ಬೆಂಗಳೂರು ಪ್ರಗತಿ ಆಸ್ಪತ್ರೆ ಕೇಸ್: ನಾಲ್ಕೈದು ಕಡೆ ಸೂಜಿ ಚುಚ್ಚಿದ್ರು, ಖಾಸಗಿ ಆಸ್ಪತ್ರೆ ವೈದ್ಯ, ನರ್ಸ್ ವಿರುದ್ದ ಮಹಿಳೆ ದೂರು,
Nov 08, 2024 10:55 AM IST
ನಾಲ್ಕೈದು ಕಡೆ ಸೂಜಿ ಚುಚ್ಚಿದ್ರು ಎಂದು ಖಾಸಗಿ ಆಸ್ಪತ್ರೆ ವೈದ್ಯ, ನರ್ಸ್ ವಿರುದ್ದ ಬೆಂಗಳೂರು ಮಹಿಳೆ ದೂರು ದಾಖಲಿಸಿದ್ದಾರೆ. ಪಾನಮತ್ತರಾಗಿ ನಡೆಸಿದ ಕೃತ್ಯದ ಶಂಕೆ ವ್ಯಕ್ತವಾಗಿದೆ.
Pragati Hospital Bengaluru case: ಬೆಂಗಳೂರಲ್ಲಿ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆ ವೈದ್ಯ, ಪುರುಷ ನರ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಚಿಕಿತ್ಸೆಗೆ ಹೋಗಿದ್ದ ವೇಳೆ ಪಾನಮತ್ತರಾಗಿದ್ದ ಆರೋಪಿಗಳು ಕೈಗೆ ನಾಲ್ಕೈದು ಕಡೆ ಸೂಜಿ ಚುಚ್ಚಿದ್ದರು ಎಂದು ಮಹಿಳೆ ಆರೋಪಿಸಿದ್ದು, ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.
ಬೆಂಗಳೂರು: ಅನಾರೋಗ್ಯ ಎಂದು ಆಸ್ಪತ್ರೆಗೆ ತೆರಳಿದರೆ ಅಲ್ಲಿ ಡಾಕ್ಟರ್ ಮತ್ತು ಪುರುಷ ನರ್ಸ್ ತನ್ನ ಕೈಗೆ ನಾಲ್ಕೈದು ಕಡೆ ಸೂಜಿ ಚುಚ್ಚಿದರು ಎಂದು ಬೆಂಗಳೂರು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಡಾಕ್ಟರ್ ಮತ್ತು ಪುರುಷ ನರ್ಸ್ ಪಾನಮತ್ತರಾಗಿ ಈ ಕೃತ್ಯವೆಸಗಿರಬೇಕು ಎಂಬಂ ಶಂಕೆ ವ್ಯಕ್ತವಾಗಿದೆ. ಆದರೆ ಆಸ್ಪತ್ರೆ ಆಡಳಿತ ಈ ಆರೋಪವನ್ನು ನಿರಾಕರಿಸಿದೆ. ಈ ನಡುವೆ, ಜಿಲ್ಲಾ ಆರೋಗ್ಯ ಅಧಿಕಾರಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ವಿವರ ಪಡೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವಸಂತಪುರದ ಮಾರುತಿ ಲೇಔಟ್ ನಿವಾಸಿ ಸ್ನೇಹಾ ಭಟ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಗತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (Pragati Hospital Bengaluru case) ವೈದ್ಯ ಪ್ರದೀಪ್ ಮತ್ತು ಬ್ರದರ್ ಮಹೇಂದ್ರ ವಿರುದ್ಧ ಗಂಭೀರ ಸ್ವರೂಪವಲ್ಲದ ಕೇಸ್ ದಾಖಲಾಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವಸಂತಪುರ ಪ್ರಗತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ; ಏನಿದು ಘಟನೆ?
ದೂರು ನೀಡಿರುವ ಸ್ನೇಹಾ ಭಟ್ ಅವರು ಅನಾರೋಗ್ಯದ ಕಾರಣ ವಸಂತಪುರ ಮುಖ್ಯರಸ್ತೆಯ ಪ್ರಗತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನವೆಂಬರ್ 3 ರಂದು ಹೋಗಿದ್ದರು. ಅಲ್ಲಿ ತಮ್ಮ ಕರ್ತವ್ಯದ ಅವಧಿ ಮುಗಿದ ಬಳಿಕವೂ ಇದ್ದ ವೈದ್ಯ ಪ್ರದೀಪ್ ಮತ್ತು ಬ್ರದರ್ ಮಹೇಂದ್ರ, ಸ್ನೇಹಾ ಭಟ್ ಅವರ ಆರೋಗ್ಯ ತಪಾಸಣೆ ಮಾಡಿದ್ದರು. ಬಳಿಕ ಇಂಜೆಕ್ಷನ್ ನೀಡುವುದಕ್ಕಾಗಿ ಕೈಗೆ ನಾಲ್ಕೈದು ಕಡೆ ಚುಚ್ಚಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅಸಭ್ಯವಾಗಿ ವರ್ತಿಸಿದರು, ಅವಾಚ್ಯ ಶಬ್ದಗಳಲ್ಲಿ ನಿಂದಿಸಿದರು ಎಂದು ಆರೋಪಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಠಾಣೆಗೆ ಕರೆಸಿಕೊಂಡ ಪೊಲೀಸರು ಅವರಿಂದಲೂ ಹೇಳಿಕೆ ದಾಖಲಿಸಿ ಕಳುಹಿಸಿದ್ದಾರೆ.
