Hampi News: ಹಂಪಿಯಲ್ಲಿ ಹೋಂಸ್ಟೇ ಸಂಪೂರ್ಣ ಬಂದ್: ಅಕ್ರಮ ಚಟುವಟಿಕೆಗಳಿಗೂ ಬ್ರೇಕ್
Oct 05, 2023 08:36 AM IST
ಹಂಪಿಯ ಪಾರಂಪರಿಕತೆ ಧಕ್ಕೆಯಾಗದಂತೆ ತಡೆಯಲು ಕರ್ನಾಟಕ ಸರ್ಕಾರ ಸುಧಾರಣಾ ಕ್ರಮಕ್ಕೆ ಮುಂದಾಗಿದೆ.
- Hampi Development ಪ್ರವಾಸೋದ್ಯಮದ ಜತೆಗೆ ಪಾರಂಪರಿಕತೆಯ ಮಹತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಹಂಪಿಯಲ್ಲಿ ತಲೆ ಎತ್ತಿರುವ ಹೋಂಸ್ಟೇಗಳನ್ನು ಸ್ಥಗತಿಗೊಳಿಸಿ ಕಾನೂನು ಬಾಹಿರ ಚಟುವಟಿಕೆಗಳನ್ನೂ ತಡೆಯಲು ಕರ್ನಾಟಕ ಸರ್ಕಾರ( Karnataka Government) ಹಲವು ಕ್ರಮಗಳನ್ನು ಕೈಗೊಂಡಿದೆ.
ಬೆಂಗಳೂರು: ವಿಶ್ವದ ಪ್ರಮುಖ ಪ್ರವಾಸಿ ತಾಣ, ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಕರ್ನಾಟಕದ ಹಂಪಿಯಲ್ಲಿ ಹೋಂ ಸ್ಟೇಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ. ಇದರೊಟ್ಟಿಗೆ ಹಂಪಿ ಪಟ್ಟಣದ ಸುತ್ತಮುತ್ತಲಲ್ಲಿ ನಡೆದಿರುವ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳಿಗೂ ಬ್ರೇಕ್ ಬೀಳಲಿದೆ.
ಹಂಪಿ ಪಟ್ಟಣ ಸುಧಾರಣೆ, ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಸುಧಾರಣೆಗಳು ಆಗಿವೆ. ಪ್ರವಾಸಿಗರನ್ನು ಸೆಳೆಯಲು ನಾಯಿ ಕೊಡೆಯಂತೆ ಎದ್ದಿರುವ ಹೋಂಸ್ಟೇಗಳಿಗೂ ಮೂಗುದಾರ ಹಾಕಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈಗಾಗಲೇ ನ್ಯಾಯಾಲಯವೂ ಹಂಪಿ ವಿಚಾರದಲ್ಲಿ ಹಲವಾರು ಆದೇಶಗಳನ್ನು ನೀಡಿದ್ದು. ಅದನ್ನುಪಾಲಿಸಿ ಸುಧಾರಣೆಗೆ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ನೇತೃತ್ವದ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ ಸಂದರ್ಭದಲ್ಲಿ ಹಲವು ವಿಷಯಗಳು ಪ್ರಸ್ತಾಪವಾದವು. ಅದರಲ್ಲಿ ಹೋಂಸ್ಟೇಗಳು, ಕಾನೂನು ಬಾಹಿರ ಚಟುವಟಿಕೆ, ಸ್ವಚ್ಛತೆ, ಮೂಲಸೌಕರ್ಯ ಕಲ್ಪಿಸುವ ಕುರಿತೂ ಚರ್ಚಿಸಲಾಯಿತು.
