Bengaluru brief news: 1) ಗುರುವಾರ ಬನ್ನೇರುಘಟ್ಟ ಮೃಗಾಲಯಕ್ಕೆ ಹೋಗಬೇಡಿ; 2) ಚಿತ್ರಕಲಾ ಪರಿಷತ್ತಿನಲ್ಲಿ ಮೈಸೂರು ಶೈಲಿ ಚಿತ್ರಕಲಾ ತರಬೇತಿ
Feb 07, 2023 07:06 PM IST
ಬನ್ನೇರುಘಟ್ಟ ಪಾರ್ಕ್ (ಸಾಂದರ್ಭಿಕ ಚಿತ್ರ)
Bengaluru brief news: ಸುದ್ದಿ (1) - ಫೆ.9ರಂದು ಗುರುವಾರ ಸಾರ್ವಜನಿಕರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ, ಮೃಗಾಲಯಕ್ಕೆ ಪ್ರವೇಶ ಇಲ್ಲ. ಸುದ್ದಿ (2)- ಫೆ.20 ರಿಂದ ಆರು ತಿಂಗಳು ಮೈಸೂರು ಶೈಲಿ ಚಿತ್ರಕಲಾ ತರಬೇತಿ ಇದೆ. ಆಸಕ್ತರಿಗೆ ಮಾಹಿತಿ ಇಲ್ಲಿದೆ. ಸುದ್ದಿ (3) - ಚುನಾವಣೆ ಸಂದರ್ಭದಲ್ಲ ಅಬಕಾರಿ ಅಕ್ರಮ ತಡೆಗಟ್ಟಲು ಸಹಾಯವಾಣಿ ಘೋಷಣೆ ಆಗಿದೆ.
ಬೆಂಗಳೂರು: ನಾಡಿದ್ದು ಗುರುವಾರ (ಫೆ.9) ಬನ್ನೇರುಘಟ್ಟ ಜೈವಿಕ ಉದ್ಯಾನವನ, ಮೃಗಾಲಯಕ್ಕೆ ಭೇಟಿ ನೀಡುವ ಪ್ಲಾನ್ ಏನಾದರೂ ಇದೆಯಾ? ಹಾಗೇನಾದರೂ ಇದ್ದರೆ ಅದನ್ನು ಬದಲಾಯಿಸಿಕೊಳ್ಳಿ. ಆ ದಿನ ಸಾರ್ವಜನಿಕರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ, ಮೃಗಾಲಯಕ್ಕೆ ಪ್ರವೇಶ ಇಲ್ಲ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರು ಈ ಕುರಿತು ಪ್ರಕಟಣೆ ನೀಡಿದ್ದು, ಫೆ.9ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಮೃಗಾಲಯಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಲಾಗಿದೆ ಎಂದು ತಿಳಿಸಿದ್ದಾರೆ.
ಭಾರತವು 2023 ನೇ ಸಾಲಿನ ಜಿ-20 ಆತಿಥ್ಯವನ್ನು ವಹಿಸಿಕೊಂಡಿದ್ದು, ಇದರ ಹಿನ್ನೆಲೆಯಲ್ಲಿ ಅನೇಕ ತಾಂತ್ರಿಕ ಕಾರ್ಯಗುಂಪುಗಳ ಸಭೆಗಳನ್ನು ದೇಶದ ವಿವಿಧ ನಗರಗಳಲ್ಲಿ ಆಯೋಜಿಸಲಾಗಿದೆ. ಫೆಬ್ರವರಿ 09 ರಿಂದ ಫೆಬ್ರವರಿ 11ರವರೆಗೆ ಜಿ-20 ಪ್ರತಿನಿಧಿಗಳ ಮೊದಲ Environment and Climate Sustainability Working Group (ECSWG) ಸಭೆಯು "ಭೂ ಅಪಮೌಲೀಕರಣದ ಪ್ರತಿಬಂಧನ (ತಡೆ), ಜೀವ ಪರಿಸರ ಮರುಸ್ಥಾಪನೆಯ ತ್ವರಿತಗೊಳಿಸುವಿಕೆ, ಜೀವ ವೈವಿದ್ಯತೆಯ ಸಮೃದ್ದೀಕರಣ" ವಿಷಯದಡಿ ಬೆಂಗಳೂರಿನಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಸುಮಾರು 20 ದೇಶದ ಪ್ರತಿನಿಧಿಗಳು ಬೆಂಗಳೂರಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಮುಖವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಆಯ್ಕೆಮಾಡಿರುವುದರಿಂದ ಫೆಬ್ರವರಿ 09 ರಂದು ಜಿ-20 ಪ್ರತಿನಿಧಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೀಕ್ಷಣೆಗೆ ಬರುವುದರಿಂದ ಭದ್ರತೆಯ ದೃಷ್ಟಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮೈಸೂರು ಶೈಲಿ ಚಿತ್ರಕಲಾ ತರಬೇತಿ
