ಆನ್‌ಲೈನ್ ವಂಚನೆಯ ಜಾಲಕ್ಕೆ ಸಿಲುಕಿ 73 ಲಕ್ಷ ಕಳೆದುಕೊಂಡ ಸೇನೆಯ ನಿವೃತ್ತ ಅಧಿಕಾರಿ: ಫೆಡ್‌ಎಕ್ಸ್ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ
Jul 15, 2024 10:09 PM IST
ಆನ್‌ಲೈನ್ ವಂಚನೆಯ ಜಾಲಕ್ಕೆ ಸಿಲುಕಿ 73 ಲಕ್ಷ ಕಳೆದುಕೊಂಡ ಬೆಂಗಳೂರಿನ ನಿವೃತ್ತ ಸೇನಾಧಿಕಾರಿ
- ಅಕ್ರಮ ಹಣ ವರ್ಗಾವಣೆಯಲ್ಲಿ ಆಧಾರ್ ನಂಬರ್ ದಾಖಲಾಗಿದ್ದು, ಅದಕ್ಕಾಗಿ ವಾಟ್ಸ್ಯಾಪ್ ಮೂಲಕ ಕರೆ ಮಾಡುತ್ತಿರುವುದಾಗಿ ವಂಚಕರು ನಿವೃತ್ತ ಸೇನಾಧಿಕಾರಿಯನ್ನು ನಂಬಿಸಿದ್ದರು. (ವರದಿ: ಮಾರುತಿ ಎಚ್.)
ಬೆಂಗಳೂರು: ಆನ್‌ಲೈನ್ ವಂಚನೆಯ ಜಾಲ ಕುರಿತು ನಿರಂತರವಾಗಿ ಅರಿವು ಮೂಡಿಸುವ ಕೆಲಸಗಳಾಗುತ್ತಿದ್ದರೂ ಈ ವಂಚನೆಯ ಜಾಲಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ಶಿಕ್ಷಿತರು ಮತ್ತು ಆರ್ಥಿಕವಾಗಿ ಸ್ಥಿತಿವಂತರಾಗಿರುವವರೇ ಈ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ. ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಇಂತಹುದೇ ಮತ್ತೊಂದು ವಂಚನೆಯ ಜಾಲ ಬೆಳಕಿಗೆ ಬಂದಿದೆ. 74 ವರ್ಷದ ಸೇನೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ದೇವದತ್ತ ಮುಖರ್ಜಿ (ಹೆಸರು ಬದಲಾಯಿಸಲಾಗಿದೆ) ಈ ರೀತಿಯ ಆನ್‌ಲೈನ್ ವಂಚನೆಯ ಜಾಲಕ್ಕೆ ಸಿಲುಕಿ 73 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅವರು ಬೆಂಗಳೂರಿನ ಪೂರ್ವ ವಿಭಾಗದ ಸೆನ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಮುಖರ್ಜಿ ಅವರು ಫೆಡ್‌ಎಕ್ಸ್ (ಫೆಡರಲ್ ಎಕ್ಸ್ ಪ್ರೆಸ್ ಕಾರ್ಪೋರೇಷನ್) ವಂಚನೆಗೆ ಬಲಿಯಾಗಿದ್ದಾರೆ. ಜೂನ್ 13ರಂದು ಮುಖರ್ಜಿ ಅವರ ಮೊಬೈಲ್ ನಂಬರ್‌ಗೆ ಫೆಡ್‌ಎಕ್ಸ್ ಅಧಿಕಾರಿ ಎಂದು ಹೇಳಿಕೊಂಡ ಒಬ್ಬರು ಕರೆ ಮಾಡಿ ನಿಮ್ಮ ಹೆಸರಿಗೆ ಪಾರ್ಸೆಲ್ ಒಂದು ಬಂದಿದೆ. ಅದರಲ್ಲಿ ಹಲವು ಪಾಸ್‌ಪೋರ್ಟ್‌ಗಳು, ಡ್ರಗ್ಸ್‌ಗಳಿವೆ. ಈ ಸಂಬಂಧ ದೆಹಲಿಯಲ್ಲಿ ದೂರು ದಾಖಲಾಗಿದ್ದು ಶೀಘ್ರವೇ ದೆಹಲಿ ಪೊಲೀಸರು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕೆಲವೇ ನಿಮಿಷಗಳ ನಂತರ ಅವರಿಗೆ ವಾಟ್ಸಾಪ್ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಪೊಲೀಸ್ ಆಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾರೆ.
