Kannada Swamiji: ಗಡಿಯಲ್ಲಿ ಕನ್ನಡ ಸೇವೆ ಮಾಡುತ್ತಿದ್ದ ಅಲ್ಲಮಪ್ರಭು ಸ್ವಾಮೀಜಿ ನಿಧನ
Nov 12, 2023 03:33 PM IST
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಅಲ್ಲಮಪ್ರಭು ಸ್ವಾಮಿ ಲಿಂಗೈಕ್ಯರಾಗಿದ್ದಾರೆ.
- Kannada swamiji passes away ಕರ್ನಾಟಕ( Karnataka) ಮಹಾರಾಷ್ಟ್ರ( Maharashtra) ಗಡಿ ಭಾಗದಲ್ಲಿದ್ದುಕೊಂಡು ಕನ್ನಡ ಸೇವೆ ಮಾಡುತ್ತಿದ್ದ ( Kannada swamji) ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅನಾರೋಗ್ಯದಿಂದ ಭಾನುವಾರ ಲಿಂಗೈಕ್ಯರಾದರು.
ಚಿಕ್ಕೋಡಿ: ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದುಕೊಂಡು ಕನ್ನಡದ ಸೇವೆ ಮಾಡುತ್ತಿದ್ದ ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ (63) ನಿಧನರಾದರು.
ಗಡಿಭಾಗದ ಕನ್ನಡ ಸ್ವಾಮೀಜಿ ಎಂದೇ ಖ್ಯಾತರಾಗಿದ್ದಅಲ್ಲಮಪ್ರಭು ಸ್ವಾಮೀಜಿ ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಿಗ್ಗೆ ಲಿಂಗೈಕ್ಯರಾದರು.
ಮೂರು ದಶಕಕ್ಕೂ ಹೆಚ್ಚುಕಾಲದಿಂದ ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಬೆಳವಣಿಗೆ ಪ್ರಮುಖ ಪಾತ್ರ ವಹಿಸಿ ಕನ್ನಡ ಉಳಿವಿಗಾಗಿ ಶ್ರಮಿಸುತ್ತಿದ್ದ ಅವರು 52 ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಕಳೆದ 30 ವರ್ಷದಿಂದ ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಬೆಳವಣಿಗೆ ಪ್ರಮುಖ ಪಾತ್ರ ವಹಿಸಿ ಕನ್ನಡ ಉಳಿವಿಗಾಗಿ ಹಗಲು ರಾತ್ರಿ ಜಾಗೃತಿ ಮೂಡಿಸುತ್ತಿದ್ದರು. ಪ್ರತಿ ವರ್ಷವು ಶ್ರೀಮಠದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಿ ಕನ್ನಡ ಪುಸ್ತಕ ಪ್ರಕಟಿಸಿ ಕನ್ನಡಿಗರಿಗೆ ಓದಲು ಕೊಡುತ್ತಿದ್ದರು.
ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕ ಮಾಲೆಯನ್ನು ಆರಂಭಿಸಿ ಕನ್ನಡದ ಕೆಲಸವನ್ನು ಗಟ್ಟಿಯಾಗಿಯೇ ಸ್ವಾಮೀಜಿ ಮಾಡಿದ್ದಾರೆ. ಮಠದಲ್ಲಿ ಸ್ವಾಮೀಜಿ ಅವರು ಕನ್ನಡ ತೇರು ನಿರ್ಮಿಸಿ ಕಳೆದೊಂದು ದಶಕದಿಂದ ಸಿರಿಗನ್ನಡದ ತೇರು ಎಳೆಯುತ್ತಿದುದ್ದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿತ್ತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದಲ್ಲಿ ಕನ್ನಡ ಮಠದ ಸ್ವಾಮೀಜಿ ಅಪಾರ ಭಕ್ತರು ಹಾಗೂ ಅನುಯಾಯಿಗಳನ್ನು ಹೊಂದಿದ್ದರು. ಸ್ವಾಮೀಜಿ ಲಿಂಗೈಕ್ಯರಾದ ವಿಷಯ ತಿಳಿದು ಅಪಾರ ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಭಾಗದಿಂದಲೂ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಭಕ್ತರು ಕಂಬನಿ ಮಿಡಿದರು.
ಎಂಬಿಪಾಟೀಲ್ ಸಂತಾಪ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಚಿಂಚಣಿಯ ಅಲ್ಲಮಪ್ರಭು ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಅಲ್ಲಮ ಪ್ರಭುಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ದುಃಖ ತಂದಿದೆ.
ಶ್ರೀಗಳವರು ಬಸವ ತತ್ವಗಳನ್ನು ಪ್ರಚುರ ಪಡಿಸುತ್ತಲೇ ನಾಡು, ನುಡಿ ರಕ್ಷಣೆಗಾಗಿ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಕನ್ನಡ ಪ್ರಜ್ಞೆ ಮೂಡಿಸುತ್ತಾ ಕನ್ನಡದ ಸ್ವಾಮೀಜಿ ಎಂದೇ ಖ್ಯಾತರಾಗಿದ್ದರು. ಅನೇಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಭಕ್ತವೃಂದಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ್ ಕಂಬನಿ ಮಿಡಿದಿದ್ದಾರೆ.