Rameshwaram Cafe Blast:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಭೇದಿಸಿದ ಎನ್‌ಐಎ, ಬಾಂಬ್ ಇಟ್ಟ ಆರೋಪಿ, ರೂವಾರಿ ಪಶ್ಚಿಮ ಬಂಗಾಳದಲ್ಲಿ ಬಂಧನ
Apr 12, 2024 04:30 PM IST
ಬೆಂಗಳೂರು ಕೆಫೆ ಸ್ಪೋಟ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದಿದ್ದ ಸ್ಪೋಟ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಎನ್‌ಐಎ( NIA) ಬಂಧಿಸಿದೆ.
ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಬೆಂಗಳೂರನ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಬಾಂಬ್ ಇಟ್ಟಿದ್ದ ಇಬ್ಬರನ್ನು ಬಂಧಿಸಿದೆ. ಮುಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮಥೀನ್ ತಾಹಾ ಇವರನ್ನು ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಕಾಂತಿ ಎಂಬಲ್ಲಿ ಬಂಧಿಸಲಾಗಿದೆ. ಕೇಂದ್ರ ತನಿಖಾ ತಂಡಗಳು, ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಕೇರಳದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ಧಾರೆ. ಈ ಮೂಲಕ ಎನ್ ಐಎ ಮಹತ್ವದ ಪ್ರಗತಿ ಸಾಧಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮುಸಾವೀರ್ ಮತ್ತು ಅಬ್ದುಲ್ ತಾಹಾ ಸ್ಫೋಟ ಸಂಭವಿಸಿದ ನಂತರ ತಲೆಮರೆಸಿಕೊಂಡಿದ್ದರು.ಇವರು ಕರ್ನಾಟಕದಿಂದ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾರೆ ಎಂದು ಶಂಕಿಸಲಾಗಿತ್ತು.
ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ನಂತರ ವಿಶೇಷ ಕಾರ್ಯಾಚರಣೆ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಜಮೀಲ್ ಹಾಗೂ ಮಾಝ್ ಮುನೀರ್ ಎಂಬ ಇಬ್ಬರನ್ನು ಎನ್ಐಎ ಬಂಧಿಸಿ ವಿಚಾರಣೆಗೊಳಪಡಿಸಿತ್ತು.
ಬಾಂಬ್ ಇಟ್ಟಿದ್ದ ಮುಸಾವೀರ್ ಶಾಜೀಬ್ ಎಂಬ ಆರೋಪಿಯೇ ಹೋಟೆಲ್ ನಲ್ಲಿ ಬಾಂಬ್ ಇಟ್ಟಿದ್ದ ಎಂದು ಊಹಿಸಲಾಗಿದೆ. ಈತನ ಜೊತೆಗೆ ಅಬ್ದುಲ್ ಮಥೀನ್ ತಾಹಾ ಸೇರಿಕೊಂಡು ಸಂಚು ರೂಪಿಸಿದ್ದ. ಇದೀಗ ಇಬ್ಬರನ್ನೂ ಬೆಂಗಳೂರಿಗೆ ಕರೆತರಲಾಗುತ್ತಿದೆ. ಇವರ ವಿಚಾರಣೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿ ಹೊರ ಬೀಳಲಿದೆ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.
ಈ ಇಬ್ಬರು ಪ್ರಮುಖ ಆರೋಪಿಗಳ ಸುಳಿವು ನೀಡಿದವರಿಗೆ ತಲಾ ರೂ. 10 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು.
ಇವರ ಬಂಧನಕ್ಕೆ ಕರ್ನಾಟಕ, ಕೇರಳ, ತಮಿಳುನಾಡು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ 18 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು.
ಗ್ರಾಹಕನ ಸೋಗಿನಲ್ಲಿ ಹೋಟೆಲ್ ಪ್ರವೇಶಿಸಿದ ಆರೋಪಿ ಶಾಜಿಬ್ ತಿಂಡಿ ತಿಂದು ಬಾಂಬ್ ಇದ್ದ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದ. ನಂತರ ಇದು ಸ್ಫೋಟಗೊಂಡು ಹಲವಾರು ಮಂದಿ ಗಾಯಗೊಂಡಿದ್ದರು. ಅಬ್ದುಲ್ ಮಥೀನ್ ತಾಹಾ ಈ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಎನ್ ಐಎ ಹಲವು ಪ್ರಕರಣಗಳಲ್ಲಿ ಈತನನ್ನು ಬಂಧಿಸಲು ಎನ್ ಐಎ ಪ್ರಯತ್ನ ನಡೆಸುತ್ತಲೇ ಇತ್ತು. ಈ ಪ್ರಕರಣದ ಮತ್ತೊಬ್ಬ ಆರೋಪಿ ಮುಜಾಮಿಲ್ ಶರೀಫ್ ನನ್ನು ಮಾರ್ಚ್ 26ರಂದು ಬಂಧಿಸಲಾಗಿತ್ತು.
ಮುಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮಥೀನ್ ತಾಹಾ ಇಬ್ಬರೂ ಪಶ್ಚಿಮ ಬಂಗಾಳದಲ್ಲಿ ನಕಲಿ ಹೆಸರುಗಳಲ್ಲಿ ಅಲೆದಾಡುತ್ತಿದ್ದರು. ಪದೇ ಪದೇ ಸ್ಥಳವನ್ನು ಬದಲಾಯಿಸುತ್ತಿದ್ದರು. ಸ್ಫೋಟದ ನಂತರ ಬಾಂಬರ್ ಮುಸಾವಿರ್ ಹುಸೇನ್ ಶಾಜಿಬ್ ನ ಹಲವು ವಿಡಿಯೋ ಮತ್ತು ಫೊಟೋಗಳನ್ನು ಎನ್ ಐಎ ಬಿಡುಗಡೆ ಮಾಡಿತ್ತು.
ಈ ಪ್ರಕರಣದಲ್ಲಿ ಇವರ ಜೊತೆಗೆ ಕೈ ಜೋಡಿಸಿರುವ ಅಥವಾ ನೇರವಾಗಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗೆ ಮಾಹಿತಿ ಕಲೆಹಾಕಲಾಗಿದೆ. ಇವರ ಜೊತೆಗೆ ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ ಹಲವು ಶಂಕಿತರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಮಾಹಿತಿ ಸಿಕ್ಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ 2024ರ ಮಾರ್ಚ್ 1 ರಂದು ವೈಟ್‌ಫೀಲ್ಡ್ ಮುಖ್ಯರಸ್ತೆಯ ಐಟಿಪಿಎಲ್‌ನಲ್ಲಿ ಅತ್ಯಂತ ಜನಪ್ರಿಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ದೇಶಾದ್ಯಂತ ಭಾರೀ ಸದ್ದು ಮಾಡಿತ್ತು.
(ವರದಿ: ಎಚ್.ಮಾರುತಿ. ಬೆಂಗಳೂರು)