ಅಳ್ವಾನ್ ಗಲ್ಲಿ ಕ್ರಿಕೆಟ್ ಗಲಾಟೆ; ಹಿಂಸಾಚಾರದಲ್ಲಿ 8 ಜನರಿಗೆ ಗಾಯ, ಬೆಳಗಾವಿಯಲ್ಲಿ ಕಟ್ಟೆಚ್ಚರ, 10 ಆರೋಪಿಗಳ ಬಂಧನ
May 24, 2024 04:12 PM IST
ಬೆಳಗಾವಿಯ ಅಳ್ವಾನ್ ಗಲ್ಲಿ ಕ್ರಿಕೆಟ್ ಗಲಾಟೆ ಬಳಿಕ ಘರ್ಷಣೆಗೆ ತಿರುಗಿದೆ. ಈ ಹಿಂಸಾಚಾರದಲ್ಲಿ 8 ಜನರಿಗೆ ಗಾಯಗಳಾಗಿವೆ. ಬೆಳಗಾವಿಯಲ್ಲಿ ಕಟ್ಟೆಚ್ಚರ ಘೋಷಿಸಿದ್ದು, 10 ಆರೋಪಿಗಳ ಬಂಧನವಾಗಿದೆ.
ಬೆಳಗಾವಿಯ ಅಳ್ವಾನ್ ಗಲ್ಲಿ ಕ್ರಿಕೆಟ್ ಗಲಾಟೆ ಹಿಂಸಾಚಾರದಲ್ಲಿ 8 ಜನರಿಗೆ ಗಾಯಗಳಾಗಿವೆ. ಈ ಪೈಕಿ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಕೂಡ ಇದ್ದಾರೆ. ಸದ್ಯ ಬೆಳಗಾವಿಯಲ್ಲಿ ಕಟ್ಟೆಚ್ಚರ ಘೋಷಿಸಿರುವ ಪೊಲೀಸರು, 10 ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿ: ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ತಲ್ವಾರ್ ಪ್ರದರ್ಶನ, ಕಲ್ಲುತೂರಾಟ ನಡೆಸಿದ ಘಟನೆ ಬೆಳಗಾವಿ ನಗರದ ಆಳ್ವಾನ್ ಗಲ್ಲಿಯಲ್ಲಿ ನಡೆದಿದೆ. ಈ ಗಲಾಟೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ತಲ್ವಾರ್ ಪ್ರದರ್ಶನ, ಕಲ್ಲುತೂರಾಟ ನಡೆಸಿದ್ದಕ್ಕಾಗಿ ಒಂದು ಗುಂಪಿನವರ ಮೇಲೆ ಐಪಿಸಿ ಸೆಕ್ಷನ್ 43, 147, 148, 323, 324, 307, 354, 504, 506, 153A, 149 ರ ಪ್ರಕಾರ ಮತ್ತು ಇನ್ನೊಂದು ಗುಂಪಿನ 13 ಯುವಕರ ಮೇಲೆ ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149ರ ಪ್ರಕಾರ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಬಂಧಿತರಲ್ಲಿ ಎರಡೂ ಗುಂಪುಗಳ ತಲಾ ಐವರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಗಲ್ಲಿ ಕ್ರಿಕೆಟ್ ಮತ್ತು ಗಲ್ಲಿ ಗಲಾಟೆ
ಬೆಳಗಾವಿಯ ಅಳ್ವಾನ್ನ ಆದರ್ಶ ಮರಾಠ ವಿದ್ಯಾಮಂದಿರ ಶಾಲೆ ಗ್ರೌಂಡ್ನಲ್ಲಿ ಗುರುವಾರ ಸಂಜೆ 4.30 ರಿಂದ 5 ಗಂಟೆ ಸಮಯದಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ಮೈದಾನ ಶಹಾಪುರ ಪೊಲೀಸ್ ಠಾಣೆಯ ಸಮೀಪವೇ ಇದೆ. ಈ ಆಟ ಮುಗಿದ ಬಳಿಕ ಗೆದ್ದ ತಂಡದವರ ಮೇಲೆ ಮತ್ತೊಂದು ತಂಡದ ಬಾಲಕರು ಹಲ್ಲೆ ನಡೆಸಿದ್ದರು. ಸಂಜೆ 6 ಗಂಟೆಗೆ ಇದು ಮತ್ತೆ ಮುಂದುವರಿದಿದ್ದು, ಯುವಕರ ಎರಡು ಗುಂಪು ಗಲ್ಲಿ ಕ್ರಿಕೆಟ್ ಗಲಾಟೆಗೆ ಕೈ ಜೋಡಿಸಿವೆ. ಒಂದು