.ಮಾರುತಿ. ಬೆಂಗಳೂರು
ಬೆಂಗಳೂರಿನಲ್ಲಿ ಸೈಬರ್‌ ವಂಚನೆಗೆ ಒಳಗಾದ ದಂಪತಿ ಹಣ ವಾಪಾಸ್‌ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸೈಬರ್‌ ವಂಚನೆಗೆ ಒಳಗಾದ ದಂಪತಿ ಹಣ ವಾಪಾಸ್‌ ಪಡೆದುಕೊಂಡಿದ್ದಾರೆ.

ಬೆಂಗಳೂರು: ಪೊಲೀಸರ ಸಹಕಾರದಿಂದ ಆನ್‌ಲೈನ್‌ ಹೂಡಿಕೆ ವ್ಯವಹಾರದಲ್ಲಿ ಕಳೆದುಕೊಂಡಿದ್ದ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಮರಳಿ ಪಡೆಯುವಲ್ಲಿ ಬೆಂಗಳೂರಿನ ಟೆಕ್ಕಿ ದಂಪತಿಗಳು ಯಶಸ್ವಿಯಾಗಿದ್ದಾರೆ. ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ನಡೆಸುವ ಈ ದಂಪತಿಗಳು ಆನ್‌ ಲೈನ್‌ ಹೂಡಿಕೆ ವಂಚನೆ ಜಾಲದಲ್ಲಿ 1.53 ಕೋಟಿ ರೂ. ಕಳೆದುಕೊಂಡಿದ್ದರು. ಪೂರ್ವ ವಿಭಾಗದ ಸೈಬರ್‌ ಪೊಲೀಸರ ಸಮಯಪ್ರಜ್ಞೆಯಿಂದ 1.4 ಕೋಟಿ ರೂಗಳನ್ನು ಹಿಂಪಡೆದಿದ್ದಾರೆ.

ಏನಾಯಿತೆಂದರೆ…

ಹೂಡಿಕೆ ಮಾಡಿದರೆ ಭಾರಿ ಪ್ರಮಾಣದ ಲಾಭ ಪಡೆಯಬಹುದು ಎಂದು ವಂಚಕರು ಈ ಸಾಫ್ಟ್‌ ವೇರ್‌ ದಂಪತಿಗಳಿಗೆ ಆಮಿಷವೊಡ್ಡಿದ್ದರು. ಇಷ್ಟು ಲಾಭ ಬರುವುದಾರರೆ ನೋಡೋಣ ಎಂದು ಬಾಣಸವಾಡಿ ನಿವಾಸಿಗಳಾದ ಈ ದಂಪತಿ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದರು. ಇಂಗ್ಲೆಂಡ್‌ ನಿಂದ ಕಾರ್ಯಾಚರಣೆ ನಡೆಸುತ್ತಿದ್ದ ವಂಚಕರ ತಂಡ ಉತ್ತರ ಭಾರತದ ನಿವಾಸಿಗಳಿಂದ ಬ್ಯಾಂಕ್‌ ಖಾತೆಗಳನ್ನು ಬಾಡಿಗೆಗೆ ಪಡೆದು ಈ ರೀತಿ ವಂಚನೆ ನಡೆಸುತ್ತಿದ್ದರು. ಈ ಹೂಡಿಕೆಯ ವ್ಯವಹಾರ ಕಾನೂನುಬದ್ಧ ಎನ್ನುವುದನ್ನು ತೋರಿಸಲು ನಕಲಿ ವೆಬ್‌ ಸೈಟ್‌ ಗಳನ್ನು ಹುಟ್ಟು ಹಾಕಿ ಅಲ್ಲಿ ನಿಮ್ಮ ಹಣ ದುಪ್ಪಟ್ಟಾಗುತ್ತಿದೆ ಎಂದು ತೋರಿಸುತ್ತಿದ್ದರು. ಈ ವೆಬ್‌ ಸೈಟ್‌ ಗಳನ್ನು ಟೆಕ್ಕಿ ದಂಪತಿ ಪರಿಶೀಲಿಸಿದಾಗ ನಕಲಿ ಎಂದೂ ತಿಳಿದು ಬಂದಿರಲಿಲ್ಲ.

ತಮ್ಮ ಹೂಡಿಕೆಯ ಹಣ ಈ ವೇಗದಲ್ಲಿ ಬೆಳೆಯುತ್ತಿರುವುದನ್ನು ಕಂಡು ಅಚ್ಚರಿಪಟ್ಟ ದಂಪತಿ ಕೆಲವು ತಿಂಗಳ ನಂರ ಸ್ವಲ್ಪ ಹಣವನ್ನು ಹಿಂಪಡೆಯಲು ನಿರ್ಧರಿಸಿದ್ದರು. ಇವರು ಹಣ ಮರಳಿ ಪಡೆಯಲು ಪ್ರಯತ್ನ ನಡೆಸುತ್ತಿದ್ದಂತೆ ವೆಬ್‌ ಸೈಟ್‌ ಸ್ಥಗಿತಗೊಂಡಿತ್ತು.ನಂತರ ಅನುಮಾನಗೊಂಡ ದಂಪತಿಗಳು ಸೈಬರ್‌ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಬ್ಯಾಂಕ್‌ ಅಧಿಕಾರಿಗಳ ಸಹಕಾರದಿಂದ ಪೊಲೀಸರು ಈ ವಂಚನೆಯಲ್ಲಿ ಭಾಗಿಯಾಗಿದ್ದ 50 ಖಾತೆಗಳ ವಹಿವಾಟನ್ನು ಸ್ಥಗಿತಗೊಳಿಸಿದ್ದರು. ಸಮರೋಪಾದಿಯಲ್ಲಿ ತ್ವರಿತವಾಗಿ ಈ ಕೆಲಸ ಮಾಡಿದ್ದರಿಂದ ಕಳೆದುಕೊಂಡಿದ್ದ ಬಹುಪಾಲು ಹಣವನ್ನು ಮರಳಿ ಪಡೆಯಲು ಸಾಧ್ಯವಾಯಿತು.

