logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಬೆಂಗಳೂರು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜು ಸಹಪಾಠಿ ಮಾಡಿದ 15 ಲಕ್ಷ ರೂ ವಂಚನೆ ಕಾರಣ- ವರದಿ

Bengaluru Crime: ಬೆಂಗಳೂರು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜು ಸಹಪಾಠಿ ಮಾಡಿದ 15 ಲಕ್ಷ ರೂ ವಂಚನೆ ಕಾರಣ- ವರದಿ

Praveen Chandra B HT Kannada

Dec 03, 2024 01:00 PM IST

google News

ಬೆಂಗಳೂರು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜು ಸಹಪಾಠಿ ಮಾಡಿದ 15 ಲಕ್ಷ ರೂ ವಂಚನೆ ಕಾರಣ

    • Bengaluru Crime News: ಬೆಂಗಳೂರಿನ ರಾಜಾಜಿನಗರದ ತನ್ನ ಮನೆಯ ಬಾಲ್ಕನಿಯಲ್ಲಿ ನವೆಂಬರ್‌ 29ರಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪ್ರಿಯಾಂಕ (19) ಸಾವಿಗೆ ಆಕೆಯ ಸಹಪಾಠಿಯ ಹಣಕಾಸು ವಂಚನೆಯೇ ಕಾರಣ ಎಂದು ವರದಿಗಳು ತಿಳಿಸಿವೆ.
ಬೆಂಗಳೂರು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜು ಸಹಪಾಠಿ ಮಾಡಿದ 15 ಲಕ್ಷ ರೂ ವಂಚನೆ ಕಾರಣ
ಬೆಂಗಳೂರು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜು ಸಹಪಾಠಿ ಮಾಡಿದ 15 ಲಕ್ಷ ರೂ ವಂಚನೆ ಕಾರಣ

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ನಿವಾಸಿ, 19 ವರ್ಷ ವಯಸ್ಸಿನ ವಿದ್ಯಾರ್ಥಿನಿ ಪ್ರಿಯಾಂಕ ಸಾವಿಗೆ ಕಾರಣ ಆಕೆಯ ಸಹಪಾಠಿ ವಿದ್ಯಾರ್ಥಿಯ ಹಣಕಾಸು ವಂಚನೆ ಎಂದು ವರದಿಯಾಗಿದೆ. ನವೆಂಬರ್‌ 29ರಂದು ಪ್ರಿಯಾಂಕ ತನ್ನ ಮನೆಯ ಬಾಲ್ಕನಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ನನ್ನ ಸಾವಿಗೆ ಕಾಲೇಜಿನ ಸಹಪಾಠಿ ದಿಗಂತ್‌ ಕಾರಣ ಎಂದು ಡೆತ್‌ನೋಟ್‌ನಲ್ಲಿ ಈಕೆ ಬರೆದಿದ್ದಾಳೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ. ಕಾಲೇಜಿನ ಸಹಪಾಠಿಯು ಹೂಡಿಕೆ ಆಮೀಷ ತೋರಿಸಿ 15 ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣ ಪಡೆದುಕೊಂಡಿದ್ದು, ಎಷ್ಟು ಕೇಳಿದರೂ ವಾಪಸ್‌ ನೀಡದೆ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಡೆತ್‌ನೋಟ್‌ನಲ್ಲಿ  ಬರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ,.

ಕ್ಯಾಶಿನೊದಲ್ಲಿ ಹೂಡಿಕೆ ಮಾಡುವಂತೆ ದಿಗಂತ್‌ ಈಕೆಯ ಮನವೋಲಿಸಿದ್ದಾನೆ. ಇದಕ್ಕಾಗಿ ಆಕೆಯಿಂದ ಚಿನ್ನಾಭರಣ ಪಡೆದಿದ್ದಾನೆ. ಕೆಲವು ದಿನಗಳ ಬಳಿಕ ಚಿನ್ನಾಭರಣ ನೀಡುವಂತೆ ಈಕೆ ಎಷ್ಟೇ ಕೇಳಿದರೂ ಆತ ನೀಡಿರಲಿಲ್ಲ. ಹೀಗಾಗಿ, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 108ರ ಪ್ರಕಾರ ರಾಜಾಜಿನಗರ ಪೊಲೀಸರು ಈತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ.

