Bangalore Crime: ಯುವತಿ ಮೇಲೆ ಅತ್ಯಾಚಾರ, 6 ವರ್ಷದಿಂದ ಫೋಟೋ ಇಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದ ಬೀದರ್ ಯುವಕ ಸೆರೆ
Feb 06, 2024 06:25 PM IST
ಯುವತಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
- ವಿಶ್ವ ಹಿಂದೂ ಪರಿಷತ್ ಸಮಾವೇಶದಲ್ಲಿ ಪರಿಚಯವಾಗಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಬೀದರ್ ಮೂಲದ ಯುವಕನನ್ನು ಬಂಧಿಸಲಾಗಿದೆ.
ಬೆಂಗಳೂರು: ಯುವತಿ ಮೇಲೆ ಅತ್ಯಾಚಾರ ನಡೆಸಿದ್ದೂ ಅಲ್ಲದೇ ಕೆಲವು ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಸತತ ಆರು ವರ್ಷದಿಂದ ಆಕೆಯಿಂದ ಹಣ ಕೀಳುತ್ತಲೇ ಇದ್ದ ಆತನ ವಿರುದ್ದ ರೋಸಿ ಹೋಗಿ ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರ, ವಂಚನೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಬೀದರ್ ಮೂಲದ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಹೊಸಳ್ಳಿ( 25)ಬಂಧಿತ ಆರೋಪಿ.
ಆರು ವರ್ಷದ ಹಿಂದೆ ಉಡುಪಿಯಲ್ಲಿ ನಡೆದಿದ್ದ ವಿಶ್ವಹಿಂದೂ ಪರಿಷತ್ ನ ಕಾರ್ಯಕ್ರಮವೊಂದರಲ್ಲಿ ಯುವತಿ ಭಾಗಿಯಾಗಿದ್ದಳು. ಕಾರ್ಯಕ್ರಮಕ್ಕೆ ಬಂದಿದ್ದ ಶಿವಕುಮಾರ್‌ಗೆ ಈಕೆಯ ಪರಿಚಯವಾಗಿತ್ತು. ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಊರಿಗೆ ವಾಪಾಸಾದ ನಂತರವೂ ಇಬ್ಬರ ನಡುವೆ ಮಾತುಕತೆ, ಮೊಬೈಲ್ ಚಾಟಿಂಗ್ ಮುಂದುವರೆದಿದ್ದವು.
ಆನಂತರ ಆಕೆಯ ಊರಿಗೆ ಬಂದಿದ್ದ ಶಿವಕುಮಾರ್ ಮನೆಯಲ್ಲಿ ಯಾರೂ ಇಲ್ಲದಾಗ ಆಕೆಯೊಂದಿಗೆ ಒತ್ತಾಯಪೂರ್ವಕ ಲೈಂಗಿಕ ಸಂಬಂಧ ಬೆಳೆಸಿದ್ದ. ಅಲ್ಲದೇ ಆ ವೇಳೆ ಕೆಲವು ಫೋಟೋಗಳನ್ನು ತೆಗೆದುಕೊಂಡಿದ್ದ. ಕೆಲವು ದಿನಗಳ ನಂತರ ಆಕೆಗೆ ನಿನ್ನ ಕೆಲ ಫೋಟೋಗಳು ನನ್ನ ಬಳಿ ಇವೆ. ಹಣ ನೀಡದೇ ಇದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಹೀಗೆ ಹಲವು ಬಾರಿ ಬೆದರಿಕೆ ಹಾಕಿ ಒಟ್ಟು85 ಸಾವಿರ ರೂ.ಗಳನ್ನು ಆಕೆಯಿಂದ ಕಿತ್ತಿದ್ದ. ಒಮ್ಮೆ ಹಣ ನೀಡದೇ ಇದ್ದಾಗ ಆಕೆಯೊಂದಿಗೆ ಇದ್ದ ಖಾಸಗಿ ಕ್ಷಣಗಳ ಫೋಟೋವನ್ನು ಸಂಬಂಧಿಯೊಬ್ಬನಿಗ ಕಳುಹಿಸಿದ್ದ. ಇದನ್ನು ಆಕೆಗೆ ಹೇಳಿ ಬೆದರಿಸಿದ್ದ. ಕೆಲ ದಿನಗಳ ಹಿಂದೆ ಮತ್ತೆ ಊರಿಗೆ ಬಂದು ಭೇಟಿಯಾಗುವಂತೆ ಪೀಡಿಸಿದ್ದ.
ಈತನ ಕಾಟ ಹೆಚ್ಚುತ್ತಿದ್ದುದರಿಂದ ಆತಂಕಗೊಂಡ ಯುವತಿ ತನ್ನ ಪೋಷಕರಿಗೆ ಆತನ ವರ್ತನೆ, ಹಿಂದಿನ ಘಟನೆಗಳನ್ನಾ ವಿವರಿಸಿದ್ದಳು. ಕೊನೆಗೆ ಆಕೆಯ ಪೋಷಕರು ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಶಿವಕುಮಾರ್ ಹಳ್ಳಿ ವರ್ತನೆ ಬಗ್ಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಹಣ ಕಿತ್ತಿತ್ತು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನೆಲಮಂಗಲ ಠಾಣೆ ಇನ್ಸ್‌ಪೆಕ್ಟರ್ ಶಶಿಧರ ತಿಳಿಸಿದ್ದಾರೆ.