logo
ಕನ್ನಡ ಸುದ್ದಿ  /  ಕರ್ನಾಟಕ  /  Chikkodi News: ಅನಾಥರಾಗಿ ಮೃತಪಟ್ಟ ಕೋಟ್ಯಧಿಪತಿ ತಂದೆ: ಅಂತ್ಯಕ್ರಿಯೆಗೂ ವಿದೇಶದಿಂದ ಬರಲೊಪ್ಪದೇ ಶವ ಬಿಸಾಕಿ ಎಂದ ಮಕ್ಕಳು

Chikkodi News: ಅನಾಥರಾಗಿ ಮೃತಪಟ್ಟ ಕೋಟ್ಯಧಿಪತಿ ತಂದೆ: ಅಂತ್ಯಕ್ರಿಯೆಗೂ ವಿದೇಶದಿಂದ ಬರಲೊಪ್ಪದೇ ಶವ ಬಿಸಾಕಿ ಎಂದ ಮಕ್ಕಳು

HT Kannada Desk HT Kannada

Aug 28, 2023 04:37 PM IST

google News

ಮಕ್ಕಳು ಬಾರದೇ ಇದ್ದುದರಿಂದ ಚಿಕ್ಕೋಡಿ ತಾಲ್ಲೂಕಿನಲ್ಲಿ ಪುಣೆ ಮೂಲದ ಮೂಲಚಂದ್ರ ಶರ್ಮ ಅಂತ್ಯಕ್ರಿಯೆ ನಡೆಯಿತು. ಎಸ್‌ಐ ಬಸಗೌಡ ನೇರ್ಲಿ ಇದಕ್ಕೆ ಸಂಪೂರ್ಣ ಸಹಕಾರ ನೀಡಿ ಮಾನವೀಯತೆ ಮೆರೆದರು

    • Carodpati died orphan ಮಹಾರಾಷ್ಟ್ರ ಮೂಲದ ಕೋಟ್ಯಧಿಪತಿಯೊಬ್ಬರು ಚಿಕಿತ್ಸೆಗೆಂದು ಚಿಕ್ಕೋಡಿಗೆ ಬಂದು ಇಲ್ಲಿಯೇ ಅನಾಥರಂತೆ ಮೃತಪಟ್ಟರು. ಅಂತ್ಯಕ್ರಿಯೆಗೆ ಮಕ್ಕಳು ಬರಲು ಒಪ್ಪದೇ ಇದ್ದುದರಿಂದ ಸರ್ಕಾರಿ ನೀತಿಯಂತೆಯೇ ಅಂತ್ಯಕ್ರಿಯೆಯನ್ನು ಮಾಡಲಾಯಿತು. ಇದೊಂದು ಮನಮಿಡಿಯುವ ಘಟನೆ.
ಮಕ್ಕಳು ಬಾರದೇ ಇದ್ದುದರಿಂದ ಚಿಕ್ಕೋಡಿ ತಾಲ್ಲೂಕಿನಲ್ಲಿ ಪುಣೆ ಮೂಲದ ಮೂಲಚಂದ್ರ ಶರ್ಮ ಅಂತ್ಯಕ್ರಿಯೆ ನಡೆಯಿತು. ಎಸ್‌ಐ  ಬಸಗೌಡ ನೇರ್ಲಿ ಇದಕ್ಕೆ ಸಂಪೂರ್ಣ ಸಹಕಾರ ನೀಡಿ ಮಾನವೀಯತೆ ಮೆರೆದರು
ಮಕ್ಕಳು ಬಾರದೇ ಇದ್ದುದರಿಂದ ಚಿಕ್ಕೋಡಿ ತಾಲ್ಲೂಕಿನಲ್ಲಿ ಪುಣೆ ಮೂಲದ ಮೂಲಚಂದ್ರ ಶರ್ಮ ಅಂತ್ಯಕ್ರಿಯೆ ನಡೆಯಿತು. ಎಸ್‌ಐ ಬಸಗೌಡ ನೇರ್ಲಿ ಇದಕ್ಕೆ ಸಂಪೂರ್ಣ ಸಹಕಾರ ನೀಡಿ ಮಾನವೀಯತೆ ಮೆರೆದರು

ಬೆಳಗಾವಿ: ಅವರು ಕೋಟ್ಯಧಿಪತಿ. ಬ್ಯಾಂಕ್‌ ಅಧಿಕಾರಿಯಾಗಿ ಚೆನ್ನಾಗಿಯೇ ಜೀವನ ನಡೆಸಿದವರು. ಮಕ್ಕಳನ್ನು ಚೆನ್ನಾಗಿ ಓದಿಸಿ ವಿದೇಶದಲ್ಲಿ ಬದುಕು ಕಟ್ಟಿಕೊಳ್ಳುವಂತೆ ನೋಡಿಕೊಂಡರು. ಆದರೆ ಕೊನೆಗಾಲದಲ್ಲಿ ಯಾರೂ ಇರಲಿಲ್ಲ. ಮಕ್ಕಳೂ ಅಂತ್ಯಕ್ರಿಯೆ ಬರಲು ಒಪ್ಪಲಿಲ್ಲ. ಇದರಿಂದ ಪೊಲೀಸರು ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಯೇ ಅವರ ಅಂತ್ಯಕ್ರಿಯೆ ನಡೆಸಿದರು !