1.7 ಕೋಟಿ ರೂಪಾಯಿ ಆನ್‌ಲೈನ್‌ ವಂಚನೆ

ಇತ್ತೀಚಿಗೆ ಪ್ರತ್ಯೇಕ ಪ್ರಕರಣವೊಂದರಲ್ಲಿ ಕರ್ನಾಟಕದ ನಿವಾಸಿಯೊಬ್ಬರು ಆನ್‌ಲೈನ್‌ ವಂಚನೆಗೆ ಒಳಪಟ್ಟು 1.7 ಕೋಟಿ ರೂಪಾಯಿ ಕಳೆದುಕೊಂಡಿದ್ದರು. ವಂಚಕರು ಸೆಂಟ್ರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಷನ್ ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ಹೆಸರಿನಲ್ಲಿ ಆ ವ್ಯಕ್ತಿಯನ್ನು ಮೋಸ ಮಾಡಿದ್ದರು.

ಈ ವ್ಯಕ್ತಿಗೆ ನವೆಂಬರ್‌ 11ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ನಾನು ಟ್ರಾಯ್‌ನ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ಆ ವ್ಯಕ್ತಿ "ನಿಮ್ಮ ಮೊಬೈಲ್‌ ಸಂಖ್ಯೆಯು ಮುಂಬೈನ ಅಂಧೇರಿ ಈಸ್ಟ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ" ಎಂದು ಹೇಳಿದ್ದ. ಇನ್ನು ಎರಡು ಗಂಟೆಗಳಲ್ಲಿ ಅಂಧೇರಿ ಪೊಲೀಸ್‌ ಸ್ಟೇಷನ್‌ ಅನ್ನು ಸಂಪರ್ಕಿಸದೆ ಇದ್ದರೆ ಮೊಬೈಲ್‌ ಸಂಖ್ಯೆ ಸಸ್ಪೆಂಡ್‌ ಮಾಡುವುದಾಗಿಯೂ ಮತ್ತು ಎಫ್‌ಐಆರ್‌ ದಾಖಲಿಸುವುದಾಗಿಯೂ ಬೆದರಿಸಿದ್ದ. ಕರ್ನಾಟಕದ ಆ ವ್ಯಕ್ತಿ ವಂಚಕರ ಖೆಡ್ಡಕ್ಕೆ ಬಿದ್ದು ಹಂತಹಂತವಾಗಿ ಹಣ ವರ್ಗಾವಣೆ ಮಾಡಿದ್ದರು.

ಬೆಂಗಳೂರಿನಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ 39 ವರ್ಷದ ಮಹಿಳೆಯೊಬ್ಬರು 6 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಆನ್‌ಲೈನ್‌ನಲ್ಲಿ ಪರಿಚಯವಾದ "ಬಾಯ್‌ಫ್ರೆಂಡ್‌"ನಿಂದ ಈಕೆ ವಂಚನೆಗೆ ಈಡಾಗಿದ್ದರು.

ಇದೇ ಸಮಯದಲ್ಲಿ ಷೇರು ಪೇಟೆ ಹೂಡಿಕೆ ಮಾಡುವಂತೆ ವಾಟ್ಸಪ್‌ ಗ್ರೂಪ್‌ಗೆ ಜನರನ್ನು ಸೇರಿಸಿ ವಂಚಿಸುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ವಾಟ್ಸಪ್‌ ಗ್ರೂಪ್‌ಗಳಿಗೆ ಬಲಿಪಶುಗಳನ್ನು ಸೇರಿಸುವ ಮೂಲಕ ವಂಚನೆಗೆ ಮುನ್ನುಡಿ ಹಾಡುತ್ತಾರೆ. ಯಾವುದಾದರೂ ಜನಪ್ರಿಯ ಟ್ರೇಡಿಂಗ್‌ ಅಪ್ಲಿಕೇಷನ್‌ಗಳನ್ನು ಹೋಲುವಂತಹ ನಕಲಿ ಆ್ಯಪ್‌ಗಳಿಗೆ ನೀವು ಸೇರುವಂತೆ ಮಾಡುತ್ತಾರೆ. ಆರಂಭದಲ್ಲಿ ಬಳಕೆದಾರರಿಗೆ ನಂಬಿಕೆ ಬರಿಸುವ ಸಲುವಾಗಿ ಕೊಂಚ ಲಾಭವನ್ನೂ ನೀಡುತ್ತಾರೆ. ಬಳಿಕ ಹೂಡಿಕೆದಾರರು ದೊಡ್ಡ ಮೊತ್ತ ಹಾಕಿದಾಗ ವಂಚನೆ ಮಾಡುತ್ತಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