logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಎಚ್‌ಎಂಟಿಗೆ ತರಾತುರಿಯಲ್ಲಿ ಭೂಮಿ ಮಂಜೂರು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದವೂ ಕ್ರಮದ ತೂಗುಗತ್ತಿ

ಬೆಂಗಳೂರಿನ ಎಚ್‌ಎಂಟಿಗೆ ತರಾತುರಿಯಲ್ಲಿ ಭೂಮಿ ಮಂಜೂರು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದವೂ ಕ್ರಮದ ತೂಗುಗತ್ತಿ

Umesha Bhatta P H HT Kannada

Sep 25, 2024 01:15 PM IST

google News

ಬೆಂಗಳೂರಿನ ಎಚ್‌ಟಿಎಂಗೆ ನೀಡಿದ್ದ ಭೂಮಿ ಈಗ ವಿವಾದದ ಕೇಂದ್ರ ಬಿಂದುವಾಗಿದೆ.

    • ಬೆಂಗಳೂರಿನ ಕೋಟ್ಯಂತರ ರೂ. ಬೆಲೆಬಾಳುವ ಅರಣ್ಯಭೂಮಿಯನ್ನು ವಾಪಾಸ್‌ ಪಡೆಯುವ ಬದಲು ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದಾಗಿದ್ದಾರೆ.
ಬೆಂಗಳೂರಿನ ಎಚ್‌ಟಿಎಂಗೆ ನೀಡಿದ್ದ ಭೂಮಿ ಈಗ ವಿವಾದದ ಕೇಂದ್ರ ಬಿಂದುವಾಗಿದೆ.
ಬೆಂಗಳೂರಿನ ಎಚ್‌ಟಿಎಂಗೆ ನೀಡಿದ್ದ ಭೂಮಿ ಈಗ ವಿವಾದದ ಕೇಂದ್ರ ಬಿಂದುವಾಗಿದೆ. (The Hindu)

ಬೆಂಗಳೂ: ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಬೆಳೆಬಾಳುವ ಅರಣ್ಯ ಭೂಮಿಯನ್ನು ಅವಧಿ ಮುಗಿದಿದ್ದರೂ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಂಪೆನಿಗೆ ತರಾತುರಿಯಲ್ಲಿ ಮಂಜೂರು ಮಾಡಿದ್ದ ಹಿಂದಿನ ಹಿರಿಯ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಈ ಕುರಿತು ಕೆಲವು ಅಧಿಕಾರಿಗಳಿಗೆ ನೊಟೀಸ್‌ ಕೂಡ ಜಾರಿ ಮಾಡಲಾಗುತ್ತಿದ್ದು, ಉತ್ತರ ಬಂದ ನಂತರ ಅಧಿಕಾರಿಗಳ ವಿರುದ್ದ ಕ್ರಮ ಆಗುವ ಸಾಧ್ಯತೆಯಿದೆ. ಇದೇ ವಿಚಾರವಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ನಡುವೆ ಮಾತಿನ ಸಮರವೂ ನಡೆದಿದ್ದು. ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

ನಿಯಮಗಳನ್ನು ಗಾಳಿಗೆ ತೂರಿ, ಸಚಿವರ ಮತ್ತು ಸಚಿವ ಸಂಪುಟದ ಅನುಮೋದನೆ ಇಲ್ಲದೆ ಪೀಣ್ಯ- ಜಾಲಹಳ್ಳಿ ಪ್ಲಾಂಟೇಷನ್ ನಲ್ಲಿ ಎಚ್.ಎಂ.ಟಿ. ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ ಹಿರಿಯ ಅರಣ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಈ ಸಂಬಂಧ ನೀಡಿರುವ ಟಿಪ್ಪಣಿಯಲ್ಲಿ ಕರ್ನಾಟಕ ಅರಣ್ಯ ಕೈಪಿಡಿಯಲ್ಲಿ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 17ರಡಿಯಲ್ಲಿ ಮೀಸಲು ಅರಣ್ಯ ಎಂದು ಅಧಿಸೂಚನೆಯಾದ ಬಳಿಕ ಆ ಅರಣ್ಯವನ್ನು ‘ಯಾವತ್ತೂ ಅರಣ್ಯವಲ್ಲ’ ಎಂದು ಘೋಷಿಸಬೇಕಾದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಆಗಬೇಕು ಎಂದು ಸ್ಪಷ್ಟವಾಗಿದೆ.

