Brand Bangalore: ಬ್ರಾಂಡ್ ಬೆಂಗಳೂರು ಹೆಸರಲ್ಲಿ ಏನು ಮಾಡಿದ್ದೀರಿ;ಎಚ್‌ಡಿಕೆ ಟೀಕೆ, ಬೆಂಗಳೂರು ಗೌರವ ಹಾಳು ಮಾಡಬೇಡಿ; ಡಿಕೆಶಿ ತಿರುಗೇಟು
Oct 17, 2024 01:33 PM IST
ಬೆಂಗಳೂರಿನ ಮಳೆಯಿಂದ ಅವಾಂತರ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆದಿದೆ.
- ಬೆಂಗಳೂರಿನಲ್ಲಿ ಎಡಬಿಡದೇ ಸುರಿದ ಮಳೆಯಿಂದ ಭಾರೀ ಅವ್ಯವಸ್ಥೆಯಾಗಿದೆ. ಬ್ರಾಂಡ್ ಬೆಂಗಳೂರು ಎಂದರೆ ಇದೆನಾ ಎಂದು ಎಚ್‌ಡಿಕುಮಾರಸ್ವಾಮಿ ಹಾಗೂ ಆರ್. ಅಶೋಕ ಪ್ರಶ್ನಿಸಿದ್ದರೆ, ಬೆಂಗಳೂರಿನ ಗೌರವ ಹಾಳಾಗುವ ಹೇಳಿಕೆ ನೀಡಬೇಡಿ ಎಂದು ಡಿಸಿಎಂ ಡಿಕೆಶಿ ತಿರುಗೇಟು ನೀಡಿದ್ದಾರೆ. ಪ್ರಮುಖರ ರಾಜಕೀಯ ಹೇಳಿಕೆ ಇಲ್ಲಿದೆ
- ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರಿನಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿದೆ. ಹಲವು ಕಡೆ ಸಂಚಾರ ದಟ್ಟಣೆಯೂ ಅತಿಯಾಗೀ ಜನ ಹೈರಾಣಾಗಿದ್ದು ಬೆಂಗಳೂರಿನ ಸನ್ನಿವೇಶವನ್ನು ಬಯಲು ಮಾಡಿದೆ. ಮಂಗಳವಾರ ಯಲಹಂಕ ವಲಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಚೌಡೇಶ್ವರಿ ನಗರದಲ್ಲಿ 73.5 ಎಂ ಎಂ ಮಳೆಯಾಗಿದ್ದು ಬೆಂಗಳೂರಿನಲ್ಲೇ ಅತಿ ಹೆಚ್ಚು ಮಳೆಯಾದ ಪ್ರದೇಶವಾಗಿದೆ. ಜಕ್ಕೂರಿನಲ್ಲಿ 65.5 ಎಂ ಎಂ ಮಳೆಯಾಗಿದ್ದು ಭಾರೀ ಅವಾಂತರ ಸೃಷ್ಟಿಸಿತ್ತು ಈ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕೆಸರೆರಟಾಚಕ್ಕೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಕಳೆದ ಮೂರೂ ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಅನೇಕ ಬಡಾವಣೆಗಳಲ್ಲಿ ಮೊಳ ಕಾಲುದ್ದ ನೀರು ನಿಂತಿದ್ದು ಅವಾಂತರ ಸೃಷ್ಟಿಸಿದೆ. ಸಾರ್ವಜನಿಕರು ಪದಾಡುವ ಸ್ಥಿತಿ ನಿರ್ಮಾಣವಾಗಿದ್ದು ಅಳುವ ಮಂದಿಗೆ ಹಿಡಿ ಶಾಲಾ ಹಾಕುತ್ತಿದ್ದಾರೆ. ಬ್ರ್ಯಾಂಡ್ ಬೆಂಗಳೂರಿನ ಕನಸನ್ನು ಬಿತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲಾಗದೆ ಇರುವ ನಿಮ್ಮ ಸರ್ಕಾರ ಯಾವ ಬ್ರ್ಯಾಂಡ್ ನಿರ್ಮಾಣ ಮಾಡಲಿದೆ ಎಂದು ಪ್ರಶ್ನಿಸಿದ್ದಾರೆ.
