Traffic Diversions: ಬೆಂಗಳೂರಿನಲ್ಲಿ ಮೇಲ್ಸೇತುವೆ ಸೇರಿ ವಿವಿಧ ಕಾಮಗಾರಿ ಹಿನ್ನೆಲೆ; ಈ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ
Jul 12, 2024 11:25 AM IST
ಬೆಂಗಳೂರಿನಲ್ಲಿ ಮೇಲ್ಸೇತುವೆ ಸೇರಿ ವಿವಿಧ ಕಾಮಗಾರಿ ಹಿನ್ನೆಲೆ; ಈ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ
- ಕೆಂಪಾಪುರ ಕ್ರಾಸ್, ಕೊಡಿಗೇಹಳ್ಳಿ ಜಂಕ್ಷನ್‌ನಲ್ಲಿ ಮೆಟ್ರೋ ಕಾಮಗಾರಿ, ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಹಾಗೂ ಕೆಆರ್ ಪುರಂ ಬಳಿ 200 ಮೀಟರ್‌ಗಳ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಹಾಗೂ ಇತರೆ ಕಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರು: ದೇಶದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರಗಳಲ್ಲಿ ಒಂದಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore Traffic) ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಅನುಗುಣವಾಗಿ ರಸ್ತೆಗಳ ನಿರ್ಮಾಣವೂ ಆಗಬೇಕಿದೆ. ಸರ್ಕಾರ ಈಗಾಗಲೇ ಕೆಲವೊಂದು ಕಡೆ ಮೇಲ್ಸೇತುವೆ ನಿರ್ಮಾಣದಂತಹ ಕಾಮಗಾರಿಗಳಿಗೆ ವೇಗವನ್ನು ನೀಡಿದೆ. ಇದರ ಜೊತೆಗೆ ಮೆಟ್ರೋ ನಿರ್ಮಾಣದ ಕಾಮಗಾರಿಯೂ (Metro Construction) ನಡೆಯುತ್ತಿರುವುದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಯಾವೆಲ್ಲಾ ಪ್ರದೇಶಗಳಲ್ಲಿ ಕಾಮಗಾರಿ ನಡೆಯುತ್ತಿದೆ ಅಂತಹ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಗದಿರಲು ಬೆಂಗಳೂರು ಸಂಚಾರ ಪೊಲೀಸರು (Bangalore Traffic Police) ಕೆಲವೂಂದು ಸಂಚಾರ ಮಾರ್ಗ ಬದಲಾವಣೆಗಳನ್ನು ಮಾಡಿದ್ದಾರೆ. ಅದರ ವಿವರ ಇಲ್ಲಿದೆ.
ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರ ಸಲಹೆಗಳು
ಬೆಂಗಳೂರು ಉತ್ತರ ಭಾಗದಲ್ಲಿ ಹೆಬ್ಬಾಳ ಜಂಕ್ಷನ್ (Hebbal Junction) ಸೇರಿದಂತೆ ಕೆಲ ಔಟರ್ ರಿಂಗ್ ರೋಡ್‌ಗಳಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಇದಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) ಮಾಹಿತಿಯನ್ನು ನೀಡಿದ್ದಾರೆ.
ಕೆಂಪಾಪುರ ಕ್ರಾಸ್, ಕೊಡಿಗೇಹಳ್ಳಿ ಜಂಕ್ಷನ್‌ನಲ್ಲಿ ಮೆಟ್ರೋ ಕಾಮಗಾರಿ, ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಹಾಗೂ ಕೆಆರ್ ಪುರಂ ಬಳಿ 200 ಮೀಟರ್‌ಗಳ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಹಾಗೂ ಇತರೆ ಕಡೆ ನಡೆಯುತ್ತಿರುವ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ.
ಗುರುವಾರ (ಜುಲೈ 11) ಟ್ರಾಫಿಕ್ ಪೊಲೀಸರು ಹಂಚಿಕೊಂಡಿರುವ ಮಾಹಿತಿಯಂತೆ, ಪ್ರತಿನಿತ್ಯ ಹೆಬ್ಬಾಳ ಮೇಲ್ಸೇತುವೆ ಮೇಲೆ ಸುಮಾರು 2.5 ಲಕ್ಷ ವಾಹನಗಳು ಸಂಚಾರ ಮಾಡುತ್ತವೆ. ರಸ್ತೆಯ ಸಾಮರ್ಥ್ಯಕ್ಕಿಂತ ಇದು ಹೆಚ್ಚಾಗಿದೆ. ಹೀಗಾಗಿ ಇಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ನಗರದ ಕೆಲವೆಡೆ ಕಾಮಗಾರಿಗಳು ನಡೆಯುತ್ತಿವೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಕೆಆರ್‌ಪುರಂ ಬಳಿ 200 ಮೀಟರ್ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಗೆ ಕೆಂಪಾಪುರ, ಕೊಡಿಗೇಹಳ್ಳಿ ಜಂಕ್ಷನ್ ಹಾಗೂ ಬ್ಯಾಟರಾಯನಪುರ ಜಂಕ್ಷನ್ ಬಳಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ.
ಯಾರೆಲ್ಲಾ ಕೆಆರ್‌ಪುರಂ ಮಾರ್ಗವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೋ ಅವರೆಲ್ಲಾ ಹೆಣ್ಣೂರು ಕ್ರಾಸ್ ಮೂಲಕ ಬೆಂಗಳೂರು ರಸ್ತೆಗೆ ತಲುಪಬಹುದು. ಅಥವಾ ಥಣಿಸಂದ್ರ-ಹೆಗ್ಡೆನಗರ ಮುಖ್ಯ ರಸ್ತೆ ಮಾರ್ಗದಲ್ಲಿ ರೆವಾ ಜಂಕ್ಷನ್ ಬಳಿ ಬಲಕ್ಕೆ ಪಡೆದುಕೊಂಡು ಬೆಂಗಳೂರು ರಸ್ತೆಗೆ ತಲುಪಬಹುದು. ಯಾರೆಲ್ಲಾ ಬೆಂಗಳೂರು ನಗರಕ್ಕೆ ಆಗಮಿಸುತ್ತಾರೋ ಅವರು, ಐಒಸಿ ಮುಕುಂದ ಥಿಯೇಟರ್ ರಸ್ತೆ ಅಥವಾ ನಾಗವಾರ-ಟ್ಯಾನರಿ ರಸ್ತೆ ಮೂಲಕ ನಗರವನ್ನು ಪ್ರವೇಶಿಬಹುದು. ಈ ಮಾರ್ಗವನ್ನು ಅನುಸರಿಸಿದರೆ ಸಂಚಾರ ದಟ್ಟಣೆಯನ್ನು ತಪ್ಪಿಸಬಹುದು ಅನ್ನೋದು ಬೆಂಗಳೂರು ಸಂಚಾರ ಪೊಲೀಸರ ಸಲಹೆಯಾಗಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)