ಜೊತೆಗೆ ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರ ಪ್ರಥಮ ಪರಿಶಿಷ್ಟದಲ್ಲಿ ಕೂಡ ಯಾವುದೇ ಇತರ ಸರ್ಕಾರಿ ಇಲಾಖೆಗೆ ಸರ್ಕಾರಿ ಭೂಮಿ ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ ಅದರ ಮೌಲ್ಯ 5ಕೋಟಿ ರೂ.ಗಿಂತ ಹೆಚ್ಚಾಗಿದ್ದಲ್ಲಿ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಆದರೆ ಕೆಲವು ಅಧಿಕಾರಿಗಳು ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಅನುಮತಿಯೂ ಇಲ್ಲದೆ ತಮ್ಮ ಮಟ್ಟದಲ್ಲೇ ಸರ್ಕಾರದ ಆದೇಶ ಮಾಡಿ ಸುಪ್ರೀಂಕೋರ್ಟ್ ಗೆ ಐ.ಎ. ಸಲ್ಲಿಸಿರುತ್ತಾರೆ ಇದು ಶಂಕಾಸ್ಪದವಾಗಿದೆ. ಜೊತೆಗೆ ಎಚ್.ಎಂ.ಟಿ. ಅರಣ್ಯ ಭೂಮಿಯನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ. ಇದರಿಂದಾಗಿ ಎಚ್.ಎಂ.ಟಿ. ಈವರೆಗೆ 165 ಎಕರೆ ಜಮೀನನ್ನು, 313 ಕೋಟಿ 65ಲಕ್ಷ 52 ಸಾವಿರದ 681 ರೂಪಾಯಿಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ ಎನ್ನುವುದು ಸಚಿವರ ವಿವರಣೆ.

ಈ ಮಧ್ಯೆ 2015ರಲ್ಲಿ ಅಂದಿನ ಎ.ಪಿ.ಸಿ.ಸಿ.ಎಫ್ ವೆಂಕಟಸುಬ್ಬಯ್ಯ ಅವರು ಎಚ್.ಎಂ.ಟಿ. ಪ್ರದೇಶದ ಅರಣ್ಯ ಭೂಮಿ ತೆರವಿಗೆ 64 ಎ ಪ್ರಕ್ರಿಯೆ ನಡೆಸಿ ಆದೇಶ ನೀಡಿರುತ್ತಾರೆ. ಈ ಆದೇಶದ ವಿರುದ್ಧ ಎಚ್,ಎಂ.ಟಿ. ನಿಗದಿತ ಕಾಲಮಿತಿಯಲ್ಲಿ ಮೇಲ್ಮನವಿಯನ್ನೂ ಸಲ್ಲಿಸಿರುವುದಿಲ್ಲ. ಹೀಗಾಗಿ ಇದು ಅರಣ್ಯ ಇಲಾಖೆಯ ಸ್ವತ್ತಾಗಿರುತ್ತದೆ. ವಸ್ತುಸ್ಥಿತಿ ಹೀಗಿರುವಾಗ, ಕೆಲವು ಹಿರಿಯ ಅರಣ್ಯಾಧಿಕಾರಿಗಳು ಅಂದಿನ ಅರಣ್ಯ ಸಚಿವರಿಂದ ಲಿಖಿತ ಅನುಮತಿ ಪಡೆಯದೆ, ಸಚಿವ ಸಂಪುಟದ ಅನುಮೋದನೆ ಪಡೆಯದೆ ಎಚ್.ಎಂ.ಟಿ. ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ತರಾತುರಿಯಲ್ಲಿ ಸರ್ಕಾರಿ ಆದೇಶ ಮಾಡಿಸಿ, ಸುಪ್ರೀಂಕೋರ್ಟ್ ಗೆ ಮಧ್ಯಂತರ ಅರ್ಜಿ (ಐ.ಎ.)ಸಲ್ಲಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಂದಿನ ಸಚಿವರ ಅಥವಾ ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೆ ಸಾವಿರಾರು ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಸುಪ್ರೀಂಕೋರ್ಟ್ ಗೆ ಐ.ಎ. ಹಾಕಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ 7 ದಿನಗಳ ಒಳಗಾಗಿ ಉತ್ತರ ಪಡೆದು, ಮುಂದಿನ ಕ್ರಮ ಜರುಗಿಸಲು ಪ್ರಸ್ತಾವನೆಯನ್ನು ಸಲ್ಲಿಸಿ ಎನ್ನುವುದ ಈಶ್ವರ ಖಂಡ್ರೆ ನೀಡಿರುವ ಸೂಚನೆ.

ಸುಪ್ರೀಂಕೋರ್ಟ್ ನಲ್ಲಿ ಅರಣ್ಯ ಇಲಾಖೆ ಸಲ್ಲಿಸಿರುವ ಐ.ಎ. ಹಿಂಪಡೆಯಲು ಅರ್ಜಿ ಸಲ್ಲಿಸಲಾಗಿದ್ದು, ಈ ಭೂಮಿಯನ್ನು ಅರಣ್ಯ ಇಲಾಖೆಗೆ ಪಡೆದ ಬಳಿಕ ಇಲ್ಲಿ ಲಾಲ್ ಬಾಗ್ ಅಥವಾ ಕಬ್ಬನ್ ಉದ್ಯಾನದ ಮಾದರಿಯಲ್ಲಿ ಸಸ್ಯೋದ್ಯಾನ ಅಭಿವೃದ್ಧಿಪಡಿಸಲಾಗುವುದು ಎನ್ನುವುದನ್ನು ಖಂಡ್ರೆ ಹೇಳಿದ್ದಾರೆ. ಆದರೆ ಈ ಭೂಮಿಯನ್ನು ವಾಪಾಸ್‌ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಈ ವಿವಾದ ಇನ್ನಷ್ಟು ಹೆಚ್ಚುವ ಸೂಚನೆಯನ್ನಂತೂ ಸಚಿವರ ಹೇಳಿಕೆ ನೀಡಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