ಅತ್ತ ಶಿವಕುಮಾರ್ ಅವರು ಪ್ರಕೃತಿಯನ್ನು ನಿಯಂತ್ರಿಸಲು ಅಸಾಧ್ಯ. ಬೆಂಗಳೂರಿನ ಗೌರವವನ್ನು ಹಾಳು ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ತೊಂದರೆಯೂ ಆಗಿದೆ. ಸರ್ಕಾರ ಆದ್ಯತೆಯ ಮೇರೆಗೆ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಮಳೆ ಸುರಿಯುತ್ತಿರುವ ವಿಷಯವನ್ನೇ ಹಿಡಿದುಕೊಂಡು ಪ್ರತಿಪಕ್ಷಗಳು ಬೆಂಗಳೂರಿನ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಇದು ಸರಿ aa. ಸರ್ಕಾರ ಎಲ್ಲ ಸಮಸ್ಯೆಗಳಿಗೂ ಪರಿಹಾರ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ.
ಎಚ್‌ಡಿಕೆ ಟೀಕೆ
ಒಂದೇ ದಿನದ ಮಳೆಗೆ ಕೆರೆಯಾದ ಭಾರತದ ಸಿಲಿಕಾನ್ ವ್ಯಾಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದರು. ಒಂದೇ ದಿನದ ಮಳೆಗೆ ಭಾರತದ ಸಿಲಿಕಾನ್ ವ್ಯಾಲಿ ಕೆರೆಯಂತೆ ಆಗಿದ್ದು, ಇಂಥ ದುಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರಕಾರದ ಕೆಟ್ಟ ನೀತಿಗಳೇ ಕಾರಣ ಎಂದು ಕುಮಾರಸ್ವಾಮಿ ಟೀಕಿಸಿದ್ದರು.
ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್'ನಲ್ಲಿ ಪ್ರವಾಹ ಸದೃಶ ಪರಿಸ್ಥಿತಿ ತಲೆದೋರಿದೆ ಎಂದು ಅವರು ದೂರಿದ್ದರು.
ಅಶೋಕ್ ಆಕ್ರೋಶ
ಬ್ರ್ಯಾಂಡ್ ಬೆಂಗಳೂರು ಘೋಷಣೆ ವಾಪಸ್ ಪಡೆಯಿರಿ, ಇಲ್ಲವಾದರೆ ಅನುದಾನ ಬಿಡುಗಡೆ ಮಾಡಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬೆಳ್ಳಂದೂರು, ಮಹದೇವಪುರ ಮೊದಲಾದ ಕಡೆ ಮಳೆಯಿಂದ ಹಾನಿಯಾಗಿದೆ. ಇಂತಹ ಸಮಯದಲ್ಲೂ ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದಾರೆ. ಆದರೆ ಕೇವಲ ಸದ್ದು ಕೇಳಿಬರುತ್ತಿದ್ದು, ಬ್ರ್ಯಾಂಡ್ ಬದಲು ಬ್ಯಾಂಡ್ ಬೆಂಗಳೂರು ಆಗಿದೆ. ನಿಯಂತ್ರಣ ಕೊಠಡಿ ತೆರೆದಿದ್ದಾರೆಯೇ ಹೊರತು ಯಾವ ಕೆಲಸವೂ ಆಗಿಲ್ಲ. ಗುತ್ತಿಗೆದಾರರಿಗೆ ಬಿಲ್ ಬಾಕಿ ಇದೆ. ಒಂದೋ ಬ್ರ್ಯಾಂಡ್ ಬೆಂಗಳೂರು ಘೋಷಣೆಯನ್ನು ವಾಪಸ್ ಪಡೆಯಲಿ, ಇಲ್ಲವಾದರೆ ಏನು ಮಾಡುತ್ತೇವೆಂದು ಸರಿಯಾದ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿ ರಸ್ತೆ ಅಭಿವೃದ್ಧಿಗೆ 8,000 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ ಸುಮಾರು 50% ಕೆಲಸ ಆರಂಭವಾಗಿತ್ತು. ರಾಜಕಾಲುವೆ ಸುಧಾರಣೆಗೆ 1,600 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಡಿ.ಕೆ.ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆಂದು ಹೇಳಿ ಇದೇ ಹಿಂದಿನ ಅನುದಾನಗಳನ್ನು ವಾಪಸ್ ಪಡೆದುಕೊಂಡರು. ಬಳಿಕ ಹೊಸದಾಗಿ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನವರು ವಿಶೇಷ ಅನುದಾನವನ್ನು ಬೆಂಗಳೂರಿಗೆ ನೀಡಿದ್ದರು. ಬಳಿಕ ಪ್ರತಿ ವರ್ಷ 3-4 ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ವಿಶೇಷ ಅನುದಾನವಾಗಿ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಅಶೋಕ್ ಟೀಕಿಸಿದರು.
ವರದಿ: ಎಚ್. ಮಾರುತಿ, ಬೆಂಗಳೂರು