ಅವರು ದೆಹಲಿ ಪೊಲೀಸ್ ಆಧಿಕಾರಿಯ ಯೂನಿಫಾರ್ಮ್ ಧರಿಸಿರುತ್ತಾರೆ. ಅವರು ಪೊಲೀಸ್ ಠಾಣೆಯಿಂದ ಕರೆ ಮಾಡುವ ರೀತಿ ಕಾಣಿಸುತ್ತಿರುತ್ತದೆ. ಅಕ್ರಮ ಹಣ ವರ್ಗಾವಣೆಯಲ್ಲಿ ಆಧಾರ್ ನಂಬರ್ ದಾಖಲಾಗಿದ್ದು, ಅದಕ್ಕಾಗಿ ವಾಟ್ಸ್ ಆಪ್ ಮೂಲಕ ಕರೆ ಮಾಡುತ್ತಿರುವುದಾಗಿ ನಂಬಿಸುತ್ತಾರೆ. ನಂತರ ಈ ಪಿತೂರಿಗಾರ ಮುಖರ್ಜಿ ಅವರಿಗೆ ಸುಪ್ರೀಂಕೋರ್ಟ್ ಆದೇಶದಂತೆ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದು, ತನಿಖೆಗಾಗಿ ಹಣವನ್ನು ಕೆಲವು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ನೀಡಿದ್ದ. ತಪಾಸಣೆಯ ನಂತರ ನಿಮ್ಮ ಹಣ ನಿಮ್ಮ ಖಾತೆಗೆ ಮರಳಿಸಲಾಗುವುದು ಎಂದೂ ಭರವಸೆ ನೀಡಿದ್ದ. ಬಂಧನಕ್ಕೊಳಗಾಗುವ ಭೀತಿಯಿಂದ ಮುಖರ್ಜಿ ಅವರು ವಂಚಕ ಸೂಚಿಸಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ 73 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದರು.
ಮೋಸ ಹೋಗಿರುವುದು ಅರಿವಾದ ನಂತರ ಪೊಲೀಸರಿಗೆ ದೂರು
ಒಂದು ವಾರ ಕಳೆದರೂ ಇವರ ಬ್ಯಾಂಕ್ ಖಾತೆಗೆ ಯಾವುದೇ ಹಣ ಮರಳಿ ಬರಲಿಲ್ಲ. ಆಗ ತಾನು ಮೋಸ ಹೋಗಿರುವುದು ಮುಖರ್ಜಿ ಅವರಿಗೆ ಅರಿವಾಯಿತು. ಕೂಡಲೇ ಅವರು ಸೆನ್ ಪೊಲೀಸರಿಗೆ ದೂರು ಸಲ್ಲಿಸಿದರು. ಕಳೆದುಕೊಂಡ 73 ಲಕ್ಷ ರೂ ಗಳಲ್ಲಿ 30 ಲಕ್ಷ ರೂಪಾಯಿಗಳನ್ನು ತಡೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು. ಉಳಿದ ಹಣವನ್ನು ವಸೂಲಿ ಮಾಡಲು ವಿವಿಧ ಬ್ಯಾಂಕ್ ಖಾತೆಗಳ ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಕೊರಿಯರ್ ಹಗರಣಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಯುವಕನೊಬ್ಬ ಇದೇ ರೀತಿಯ ವಂಚನೆಗೆ ಬೆಚ್ಚಿಬಿದ್ದು 1.9 ಕೋಟಿ ರೂ. ಕಳೆದುಕೊಂಡಿದ್ದರು. ಫೆಡ್ ಎಕ್ಸ್, ಇಂತಹ ಯಾವುದೇ ರೀತಿಯ ಕರೆಗಳನ್ನು ಯಾರಿಗೂ ಮಾಡುವುದಿಲ್ಲ ಮತ್ತು ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ ಎಂದು ಈ ಮೊದಲೂ ಹಲವಾರು ಬಾರಿ ಸ್ಪಷ್ಟನೆ ನೀಡಿದೆ.