logo
ಕನ್ನಡ ಸುದ್ದಿ  /  ಕರ್ನಾಟಕ  /  Nandi Hills Ropeway: ನಂದಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಕಾಮಗಾರಿಗೆ ಚಾಲನೆ, ಗಂಟೆಗೆ ಸಾವಿರ ಜನರ ಪ್ರಯಾಣ ಸಾಮರ್ಥ್ಯ | 10 ಅಂಶಗಳು

Nandi hills ropeway: ನಂದಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಕಾಮಗಾರಿಗೆ ಚಾಲನೆ, ಗಂಟೆಗೆ ಸಾವಿರ ಜನರ ಪ್ರಯಾಣ ಸಾಮರ್ಥ್ಯ | 10 ಅಂಶಗಳು

HT Kannada Desk HT Kannada

Mar 28, 2023 07:18 AM IST

google News

ರೋಪ್‌ವೇ (ಸಾಂಕೇತಿಕ ಚಿತ್ರ)

  • ಈ ರೋಪ್‌ವೇಗೆ 50 ಕ್ಯಾಬಿನ್‌ಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿ ಕ್ಯಾಬಿನ್‌ನಲ್ಲಿ 10 ಪ್ರಯಾಣಿಕರು ಪ್ರಯಾಣಿಸಬಹುದು.

ರೋಪ್‌ವೇ (ಸಾಂಕೇತಿಕ ಚಿತ್ರ)
ರೋಪ್‌ವೇ (ಸಾಂಕೇತಿಕ ಚಿತ್ರ) (HT)

ಚಿಕ್ಕಬಳ್ಳಾಪುರ: ಪ್ರವಾಸಿಗರ ನೆಚ್ಚಿನ ತಾಣ ನಂದಿ ಬೆಟ್ಟದಲ್ಲಿ ಪ್ರಯಾಣಿಕ ರೋಪ್‌ವೇ ನಿರ್ಮಾಣ ಮಾಡುವ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಈ ಪ್ರಾಜೆಕ್ಟ್‌ ಕುರಿತು ಹೆಚ್ಚಿನ ವಿವರವನ್ನು ನೀಡಿದ್ದಾರೆ.

"ಅಸಂಖ್ಯಾತ ಪ್ರವಾಸಿಗರ ಬಹು ದಶಕಗಳ ಕನಸನ್ನು ನನಸಾಗಿಸುವ ಕಾರ್ಯಕ್ಕೆ ಇಂದು ಚಾಲನೆ ದೊರೆತಿದ್ದು, ಖ್ಯಾತ ಕನ್ನಡ ಚಲನಚಿತ್ರ ನಟ ಶಂಕರ್ ನಾಗ್ ಅವರು ಪಂಚಗಿರಿ ನಂದಿಗಿರಿಧಾಮದಲ್ಲಿ ರೋಪ್ ವೆ ನಿರ್ಮಿಸಬೇಕು ಎಂದು ಒತ್ತಾಸೆ ಪಟ್ಟಿದ್ದರು. ಅವರ ಆಶಯ ಕೆಲವೇ ತಿಂಗಳಲ್ಲಿ ಈಡೇರಲಿದೆ" ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ನಂದಿ ಬೆಟ್ಟಕ್ಕೆ ರೋಪ್‌ ವೇ: ಹತ್ತು ಅಂಶಗಳು

