logo
ಕನ್ನಡ ಸುದ್ದಿ  /  ಕರ್ನಾಟಕ  /  Hassan News: ಹಾಸನದ ಕಾಫಿ ತೋಟಗಳಲ್ಲಿ ಆನೆ ಹಿಂಡು: ಮರವೇರಿ ವಿಡಿಯೋ ಮಾಡಿದ ರೈತ

Hassan News: ಹಾಸನದ ಕಾಫಿ ತೋಟಗಳಲ್ಲಿ ಆನೆ ಹಿಂಡು: ಮರವೇರಿ ವಿಡಿಯೋ ಮಾಡಿದ ರೈತ

HT Kannada Desk HT Kannada

Aug 18, 2023 11:02 AM IST

google News

ಹಾಸನದ ಕಾಫಿ ಎಸ್ಟೇಟ್‌ಗಳಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡು ಫಸಲು ನಾಶ ಮಾಡುತ್ತಿವೆ.

    • Elephants in Estates ಕರ್ನಾಟಕದ ಹಾಸನ ಜಿಲ್ಲೆಯಲ್ಲಂತೂ ಆನೆಗಳು ಕಾಫಿ ಎಸ್ಟೇಟ್‌ಗಳಿಗೆ( Coffee estate) ನುಗ್ಗುವುದು ಸಾಮಾನ್ಯವಾಗಿದೆ. ಕರ್ನಾಟಕ ಅರಣ್ಯ ಇಲಾಖೆ( Karnataka Forest Department) ಪ್ರಯತ್ನಿಸಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಈಗಲೂ ಬೇಲೂರು ತಾಲ್ಲೂಕಿನಲ್ಲಿ ಆನೆಗಳು ದಾಳಿಯಿಟ್ಟಿವೆ.
ಹಾಸನದ ಕಾಫಿ ಎಸ್ಟೇಟ್‌ಗಳಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡು ಫಸಲು ನಾಶ ಮಾಡುತ್ತಿವೆ.
ಹಾಸನದ ಕಾಫಿ ಎಸ್ಟೇಟ್‌ಗಳಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡು ಫಸಲು ನಾಶ ಮಾಡುತ್ತಿವೆ. ( Nature Conservation Foundation)

ಹಾಸನ: ಹಾಸನ ಹಾಗೂ ಕೊಡಗು ಜಿಲ್ಲೆಯ ಆನೆಗಳು ಕಾಫಿ ಎಸ್ಟೇಟ್‌ನಲ್ಲಿಯೇ ಸಂಚರಿಸುತ್ತಿವೆ. ಕಾಡಿಗಿಂತ ಕಾಫಿ ತೋಟಗಳಲ್ಲಿರುವುದೇ ಆನೆಗಳಿಗೆ ಹೆಚ್ಚು ಇಷ್ಟವಾಗಿದೆ.

ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಅತಿಯಾಗಿದೆ. ಅದರಲ್ಲೂ ಹಾಸನ ಹಾಗೂ ಕೊಡಗು ಭಾಗದ ಕಾಫಿ ತೋಟಗಳತ್ತ ಆನೆಗಳು ಬರುತ್ತಿವೆ ಎನ್ನುವುದಕ್ಕೆ ಹಾಸನದ ರೈತರೊಬ್ಬರು ಮಾಡಿರುವ ವಿಡಿಯೋ ಸಾಕ್ಷಿ ನೀಡಿದೆ.

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮಲಸಾವರ ಗ್ರಾಮಕ್ಕೆ ಆನೆಗಳ ಹಿಂಡು ನುಗ್ಗಿದ್ದು, ಅವುಗಳನ್ನು ಓಡಿಸುವ ಜತೆಗೆ ದೊಡ್ಡ ಮರವನ್ನೇರಿ ರೈತರೊಬ್ಬರು ಇಡೀ ಚಿತ್ರಣವನ್ನು ಸೆರೆ ಹಿಡಿದಿದ್ದಾರೆ. ಹತ್ತಕ್ಕೂ ಹೆಚ್ಚು ಆನೆಗಳ ಹಿಂಡು ಕಾಫಿ ತೋಟದಲ್ಲಿ ನುಗ್ಗಿ ನಾಶ ಮಾಡುತ್ತಿರುವುದು ಅದರಲ್ಲಿ ಸಂಪೂರ್ಣ ಚಿತ್ರಣವಾಗಿದೆ.

ಏಕಾಏಕಿ ನುಗ್ಗಿದವು

ಹಾಸನ ಜಿಲ್ಲೆಯಲ್ಲಿ ಗಜಪಡೆ ಗಲಾಟೆ ಮುಂದುವರಿದಿದೆ. ಕಾಡಾನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಬೇಲೂರು ತಾಲ್ಲೂಕಿನ, ಮಲಸಾವರ ಗ್ರಾಮದಲ್ಲಿ ನಡೆದಿದೆ.

ಇಪ್ಪತ್ತಕ್ಕೂ ಹೆಚ್ಚು ಹಿಂಡು ಕಾಡಾನೆಗಳ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಕಾಡಾನೆಗಳ ದಾಂಧಲೆಯಿಂದ ಕಾಫಿ, ಮೆಣಸು, ಏಲಕ್ಕಿ, ಅಡಕೆ ಗಿಡಗಳು ಹಾಗೂ ನಾಟಿ ಮಾಡಿದ್ದ ಭತ್ತದ ಗದ್ದೆಯನ್ನು ತುಳಿದು ಸಂಪೂರ್ಣವಾಗಿ ನಾಶ ಮಾಡಿವೆ.