ಕರ್ನಾಟಕ ಚಿತ್ರಕಲಾ ಪರಿಷತ್ತು ಕನ್ನಡ ನಾಡಿನ ಹೆಮ್ಮೆಯ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯನ್ನು ಕಲಿಸುವ ಆರು ತಿಂಗಳ ತರಬೇತಿಯನ್ನು ಇದೇ ತಿಂಗಳ 20ರಿಂದ ಶುರುಮಾಡಲಿದೆ. ಪ್ರತಿ ವಾರ ಮೂರು ದಿನ (ಸೋಮವಾರ, ಮಂಗಳವಾರ ಹಾಗೂ ಬುಧವಾರ) ಬೆಳಗ್ಗೆ 11 ಗಂಟೆಯಿಂದ ಅಪರಾಹ್ನಬ 1 ಗಂಟೆಯವರೆಗೆ ತರಗತಿಗಳು ನಡೆಯಲಿವೆ. ಹೆಸರಾಂತ ಸಾಂಪ್ರದಾಯಿಕ ಚಿತ್ರಕಲಾವಿದೆ ನೀಲಾಪಂಚ್ ಅವರು ತರಬೇತಿ ನೀಡಲಿದ್ದಾರೆ.
ಚಿತ್ರಕಲಾ ಆಸಕ್ತರು ಹೆಚ್ಚಿನ ವಿವರಗಳನ್ನು ಮೊಬೈಲ್ ಸಂಖ್ಯೆ: 90363 30928 ಮತ್ತು ದೂರವಾಣಿ ಸಂಖ್ಯೆ 080-22261816 ಅಥವಾ ಚಿತ್ರಕಲಾ ಪರಿಷತ್ತಿನಿಂದ ಪಡೆಯಬಹುದೆಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಶಶಿಧರ್, ಅವರು ತಿಳಿಸಿರುತ್ತಾರೆ.
ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ತತ್‌ಕ್ಷಣವೇ ಸಹಾಯವಾಣಿಗೆ ಕರೆಮಾಡಿ
ವಿಧಾನ ಸಭಾ ಚುನಾವಣೆ 2023 ರ ಹಿನ್ನೆಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ವಿಭಾಗ ಉತ್ತರ ಮತ್ತು ದಕ್ಷಿಣ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಬಕಾರಿ ಇಲಾಖೆ ಮುಂದಾಗಿದೆ.
ಈ ವಿಭಾಗ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ನಗರ ಜಿಲ್ಲೆ-1, 2, 3, 4, 5, 6, 7 8, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ, ತುಮಕೂರು ಜಿಲ್ಲೆ, ರಾಮನಗರ ಜಿಲ್ಲೆ ಮತ್ತು ಕೋಲಾರ ಜಿಲ್ಲೆಗಳಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಬಕಾರಿ ವಸ್ತುಗಳ ಅಕ್ರಮ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ಸಾಗಾಣಿಕೆ ಕಂಡುಬಂದಲ್ಲಿ ಕಚೇರಿಯ ದೂರವಾಣಿ ಸಂಖ್ಯೆ: 080-22210285 ಗೆ ಕರೆ ಮಾಡಿ ದೂರನ್ನು ದಾಖಲಿಸಬಹುದಾಗಿದೆ ಎಂದು ಬೆಂಗಳೂರು ವಿಭಾಗದ (ಉತ್ತರ) ಅಬಕಾರಿ ಜಂಟಿ ಆಯುಕ್ತರು( ಜಾರಿ ಮತ್ತು ತನಿಖೆ) ತಿಳಿಸಿದ್ದಾರೆ.