logo
ಕನ್ನಡ ಸುದ್ದಿ  /  ಕರ್ನಾಟಕ  /  ಡಿಕೆ ಶಿವಕುಮಾರ್‌ಗೆ ತಪ್ಪದ ಸಂಕಷ್ಟ; ಅಕ್ರಮ ಆಸ್ತಿ ಗಳಿಕೆ ಪ್ರಕರಣ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ಸಿಬಿಐ

ಡಿಕೆ ಶಿವಕುಮಾರ್‌ಗೆ ತಪ್ಪದ ಸಂಕಷ್ಟ; ಅಕ್ರಮ ಆಸ್ತಿ ಗಳಿಕೆ ಪ್ರಕರಣ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ಸಿಬಿಐ

Jayaraj HT Kannada

Oct 21, 2024 07:21 PM IST

google News

ಡಿಕೆ ಶಿವಕುಮಾರ್‌ಗೆ ತಪ್ಪದ ಸಂಕಷ್ಟ; ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ಸಿಬಿಐ

    • DK Sivakumar: ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರತಿವಾದ ಮಂಡಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕರ್ನಾಟಕ ಸರ್ಕಾರ ಮತ್ತು ರಾಜ್ಯ ಲೋಕಾಯುಕ್ತಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದೆ. (ವರದಿ: ಎಚ್. ಮಾರುತಿ)
ಡಿಕೆ ಶಿವಕುಮಾರ್‌ಗೆ ತಪ್ಪದ ಸಂಕಷ್ಟ; ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ಸಿಬಿಐ
ಡಿಕೆ ಶಿವಕುಮಾರ್‌ಗೆ ತಪ್ಪದ ಸಂಕಷ್ಟ; ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ಸಿಬಿಐ (PTI File)

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಂಪೂರ್ಣವಾಗಿ ಮುಕ್ತಿ ಸಿಕ್ಕಿದ ಹಾಗೆ ಕಾಣುತ್ತಿಲ್ಲ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ವಿರುದ್ಧ ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಈ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಬಿಐ ಇದೀಗ ಮೇಲ್ಮನವಿ ಸಲ್ಲಿಸಿದೆ. ರಾಜ್ಯ ಸರ್ಕಾರ ಸಿಬಿಐನಿಂದ ಪ್ರಕರಣವನ್ನು ಹಿಂಪಡೆದ ಕ್ರಮವನ್ನು ಬಿಜೆಪಿ ಮುಖಂಡ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಿಬಿಐ ಹೈ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್ ಆಗಸ್ಟ್ 29ರಂದು ಈ ಅರ್ಜಿಗಳನ್ನು ತಿರಸ್ಕರಿಸಿತ್ತು. ಅಲ್ಲದೆ, ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ಪ್ರಕರಣವನ್ನು ಸುಪ್ರೀಂಕೋರ್ಟ್‌ ತೀರ್ಮಾನಿಸಲಿ ಎಂದು ಅಭಿಪ್ರಾಯಪಟ್ಟಿತ್ತು.

ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಯತ್ನಾಳ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

ಯತ್ನಾಳ್ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಿಬಿಐ ಅಭಿಪ್ರಾಯ ಕೇಳಿತ್ತು. ಹೀಗಾಗಿ ಸಿಬಿಐ ಕೂಡಾ ಇದೀಗ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರತಿವಾದ ಮಂಡಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕರ್ನಾಟಕ ಸರ್ಕಾರ ಮತ್ತು ರಾಜ್ಯ ಲೋಕಾಯುಕ್ತಕ್ಕೆ ನೋಟಿಸ್ ಜಾರಿ ಮಾಡಿ, ನಾಲ್ಕು ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಹಿಂದಿನ ಬಿಜೆಪಿ ಸರ್ಕಾರ 2019ರಲ್ಲಿ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ನಂತರ ರಚನೆಯಾದ ಕಾಂಗ್ರೆಸ್ ಸರ್ಕಾರ 2023ರ ನವೆಂಬರ್ 23ರಂದು ಹಿಂದಿನ ಬಿಜೆಪಿ ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿತ್ತು. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು.‌

2013 ಮತ್ತು 2018ರ ಅವಧಿಯಲ್ಲಿ ಶಿವಕುಮಾರ್ ಅವರು ಆದಾಯ ಮೀರಿ 74 ಕೋಟಿ ರೂಪಾಯಿ ಆದಾಯ ಗಳಿಸಿರುವ ಆರೋಪ ಇದಾಗಿದೆ. ಈ ಅವಧಿಯಲ್ಲಿ ಅವರು ಸಚಿವರಾಗಿದ್ದರು. 2017ರಲ್ಲಿ ಆದಾಯ ತೆರಿಗೆ ಇಲಾಖೆ ಡಿಕೆಶಿ ಅವರಿಗೆ ಸಂಬಂಧಿಸಿದ 70 ಸ್ಥಳಗಳಲ್ಲಿ ಶೋಧ ನಡೆಸಿತ್ತು. ತದನಂತರ 2020ರಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿತ್ತು. ಆಗಿನಿಂದಲೂ ಕಾನೂನು ಸಮರ ನಡೆಯುತ್ತಾ ಬಂದಿದೆ. ಆಗ ಸಿಬಿಐ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿತ್ತು.

ನನ್ನ ಮೇಲೆ ಸಿಬಿಐಗೆ ಭಾರಿ ಪ್ರೀತಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಕುಮಾರ್ ಅವರು, ಇಡೀ ದೇಶದಲ್ಲಿ ಸಿಬಿಐ ತನಿಖೆ ನಡೆಸುತ್ತಿರುವ ಏಕೈಕ ರಾಜಕಾರಣಿ ಅಂದರೆ ನಾನೊಬ್ಬ ಮಾತ್ರ. ಅಷ್ಟರ ಮಟ್ಟಿಗೆ ಸಿಬಿಐಗೆ ನನ್ನ ಮೇಲೆ ಪ್ರೀತಿ ಇದೆ ಎಂದಿದ್ದಾರೆ. ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ನ್ಯಾಯ ಸಿಗುವ ನಂಬಿಕೆ ಇದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಕರಣವನ್ನು ಹಿಂಪಡೆಯುವ ಅಧಿಕಾರವಿದೆ. ಅದರಂತೆ ಈ ಪ್ರಕರಣವನ್ನು ಹಿಂಪಡೆದು ಲೋಕಾಯುಕ್ತ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