Bengaluru Crime: ವಾಟ್ಸ್ಆಪ್ನಲ್ಲಿ ಫೋಟೋ ಶೇರ್ ಮಾಡುವ ವಿಚಾರಕ್ಕೆ ಘರ್ಷಣೆ, 18ರ ಯುವಕನ ಹತ್ಯೆ ಮಾಡಿದ ಗುಂಪು
Nov 14, 2023 05:55 PM IST
ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ಸಮೀಪ ಫೋಟೋ ವರ್ಗಾವಣೆಗೆ ಸಂಬಂಧಿಸಿ 18 ವರ್ಷದ ಯುವಕನನ್ನು ಗುಂಪೊಂದು ಹತ್ಯೆ ಮಾಡಿದೆ. (ಸಾಂಕೇತಿಕ ಚಿತ್ರ)
- ಬೆಂಗಳೂರು ಗ್ರಾಮಾಂತರದಲ್ಲಿ ಫೋಟೋ ವರ್ಗಾವಣೆಗೆ ಸಂಬಂಧಿಸಿ 18 ವರ್ಷದ ಯುವಕನನ್ನು ಗುಂಪೊಂದು ಹತ್ಯೆ ಮಾಡಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.
ಬೆಂಗಳೂರು: ವಾಟ್ಸ್‌ಆಪ್‌ನಲ್ಲಿ ಫೋಟೋ ಶೇರ್ ಮಾಡುವ ವಿಚಾರಕ್ಕೆ ಶುರುವಾದ ವಾಕ್ಸಮರ 18 ವರ್ಷದ ಯುವಕನ ಹತ್ಯೆಯಲ್ಲಿ ಕೊನೆಯಾದ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸಮೀಪ ನಡೆದಿದೆ.
ದೀಪಾವಳಿ ಹಬ್ಬದ ದಿನವೇ ಈ ಹತ್ಯೆ ನಡೆದಿದೆ. ಮೃತ ದುರ್ದೈವಿಯನ್ನು ಸೂರ್ಯ (18) ಎಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ಸಮೀಪದ ಡಾಬಾದ ಗೋಡೆ ಮೇಲೆ ಇರುವ ಭಿತ್ತಿಚಿತ್ರವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಫೋಟೋಗಳನ್ನು ತೆಗೆಯಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.
ಈ ಕೊಲೆ ಹೇಗಾಯಿತು
ಸಂತ್ರಸ್ತ ಸೂರ್ಯ, ತನ್ನ ಸ್ನೇಹಿತರೊಂದಿಗೆ ಕೆಲವು ವಾಲ್ ಆರ್ಟ್ ಇರುವ ಡಾಬಾ ಬಳಿಯ ಸ್ಥಳದಲ್ಲಿ ಕೆಲವು ಫೋಟೋಗಳನ್ನು ತೆಗೆಯುತ್ತಿದ್ದ. ಆಗ, ಇನ್ನೊಂದು ಗುಂಪಿನವರು ಅವರ ಕೆಲವು ಫೋಟೋಗಳನ್ನು ಕ್ಲಿಕ್ ಮಾಡಲು ಕೇಳಿಕೊಂಡಿದ್ದರು. ಸೂರ್ಯ ಮೊದಲಿಗೆ ನಿರಾಕರಿಸಿದರೂ, ಬಳಿಕ ಒಪ್ಪಿಕೊಂಡ. ಇದಾಗಿ, ಆ ಫೋಟೋಗಳನ್ನು ಕೂಡಲೇ ವಾಟ್ಸಾಪ್ ಮೂಲಕ ವರ್ಗಾಯಿಸಬೇಕೆಂದು ಗುಂಪು ಒತ್ತಾಯಿಸಿತು. ಆಗ ಸೂರ್ಯ ಇದ್ದ ಗುಂಪು ಮತ್ತು ಆ ಗುಂಪುಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಫೋಟೋಸ್ ಶೇರ್ ಮಾಡಬೇಕಾದರೆ ಮೊದಲು ಕ್ಯಾಮೆರಾದಿಂದ ಸಿಸ್ಟಮ್‌ಗೆ ವರ್ಗಾಯಿಸಬೇಕು. ಆನಂತರ ಶೇರ್ ಮಾಡಬಹುದು ಎಂದು ಸೂರ್ಯ ಮತ್ತು ಸ್ನೇಹಿತರು ಆ ಗುಂಪಿಗೆ ವಿವರಿಸಿದರು. ಆದರೆ, ಆ ಗುಂಪು ಹಟ ಹಿಡಿಯಿತು. ಅಲ್ಲದೆ ವಾಕ್ಸಮರಕ್ಕೆ ಇಳಿದ ಗುಂಪಿನ ಸದಸ್ಯ ದಿಲೀಪ್ ಎಂಬಾತ ಹರಿತ ಆಯುಧದಿಂದ ಸೂರ್ಯನ ಎದೆಗೆ ಇರಿದ.
ಕುಸಿದು ಬಿದ್ದ ಸೂರ್ಯನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ. ಇದೇ ವೇಳೆ, ಈ ಕುಕೃತ್ಯವೆಸಗಿದ ಗುಂಪು ಸ್ಥಳದಿಂದ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈಗಾಗಲೇ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ. ತನಿಖೆ ಮುಂದುವರಿದಿದೆ. ಗುಂಪಿನಲ್ಲಿದ್ದ ಇತರ ಸದಸ್ಯರ ಪತ್ತೆಗೆ ಶೋಧ ನಡೆದಿದೆ ಎಂದು ತಿಳಿಸಿದ್ದಾರೆ
"ಘಟನೆಗೆ ಸಂಬಂಧಿಸಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಸಂತ್ರಸ್ತ ಸೂರ್ಯನ ಸ್ನೇಹಿತರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ. ನಾವು ಘಟನೆಯಲ್ಲಿ ಭಾಗಿಯಾಗಿರುವ ಐದು ಆರೋಪಿಗಳ ಪೈಕಿ ಇಬ್ಬರನ್ನು ನಾವು ಗುರುತಿಸಿದ್ದೇವೆ ಮತ್ತು ಉಳಿದವರನ್ನು ಗುರುತಿಸಿ ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಲ್ದಾನಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.