ಇಂತಹದೊಂದು ಮನಮಿಡಿಯುವ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೊಳ್ಳಿಯಲ್ಲಿ.

ಎಲ್ಲವೂ ಇದ್ದು, ಕುಟುಂಬವಿದ್ದರೂ ಕೊನೆಗಾಲದಲ್ಲಿ ತಂದೆಯನ್ನೂ ನೋಡಲೂ ಬಾರದೇ ಮಕ್ಕಳಿಗೂ ಬೇಡವಾದ ಈ ಘಟನೆ ಕಂಡು ಸುತ್ತಮುತ್ತಲಿನವೂ ಮರುಗಿದರು. ಕಲಿಗಾಲವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು.

ಚಿಕಿತ್ಸೆಗೆಂದು ಚಿಕ್ಕೋಡಿಗೆ

ಅವರ ಹೆಸರು ಮೂಲಚಂದ್ರ ಶರ್ಮಾ (72). ಮೂಲತಃ ಮಹಾರಾಷ್ಟ್ರದ ಪುಣೆಯವರು. ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಇಬ್ಬರು ಮಕ್ಕಳು ಉದ್ಯೋಗ ಅರಸಿ ವಿದೇಶದಲ್ಲಿ ನೆಲೆಸಿದ್ದಾರೆ, ಪತ್ನಿ ತೀರಿಕೊಂಡ ನಂತರ ಒಬ್ಬಂಟಿಯಾಗಿದ್ದರು. ಪಾರ್ಶ್ವವಾಯು ಪೀಡಿತರಾಗಿದ್ದರು.

ಮೂಲಚಂದ್ರ ಶರ್ಮಾ ಅವರಿಗೆ ಚಿಕಿತ್ಸೆ ಕೊಡಿಸಲು ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿಯ ಆಸ್ಪತ್ರೆಗೆ ಒಂದೂವರೆ ತಿಂಗಳ ಹಿಂದೆ ಕರೆತರಲಾಗಿತ್ತು. ಆದರೆ ಅವರನ್ನು ಕರೆತಂದ ವ್ಯಕ್ತಿ, ಅಲ್ಲಿನ ಲಾಡ್ಜ್‌ನಲ್ಲಿಯೇ ಬಿಟ್ಟು ಪರಾರಿಯಾಗಿದ್ದ.

ಪೊಲೀಸರಿಂದಲೇ ಚಿಕಿತ್ಸೆ

ಈ ವಿಷಯ ಪಿಎಸ್ಐ ಬಸಗೌಡ ನೇರ್ಲಿ ಹಾಗೂ ಚಿಕ್ಕೋಡಿ ಪೊಲೀಸ್‌ ಠಾಣೆ ಸಿಬ್ಬಂದಿ ಗಮನಕ್ಕೆ ಬಂದಿತು. ಅವರು ಅಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ವೃದ್ಧರು ಮೃತಪಟ್ಟರು. ಅಂತ್ಯಕ್ರಿಯೆಗೆ ವಿದೇಶಗಳಲ್ಲಿ ನೆಲೆಸಿರುವ ಅವರ ಮಕ್ಕಳು ಬರಲು ನಿರಾಕರಿಸಿದ್ದರಿಂದ ಸ್ಥಳೀಯ ಪೊಲೀಸರು, ಅಧಿಕಾರಿಗಳೇ ಸೇರಿ ನಾಗರಮುನ್ನೋಳಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿಡಿಒ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಯೇ ವಿಧಿವಿಧಾನ ಪೂರೈಸಿದರು.

