Bengaluru News: ಕರ್ನಾಟಕದಲ್ಲಿ ಬಿಯರ್ ಶೇ 10 ದುಬಾರಿ; ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಿದೆ ಸಿದ್ದರಾಮಯ್ಯ ಸರ್ಕಾರ
Jan 23, 2024 09:39 AM IST
ಕರ್ನಾಟಕದಲ್ಲಿ ಬಿಯರ್ ದರ ಮತ್ತೆ ಹೆಚ್ಚಳ ಸಾಧ್ಯತೆ (ಸಾಂಕೇತಿಕ ಚಿತ್ರ)
Beer Price Hike: ಕರ್ನಾಟಕದಲ್ಲಿ ಬಿಯರ್ ದರ ಏರಿಕೆ ಸಾಧ್ಯತೆ ಇದ್ದು, ಬಿಯರ್ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಕಳೆದ 6 ತಿಂಗಳ ಅವಧಿಯಲ್ಲಿ ಇದು ಎರಡನೇ ಸಲ ದರ ಏರಿಕೆ ಸುಳಿವನ್ನು ಸಿದ್ದರಾಮಯ್ಯ ಸರ್ಕಾರ ನೀಡಿರುವುದು. ಈ ಸಲ ಶೇಕಡ 10 ಹೆಚ್ಚುವರಿ ಅಬಕಾರಿ ಸುಂಕ ಏರಿಕೆ ಉಂಟಾಗಲಿದೆ.
ಬೆಂಗಳೂರು: ಬಿಯರ್ ಕುಡಿಯುವವರಿಗೆ ಒಂದು ಆಘಾತಕಾರಿ ಸುದ್ದಿ ಇದೆ. ಶೀಘ್ರವೇ ಬಿಯರ್ ಇನ್ನಷ್ಟು ದುಬಾರಿಯಾಗಲಿದೆ. ಕರ್ನಾಟಕ ಸರ್ಕಾರ, ಬಿಯರ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದೆ.
ಕರ್ನಾಟಕ ಸರ್ಕಾರ ಮತ್ತೊಮ್ಮೆ ಬಿಯರ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲು ಮುಂದಾಗಿದೆ. ಇದರ ಪರಿಣಾಮ 650 ಎಂಎಲ್ ಬಿಯರ್ ಬಾಟಲಿ ದರ 8 ರೂಪಾಯಿಯಿಂದ 10 ರೂಪಾಯಿ ಹೆಚ್ಚಳವಾಗಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಅಬಕಾರಿ ಇಲಾಖೆ ಮೂಲಗಳನ್ನು ಆಧರಿಸಿದ ಈ ವರದಿ ಪ್ರಕಾರ, ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು 1968 ಅನ್ನು ತಿದ್ದುಪಡಿ ಮಾಡುವ ಕರಡು ಅಧಿಸೂಚನೆಯಲ್ಲಿ ಸುಂಕ ಹೆಚ್ಚಳವನ್ನು ಸರ್ಕಾರ ಪ್ರಸ್ತಾಪಿಸಿದೆ.
ಕರಡು ಅಧಿಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ತಯಾರಿಸಲಾದ ಅಥವಾ ರಾಜ್ಯಕ್ಕೆ ಆಮದು ಮಾಡಿಕೊಳ್ಳುವ ಬಾಟಲಿಯ ಬಿಯರ್‌ನ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚುವರಿಯಾಗಿ ಶೇ 10 ಹೆಚ್ಚಳ ಮಾಡಲಾಗುತ್ತದೆ. ಅಂದರೆ ಈಗ ಇರುವ ಅಬಕಾರಿ ಸುಂಕ ಶೇ 185 ರಿಂದ ಶೇ 195ಕ್ಕೆ ಏರಿಕೆಯಾಗಲಿದೆ.
ಇದನ್ನೂ ಓದಿ| ಶ್ರೀರಾಮನ ಬಾಲಲೀಲೆ; ಹೀಗಿದ್ದಾನೆ ಹರಿದಾಸರು ಕಂಡ ಬಾಲರಾಮ
ಹೆಚ್ಚಳವನ್ನು ಅನುಮತಿಸುವ ಹೊಸ ನಿಯಮ ಇದೇ ತಿಂಗಳು ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಬಿಯರ್ ಮಾರಾಟದಲ್ಲಿ ಅತ್ಯಧಿಕ ಬೆಳವಣಿಗೆ ಕಾಣುತ್ತಿರುವ ಕಾರಣ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸಿತು.
ಕಳೆದ ಆರು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಮದ್ಯದ ಬೆಲೆಯಲ್ಲಿ ಏರಿಕೆಯಾಗುತ್ತಲಿದೆ. ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ನಿರ್ಮಿತ ಮದ್ಯದ ಮೇಲೆ ಶೇ.20 ರಷ್ಟು ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175ರಿಂದ ಶೇ.185ಕ್ಕೆ ಹೆಚ್ಚಿಸಿದ್ದರು.
ಕರ್ನಾಟಕ ಸರ್ಕಾರಕ್ಕೆ ಅಬಕಾರಿ ಸುಂಕ ಅತ್ಯಂತ ಮಹತ್ವದ್ದು. 2023- 24ರ ಹಣಕಾಸು ವರ್ಷದಲ್ಲಿ ಅಬಕಾರಿ ಸುಂಕದ ಆದಾಯದ ಗುರಿಯನ್ನು 36,000 ಕೋಟಿ ರೂಪಾಯಿ ಎಂದು ನಿಗದಿ ಮಾಡಲಾಗಿದೆ.