Assembly elections: ಪಂಚರಾಜ್ಯಗಳಿಗೆ ಕಾಂಗ್ರೆಸ್‌ನಿಂದ 1000 ಕೋಟಿ ರೂ ಕಪ್ಪ: ಬಿಜೆಪಿ ಆರೋಪ, ಸಿಎಂ-ಡಿಸಿಎಂ ತಿರುಗೇಟು
Oct 16, 2023 02:10 PM IST
ಬಿಜೆಪಿ ಬಿಡುಗಡೆ ಮಾಡಿರುವ ಪೋಸ್ಟರ್
- Karnataka Bjp congress fight ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಮಾತಿನ ಸಮರ ಜೋರಾಗಿದೆ. ಮೂರು ದಿನದ ಹಿಂದೆ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ ಹಣ ವಿಧಾನಸಭೆ ಚುನಾವಣೆಗೆ ಕಳುಹಿಸಲಾಗುತ್ತಿತ್ತು ಎಂದು ಬಿಜೆಪಿ ಆರೋಪಿಸಿದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ.
ಬೆಂಗಳೂರು: ಮೂರು ದಿನದ ಹಿಂದೆ ಗುತ್ತಿಗೆದಾರರೊಬ್ಬರ ಮೇಲೆ ಐಟಿ ದಾಳಿ ನಡೆದ ಪ್ರಕರಣ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ನೀಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಿರಾಕರಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು? ಎಂದು ಪ್ರಶ್ನಿಸಿದೆ.
ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ, ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ, ಛತ್ತಿಸ್‌ಗಢ ಕಾಂಗ್ರೆಸ್‌ಗೆ ₹200 ಕೋಟಿ, ರಾಜಸ್ಥಾನ ಕಾಂಗ್ರೆಸ್‌ಗೆ ₹200 ಕೋಟಿ, ಮಧ್ಯಪ್ರದೇಶ ಕಾಂಗ್ರೆಸ್‌ಗೆ ₹200 ಕೋಟಿ ರೂ.ಗಳನ್ನು ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ ಎಂದು ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಸಿ.ಟಿ.ರವಿ, ಇದರ ಬಗ್ಗೆ ಸಂಪೂರ್ಣ ತನಿಖೆಯಾದರೆ ಸತ್ಯ ಹೊರಗೆ ಬರಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಆರೋಪಕ್ಕೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಆರೋಪ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತವಾಗಿದ್ದು,ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ ಎಂದು ಹೇಳಿದರು.
ಗುತ್ತಿಗೆದಾರರ ಮನೆಯಲ್ಲಿ ಹಣಪತ್ತೆಯಾಗಿರುವ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ದುಡ್ಡು ವಸೂಲಿ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಮುಖ್ಯಮಂತ್ರಿತಗಳು ಉತ್ತರ ನೀಡುತ್ತಾ, ಆದಾಯ ತೆರಿಗೆ ಇಲಾಖೆ ತನ್ನ ಕೆಲಸ ಮಾಡಿದೆ. ಯಾರದೋ ಮನೆಯಲ್ಲಿ ಹಣ ಪತ್ತೆಯಾಗಿದ್ದು, ಇದಕ್ಕೆ ರಾಜಕೀಯ ನಂಟು ಹಾಕುವುದು ಸರಿಯಲ್ಲ. ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ ಎಂದರು.
ಲೋಕಸಭೆ ಚುನಾವಣೆ ಹಾಗೂ ರಾಜಕೀಯ ಉದ್ದೇಶದಿಂದ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ತನಿಖೆಯ ಅವಶ್ಯಕತೆಯಿಲ್ಲ. ಪಂಚರಾಜ್ಯಗಳ ಚುನಾವಣೆಯ ಇರುವುದರಿಂದ ಕಾಂಗ್ರೆಸ್‍ನ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಚುನಾವಣೆ ನಡೆಯುವುದಕ್ಕೂ ನಮ್ಮ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಿಗೆ ದುಡ್ಡು ಸಂಗ್ರಹಿಸುವ ಗುರಿ ನೀಡಿರುವುದಾಗಿ ಬಿಜೆಪಿಯ ಸಿ.ಟಿ.ರವಿ ಮತ್ತಿತರರ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿ.ಟಿ.ರವಿಯವರ ಹೇಳಿಕೆಗಳು ಸದಾ ಸುಳ್ಳಿನಿಂದ ಕೂಡಿರುತ್ತದೆ. ಅವರ ಸುಳ್ಳು ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಈ ರೀತಿಯ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದರು.
ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಇದಕ್ಕೆಲ್ಲಾ ಸೂಕ್ತ ಕಾಲದಲ್ಲಿ ಸರಿಯಾದ ಉತ್ತರ ನೀಡುತ್ತೇನೆ ಎಂದು ಡಿಸಿಎಂ ಡಿಕೆಶಿ ಕೂಡ ತಿರುಗೇಟು ನೀಡಿದರು.