ಪರಾರಿಯಾದ ಸಹಚರ

ಮೂಲಚಂದ್ರ ಶರ್ಮಾ ಅವರನ್ನು ನಾಗರಮುನ್ನೋಳಿಗೆ ಕರೆತಂದವನು ಅವರ ಸಂಬಂಧಿಯಲ್ಲ. ಬದಲಿಗೆ ವೃದ್ಧರ ಆರೈಕೆಗಾಗಿ ಕುಟುಂಬಸ್ಥರೇ ನೇಮಿಸಿದ್ದ ಗುತ್ತಿಗೆ ನೌಕರನಾಗಿದ್ದ. ತನ್ನ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ, ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಸ್ಥಳೀಯರು ಇದನ್ನು ನಮ್ಮ ಗಮನಕ್ಕೆ ತಂದ ಬಳಿಕ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದೆವು ಎಂದು ಪಿಎಸ್ಐ ಬಸಗೌಡ ನೇರ್ಲಿ ಹೇಳಿದರು.

ಅನಾಥನಲ್ಲ

ನಾನು ಅನಾಥನಲ್ಲ. ಬ್ಯಾಂಕ್‌ವೊಂದರ ನಿವೃತ್ತ ವ್ಯವಸ್ಥಾಪಕ. ನನ್ನ ಮಗಳು ಕೆನಡಾದಲ್ಲಿದ್ದಾಳೆ. ಮಗ ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾನೆ. ನನ್ನನ್ನು ಇಲ್ಲಿನ ಆಸ್ಪತ್ರೆಗೇಕೆ ಕರೆದುಕೊಂಡು ಹೋಗುತ್ತೀದ್ದೀರಿ ಎಂದು ವೃದ್ಧರು ಪ್ರಶ್ನಿಸಿದ್ದರು. ಬಳಿಕ ನಾವು ವೃದ್ಧರ ಮಗ ಮತ್ತು ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಮಗಳಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿದೆವು. ಅದಕ್ಕೆ ಅವರು, ನಮ್ಮ ತಂದೆ ಮೊದಲು ಆಗಿದ್ದರು, ಈಗ ಅಲ್ಲ. ಅವರಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸುವಂತೆ ನಾವೇನು ನಿಮಗೆ ಹೇಳಿಲ್ಲ. ನಾವು ನೆಮ್ಮದಿಯಿಂದ ಇದ್ದೇವೆ. ವಿನಾಕಾರಣ ತೊಂದರೆ ಕೊಡಬೇಡಿ. ಬೇಕಾದರೆ ಅಂತ್ಯಕ್ರಿಯೆ ನೆರವೇರಿಸಿ ಅಥವಾ ಶವ ಬಿಸಾಕಿ ಎಂದರು ಎಂದು ಪಿಎಸ್‌ಐ ಬೇಸರಿಸಿದರು.

ಎಸ್ಪಿ ಹೇಳೋದು ಹೀಗೆ

ಒಂದು ತಿಂಗಳ ಅವಧಿಯ ನಂತರ ಕೇರ್ ಟೇಕರ್ ಅವರನ್ನು ಲಾಡ್ಜ್ ನಲ್ಲಿಯೇ ಬಿಟ್ಟು ಹೋಗಿದ್ದರು. ನಂತರ ಲಾಡ್ಜ್ ಮಾಲೀಕ ಚಿಕ್ಕೋಡಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು.ವೈದ್ಯರ ಸಲಹೆಯ ಮೇರೆಗೆ ಮೂಲಚಂದ್ರ ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿಂದ ಅವರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು

ಆದರೆ ಆಗಸ್ಟ್‌ 26ರಂದು ಮೂಲಚಂದ್ರ ತೀರಿ ಹೋದರು. ತೀರಿ ಹೋದ ಅವರ ಮಕ್ಕಳಿಗೆ ವಿಷಯ ಮಕ್ಕಳಿಗೆ ತಿಳಿಸಲಾಯ್ತು ಅವರ ಮಕ್ಕಳು ವಿದೇಶದಲ್ಲಿದ್ದಾರೆ. ನಮಗೆ ಸಧ್ಯ ಬರಲು ಆಗಲ್ಲ ಎಂದು‌ ಹೇಳಿದರು. ಹೀಗಾಗಿ ಅವರಿಂದ ಮೇಲ್ ಮೂಲಕ ಎನ್ ಒ ಸಿ ಪಡೆದೆವು. ನಾಗರಮುನ್ನೋಳಿ, ಗ್ರಾಂ ಸಿಬ್ಬಂಧಿ, ಪಿಡಿಒ‌ ಹಾಗೂ ಪೊಲೀಸರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ಮಾಡಿಲಾಯ್ತು ಎಂದು ಬೆಳಗಾವಿ ಎಸ್ಪಿ ಸಂಜೀವ್‌ ಪಾಟೀಲ್‌ ಘಟನೆಯ ವಿವರ ನೀಡಿದರು.

( ವರದಿ: ಬಿ.ಜಿ.ಪ್ರಹ್ಲಾದಗೌಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