logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಕಾಲೇಜು ವಿದ್ಯಾರ್ಥಿಗಳ ದ್ವೇಷ, ಬಾಡಿಗೆ ಮನೆ ನೋಡಲು ಬಂದವರನ್ನು ಹಿಂಸಿಸಿ ಹಣ ಕಿತ್ತ ದುಷ್ಟರು

Bengaluru Crime: ಕಾಲೇಜು ವಿದ್ಯಾರ್ಥಿಗಳ ದ್ವೇಷ, ಬಾಡಿಗೆ ಮನೆ ನೋಡಲು ಬಂದವರನ್ನು ಹಿಂಸಿಸಿ ಹಣ ಕಿತ್ತ ದುಷ್ಟರು

HT Kannada Desk HT Kannada

Apr 26, 2024 08:02 PM IST

google News

Bengaluru Crime News: ಕಾಲೇಜು ವಿದ್ಯಾರ್ಥಿಗಳ ದ್ವೇಷ, ಬಾಡಿಗೆ ಮನೆ ನೋಡಲು ಬಂದವರಿಗೆ ಹಿಂಸೆ

    • ಇವರೆಲ್ಲರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇವರ ನಡುವೆ ಪದೇಪದೆ ಗಲಾಟೆ ನಡೆಯುತ್ತಿತ್ತು. ಎರಡೂ ಗುಂಪುಗಳ ನಡುವೆ ದ್ವೇಷ ಉಂಟಾಗಿತ್ತು.
Bengaluru Crime News: ಕಾಲೇಜು ವಿದ್ಯಾರ್ಥಿಗಳ ದ್ವೇಷ, ಬಾಡಿಗೆ ಮನೆ ನೋಡಲು ಬಂದವರಿಗೆ ಹಿಂಸೆ
Bengaluru Crime News: ಕಾಲೇಜು ವಿದ್ಯಾರ್ಥಿಗಳ ದ್ವೇಷ, ಬಾಡಿಗೆ ಮನೆ ನೋಡಲು ಬಂದವರಿಗೆ ಹಿಂಸೆ

ಬೆಂಗಳೂರು: ಬಾಡಿಗೆ ಮನೆ ನೋಡಲು ಬಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮನೆಯಲ್ಲಿ ಕೂಡಿ ಹಾಕಿ ಅವರನ್ನು ಹಿಂಸಿಸಿ 90 ಸಾವಿರ ರೂಪಾಯಿ ಸುಲಿಗೆ ಮಾಡಿದ್ದ ಏಳು ಆರೋಪಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಸಮೀಪದ ಅನಂತಪುರ ಗ್ರಾಮದ ವಿವೇಕ್, ಅನಾಮಿತ್ರ, ಯುವರಾಜ್ ರಾಥೋಡ್, ಹರಿ ಮುಖರ್ಜಿ, ಪ್ರಜಿತ್ ಚತುರ್ವೇದಿ, ಅಲೆನ್ ಮತ್ತು ಕರಣ್ ಬಂಧಿತರು. ಇವರೆಲ್ಲರೂ 20 ವರ್ಷದ ಯುವಕರು. ಈ ಏಳು ಮಂದಿಯು ಗುಂಪು ಸೇರಿಕೊಂಡು ಬಾಡಿಗೆಗೆ ಮನೆ ಕೇಳಲು ಬಂದಿದ್ದ ಕೃಷ್ಣ ಬಾಜಪೇಯಿ ಮತ್ತು ಯುವರಾಜ್ ಸಿಂಗ್ ಎಂಬುವವರನ್ನು ಕೂಡಿಹಾಕಿ ಹೊಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಏಪ್ರಿಲ್ 18 ರಂದು ಈ ಘಟನೆ ನಡೆದಿದ್ದು, ಕೃಷ್ಣ ಬಾಜಪೇಯಿ ಹಾಗೂ ಯುವರಾಜ್ ಸಿಂಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ. ಈ ಆರೋಪಿಗಳು, ಬಾಜಪೇಯಿ ಹಾಗೂ ಯುವರಾಜ್ ಸಿಂಗ್ ಕಾಲೇಜು ಸಹಪಾಠಿಗಳು ಎಂದು ತಿಳಿದು ಬಂದಿದೆ. ಇವರೆಲ್ಲರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇವರ ನಡುವೆ ಪದೇಪದೆ ಗಲಾಟೆ ನಡೆಯುತ್ತಿತ್ತು. ಎರಡೂ ಗುಂಪುಗಳ ನಡುವೆ ದ್ವೇಷ ಉಂಟಾಗಿತ್ತು.