ಪ್ರತಿಯೊಂದು ಸೈಬರ್‌ ವಂಚನೆಯ ಪ್ರಕರಣಕ್ಕೆ ಪೊಲೀಸರು ಮೂರು ನಿಯಮಗಳನ್ನು ಅನುಸರಿಸುತ್ತಾರೆ. ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವುದು, ಸರಿಯಾದ ಸಮಯಕ್ಕೆ ದೂರುದಾರರಿಂದ ದೂರು ಪಡೆಯುವುದು, ಮತ್ತು ಆ ಸುವರ್ಣ ಗಂಟೆಯಲ್ಲಿ ದೂರನ್ನು ನೊಂದಣಿ ಮಾಡಿಕೊಳ್ಳುತ್ತಾರೆ. ನಂತರ ಅವರು ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ಖಾತೆಗಳನ್ನು ಸೀಜ್‌ ಮಾಡಿ ಹಣ ಹಿಂಪಡೆಯುತ್ತಾರೆ.

ಪೊಲೀಸರೂ ಸಹ ನಿರಂತರವಾಗಿ ಇಂತಹ ಸೈಬರ್‌ ವಂಚನೆಯ ಜಾಲಕ್ಕೆ ಮರುಳಾಗದ ಹಾಗೆ ಎಚ್ಚರವಹಿಸುವಂತೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.

ಹೂಡಿಕೆಗೂ ಮುನನ್‌ ಅನುಸರಿಸಬೇಕಾದ ಟಿಪ್ಸ್‌ ಗಳು

1. ಹೂಡಿಕೆಯ ಸಂದೇಶಗಳಿಗೆ ಮರುಳಾಗಬೇಡಿ. ಕಾನೂನುಬದ್ಧ ಹೂಡಿಕೆಯ ಕಂಪನಿಗಳು ಈ ರೀತಿಯಲ್ಲಿ ಇ ಮೇಲ್‌, ಮೆಸೇಜ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹೂಡಿಕೆ ಮಾಡುವಂತೆ ಕೋರುವುದಿಲ್ಲ.

2. ಅತಿಯಾದ ಲಾಭ ಬರುತ್ತದೆ ಎನ್ನುವುದನ್ನು ನಂಬಬೇಡಿ. ಯಾವುದೇ ರಿಸ್ಕ್‌ ಇಲ್ಲದೆ ಅತಿಯಾದ ಲಾಭ ನಿರಿಕ್ಷಿಸುವುದು ಕಷ್ಟ.

3. ಇಂತಹ ಹೂಡಿಕೆ ಮಾಡುವಾಗ ಕಂಪನಿ ಅಥವಾ ವ್ಯಕ್ತಿಗಳ ಪೂರ್ವಾಪರ ತಿಳಿದುಕೊಳ್ಳುವುದು ಕ್ಷೇಮ. ಹೂಡಿಕೆ ಮಾಡುವುದಕ್ಕೂ ಮುನ್ನ ಇಂತಹವರ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮಾಡುವುದು ಇನ್ನೂ ಉತ್ತಮ.

4. ಅಧಾರ್‌, ಬ್ಯಾಂಕ್‌ ಖಾತೆ, ಕ್ರೆಡಿಟ್‌ ಕಾರ್ಡ್‌ ಮಾಹಿತಿಯಂತಹ ವೈಯಕ್ತಿಕ ವಿಷಯಗಳನ್ನು ಯಾವುದೇ ಕಾರಣಕ್ಕೂ ಯಾವುದೇ ಕಂಪನಿ ಅಥವಾ ವ್ಯಕ್ತಿಗಳಿಗೆ ನೀಡಬಾರದು.

5. ಆನ್‌ ಲೈನ್‌ ಅರ್ಜಿಗಳನ್ನು ಭರ್ತಿ ಮಾಡುವಾಗ ಎಚ್ಚರ ವಹಿಸಬೇಕು. ಭದ್ರತೆ ಹೊಂದಿರುವ ವೆಬ್‌ ಸೈಟ್‌ ಗಳ ಯುಆರ್‌ ಎಲ್‌ ನಲ್ಲಿ ಎಚ್‌ ಟಿಟಿಪಿಎಸ್‌ ಹೊಂದಿದ್ದರೆ ಮಾತ್ರ ಮಾಹಿತಿ ಹಂಚಿಕೊಳ್ಳಬಹುದು.

6. ಒಂದು ವೇಳೆ ಹೂಡಿಕೆ ಮಾಡುವಾಗ ಅನುಮಾನ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು.

ವರದಿ: ಎಚ್‌. ಮಾರುತಿ, ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