ಮಾರನೇ ದಿನ ಅಧಿಕೃತವಾಗಿ ಪೊಲೀಸ್ ದೂರು ದಾಖಲಿಸಿದ ಸ್ನೇಹಾ ಭಟ್, ವೈದ್ಯರು ಮತ್ತು ಪುರುಷ ನರ್ಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ನವೆಂಬರ್ 4 ರಂದು ಸಂಜೆ ಪೊಲೀಸ್ ಠಾಣೆಗೆ ಆಗಮಿಸಿದ್ದ ಡಾ. ಪ್ರದೀಪ್, ತನ್ನ ಮೇಲಿನ ಆರೋಪ ನಿರಾಕರಿಸಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾಗಿ ಉದಯವಾಣಿ ವರದಿ ಮಾಡಿದೆ.
ನಾವು ಎನ್‌ಸಿಆರ್ ಅನ್ನು ನೋಂದಾಯಿಸಿದ್ದೇವೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಉಂಟಾದ ಗಾಯದ ಆರೋಪಗಳಿಗೆ ಸಂಬಂಧಿಸಿದಂತೆ, ನಾವು ಕೆಎಂಸಿಗೆ ಪತ್ರ ಬರೆದಿದ್ದೇವೆ, ಅದರ ಅಭಿಪ್ರಾಯವನ್ನು ಕೇಳಿದ್ದೇವೆ. ನಾವು ವೈದ್ಯರು ಮತ್ತು ಪುರುಷ ನರ್ಸ್‌ನಿಂದ ಹೇಳಿಕೆಗಳನ್ನು ತೆಗೆದುಕೊಂಡಿದ್ದೇವೆ. ಈ ಪ್ರಕರಣವನ್ನು ಸಾಧ್ಯವಿರುವ ಎಲ್ಲ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಲೋಕೇಶ್ ಜಗಲಾಸರ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರಗತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಡಿಎಚ್ಒ ಭೇಟಿ
ಪ್ರಕರಣ ಸೂಕ್ಷ್ಮ ವಿಚಾರವಾದ ಕಾರಣ ಪೊಲೀಸರ ಕೋರಿಕೆಯ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ವಿವರಗಳನ್ನು ತೆಗೆದುಕೊಂಡರು ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಹೇಳಿದರು. ಡಿಎಚ್‌ಒ ವರದಿಗಾಗಿ ಕಾಯಲಾಗುತ್ತಿದೆ.
ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸಿಬ್ಬಂದಿ ಕುಡಿದು ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಬೆಂಗಳೂರು ವಸಂತನಗರ ಪ್ರಗತಿ ಆಸ್ಪತ್ರೆಯ ಎಂಡಿ ಡಾ.ಎಸ್.ಎಸ್.ಗುರುರಾಜ್, "ದೂರುದಾರರು ನವೆಂಬರ್ 3 ರಂದು ಜ್ವರದಿಂದ ನಮ್ಮ ಆಸ್ಪತ್ರೆಗೆ ಭೇಟಿ ನೀಡಿದ್ದರು, ತಪಾಸಣೆ ನಂತರ, ನಾವು ಅವರಿಗೆ ಸಲೈನ್ ಡ್ರಿಪ್ಸ್ ಹಾಕಲು ನಿರ್ಧರಿಸಿದ್ದೆವು. ರಕ್ತನಾಳಕ್ಕಾಗಿ ಹುಡುಕುತ್ತಿರುವಾಗ, ನಮ್ಮ ಸಿಬ್ಬಂದಿ 3-4 ಸ್ಥಳಗಳಲ್ಲಿ ಅವಳ ಕೈಯಲ್ಲಿ ಸೂಜಿಯನ್ನು ಚುಚ್ಚಿದರು. ಇದು ದೂರುದಾರರನ್ನು ಕೋಪಗೊಳ್ಳುವಂತೆ ಮಾಡಿತು. ಅವಳ ಕೈ ದಪ್ಪವಾಗಿರುವುದರಿಂದ ನಮಗೆ ರಕ್ತನಾಳವನ್ನು ಹುಡುಕಲು ಕಷ್ಟವಾಗುತ್ತಿದೆ ಎಂದು ನಮ್ಮ ಸಿಬ್ಬಂದಿ ಉತ್ತರಿಸಿದರು. ಹಾಗಾಗಿ ಅವರು ಕೋಪಗೊಂಡರಲ್ಲದೆ, ಬಾಡಿ ಶೇಮಿಂಗ್ ಮಾಡುತ್ತಿರುವುದಾಗಿ ಆರೋಪಿಸಿ ಹೊರಟು ಹೋದರು ಎಂದು ವಿವರಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ವೈದ್ಯ ಹಾಗೂ ಬ್ರದರ್ ವಿರುದ್ಧ ದೂರುದಾರೆ ಸ್ನೇಹಭಟ್ ಸಂಬಂಧಿಕರು ಆಸ್ಪತ್ರೆಯಲ್ಲೇ ಇಬ್ಬರನ್ನೂ ತರಾಟೆ ತೆಗೆದುಕೊಂಡಿದ್ದಾರೆ. ಸಂಬಂಧಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ವೈದ್ಯ ಸೇರಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು ಎಂದು ವರದಿ ವಿವರಿಸಿದೆ.