ಕೃಷ್ಣ ಹಾಗೂ ಯುವರಾಜ್ ಇಬ್ಬರೂ ಅನಂತಪುರದಲ್ಲಿದ್ದ ಬಾಡಿಗೆ ಮನೆ ನೋಡಲು ಹೋಗಿದ್ದರು. ಅದೇ ಕಟ್ಟಡದ ಇನ್ನೊಂದು ಮನೆಯಲ್ಲಿ ಈ ಏಳು ಆರೋಪಿಗಳು ವಾಸಿಸುತ್ತಿದ್ದರು. ಇಬ್ಬರನ್ನೂ ನೋಡಿದ ಆರೋಪಿಗಳು ತಗಾದೆ ಆರಂಭಿಸಿದ್ದರು. ಕೃಷ್ಣ ಹಾಗೂ ಯುವರಾಜ್‌ ಅವರನ್ನು ತಮ್ಮ ಮನೆಗೆ ಬಲವಂತವಾಗಿ ಎಳೆದುಕೊಂಡು ಹೋಗಿ ಕೂಡಿ ಹಾಕಿದ್ದರು. ಇಬ್ಬರ ಮೇಲೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಸಿಗರೇಟ್‌ನಿಂದ ದೇಹದ ಅಲ್ಲಲ್ಲಿ ಸುಟ್ಟಿದ್ದರು.

ಬಾಡಿಗೆ ಮನೆಗೆ ಮುಂಗಡವಾಗಿ ನೀಡಲೆಂದು ಇಟ್ಟುಕೊಂಡಿದ್ದ 40 ಸಾವಿರ ರೂಪಾಯಿ ಕಿತ್ತುಕೊಂಡಿದ್ದರು. ಜೊತೆಗೆ ಕೊಲ್ಲುವುದಾಗಿ ಹೆದರಿಸಿ ಇನ್ನೂ 50 ಸಾವಿರ ರೂಪಾಯಿ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದರು.

ಮಾದಕ ವಸ್ತು ಎಂದು ಹೇಳಿ ಪೊಟ್ಟಣವೊಂದನ್ನು ಇಬ್ಬರ ಕೈಗಳಲ್ಲಿ ಹಿಡಿಸಿ ವಿಡಿಯೊ ಮಾಡಿ ನೀವು ಡ್ರಗ್ಸ್ ಮಾರಾಟಗಾರರು. ಪೊಲೀಸರಿಗೆ ದೂರು ನೀಡುತ್ತೇವೆ. ದೂರು ನೀಡಬಾರದು ಎನ್ನುವುದಾದರೆ 4 ಲಕ್ಷ ರೂಪಾಯಿ ಕೊಡಬೇಕೆಂದು ಬೇಡಿಕೆ ಇಟ್ಟರು.

ಅಂತಿಮವಾಗಿ ಯಾರಿಗೂ ಹೇಳದಂತೆ ಬೆದರಿಸಿ ಬಿಟ್ಟು ಕಳುಹಿಸಿದ್ದರು. ತಮ್ಮ ಪರಿಸ್ಥಿತಿ ಕುರಿತು ಕುಟುಂಬದ ಸದಸ್ಯರಿಗೆ ಮಾಹಿತಿ ತಿಳಿಸಿ, ಕೃಷ್ಣ ಹಾಗೂ ಯುವರಾಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