ಯುವಕರ ಗುಂಪು ಹಿಂದುಗಳ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿದ್ದಲ್ಲದೆ, ತಲ್ವಾರ್ ಪ್ರದರ್ಶಿಸಿ, ಎಸೆದೂ ಮಾಡಿತ್ತು. ಇದೇ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಸ್ಥಳಕ್ಕೆ ಆಗಮಿಸಿದ್ದರು. ಅವರು ಅಸಹಾಯಕರಾಗಿದ್ದಾಗ, ಮಹಿಳಾ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದರು. ಆಗ ಅಲ್ಲಿದ್ದ ಗುಂಪು ತಲ್ವಾರ್ ಅಲ್ಲೇ ಎಸೆದು ಪರಾರಿಯಾಗಿದೆ. ತಲ್ವಾರ್ ಎಸೆದ ಆರೋಪ ಎದುರಿಸುತ್ತಿರುವ ಅಬ್ದುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಳ್ವಾನ್ ಗಲ್ಲಿ ಗಲಾಟೆ; ಕಲ್ಲುತೂರಾಟದಿಂದ 8 ಜನರಿಗೆ ಗಾಯ
ಅಳ್ವಾನ್ ಗಲ್ಲಿಯಲ್ಲಿ ಗಲಾಟೆ ಸಂದರ್ಭದಲ್ಲಿ ಕಲ್ಲುತೂರಾಟ ನಡೆಸಿದ್ದರಿಂದಾಗಿ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಸೇರಿ 8 ಜನ ಗಾಯಗೊಂಡಿದ್ದಾರೆ. ಎಲ್ಲರಿಗೂ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದಾದ ಬಳಿಕ ನಿನ್ನೆ(ಮೇ 23) ರಾತ್ರಿ 7.30ಕ್ಕೆ ಶಹಾಪುರ ಪೊಲೀಸ್ ಠಾಣೆ ಬಳಿ ಜನ ಸೇರಿದ್ದರು. ಎರಡೂ ಕೋಮಿನ ಸದಸ್ಯರು ಸೇರಿದ್ದ ಕಾರಣ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಠಾಣಾ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಿದ ಪೊಲೀಸರು, ಎರಡು ಕೇಸ್ ದಾಖಲಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಕೆಎಸ್ಆರ್‌ಪಿ, ಮೂರು ಮಂದಿ ಸಿಪಿಐ ನಿಯೋಜಿಸಲಾಗಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, "ಬೆಳಗಾವಿ ನಗರ ಸೇರಿ ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸುತ್ತಿದ್ದೇವೆ. ಘರ್ಷಣೆಯಲ್ಲಿ 8 ಜನರಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ಧಾರೆ. ಕ್ರಿಕೆಟ್ ವಿಚಾರದ ಗಲಾಟೆ ವಿಕೋಪಕ್ಕೆ ತಿರುಗಿದೆ. ಆ ಸಂದರ್ಭದಲ್ಲಿ ತಲ್ವಾರ್ ಝಳಪಿಸಿದ ಆರೋಪ ಇದ್ದು, ಈ ಕುರಿತು ಮಾಹಿತಿ ಲಭ್ಯವಿದೆ. ಸ್ಥಳದಲ್ಲಿರುವ ಸಿಸಿಟಿವಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾಗಿ ಟಿವಿ ಮಾಧ್ಯಮಗಳು ವರದಿ ಮಾಡಿವೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.