ಗ್ರಾಮದ ತೀರ್ಥಕುಮಾರ್, ಕಲ್ಲೇಶ್, ವಿಜಯ್, ಮಲ್ಲೇಶ್ ಹಾಗೂ ಇನ್ನಿತರ ರೈತರಿಗೆ ಸೇರಿದ ಜಮೀನಿನಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕಾಡಾನೆಗಳ ಹಿಂಡು ಮನಬಂದಂತೆ ಓಡಾಡಿ ಬೆಳೆ ಹಾಳು ಮಾಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮರವೇರಿದ ರೈತ

ಎತ್ತರದ ಮರದ ಮೇಲೆ ಕುಳಿತು ಕಾಡಾನೆಗಳ ಓಡಾಟದ ವಿಡಿಯೋವನ್ನು ರೈತನೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಕಾಡಾನೆಗಳು ಹಿಂಡಿನ ದಾಳಿಯಿಂದ ಆತಂಕಗೊಂಡಿರುವ ಸ್ಥಳೀಯರು ಹಾಗೂ ಕಾರ್ಮಿಕರು ಜೀವ ಭಯದಿಂದ ತೋಟ, ಹೊಲ, ಗದ್ದೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದು, ಅರಣ್ಯಾಧಿಕಾರಿಗಳ ಎದುರು ರೈತರು, ಕಾಫಿ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಒತ್ತಾಯಿಸಿದ್ದಾರೆ.

ಆನೆಗಳ ಹಾವಳಿಯಿಂದ ನಮಗೂ ಸಾಕಾಗಿ ಹೋಗಿದೆ. ಭತ್ತದ ಮಾಡಿದ ಗದ್ದೆಗಳಿಗೆ ನುಗ್ಗಿ ಹಾಳು ಮಾಡಿವೆ. ಕಾಫಿ ತೋಟಗಳಲ್ಲಂತೂ ಬೆಳೆ ಹಾನಿಯಾಗುತ್ತಿದೆ. ಆನೆ ಓಡಿಸುವುದು ಒಂದು ಕಡೆಯಾದರೂ ಇದಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಡಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಹಾಸನದಲ್ಲಿ ಹೆಚ್ಚು ಸೆರೆ

ಹಾಸನದ ಸಕಲೇಶಪುರ, ಬೇಲೂರು, ಆಲೂರು, ಅರಕಲಗೂಡು ತಾಲ್ಲೂಕುಗಳಲ್ಲಿ ಆನೆಗಳ ಹಾವಳಿ ಅತಿಯಾಗಿದೆ. ಹಿಂಡು ಹಿಂಡಾಗಿ ಕಾಫಿ ತೋಟಕ್ಕೆ ನುಗ್ಗಿಬೆಳೆಯನ್ನು ನಾಶ ಪಡಿಸುತ್ತಿವೆ. ದಶಕದ ಹಿಂದೆ ಇದೇ ರೀತಿ ಸಮಸ್ಯೆಯಾದಾಗ ಅರಣ್ಯ ಇಲಾಖೆ ಇಪ್ಪತ್ತೈದಕ್ಕೂ ಹೆಚ್ಚು ಆನೆಗಳನ್ನು ಸೆರೆ ಹಿಡಿದಿದ್ದರು. ಈಗ ಮತ್ತೆ ಆನೆಗಳ ಹಾವಳಿ ಹೆಚ್ಚಾಗಿದೆ. ಇವುಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ

ಈ ಕುರಿತು ಮಾತನಾಡಿರುವ ಹಾಸನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ರವಿಶಂಕರ್‌, ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಕಾಡಾನೆ ಹಾವಳಿ ಸೇರಿದಂತೆ ಅರಣ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಸನ್ನದ್ದವಾಗಿರುವ ಜತೆಗೆ ಎಚ್ಚರಿಕೆಯಿಂದ ಇರುವಂತೆ ಇಲಾಖೆಯವರಿಗೆ ಸೂಚಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಕೊಡಗಿನಲ್ಲೂಇದೇ ಸ್ಥಿತಿ

ಇದೇ ಸನ್ನಿವೇಶ ಕೊಡಗಿನಲ್ಲೂ ಇದೆ. ಕೊಡಗಿನ ಸೋಮವಾರಪೇಟೆ, ಕುಶಾಲನಗರ, ಗೋಣಿಕೊಪ್ಪ, ವೀರಾಜಪೇಟೆ ತಾಲ್ಲೂಕಿನ ಹಲವು ಕಾಫಿ ಎಸ್ಟೇಟ್‌ಗಳಿಗೆ ಆನೆಗಳು ನುಗ್ಗುತ್ತಿರುವುದು ಕಂಡುಬಂದಿದೆ. ಎರಡು ತಿಂಗಳ ಹಿಂದೆ ಇದೇ ರೀತಿ ನುಗ್ಗಿದ ಆನೆ ಮೇಲೆ ಎಸ್ಟೇಟ್‌ ಮಾಲೀಕರು ಗುಂಡು ಹಾರಿಸಿ ಆನೆಯೊಂದು ಮೃತಪಟ್ಟಿತ್ತು. ಅರಣ್ಯ ಇಲಾಖೆ ನಿರಂತರವಾಗಿ ಆನೆಗಳನ್ನು ಕಾಫಿ ಎಸ್ಟೇಟ್‌ಗಳಿಂದ ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿದ್ದರೂ ಆಹಾರ ಅರಸಿ ಅವುಗಳು ಇತ್ತ ಬರುತ್ತಲೇ ಇವೆ.

(ವರದಿ:ಎ.ಆರ್‌.ವೆಂಕಟೇಶ್‌ ಹಾಸನ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