  1. ಈ ರೋಪ್‌ವೇಗೆ 50 ಕ್ಯಾಬಿನ್‌ಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿ ಕ್ಯಾಬಿನ್‌ನಲ್ಲಿ 10 ಪ್ರಯಾಣಿಕರು ಪ್ರಯಾಣಿಸಬಹುದು.
  2. ರೋಪ್ ವೇಗೆ ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣ ತಲುಪಲು ಅಂದಾಜು 14-15 ನಿಮಿಷಗಳು ಬೇಕಾಗಲಿದೆ.
  3. ಈ ಯೋಜನೆಯಿಂದಾಗಿ ನೇರವಾಗಿ 500 ಜನರಿಗೆ, ಪರೋಕ್ಷವಾಗಿ 5000 ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿದೆ ಎಂದು ಸಿಎಂ ಹೇಳಿದ್ದಾರೆ
  4. ರೋಪ್ ವೇ ಕಾಮಗಾರಿ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
  5. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ ಅಭಿವೃದ್ಧಿಪಡಿಸುವ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
  6. ಸುಮಾರು 2.93 ಕಿ.ಮೀ ದೂರದ ರೋಪ್‌ವೇ ಅಭಿವೃದ್ಧಿಪಡಿಸಲಾಗುತ್ತದೆ.
  7. ಐತಿಹಾಸಿಕ ತಾಣ ಮತ್ತು ಪಾರಂಪರಿಕ ಸ್ಮಾರಕಗಳಿಗೆ ನೆಲೆಯಾಗಿರುವ ನಂದಿ ಬೆಟ್ಟ ಟ್ರಕ್ಕಿಂಗ್, ಸೈಕ್ಲಿಂಗ್ ಮತ್ತು ಪ್ಯಾರಾಗ್ರೆಡಿಂಗ್‌ನಂತಹ ಸಾಹಸ ಕ್ರೀಡೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಂತಹ ತಾಣ ತಲುಪಲು ರೋಪ್‌ವೇಯ ವೇಗ ಮತ್ತು ಪರಿಸರ ಸ್ನೇಹಿ ಸಾರಿಗೆ ಸೌಲಭ್ಯ, ಅನುಕೂಲ ಕಲ್ಪಿಸುವುದರೊಂದಿಗೆ ತಲುಪುವ ಸಮಯ ಉಳಿಸಲಾಗುತ್ತದೆ. ಪ್ರವಾಸಿಗರಿಗೆ ಸುತ್ತಮುತ್ತಲಿನ ಪ್ರದೇಶದ ವೈಮಾನಿಕ ಚಿತ್ರಣ ನೀಡುವುದರ ಜೊತೆಗೆ ಈ ಭಾಗದಲ್ಲಿ ಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಸಿಎಂ ಹೇಳಿದ್ದಾರೆ.
  8. ರೋಪ್‌ವೇ ನಿರ್ಮಾಣ ಸುಗಮ ಸಂಪರ್ಕದ ಜತೆಗೆ ನಂದಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್ ನಲ್ಲಿ- 480 ದ್ವಿಚಕ್ರ, 410 ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್ ಗಳು, ವಿಶ್ರಾಂತಿ ಕೊಠಡಿಗಳು, ರೆಸ್ಟೋರೆಂಟ್, ಮಳಿಗೆಗಳು ಇರುತ್ತವೆ.
  9. ಬೆಟ್ಟದ ಮೇಲಿನ ಟರ್ಮಿನಲ್ ನಲ್ಲಿ ಫುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ , ಟಿಕೆಟ್ ಕೌಂಟರ್ ಗಳು, ವಿಶ್ರಾಂತಿ ಕೊಠಡಿಗಳು ನಿರ್ಮಾಣ ಆಗಲಿವೆ. ಪ್ರತಿ ಗಂಟೆಗೆ ಅಂದಾಜು 1000 ಜನರನ್ನು ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣಕ್ಕೆ ಕರೆದೊಯ್ಯಬಹುದು.
  10. ಈ ಯೋಜನೆಯಿಂದಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ದೇವನಹಳ್ಳಿ ಕೋಟೆ, ನಂದಿ, ಭೋಗನಂದೀಶ್ವರ, ಘಾಟಿ ಸುಬ್ರಹ್ಮಣ್ಯ, ವಿದುರಾಶ್ವತ್ಥ, ಮುದ್ದೇನಹಳ್ಳಿ ಮುಂತಾದ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಲಿವೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹಳ ಹತ್ತಿರವಿರುವ ಕಾರಣ ದೇಶಿಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಮಾಹಿತಿ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