ಸಿಎಂ ಕಟ್ಟುನಿಟ್ಟಿನ ಸೂಚನೆ
ವಿಶ್ವಪಾರಂಪರಿಕ ತಾಣವಾದ ಹಂಪಿಯ ಸುತ್ತಲಿನ ಗ್ರಾಮಗಳ ಕುರಿತು ನ್ಯಾಯಾಲಯ ಆದೇಶ ನೀಡಿರುವಂತೆ ಹೋಮ್ ಸ್ಟೇಗಳನ್ನು ತಕ್ಷಣಕ್ಕೆ ನಿಲ್ಲಿಸಬೇಕು. ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ತೀರ್ಮಾನ ತೆಗೆದುಕೊಳ್ಳುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ ಮಾದಕವಸ್ತುಗಳ ಬಳಕೆ, ವೇಶ್ಯಾವಾಟಿಕೆಗಳಂಥ ಕಾನೂನು ಬಾಹಿರ ಚಟುವಟಿಕೆಗಳನ್ನು ಗುರುತಿಸುವಂತೆ ನ್ಯಾಯಾಲಯ ಸೂಚಿಸಿದ್ದು, ಇದನ್ನು ಗುರುತಿಸಿ ನಿಲ್ಲಿಸುವ ಕೆಲಸವಾಗಬೇಕು. ಗ್ರಾಮಸ್ಥರಿಗೆ ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಬಾರದು ಎಂದು ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ನ್ಯಾಯಾಲಯದಲ್ಲಿ ದಾವೆ
ಹಂಪಿ ಪ್ರದೇಶದ 29 ಗ್ರಾಮಗಳಲ್ಲಿ 10 ಸಾವಿರ ಜನರಿದ್ದಾರೆ. 2009 ರಲ್ಲಿ ನಾಲ್ಕು ಸ್ವಾಮೀಜಿಗಳು ದಾವೆ ಹೂಡಿದ್ದು, ಅನಧಿಕೃತ ಚಟುವಟಿಕೆಗಳನ್ನು ಗುರುತಿಸುವ ಕೆಲಸ ಪ್ರಾಧಿಕಾರದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅದರ ಆಧಾರದ ಮೇಲೆ ಸ್ಥಳೀಯರಿಗೆ ಅಂಗಡಿ ಹಾಕಲು ಅವಕಾಶವಿಲ್ಲ. 230 ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಭಿವೃದ್ದಿಗೆ ಕ್ರಮವಿಲ್ಲ
ಹಂಪಿ ಅಭಿವೃದ್ಧಿಗೆ ಪ್ರಾಚ್ಯವಸ್ತು ಇಲಾಖೆ ಕ್ರಮವಹಿಸಿಲ್ಲ. ಹಂಪಿಗೆ ಬರುವ ಜನರಿಗೆ ಈ ಕ್ರಮದಿಂದ ತೊಂದರೆಯಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕಿದೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ, ಹಾಗೂ ಆರ್ಥಿಕ ಚಟುವಟಿಕೆ ಹಮ್ಮಿಕೊಳ್ಳಲು, ಹೋಮ್ ಸ್ಟೇ ನಡೆಸಲು ಅವಕಾಶ ಕಲ್ಪಿಸಲು ಅವಕಾಶ ನೀಡುವಂತೆ ಮಾಜಿ ಸಂಸದ ಉಗ್ರಪ್ಪ ಮನವಿ ಮಾಡಿದರು.
ದಿನನಿತ್ಯದ ಅವಶ್ಯಕತೆಗಳಿಗೆ 50 ಚಟುವಟಿಕೆಗಳನ್ನು ಗುರುತಿಸಲಾಗಿದೆ. ಹೋಮ್ ಸ್ಟೇ ಗೆ ಇದರಲ್ಲಿ ಅವಕಾಶ ಕಲ್ಪಿಸಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಜಾಗದಲ್ಲಿ ಸ್ಟಾರ್ ಹೋಟೆಲ್ ನಿರ್ಮಿಸಲು ಅನುಮತಿ ನೀಡಲಾಗಿದೆ. ಜೈನರ ಆಶ್ರಮ, ಮಠವಿದೆ, ಖಾಸಗಿಯವರಿಗೆ ಹೋಮ್ ಸ್ಟೇ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಬಡವರಿಗೆ ಹೋಟೆಲು, ಹೋಮ್ ಸ್ಟೇ ನಡೆಸಲು ಅವಕಾಶವಿಲ್ಲ ಎಂದು ಉಗ್ರಪ್ಪ ಅವರು ವಿವರಿಸಿದರು.
ಹೋಮ್ ಸ್ಟೇ ವಾಣಿಜ್ಯ ಚಟುವಟಿಕೆ ಯಾಗಿದೆ ಎಂದು ನ್ಯಾಯಾಲಯ ಪರಿಗಣಿಸಿದೆ. ಸದ್ಯ ನ್ಯಾಯಾಲಯ ಸ್ಥಳ ಪರಿಶೀಲನೆ ಮಾಡಲು ಸೂಚಿಸಿದ್ದು,ಈ ಚಟುವಟಿಕೆಗಳಿಂದ ಪಾರಂಪರಿಕ ತಾಣಕ್ಕೆ ಹಾನಿಯಾಗುತ್ತದೆಯೇ ಎಂಬ ಅಂಶಗಳನ್ನು ಪರಿಶೀಲಿಸಲು ತಿಳಿಸಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್, ನಗರಾಭಿವೃದ್ದಿ ಇಲಾಖೆ ಸಚಿವ ಬೈರತಿ ಸುರೇಶ್, ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ತುಕಾರಾಂ ಮತ್ತಿತರರು ಸಿಎಂ ಅವರೊಂದಿಗೆ ನಡೆದ ಸಭೆಯಲ್ಲಿದ್ದರು.