BMTC Metro service: ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಸೇವೆ, ಪ್ರತಿ ನಿತ್ಯ 76 ಸಾವಿರ ಪ್ರಯಾಣಿಕರ ಬಳಕೆ, ಇನ್ನಷ್ಟು ವಿಸ್ತರಣೆ
Dec 12, 2023 10:36 AM IST
ಬಿಎಂಟಿಸಿ ಆರಂಭಿಸಿರುವ ಮೆಟ್ರೋ ಫೀಡರ್ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ.
- BMTC Metro Feeder service ಬೆಂಗಳೂರಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗುವ ನಿಟ್ಟಿಲ್ಲಿ ಬಿಎಂಟಿಸಿ ಆರಂಭಿಸಿರುವ ಮೆಟ್ರೋ ಫೀಡರ್ ಸೇವೆಯನ್ನು ಹೆಚ್ಚು ಜನ ಬಳಸುತ್ತಿದ್ದಾರೆ. ಈ ಸೇವೆ ಇನ್ನಷ್ಟು ವಿಸ್ತರಣೆಯೂ ಆಗಲಿದೆ.
ಬೆಳಗಾವಿ: ಬೆಂಗಳೂರಿನಲ್ಲಿ ಮೆಟ್ರೋ ಹಾಗೂ ಬಿಎಂಟಿಸಿ ಬಳಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ರೂಪಿಸಿರುವ ಫೀಡರ್ ಬಸ್ ಸೇವೆಯನ್ನು ಹೆಚ್ಚು ಜನಬಳಕೆ ಮಾಡುತ್ತಿದ್ದಾರೆ.
ಮೆಟ್ರೋ ಸೇವೆ ವಿಸ್ತರಣೆಯಾದ ಬಳಿಕ ಬಿಎಂಟಿಸಿ ಬೆಂಗಳೂರಿನಲ್ಲಿ ಮೆಟ್ರೋ ಫೀಡರ್ ಸೇವೆಯನ್ನು ಇನ್ನೂ ಹೆಚ್ಚಿಸಿತ್ತು. ಈಗ ಪ್ರತಿ ನಿತ್ಯ 76 ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಬೆಳಗಾವಿಯಲ್ಲಿ ನಡೆದಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಚಿವ. ರಾಮಲಿಂಗಾರೆಡ್ಡಿ ಅವರು ಈ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೆಟ್ರೋ ಈಗಾಗಲೇ ನೇರಳೆ ಬಣ್ಣದ ಮಾರ್ಗವನ್ನು ಪೂರ್ಣಗೊಳಿಸಿ ವೈಟ್‌ಫೀಲ್ಡ್ ನಿಂದ ಚಲ್ಲಘಟ್ಟವರೆಗೆ ಸೇವೆಯನ್ನು ಆರಂಭಿಸಿದೆ. ಬಳಿಕ ಬಿಎಂಟಿಸಿ ಕೂಡ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ಹೆಚ್ಚಿಸಿದೆ. ಇದರಿಂದಾಗಿ ಬಿಎಂಟಿಸಿ ಬಳಸುವವರ ಸಂಖ್ಯೆಯೂ ಅಧಿಕವಾಗಿದೆ ಎಂದು ತಿಳಿಸಿದರು.
ವಿವಿಧ ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಪ್ರತಿ ನಿತ್ಯ 2,012 ಟ್ರಿಪ್‌ಗಳ ಸೇವೆ ಒದಗಿಸುತ್ತಿದೆ. ಇದರಲ್ಲಿ ಎಂಎಫ್-5 ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿದ್ಧಾರೆ. ಕೇಂದ್ರೀಯ ರೇಷ್ಮೆಮಂಡಳಿಯಿಂದ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣವರೆಗೆ ಇರುವ ಈ ಮಾರ್ಗದಲ್ಲಿ ಅತ್ಯಧಿಕ 13,949 ಪ್ರಯಾಣಿಕರು ಸಂಚಾರ ಮಾಡಿದ ಮಾಹಿತಿ ಲಭ್ಯವಾಗಿದೆ ಎಂದು ವಿವರಿಸಿದರು.
ಈಗಾಗಲೇ ಇರುವ ಮಾರ್ಗಗಳ ಜತೆಗೆ ಬೆಂಗಳೂರಿನ ಟೆಕ್ ಕಾರಿಡಾರ್‌ಗಳನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಫೀಡರ್ ಸೇವೆಗಳನ್ನು ಬಿಎಂಟಿಸಿ ಆರಂಭಿಸಿದೆ. ಇದರಲ್ಲಿ ಹೊರ ವರ್ತುಲ ರಸ್ತೆಯೂ ಸೇರಿದೆ. ಹೂಡಿ ಮೆಟ್ರೋ ನಿಲ್ದಾಣದಿಂದ ಕೆಆರ್ ಪುರಂ, ಜೆಪಿನಗರ ನಿಲ್ದಾಣದಿಂದ ಜೆಪಿನಗರ ಏಳನೇ ಘಟ್ಟ. ಜಯನಗರ 9ನೇ ಬ್ಲಾಕ್ ರೌಂಡ್ ಟ್ರಿಪ್, ಬನಶಂಕರಿಯಿಂದ ಬಿಟಿಎಂ ಲೇಔಟ್, ಚಿಕ್ಕಬಾಣಾವರದಿಂದ ನಾಗಸಂದ್ರ, ಕೆಆರ್‌ಪುರಂ ಮೆಟ್ರೋ ನಿಲ್ದಾಣದಿಂದ ಕೇಂದ್ರ ರೇಷ್ಮೆ ಮಂಡಳಿಯಿಂದ ಬಸ್ ಸೇವೆ ಶುರುವಾಗಿದೆ. ಇವು ಹೊರ ವರ್ತುಲ ರಸ್ತೆ ಹಾಗೂ ಕಾಡುಗೋಡಿ ಟೆಕ್ ಪಾರ್ಕ್‌ಗಳ ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ ಎಂದು ಹೇಳಿದರು.
ವಿಶೇಷವಾಗಿ ಮೆಟ್ರೋ ನಿಲ್ದಾಣಗಳಿಗೆ ಬರುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಬಿಎಂಟಿಸಿ ಇನ್ನಷ್ಟು ಮಾರ್ಗಗಳಿಗೆ ಸೇವೆ ನೀಡುವ ಉದ್ದೇಶ ಹೊಂದಿದೆ. ಸದ್ಯ 38 ಎಸಿ ಹಾಗೂ ನಾನ್ ಎಸಿ ಬಸ್‌ಗಳು ಹೊಸದಾಗಿ ಆರಂಭಗೊಂಡ ನಾಲ್ಕು ಮೆಟ್ರೋ ಫೀಡರ್ ಮಾರ್ಗದಲ್ಲಿ ಸಂಚರಿಸುತ್ತಿವೆ. ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರರು ಕಚೇರಿ ತಲುಪಲು ಸಹಕಾರಿಯಾಗಲೆಂದೇ ನಿಗದಿತ ಸೇವೆಗಳನ್ನು ಬಿಎಂಟಿಸಿ ಒದಗಿಸಿದ್ದು, ಇನ್ನಷ್ಟು ವಿಸ್ತರಿಸಲಿದೆ ಎಂದು ತಿಳಿಸಿದರು.